ಭಾರತದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ (Mahendra Singh Dhoni) ಕೆಲವು ವರ್ಷಗಳ ಹಿಂದೆ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು. ಆದರೆ ಧೋನಿ ತನ್ನ ನಾಯಕತ್ವದಲ್ಲಿ ಟೀಂ ಇಂಡಿಯಾ (Team India)ಗೆ ಅನೇಕ ದೊಡ್ಡ ಪಂದ್ಯಾವಳಿಗಳನ್ನು ಗೆದ್ದು ಟೀಮ್ ಇಂಡಿಯಾಕ್ಕೆ ಯಶಸ್ಸನ್ನು ತಂದರು. ಈ ವೇಳೆ ಹಲವು ಬಾರಿ ಹಿರಿಯ ಆಟಗಾರರನ್ನು ತಂಡದಿಂದ ಹೊರಹಾಕಿದ ಆರೋಪವೂ ಧೋನಿ ವಿರುದ್ಧ ಕೇಳಿ ಬಂದಿತ್ತು. ಇದಕ್ಕೆ ಪೂರಕವೆಂಬಂತೆ ಈಗ ಸುಮಾರು 10 ವರ್ಷಗಳ ನಂತರ, ವೀರೇಂದ್ರ ಸೆಹ್ವಾಗ್ (Virender Sehwag) ಕೂಡ ತಮ್ಮ ಮನದಾಳದ ನೋವನ್ನು ವಿವರಿಸಿದ್ದಾರೆ. ಒಂದು ಸಮಯದಲ್ಲಿ ಧೋನಿ ಮಾಡಿದ ಕೆಲಸದಿಂದ ತಾನು ನಿವೃತ್ತಿ ಘೋಷಿಸಲು ಮುಂದಾಗಿದ್ದೆ ಎಂಬ ಶಾಕಿಂಗ್ ಸತ್ಯವನ್ನ ವೀರೂ ಈಗ ಬಾಯ್ಬಿಟ್ಟಿದ್ದಾರೆ.
2007 ರಲ್ಲಿ ಧೋನಿಗೆ ಟೀಮ್ ಇಂಡಿಯಾದ ನಾಯಕತ್ವವನ್ನು ನೀಡಲಾಯಿತು. ಧೋನಿ, ಮೊದಲು ಟಿ 20 ಮತ್ತು ನಂತರ ODI ಸ್ವರೂಪದಲ್ಲಿ ನಾಯಕತ್ವವನ್ನು ವಹಿಸಿಕೊಂಡರು. ಆದರೆ, ಈ ಸಮಯದಲ್ಲಿ ಕಳಪೆ ಫಾರ್ಮ್‌ನಿಂದ ಬಳಲುತ್ತಿದ್ದ ವೀರೇಂದ್ರ ಸೆಹ್ವಾಗ್, ಧೋನಿಯ ಕೆಲವು ಶಿಸ್ತುಬದ್ಧ ಕ್ರಮಗಳಿಗೆ ಸಿಲುಕಿ ಒದ್ದಾಡಬೇಕಾಯಿತು. ನಾಯಕನಾದ ಬಳಿಕ ಧೋನಿ ತಂಡದಲ್ಲಿ ಹಲವು ಬದಲಾವಣೆಗಳನ್ನು ಮಾಡಲು ಆರಂಭಿಸಿದರು. ಅವರ ನಿರ್ಧಾರಗಳಿಗೆ ಸೆಹ್ವಾಗ್ ಕೂಡ ಬಲಿಯಾಗಬೇಕಾಯಿತು. ಇದು ಸೆಹ್ವಾಗ್ಗೆ ಇನ್ನಿಲ್ಲದ ನೋವು ನೀಡಿತ್ತು. ಇದರಿಂದ ನೊಂದಿದ್ದ ಸೆಹ್ವಾಗ್ ODI ಸ್ವರೂಪಕ್ಕೆ ಶಾಶ್ವತವಾಗಿ ವಿದಾಯ ಹೇಳುವ ಆಲೋಚನೆಯನ್ನು ಮಾಡಿದ್ದರು.
