ಬೆಂಗಳೂರು ಕಾಲ್ತುಳಿತ ಪ್ರಕರಣ: ಘಟನೆ ಬಗ್ಗೆ ಸರ್ಕಾರ ಹೈಕೋರ್ಟ್ಗೆ ಕೊಟ್ಟ ಕಾರಣವೇನು?
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್ ಸಿಬಿ ವಿಕ್ಟರಿ ಸೆಲೆಬ್ರೇಷನ್ ವೇಳೆ ಕಾಲ್ತುಳಿತದಿಂದ 11 ಮಂದಿ ಮೃತಪಟ್ಟಿದ್ದು, ಪೊಲೀಸರು ಯುಡಿಆರ್ ದಾಖಲಿಸಿರುವುದು ಭಾರೀ ಚರ್ಚೆಗೆ ಗ್ರಾಸವಾಗಿದೆ. ಅಲ್ಲದೇ ಪೊಲೀಸರ ನಡೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.ಇದರ ಮಧ್ಯೆ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿರುವ ಹೈಕೋರ್ಟ್, ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದು, ಈ ಸಂಬಂಧ ವರದಿ ನೀಡುವಂತೆ ಸೂಚಿಸಿತ್ತು. ಈ ಸಂಬಂಧ ಹೈಕೋರ್ಟ್ ಇಂದು(ಜೂನ್ 05) ಪಿಐಎಲ್ ವಿಚಾರಣೆ ನಡೆಸಿದ್ದು, ಏನೆಲ್ಲಾ ಆಯ್ತು ಎನ್ನುವ ಡಿಟೇಲ್ಸ್ ಇಲ್ಲಿದೆ.

ಬೆಂಗಳೂರು, (ಜೂನ್ 05): ಆರ್‌ಸಿಬಿ ವಿಜಯೋತ್ಸವ ಸಂಭ್ರಮಾಚರಣೆ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ (RCB victory parade stampede) 11 ಜನ ಮೃತಪಟ್ಟ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿದೆ ಈ ಸಂಬಂಧ ಕರ್ನಾಟಕ ಹೈಕೋರ್ಟ್ (Karnataka High Court) ಸ್ವಯಂಪ್ರೇರಿತವಾಗಿ ಪಿಐಎಲ್ ದಾಖಲಿಸಿಕೊಂಡಿದ್ದು, ಇಂದು(ಜೂನ್ 05) ಅದರವಿಚಾರಣೆ ನಡೆಸಿತು. ಇಂತಹ ಘಟನೆ ತಡೆಗೆ ಎಸ್‌ಒಪಿ ಇರಬೇಕಲ್ಲವೇ. ವೈದ್ಯಕೀಯ ಸಿಬ್ಬಂದಿ, ಸಿದ್ಧತೆ ಇರಬೇಕಲ್ಲವೇ ಆ್ಯಂಬುಲೆನ್ಸ್ ವ್ಯವಸ್ಥೆ ಇರಬೇಕಲ್ಲವೇ? ಕಾಲ್ತುಳಿತವಾದಾಗ ಏನು ಮಾಡಬೇಕೆಂಬ ಬಗ್ಗೆ ಸಿದ್ಧ ಇರಬೇಕಲ್ಲವೇ? ಗಾಯಗೊಂಡವರನ್ನು ತಕ್ಷಣ ಆಸ್ಪತ್ರೆಗೆ ಸೇರಿಸಬೇಕಲ್ಲವೇ? ಇಂತಹ ಮಾರ್ಗಸೂಚಿ ಏನಾದರೂ ಪಾಲಿಸಿದ್ದೀರಾ ಎಂದು ಸರ್ಕಾರಕ್ಕೆ ಹಂಗಾಮಿ ಸಿಜೆ ವಿ.ಕಾಮೇಶ್ವರ ರಾವ್ ಅವರು ಪ್ರಶ್ನೆಗಳ ಮೇಲೆ ಪ್ರಶ್ನೆ ಕೇಳಿದ್ದಾರೆ. ಅಲ್ಲದೇ ಘಟನೆ ಬಗ್ಗೆ ವರದಿ ನೀಡುವಂತೆ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ ನೀಡಿ ಮುಂದಿನ ವಿಚಾರಣೆಯನ್ನು ಜೂನ್ 10ಕ್ಕೆ ನಿಗದಿಪಡಿಸಿದೆ.
