Washington Sundar: 5 ವರ್ಷಗಳಲ್ಲಿ ಆಡಿದ್ದು ಕೇವಲ 4 ಪಂದ್ಯ: ಟೀಮ್ ಇಂಡಿಯಾಗೆ ಕಂಬ್ಯಾಕ್ ಮಾಡ್ತಾರಾ ಸುಂದರ್?
Washington Sundar: ಐಪಿಎಲ್ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ (SRH) ತಂಡವನ್ನು ಪ್ರತಿನಿಧಿಸುತ್ತಿರುವ 22 ವರ್ಷದ ಸುಂದರ್ ಅವರು ಗಾಯಗೊಳ್ಳುವ ಮೊದಲು 9 ಪಂದ್ಯಗಳಲ್ಲಿ 101 ರನ್ ಗಳಿಸಿದ್ದರು.
ಟೀಮ್ ಇಂಡಿಯಾದಲ್ಲಿ (Team India) ಅವಕಾಶಕ್ಕಾಗಿ ಪೈಪೋಟಿ ಜೋರಾಗಿದೆ. ಅದರಲ್ಲೂ ಈ ವರ್ಷ ನಡೆಯಲಿರುವ ಟಿ20 ವಿಶ್ವಕಪ್ (T20 World Cup 2022) ತಂಡದಲ್ಲಿ ಸ್ಥಾನ ಪಡೆಯಲು ಆಟಗಾರರ ನಡುವೆ ಜಿದ್ದಾಜಿದ್ದಿನ ಹೋರಾಟ ಕಂಡು ಬರುತ್ತಿದೆ. ಒಂದೆಡೆ ಆಟಗಾರರ ದಂಡೇ ಟೀಮ್ ಇಂಡಿಯಾ ಪರ ಪದಾರ್ಪಣೆಯನ್ನು ಎದುರು ನೋಡುತ್ತಿದ್ದರೆ, ಮತ್ತೊಂದೆಡೆ ಗಾಯದಿಂದ ಚೇತರಿಸಿಕೊಳ್ಳುತ್ತಿರುವ ಆಟಗಾರರು ಕಂಬ್ಯಾಕ್ ಮಾಡುತ್ತಿದ್ದಾರೆ. ಈ ಪಟ್ಟಿಗೆ ಹೊಸ ಸೇರ್ಪಡೆ ವಾಷಿಂಗ್ಟನ್ ಸುಂದರ್. ಐಪಿಎಲ್ ವೇಳೆ ಕೈಗೆ ಗಾಯ ಮಾಡಿಕೊಂಡಿದ್ದ ಸುಂದರ್ ಇದೀಗ ಬಹುತೇಕ ಚೇತರಿಸಿಕೊಂಡಿದ್ದಾರೆ. ಅಲ್ಲದೆ ಪ್ರಸ್ತುತ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ (NCA) ಫಿಟ್ನೆಸ್ ಅಭ್ಯಾಸದಲ್ಲಿ ತೊಡಗಿದ್ದಾರೆ. ಅಷ್ಟೇ ಅಲ್ಲದೆ ಮೈದಾನಕ್ಕೆ ಮರಳಲು ಇಂಗ್ಲೀಷ್ ಕೌಂಟಿ ತಂಡ ಲಂಕಾಶೈರ್ ಅನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಅಂದರೆ ಸಂಪೂರ್ಣ ಫಿಟ್ನೆಸ್ ಸಾಧಿಸಿದ ಬಳಿಕ ವಾಷಿಂಗ್ಟನ್ ಸುಂದರ್ ಕೌಂಟಿ ಕ್ರಿಕೆಟ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ಲಂಕಾಶೈರ್ ಜೊತೆ ಮಾತುಕತೆ ನಡೆಸಿದ್ದು, ಅತ್ತ ಕಡೆಯಿಂದ ಕೂಡ ಗ್ರೀನ್ ಸಿಗ್ನಲ್ ಸಿಕ್ಕಿದೆ ಎಂದು ತಿಳಿದು ಬಂದಿದೆ. ಹೀಗಾಗಿ ಟೀಮ್ ಇಂಡಿಯಾ ಇಂಗ್ಲೆಂಡ್ ವಿರುದ್ದ ಸರಣಿ ಆಡುವಾಗ ಸುಂದರ್ ಕೌಂಟಿ ಕ್ರಿಕೆಟ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಐಪಿಎಲ್ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ (SRH) ತಂಡವನ್ನು ಪ್ರತಿನಿಧಿಸುತ್ತಿರುವ 22 ವರ್ಷದ ಸುಂದರ್ ಗಾಯಗೊಳ್ಳುವ ಮೊದಲು 9 ಪಂದ್ಯಗಳಲ್ಲಿ 101 ರನ್ ಗಳಿಸಿದ್ದರು. ಅಲ್ಲದೆ ಒಟ್ಟು 6 ವಿಕೆಟ್‌ಗಳನ್ನು ಪಡೆದು ಮಿಂಚಿದ್ದರು. ಆದರೆ ಫೀಲ್ಡಿಂಗ್ ವೇಳೆ ಗಾಯಗೊಂಡಿದ್ದ ಪರಿಣಾಮ ಅವರು ಆ ಬಳಿಕ ಕಣಕ್ಕಿಳಿದಿರಲಿಲ್ಲ. ಇದೀಗ ಗಾಯದಿಂದ ಚೇತರಿಸಿಕೊಂಡಿರುವ ಸುಂದರ್ ಇಂಗ್ಲೆಂಡ್ನಲ್ಲೇ ಪುನರಾಗಮನವನ್ನು ಎದುರು ನೋಡುತ್ತಿದ್ದಾರೆ.