ಇದನ್ನೂ ಓದಿ:IPL 2022: ಧೋನಿ ನಿರ್ಧಾರವೇ ಅಂತಿಮ; ಮಹೀ ಮನವಿ ನೋಡಿ ನಿರ್ಧಾರ ಬದಲಿಸಿದ ಅಂಪೈರ್! ವಿಡಿಯೋ ವೈರಲ್
2008 ರಲ್ಲಿ ಸೆಹ್ವಾಗ್ ಅವರನ್ನು ಆಡುವ XI ನಿಂದ ಕೈಬಿಟ್ಟ ಧೋನಿ
2008ರಲ್ಲಿ ಭಾರತ ಆಸ್ಟ್ರೇಲಿಯಾದಲ್ಲಿ ತ್ರಿಕೋನ ಸರಣಿ ಆಡುತ್ತಿತ್ತು. ಭಾರತ ಮತ್ತು ಆತಿಥೇಯ ತಂಡವನ್ನು ಹೊರತುಪಡಿಸಿ, ಶ್ರೀಲಂಕಾ ಕೂಡ ಈ ಸರಣಿಯ ಭಾಗವಾಗಿತ್ತು. ಈ ಸರಣಿಯಲ್ಲಿ ಸೆಹ್ವಾಗ್ ಅವರ ಬ್ಯಾಟ್ ಕೆಲಸ ಮಾಡಲಿಲ್ಲ. ಈ ಸರಣಿಯಲ್ಲಿ ವೀರೂ ರನ್‌ಗಾಗಿ ಹೋರಾಡುತ್ತಲೇ ಇದ್ದರು. ನಾಲ್ಕು ಪಂದ್ಯಗಳಲ್ಲಿ ಅವರು 6, 33, 11, 14 ರನ್ ಗಳಿಸಿದ್ದರು. ಹೀಗಾಗಿ ಧೋನಿ ಅವರನ್ನು ತಂಡದಿಂದ ಕೈಬಿಟ್ಟಿದ್ದರು. ಇದರಿಂದ ಆಘಾತಕ್ಕೊಳಗಾಗಿದ್ದ ಸೆಹ್ವಾಗ್ ಆ ಸಮಯದಲ್ಲಿ ಏಕದಿನ ಕ್ರಿಕೆಟ್‌ಗೆ ನಿವೃತ್ತಿಯ ಬಗ್ಗೆ ಯೋಚಿಸುತ್ತಿದ್ದರು. ಈ ಬಗ್ಗೆ ಈಗ ಕ್ರಿಕ್‌ಬಜ್ ಶೋನಲ್ಲಿ ಮಾತನಾಡಿದ ಸೆಹ್ವಾಗ್, ‘2008 ರಲ್ಲಿ, ನಾವು ಆಸ್ಟ್ರೇಲಿಯಾ ಪ್ರವಾಸದಲ್ಲಿದ್ದಾಗ, ನಾನು ನಿವೃತ್ತಿಯ ಬಗ್ಗೆ ಯೋಚಿಸಲು ಪ್ರಾರಂಭಿಸಿದೆ. ಏಕದಿನದಲ್ಲಿ ನನಗೆ ವಿಶೇಷವಾದುದನ್ನು ಮಾಡಲು ಸಾಧ್ಯವಾಗಲಿಲ್ಲ. ಆದ್ದರಿಂದ ಧೋನಿ ನನ್ನನ್ನು ಆಡುವ XI ನಿಂದ ಕೈಬಿಟ್ಟರು. ಅದಕ್ಕಾಗಿಯೇ ನಾನು ಏಕದಿನ ಮಾದರಿಯನ್ನು ತೊರೆಯುವ ಆಲೋಚನೆಯನ್ನು ಪ್ರಾರಂಭಿಸಿದೆ ಎಂಬ ಮಾತನ್ನು ಈ ಶೋನಲ್ಲಿ ಬಾಯ್ಬಿಟ್ಟಿದ್ದಾರೆ.
ಸಚಿನ್ ಒತ್ತಾಯದ ಮೇರೆಗೆ ನಿವೃತ್ತಿಯ ನಿರ್ಧಾರವನ್ನು ಬದಲಾಯಿಸಿದೆ
ಆದರೆ ಸಚಿನ್ ತೆಂಡೂಲ್ಕರ್ ನನ್ನನ್ನು ಏಕದಿನ ಕ್ರಿಕೆಟ್‌ನಿಂದ ನಿವೃತ್ತಿಯಾಗಲು ಬಿಡಲಿಲ್ಲ ಎಂದು ಸೆಹ್ವಾಗ್ ಹೇಳಿದ್ದಾರೆ. ಸಚಿನ್ ನನ್ನ ಬಳಿ ಬಂದು ,ಇದು ನಿಮ್ಮ ಕಳಪೆ ಫಾರ್ಮ್ ಮಾತ್ರ. ಈ ಪ್ರವಾಸದ ನಂತರ ಮನೆಗೆ ಹೋಗಿ ನಂತರ ಯೋಚಿಸಿ, ಅನಂತರ ಏನು ಮಾಡಬೇಕೆಂದು ನಿರ್ಧರಿಸಿ ಎಂಬ ಸಲಹೆ ನೀಡಿದ್ದರು ಎಂದು ಸೆಹ್ವಾಗ್ ಹೇಳಿಕೊಂಡಿದ್ದಾರೆ. ಆದರೆ 2013 ರಲ್ಲಿ ತಮ್ಮ ಕೊನೆಯ ODI ಪಂದ್ಯವನ್ನು ಆಡಿದ ಸೆಹ್ವಾಗ್ ವಿದಾಯ ಪಂದ್ಯ ಆಡುವ ಅವಕಾಶ ಸಿಗದೇ ಕ್ರಿಕೆಟ್‌ಗೆ ವಿದಾಯ ಹೇಳಿದರು.