ಸರ್ಕಾರದ ಪರ ಎಜಿ ಕೋರ್ಟ್ಗೆ ಹೇಳಿದ್ದೇನು?
ಸರ್ಕಾರದ ಪರ ಎಜಿ ಶಶಿಕಿರಣ್ ಶೆಟ್ಟಿ ವಾದ ಮಂಡಿಸಿದ್ದು, ಹೈಕೋರ್ಟ್ ನೀಡುವ ಸಲಹೆಗಳನ್ನು ಪಾಲಿಸಲು ಸರ್ಕಾರ ಬದ್ಧವಾಗಿದೆ. ನಾವು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಪ್ರತಿರೋಧಿಸುವುದಿಲ್ಲ ಜೂನ್ 3ರಂದು ಆರ್‌ಸಿಬಿ ಐಪಿಎಲ್ ಮ್ಯಾಚ್ ಗೆಲುವು ಸಾಧಿಸಿತು. ಭದ್ರತೆಗಾಗಿ ಬೆಂಗಳೂರು ಪೊಲೀಸರು ಸಿದ್ಧತೆ ನಡೆಸಿದ್ದರು. ಬಂದೋಬಸ್ತ್ ಗಾಗಿ 1,643 ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿತ್ತು. ವಾಟರ್ ಟ್ಯಾಂಕರ್, ಕೆಎಸ್ಆರ್ಪಿ ತುಕಡಿ ಸೇರಿದಂತೆ ಹಲವು ವ್ಯವಸ್ಥೆ ಮಾಡಲಾಗಿತ್ತು. ನಿನ್ನೆ 1,600 ಪೊಲೀಸ್ ಸಿಬ್ಬಂದಿ ನೇಮಿಸಲಾಗಿದೆ. ಕಾಲ್ತುಳಿತ ಸಂಭವಿಸಿ 56 ಜನರು ಗಾಯಗೊಂಡಿದ್ದರು. ಐವರು ಮಹಿಳೆಯರು ಹಾಗೂ 6 ಪುರುಷರು ಮೃತಪಟ್ಟಿದ್ದಾರೆ. ಕೋಲಾರ, ಉತ್ತರ ಕನ್ನಡ, ತುಮಕೂರು, ಯಾದಗಿರಿ, ಮಂಡ್ಯದಿಂದಲೂ ಬೆಂಗಳೂರಿಗೆ ಜನ ಬಂದಿದ್ದರು. ಒಟ್ಟು ನಿನ್ನೆ ಬೆಂಗಳೂರಿಗೆ 2.5 ಲಕ್ಷ ಜನರು ಬಂದಿದ್ದರು ಎಂದು ಕೋರ್ಟ್ಗೆ ತಿಳಿಸಿದರು.
ಇದನ್ನೂ ಓದಿ: ಬೆಂಗಳೂರು ಕಾಲ್ತುಳಿತ: ಸ್ವಯಂಪ್ರೇರಿತ ಪಿಐಎಲ್ ದಾಖಲಿಸಿದ ಹೈಕೋರ್ಟ್, ವರದಿ ಸಲ್ಲಿಸಲು ಸರ್ಕಾರಕ್ಕೆ ಸೂಚನೆ
ಎಜಿ: ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ 34,600 ಜನರಿಗಷ್ಟೇ ವ್ಯವಸ್ಥೆ ಇದೆ. 33 ಸಾವಿರ ಜನರಿಗಷ್ಟೇ ಟಿಕೆಟ್ ನೀಡುತ್ತಾರೆ. ಆದರೆ ನಿನ್ನೆ ಎರಡೂವರೆ ಲಕ್ಷ ಜನರು ಬಂದಿದ್ದರು ಎಂದರು.
ಹೈಕೋರ್ಟ್: ಇಂತಹ ದೊಡ್ಡ ಕಾರ್ಯಕ್ರಮ ನಡೆದಾಗ ಪೂರ್ವ ಸಿದ್ಧತೆ ಏನಿತ್ತು? ಎಜಿ: ರಾಯಲ್ ಚಾಲೆಂಜರ್ಸ್ ಟಿಕೆಟ್ ಹಂಚಿಕೆ ಮಾಡುತ್ತದೆ. ಸ್ಟೇಡಿಯಂನ ಎಲ್ಲಾ ವ್ಯವಸ್ಥೆ ಅವರೇ ಮಾಡುತ್ತಾರೆ. ಬೆಂಗಳೂರಿನೆಲ್ಲೆಡೆ ಬೆಳಗಿನ ಜಾವ 4 ಗಂಟೆಯಿಂದಲೇ ಜನ ಬರುತ್ತಿದ್ದರು. 3 ಗಂಟೆಯೊಳಗೆ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಜನದಟ್ಟಣೆಯಾಗಿತ್ತು. ರಾಜ್ಯವಲ್ಲದೇ ಅನ್ಯ ರಾಜ್ಯದಿಂದಲೂ ಜನ ಬಂದಿದ್ದರು. ಕೊಯಮತ್ತೂರಿನ ಒಬ್ಬ ವ್ಯಕ್ತಿ ಮೃತಪಟ್ಟಿದ್ದಾನೆ.
