
ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ (Chinnaswamy Staduim) ಹೊರಭಾಗದಲ್ಲಿ ನಡೆದ ಕಾಲ್ತುಳಿತದಲ್ಲಿ 11 ಜನರು ಮೃತಪಟ್ಟು 40ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಬರೋದನ್ನು ನೋಡಲು 2-3 ಲಕ್ಷ ಅಭಿಮಾನಿಗಳು ಸೇರಿದ್ದು ದುರಂತಕ್ಕೆ ಕಾರಣ ಎಂದು ಹೇಳಲಾಗಿದೆ. ಊಹೆಗೂ ಮೀರಿದ ಜನರು ಬಂದಿದ್ದರಿಂದ ಸಾಕಷ್ಟು ಹಾನಿ ಉಂಟಾಯಿತು. ಘಟನೆ ನಡೆಯುವ ವೇಳೆ ವಿರಾಟ್ ಕೊಹ್ಲಿ ಕೂಡ ಇದ್ದರು. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಅಭಿಪ್ರಾಯವನ್ನು ಅವರು ಹಂಚಿಕೊಂಡಿದ್ದಾರೆ.
ಜೂನ್ 3ರಂದು ಅಹಮದಾಬಾದ್ನಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಆರ್‌ಸಿಬಿ ಕಪ್ ಎತ್ತಿತು. 18 ವರ್ಷಗಳಲ್ಲಿ ಚೊಚ್ಚಲ ಬಾರಿ ಕಪ್ ಎತ್ತಿದ ಸಾಧನೆ ತಂಡ ಮಾಡಿದೆ. ಜೂನ್ 4ರಂದು ಬೆಳಿಗ್ಗೆ ಅಹಮದಾಬಾದ್ನಿಂದ ಹೊರಟ ತಂಡ ಬೆಂಗಳೂರಿಗೆ ಆಗಮಿಸಿತು. ಮೊದಲು ಹೋಟೆಲ್ಗೆ ತೆರಳಿ ಆ ಬಳಿಕ ವಿಧಾನಸೌಧಕ್ಕೆ ತಂಡ ಬಂತು. ಅಲ್ಲಿ ಆಗಲೇ ಜನ ಸೇರಿದ್ದರು. ಆ ಬಳಿಕ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರ್‌ಸಿಬಿ ತಂಡ ಬರುತ್ತದೆ ಎಂಬ ಮಾಹಿತಿ ತಿಳಿದ ಜನರು ತಳ್ಳಾಡಿಕೊಂಡರು. ಸ್ಟೇಡಿಯಂ ಒಳಗೆ ಹೋಗುವ ಭರದಲ್ಲಿ ಕಾಲ್ತುಳಿತ ಉಂಟಾಯಿತು.
ಈ ಘಟನೆ ಬೆನ್ನಲ್ಲೆ ಆರ್‌ಸಿಬಿ ಸಂತಾಪ ಸೂಚಿಸಿ ಪೋಸ್ಟ್ ಒಂದನ್ನು ಹಾಕಿದೆ. ಇದೇ ಪೋಸ್ಟ್ನ ಕೊಹ್ಲಿ ರೀ-ಶೇರ್ ಮಾಡಿಕೊಂಡಿದ್ದಾರೆಯೇ ಹೊರತು ಬೇರೆ ಯಾವುದೇ ಪ್ರತ್ಯೇಕ ಪೋಸ್ಟ್ ಹಾಕಿಲ್ಲ. ಇದಕ್ಕೆ ಅನೇಕರು ಅಪಸ್ವರ ತೆಗೆದಿದ್ದಾರೆ. ಇನ್ನೂ ಕೆಲವರು ಕೊಹ್ಲಿ ಆರ್‌ಸಿಬಿ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಹೀಗಾಗಿ, ಅವರು ಆರ್‌ಸಿಬಿ ಪೋಸ್ಟ್ನ ರೀ-ಶೇರ್ ಮಾಡಿಕೊಂಡು ಸಂತಾಪ ಸೂಚಿಸಿದ್ದರಲ್ಲಿ ತಪ್ಪಿಲ್ಲ ಎಂದಿದ್ದಾರೆ.
‘ಇಂದು ಮಧ್ಯಾಹ್ನ ತಂಡದ ಆಗಮನದ ನೀರಿಕ್ಷೆಯಲ್ಲಿ ಬೆಂಗಳೂರಿನವರು ಇದ್ದರು. ಆದರೆ, ಈ ವೇಳೆ ಸಂಭವಿಸಿದ ದುರದೃಷ್ಟಕರ ಘಟನೆಯಿಂದ ನಾವು ದುಃಖಿತರಾಗಿದ್ದೇವೆ. ಎಲ್ಲರ ಸುರಕ್ಷತೆ ನಮಗೆ ಅತ್ಯಂತ ಮುಖ್ಯ ವಿಷಯ ಆಗಿದೆ. ದುರಂತದಿಂದ ಆದ ಜೀವ ಹಾನಿಗೆ ಆರ್‌ಸಿಬಿ ಶೋಕ ವ್ಯಕ್ತಪಡಿಸುತ್ತಿದೆ. ಸಂತ್ರಸ್ತ ಕುಟುಂಬಕ್ಕೆ ನಮ್ಮ ಸಂತಾಪ’ ಎಂದು ಪೋಸ್ಟ್ನಲ್ಲಿ ಇದೆ.
ಇದನ್ನೂ ಓದಿ: ಐಪಿಎಲ್ ಗೆದ್ದ ನಂತರ ವಿರಾಟ್ ಕೊಹ್ಲಿ ಇನ್ಸ್ಟಾಗ್ರಾಮ್ನಲ್ಲಿ ದೀರ್ಘ ಪೋಸ್ಟ್: ಏನು ಹೇಳಿದ್ದಾರೆ ನೋಡಿ
‘ಪರಿಸ್ಥಿತಿಯ ಬಗ್ಗೆ ತಿಳಿದ ತಕ್ಷಣ ನಾವು ನಮ್ಮ ಕಾರ್ಯಕ್ರಮದಲ್ಲಿ ಬದಲಾವಣೆ ಮಾಡಿಕೊಂಡೆವು. ಸ್ಥಳೀಯ ಆಡಳಿತದವರು ನೀಡಿದ ಮಾರ್ಗದರ್ಶನ ಮತ್ತು ಸಲಹೆಯನ್ನು ಅನುಸರಿಸಿದ್ದೇವೆ. ಸುರಕ್ಷಿತವಾಗಿರಿ ಎಂದು ನಮ್ಮ ಎಲ್ಲಾ ಬೆಂಬಲಿಗರನ್ನು ನಾವು ಒತ್ತಾಯಿಸುತ್ತೇವೆ’ ಎಂದು ಪೋಸ್ಟ್ನಲ್ಲಿ ಬರೆಯಲಾಗಿದೆ.
ಇನ್ನಷ್ಟು ಕ್ರಿಕೆಟ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.