ಪಂಜಾಬ್ ಕಿಂಗ್ಸ್ ಕಪ್ ಗೆಲ್ಬೇಕು, ಅದಕ್ಕೆ RCB ಗೆಲ್ಲುತ್ತೆ: ವೀರೇಂದ್ರ ಸೆಹ್ವಾಗ್
IPL 2025 Final RCB vs PBKS: ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಕಪ್ ಗೆಲ್ಲದ ತಂಡಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ಮುಂಚೂಣಿಯಲ್ಲಿವೆ. ಕಳೆದ 18 ವರ್ಷಗಳಿಂದ ಕಣಕ್ಕಿಳಿಯುತ್ತಿದ್ದರೂ, ಉಭಯ ತಂಡಗಳು ಈವರೆಗೆ ಚಾಂಪಿಯನ್ ಪಟ್ಟ ಅಲಂಕರಿಸಿಲ್ಲ. ಆದರೆ ಈ ಬಾರಿಯ ಫೈನಲ್ ಪಂದ್ಯದ ಮೂಲಕ ಒಂದು ತಂಡ ಟ್ರೋಫಿ ಎತ್ತಿ ಹಿಡಿಯಲಿದೆ.

IPL 2025: ಇಂಡಿಯನ್ ಪ್ರೀಮಿಯರ್ ಲೀಗ್ನ 18ನೇ ಫೈನಲ್ಗೆ ಕ್ಷಣಗಣನೆ ಶುರುವಾಗಿದೆ. ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ ಐಪಿಎಲ್ನ ಫೈನಲ್ ಫೈಟ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಹಾಗೂ ಪಂಜಾಬ್ ಕಿಂಗ್ಸ್ (PBKS) ತಂಡಗಳು ಕಣಕ್ಕಿಳಿಯಲಿವೆ. ಈ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಗೆಲ್ಲಬೇಕೆಂದು ವೀರೇಂದ್ರ ಸೆಹ್ವಾಗ್ ಬಯಸಿದ್ದಾರೆ. ಅದಕ್ಕಾಗಿ ನಾನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಬೆಂಬಲಿಸುವುದಾಗಿ ಅವರು ತಿಳಿಸಿದ್ದಾರೆ.
ಈ ಬಾರಿಯ ಐಪಿಎಲ್ನಲ್ಲಿ ವೀರೇಂದ್ರ ಸೆಹ್ವಾಗ್ ಬೆಂಬಲಿಸಿದ ತಂಡಗಳು ಸೋಲನುಭವಿಸಿದೆ. ಹೀಗಾಗಿಯೇ ಈ ಟ್ರೆಂಡ್ ಅನ್ನು ಮುಂದುವರೆಸಲು ಟೀಮ್ ಇಂಡಿಯಾದ ಮಾಜಿ ಆಟಗಾರ ನಿರ್ಧರಿಸಿದ್ದಾರೆ. ಇದಕ್ಕಾಗಿ ಫೈನಲ್ ಪಂದ್ಯದಲ್ಲಿ ನನ್ನ ಬೆಂಬಲ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಎಂದಿದ್ದಾರೆ ಸೆಹ್ವಾಗ್.
ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಸೆಹ್ವಾಗ್ ಪಂಜಾಬ್ ಕಿಂಗ್ಸ್ ತಂಡ ಗೆಲ್ಲಲಿದೆ ಎಂದಿದ್ದರು. ಆದರೆ ಗೆದ್ದಿದ್ದು ಎದುರಾಳಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ. ಇನ್ನು ಎಲಿಮಿನೇಟರ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಗುಜರಾತ್ ಟೈಟಾನ್ಸ್ ತಂಡ ಗೆಲ್ಲಲಿದೆ ಎಂದು ತಿಳಿಸಿದ್ದರು. ಆದರೆ ಗೆದ್ದಿರುವುದು ಮುಂಬೈ ಇಂಡಿಯನ್ಸ್.