ಹೈಕೋರ್ಟ್: ಕಾರ್ಯಕ್ರಮದ ಆಯೋಜಕರು ಯಾರು?
ಎಜಿ: RCB ವ್ಯವಸ್ಥೆ ಮಾಡುತ್ತದೆ, KSCA ಸಹಯೋಗ ನೀಡುತ್ತದೆ.
ವಕೀಲ ಅರುಣ್ ಶ್ಯಾಮ್ : ಆರ್‌ಸಿಬಿ ಆಟಗಾರರು ರಾಜ್ಯ, ದೇಶಕ್ಕೆ ಆಡುತ್ತಿಲ್ಲ. ರಾಜ್ಯ ಸರ್ಕಾರ ಇವರನ್ನು ಗೌರವಿಸುವ ಅಗತ್ಯವಿರಲಿಲ್ಲ/ ವಿಧಾನಸೌಧ, ಚಿನ್ನಸ್ವಾಮಿ ಸ್ಟೇಡಿಯಂ ಎರಡೂ ಕಡೆ ಕಾರ್ಯಕ್ರಮ ಮಾಡಲಾಗಿದೆ. ಇದರಿಂದ ಸಮಸ್ಯೆಯಾಗಿದೆ. ಎರಡು ಕಡೆ ಸಮಾರಂಭ ಮಾಡಿದ್ದಾರೆ. ಎಲ್ಲೆಲ್ಲಿ ಆ್ಯಂಬುಲೆನ್ಸ್ ಇತ್ತು, ಎಷ್ಟು ಭದ್ರತೆ ಇತ್ತು? ಸರ್ಕಾರ ಇದನ್ನು ಸ್ಪಷ್ಟಪಡಿಸಬೇಕು, ತನಿಖೆ ನಡೆಸಬೇಕು ಎಂದು ಹಿರಿಯ ವಕೀಲ ಅರುಣ್ ಶ್ಯಾಮ್ ಮನವಿ ಮಾಡಿದರು. ಇದಕ್ಕೆ ಹೈಕೋರ್ಟ್ ಪ್ರತಿಕ್ರಿಯಿಸಿ, ನಾವು ಸ್ವಯಂಪ್ರೇರಿತ ಪಿಐಎಲ್ ದಾಖಲಿಸಿಕೊಂಡಿದ್ದೇವೆ ಎಂದು ಸ್ಪಷ್ಟನೆ ನೀಡಿತು.
ವಕೀಲ ರಂಗನಾಥರೆಡ್ಡಿ: ಆರ್‌ಸಿಬಿ ಫ್ರಾಂಚೈಸಿ ಕೂಡ ಸಮಾರಂಭಕ್ಕೆ ಕರೆ ಕೊಟ್ಟಿದ್ದರು. ಫ್ರೀ ಪಾಸ್ ಇದೆ ಎಂದು ವೆಬ್ಸೈಟ್ನಲ್ಲಿ ಕರೆ ಕೊಟ್ಟಿದ್ದಾರೆ. ಹೀಗಾಗಿ ಇಂತಹ ಘಟನೆ ಎಂದು ವಕೀಲ ರಂಗನಾಥರೆಡ್ಡಿ ವಾದ ಮಂಡಿಸಿದರು.
ಹೈಕೋರ್ಟ್: ಸ್ಟೇಡಿಯಂಗೆ ಎಷ್ಟು ಗೇಟ್ ಗಳಿವೆ?, ಎಷ್ಟು ತೆರೆದಿತ್ತು?
