ರಂಗು ರಂಗಿನ ಚುಟುಕು ಕ್ರಿಕೆಟ್ ಕದನ ಟಿ20 ವಿಶ್ವಕಪ್ ರಂಗೇರಲು ಇನ್ನು ದಿನ ಮಾತ್ರ ಉಳಿದಿದೆ. ನಾಳೆಯಿಂದ (ಅಕ್ಟೋಬರ್ 16) ಟಿ20 ವಿಶ್ವಕಪ್ಗೆ ಚಾಲನೆ ದೊರೆಯಲಿದ್ದು, ಮೊದಲ ಸುತ್ತಿನಲ್ಲಿ ಅರ್ಹತಾ ಪಂದ್ಯಗಳು ನಡೆಯಲಿದೆ. ಈ ಸುತ್ತಿನಲ್ಲಿ ಒಟ್ಟು 8 ತಂಡಗಳು ಸೆಣಸುತ್ತಿದ್ದು, ಇದರಲ್ಲಿ ನಾಲ್ಕು ತಂಡಗಳು ಸೂಪರ್-12 ಹಂತಕ್ಕೇರಲಿದೆ. ಇದಾದ ಬಳಿಕ ಅಕ್ಟೋಬರ್ 22 ರಿಂದ ಸೂಪರ್-12 ಹಂತದ ಪಂದ್ಯಗಳು ಶುರುವಾಗಲಿದೆ.
ಈ ಹಂತದಲ್ಲಿ ಒಟ್ಟು 12 ತಂಡಗಳು ಸೆಣಸಲಿದ್ದು, ಇದರಲ್ಲಿ ಗೆಲ್ಲುವ ನಾಲ್ಕು ತಂಡಗಳಾವುವು ಎಂಬುದನ್ನು ಪಾಕಿಸ್ತಾನ್ ತಂಡದ ಮಾಜಿ ನಾಯಕ ವಾಸಿಂ ಅಕ್ರಮ್ ಹೆಸರಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ಸ್ವಿಂಗ್ ಕಿಂಗ್ ಅಕ್ರಮ್, ಈ ಸಲ ಪಾಕಿಸ್ತಾನ್ ತಂಡವು ಸೆಮಿಫೈನಲ್ ಆಡುವುದು ಖಚಿತ ಎಂದಿದ್ದಾರೆ.
ಏಕೆಂದರೆ ಪಾಕ್ ತಂಡವು ನ್ಯೂಜಿಲೆಂಡ್, ಬಾಂಗ್ಲಾದೇಶ್ ವಿರುದ್ಧ ತ್ರಿಕೋನ ಸರಣಿಯನ್ನು ಗೆದ್ದು ಅತ್ಯುತ್ತಮ ಆತ್ಮವಿಶ್ವಾಸದಲ್ಲಿದೆ. ಹಾಗಾಗಿ ನಾನು ಪಾಕ್ ತಂಡವನ್ನು ಸೆಮಿಫೈನಲ್ಸ್ನಲ್ಲಿ ಎದುರು ನೋಡುತ್ತೇನೆ ಎಂದಿದ್ದಾರೆ.
ಹಾಗೆಯೇ ಟೀಮ್ ಇಂಡಿಯಾ ಕೂಡ ಸೆಮಿಫೈನಲ್ಗೇರಲಿದೆ ಎಂದು ವಾಸಿಂ ಅಕ್ರಮ್ ಭವಿಷ್ಯ ನುಡಿದಿದ್ದಾರೆ. ಭಾರತ ತಂಡವು ಅತ್ಯುತ್ತಮ ಫಾರ್ಮ್ನಲ್ಲಿದ್ದು, ಇದಾಗ್ಯೂ ಜಸ್ಪ್ರೀತ್ ಬುಮ್ರಾ ಅನುಪಸ್ಥಿತಿಯಲ್ಲಿ ಬೌಲಿಂಗ್ ವಿಭಾಗವು ಬಲಹೀನವಾಗಿದೆ. ಆದರೆ ಅತ್ಯುತ್ತಮ ಬ್ಯಾಟಿಂಗ್ ಲೈನಪ್ ಹೊಂದಿರುವ ಟೀಮ್ ಇಂಡಿಯಾ ಪಾಕಿಸ್ತಾನ್ ಜೊತೆ ಸೆಮಿಫೈನಲ್ ಪ್ರವೇಶಿಸುವ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ.
ಇನ್ನು ಆಸ್ಟ್ರೇಲಿಯಾದಲ್ಲಿ ಈ ಬಾರಿ ವಿಶ್ವಕಪ್ ನಡೆಯುತ್ತಿರುವುದರಿಂದ ಆಸೀಸ್ ಬಳಗವು ತವರು ಪಿಚ್ನ ಸಂಪೂರ್ಣ ಲಾಭ ಪಡೆದುಕೊಳ್ಳಲಿದೆ. ಹೀಗಾಗಿ ಆಸ್ಟ್ರೇಲಿಯಾ ತಂಡ ಕೂಡ ಸೆಮಿಫೈನಲ್ಗೇರುವ ಸಾಧ್ಯತೆ ಹೆಚ್ಚಿದೆ ಎಂದು ಅಕ್ರಮ್ ಹೇಳಿದ್ದಾರೆ.
ಸೆಮಿಫೈನಲ್ಗೇರುವ ನಾಲ್ಕನೇ ತಂಡವಾಗಿ ಸೌತ್ ಆಫ್ರಿಕಾವನ್ನು ಅಕ್ರಮ್ ಹೆಸರಿಸಿದ್ದಾರೆ. ನನ್ನ ಪ್ರಕಾರ ಸೌತ್ ಆಫ್ರಿಕಾ ತಂಡವು ಡಾರ್ಕ್ ಹಾರ್ಸ್. ಆ ತಂಡ ಏನು ಬೇಕಾದರೂ ಮಾಡಬಹುದು. ಅವರು ಬಲಿಷ್ಠ ತಂಡವನ್ನು ಹೊಂದಿದ್ದು, ಹೀಗಾಗಿ ಸೌತ್ ಆಫ್ರಿಕಾ ಕೂಡ ಈ ಬಾರಿ ಸೆಮಿಫೈನಲ್ ಆಡಲಿದೆ ಎಂದು ವಾಸಿಂ ಅಕ್ರಮ್ ಭವಿಷ್ಯ ನುಡಿದಿದ್ದಾರೆ.
Published On - 8:30 pm, Sat, 15 October 22