ಇನ್ನು ದ್ವಿತೀಯ ಕ್ವಾಲಿಫೈಯರ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ಗೆಲ್ಲಲಿದೆ ಎಂದು ಸೆಹ್ವಾಗ್ ಭವಿಷ್ಯ ನುಡಿದ್ದರು. ಆದರೆ ಗೆದ್ದಿದ್ದು ಪಂಜಾಬ್ ಕಿಂಗ್ಸ್. ಇದೀಗ ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಲಿದೆ.
ಈ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗೆಲ್ಲಲಿದೆ ಎಂದು ವೀರೇಂದ್ರ ಸೆಹ್ವಾಗ್ ಭವಿಷ್ಯ ನುಡಿದಿದ್ದಾರೆ. ಆದರೆ ನನಗೆ ಗೆಲ್ಲಬೇಕಿರುವುದು ಪಂಜಾಬ್ ಕಿಂಗ್ಸ್ ತಂಡ. ಹೀಗಾಗಿ ನಾನು ಆರ್ಸಿಬಿ ತಂಡಕ್ಕೆ ಬೆಂಬಲ ವ್ಯಕ್ತಪಡಿಸುತ್ತಿದ್ದೇನೆ. ನಾನು ಬೆಂಬಲಿಸಿದ ತಂಡ ಸೋಲುವ ಕಾರಣ, ಅದೇ ಟ್ರೆಂಡ್ ಅನ್ನು ಮುಂದುವರೆಸುವುದಾಗಿ ವೀರೇಂದ್ರ ಸೆಹ್ವಾಗ್ ಕ್ರಿಕ್ಬಝ್ ಸಂದರ್ಶನದಲ್ಲಿ ಹೇಳಿದ್ದಾರೆ.
ಅದರಂತೆ ಇಂದಿನ ಪಂದ್ಯದಲ್ಲಿ ಆರ್ಸಿಬಿ ತಂಡವನ್ನು ಬೆಂಬಲಿಸುತ್ತಿರುವುದಾಗಿ ವೀರೇಂದ್ರ ಸೆಹ್ವಾಗ್ ತಿಳಿಸಿದ್ದಾರೆ. ಈ ಮೂಲಕವಾದರೂ ಪಂಜಾಬ್ ಕಿಂಗ್ಸ್ ತಂಡ ಚೊಚ್ಚಲ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಲಿದೆಯಾ ಎಂಬುದನ್ನು ಸೆಹ್ವಾಗ್ ಎದುರು ನೋಡುತ್ತಿದ್ದಾರೆ.
ಇದನ್ನೂ ಓದಿ: IPL 2025: 11 ದ್ವಿಶತಕ… ಫೈನಲ್ ಪಂದ್ಯದಲ್ಲಿ ರನ್ ಸುರಿಮಳೆ ಖಚಿತ
ಅಂದಹಾಗೆ ವೀರೇಂದ್ರ ಸೆಹ್ವಾಗ್ ಈ ಹಿಂದೆ ಪಂಜಾಬ್ ಕಿಂಗ್ಸ್ ತಂಡದ ನಾಯಕರಾಗಿ ಕಾಣಿಸಿಕೊಂಡಿದ್ದರು. ಆ ಬಳಿಕ ತಂಡದ ಮೆಂಟರ್ ಆಗಿಯೂ ಕಾರ್ಯ ನಿರ್ವಹಿಸಿದ್ದರು. ಹೀಗಾಗಿಯೇ ಸೆಹ್ವಾಗ್ ಪಂಜಾಬ್ ಕಿಂಗ್ಸ್ ತಂಡವನ್ನು ಪರೋಕ್ಷವಾಗಿ ಬೆಂಬಲಿಸಿ, ಆರ್ಸಿಬಿ ತಂಡ ಇಂದಿನ ಪಂದ್ಯದಲ್ಲಿ ಗೆಲ್ಲಲಿದೆ ಎಂದಿದ್ದಾರೆ.
Published On - 1:54 pm, Tue, 3 June 25