ಎಜಿ: ಸ್ಟೇಡಿಯಂಗೆ 21 ಗೇಟುಗಳಿವೆ, ಎಲ್ಲ ತೆರೆದಿತ್ತೆಂಬ ಮಾಹಿತಿಯಿದೆ. 2 ಲಕ್ಷ ಜನರು ಸ್ಟೇಡಿಯಂ ಸುತ್ತಲೇ ಇದ್ದರು. ಸರ್ಕಾರ ನಿರೀಕ್ಷಿಸಿದ್ದಕ್ಕಿಂತ ಹೆಚ್ಚಿನ ಜನ ಬಂದಿದ್ದರು. ಬೆಂಗಳೂರಿನ ಜಿಲ್ಲಾ ಉಸ್ತುವಾರಿ ಸಚಿವರೂ ಪರಿಶೀಲಿಸುತ್ತಿದ್ದರು ಎಂದು ಸ್ಪಷ್ಟನೆ ನೀಡಿದರು.
ವಕೀಲ ಜಿ.ಆರ್.ಮೋಹನ್: ಕೇವಲ 3 ಗೇಟ್ ಮಾತ್ರ ತೆರೆದಿತ್ತು.
ಎಜಿ: ಘಟನೆಯ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ. ತನಿಖೆಯ ನಂತರ ಸಂಪೂರ್ಣ ಸತ್ಯ ಹೊರಬರಲಿದೆ.
ವಕೀಲ ಹೇಮಂತ್ ರಾಜ್ : ಆರ್‌ಸಿಬಿ ಆಟಗಾರರು ರಾಜ್ಯಕ್ಕೆ, ದೇಶಕ್ಕೆ ಆಡುತ್ತಿಲ್ಲ. ರಾಜ್ಯ ಸರ್ಕಾರ ಇವರನ್ನು ಗೌರವಿಸುವ ಅಗತ್ಯವಿರಲಿಲ್ಲ. ವಿಧಾನಸೌಧ, ಚಿನ್ನಸ್ವಾಮಿ ಎರಡೂ ಕಡೆ ಕಾರ್ಯಕ್ರಮ ಆಯೋಜಿಸಿದ್ದರಿಂದ ಸಮಸ್ಯೆಯಾಗಿದೆ ಎಂದು ಎಂದು ವಕೀಲ ಹೇಮಂತ್ ರಾಜ್ ಎಂದು ಹೇಳಿದರು.
ವಿಚಾರಣೆ ಮುಂದೂಡಿದ ಹೈಕೋರ್ಟ್
75 ಜನರು ಗಾಯಗೊಂಡಿದ್ದರೆಂದು ವರದಿಗಳಿವೆ. ಗೆಲುವು ಸಂಭ್ರಮಿಸುವಾಗ ಈ ಘಟನೆಯಾಗಿದೆ. ಇಂತಹ ಅವಘಡವಾಗಲು ಕಾರಣಗಳೇನು? ಮುಂದೆ ಇಂತಹ ಘಟನೆಯಾಗದಂತೆ ಕೈಗೊಳ್ಳಬೇಕಾದ ಕ್ರಮಗಳೇನು? ಈ ಎಲ್ಲದರ ಬಗ್ಗೆ ಸರ್ಕಾರ ವರದಿ ನೀಡಬೇಕಿದೆ. ಹಲವು ಜನರಿಂದ ಹೈಕೋರ್ಟ್ಗೆ ಮನವಿಗಳು ಬಂದಿವೆ ಬೆಳಗ್ಗೆ 10.30ಕ್ಕೆ ಕೋರ್ಟ್ಗೆ ಬರುವಂತೆ ಎಜಿಗೆ ತಿಳಿಸಿದ್ದೆವು. ಹೈಕೋರ್ಟ್ ಸೂಚನೆಯಂತೆ ವರದಿ ಸಲ್ಲಿಸಿದ್ದಾರೆ ಎಂದು ಹೈಕೋರ್ಟ್ ತಿಳಿಸಿದ್ದು, ಕೊನೆಗೆ ಘಟನೆಯ ಬಗ್ಗೆ ವರದಿ ಸಲ್ಲಿಸಲು ಸರ್ಕಾರಕ್ಕೆ ಹೈಕೋರ್ಟ್ ಸೂಚನೆ ನೀಡಿ ವಿಚಾರಣೆ ಜೂನ್ 10ಕ್ಕೆ ಮುಂದೂಡಿತು.
ಮತ್ತೊಂದೆಡೆ ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ ಘಟನೆ ಸಂಬಂಧ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಕರ್ನಾಟಕ ಕ್ರಿಕೆಟ್ ಅಸೋಸಿಯೇಷನ್ ವಿರುದ್ಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:51 pm, Thu, 5 June 25