ಏಕೆಂದರೆ ಮುಂದಿನ ತಿಂಗಳು ಟೀಮ್ ಇಂಡಿಯಾ ಇಂಗ್ಲೆಂಡ್ ವಿರುದ್ದ ಸೀಮಿತ ಓವರ್ಗಳ ಸರಣಿ ಆಡಲಿದೆ. ಈ ಸರಣಿಯಲ್ಲಿ ಭಾರತ ತಂಡವು 3 ಟಿ20 ಪಂದ್ಯಗಳನ್ನು ಹಾಗೂ 3 ಏಕದಿನ ಪಂದ್ಯಗಳನ್ನಾಡಲಿದೆ. ಇದೇ ವೇಳೆ ಇಂಗ್ಲೆಂಡ್ನಲ್ಲಿ ಕೌಂಟಿಯಲ್ಲಿ ತೊಡಗಿಸಿಕೊಂಡು ಮಿಂಚಿದರೆ, ಬದಲಿ ಆಟಗಾರನಾಗಿ ತಂಡಕ್ಕೆ ಆಯ್ಕೆಯಾಗುವ ಅವಕಾಶ ಸುಂದರ್ಗೆ ಸಿಗಬಹುದು. ಇಂತಹದೊಂದು ಭರ್ಜರಿ ಪ್ಲ್ಯಾನ್ನೊಂದಿಗೆ ವಾಷಿಂಗ್ಟನ್ ಸುಂದರ್ ಲಂಕಾಶೈರ್ ಜೊತೆ ಕಣಕ್ಕಿಳಿಯಲು ಯೋಜನೆ ರೂಪಿಸಿದ್ದಾರೆ ಎನ್ನಲಾಗಿದೆ.
ವಿಶೇಷ ಎಂದರೆ ವಾಷಿಂಗ್ಟನ್ ಸುಂದರ್ 2017 ರಲ್ಲಿ ಟೀಮ್ ಇಂಡಿಯಾ ಏಕದಿನ ತಂಡದಲ್ಲಿ ಪದಾರ್ಪಣೆ ಮಾಡಿದ್ದರು. ಅಂದಿನಿಂದ ಅವರು ಭಾರತದ ಪರ ಆಡಿದ್ದು ಕೇವಲ 4 ಏಕದಿನ ಪಂದ್ಯಗಳನ್ನು ಮಾತ್ರ. ಇದೀಗ ಟಿ20 ವಿಶ್ವಕಪ್ ಹಾಗೂ ಮುಂಬರುವ ಏಕದಿನ ವಿಶ್ವಕಪ್ಗಾಗಿ ತಂಡದಲ್ಲಿ ಸ್ಥಾನ ಪಡೆಯಬೇಕಿದ್ದರೆ ಈಗಲೇ ತಂಡಕ್ಕೆ ಕಂಬ್ಯಾಕ್ ಮಾಡಬೇಕಿದೆ. ಹೀಗಾಗಿಯೇ ವಿದೇಶಿ ಪಿಚ್ನಲ್ಲಿ ಮಿಂಚುವ ಮೂಲಕ ಟೀಮ್ ಇಂಡಿಯಾಗೆ ಕಂಬ್ಯಾಕ್ ಮಾಡುವ ವಿಶ್ವಾಸದಲ್ಲಿದ್ದಾರೆ ತಮಿಳುನಾಡಿನ ಯುವ ಆಲ್ರೌಂಡರ್.
ಇನ್ನು ಏಕದಿನ ಕ್ರಿಕೆಟ್ನಲ್ಲಿ 4 ಪಂದ್ಯವಾಡಿದ್ದರೂ, ವಾಷಿಂಗ್ಟನ್ ಸುಂದರ್ ಟಿ20 ಕ್ರಿಕೆಟ್ನಲ್ಲಿ ಟೀಮ್ ಇಂಡಿಯಾ ಪರ 31 ಪಂದ್ಯಗಳನ್ನಾಡಿ 25 ವಿಕೆಟ್ ಪಡೆದಿದ್ದಾರೆ. ಅಲ್ಲದೆ ಟೆಸ್ಟ್‌ನಲ್ಲಿ 6 ಮತ್ತು ಏಕದಿನದಲ್ಲಿ 5 ವಿಕೆಟ್ ಪಡೆದಿದ್ದಾರೆ. ಇದೀಗ ಟೀಮ್ ಇಂಡಿಯಾದಲ್ಲಿ ಸ್ಪಿನ್ ಆಲ್ರೌಂಡರ್ ಆಗಿ ಆಲ್ರೌಂಡರ್ ಅಕ್ಷರ್ ಪಟೇಲ್ ಸ್ಥಾನ ಪಡೆದಿದ್ದು, ಹಾಗೆಯೇ ಮಧ್ಯಮ ವೇಗಿ ಆಲ್ರೌಂಡರ್ ಆಗಿ ಹಾರ್ದಿಕ್ ಪಾಂಡ್ಯ ಕಂಬಾಕ್ ಮಾಡಿದ್ದಾರೆ. ಇನ್ನು ಮತ್ತೋರ್ವ ಸ್ಪಿನ್ ಆಲ್ರೌಂಡರ್ ರವೀಂದ್ರ ಜಡೇಜಾ ಕೂಡ ಇಂಗ್ಲೆಂಡ್ ವಿರುದ್ದದ ಸೀಮಿತ ಓವರ್ಗಳ ಸರಣಿಯಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಹೀಗಾಗಿ ವಾಷಿಂಗ್ಟನ್ ಸುಂದರ್ಗೆ ಮತ್ತೆ ಟೀಮ್ ಇಂಡಿಯಾದಲ್ಲಿ ಚಾನ್ಸ್ ಸಿಗಲಿದೆಯಾ ಕಾದು ನೋಡಬೇಕಿದೆ.
ಕ್ರಿಕೆಟ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.