ಅಲ್ಪ ಸ್ವಲ್ಪ ರನ್ ಸಾಕಾಗಲ್ಲ, ನಮಗೆ 250-260 ರನ್ ಬೇಕು: ಗೆದ್ದ ಬಳಿಕ ಗೌತಮ್ ಗಂಭೀರ್ ಹೇಳಿಕೆ
India vs England T20I: ಟೀಮ್ ಇಂಡಿಯಾ ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಸರಣಿಯನ್ನು 4-1 ಅಂತರದಿಂದ ಗೆದ್ದುಕೊಂಡಿದೆ. ಈ ಸರಣಿಯ ಮೊದಲ ಮ್ಯಾಚ್ನಲ್ಲಿ ಭಾರತ ತಂಡ 7 ವಿಕೆಟ್ಗಳ ಜಯ ಸಾಧಿಸಿದರೆ, ದ್ವಿತೀಯ ಪಂದ್ಯದಲ್ಲಿ ಇಂಗ್ಲೆಂಡ್ 2 ವಿಕೆಟ್ಗಳ ಸೋಲನುಭವಿಸಿತು. ಇನ್ನು ಕೊನೆಯ ಎರಡು ಪಂದ್ಯಗಳಲ್ಲಿ ಭಾರತ ತಂಡವು ಬ್ಯಾಕ್ ಟು ಬ್ಯಾಕ್ ಜಯ ಸಾಧಿಸಿದೆ.

ಇಂಗ್ಲೆಂಡ್ ವಿರುದ್ಧದ 5ನೇ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ ಭರ್ಜರಿ ಜಯ ಸಾಧಿಸಿದೆ. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ 20 ಓವರ್ಗಳಲ್ಲಿ ಕಲೆಹಾಕಿದ್ದು ಬರೋಬ್ಬರಿ 247 ರನ್ಗಳು. ಇದಕ್ಕುತ್ತರವಾಗಿ ಬ್ಯಾಟ್ ಬೀಸಿದ ಇಂಗ್ಲೆಂಡ್ ಕೇವಲ 97 ರನ್ಗಳಿಗೆ ಆಲೌಟ್ ಆಗಿದೆ. ಈ ಮೂಲಕ ಟೀಮ್ ಇಂಡಿಯಾ 150 ರನ್ಗಳ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನ ಬಳಿಕ ಮಾತನಾಡಿದ ಗೌತಮ್ ಗಂಭೀರ್, ಟೀಮ್ ಇಂಡಿಯಾದ ಆಕ್ರಮಣಕಾರಿ ಆಟವನ್ನು ಬೆಂಬಲಿಸಿದ್ದಾರೆ.
ಇಂಗ್ಲೆಂಡ್ ಉತ್ತಮ ತಂಡ. ನಾವು ಸೋಲಿಗೆ ಹೆದರುವುದಿಲ್ಲ. ಬದಲಾಗಿ ನಿಯಮಿತವಾಗಿ 250-260 ರನ್ಗಳಿಸಲು ಪ್ರಯತ್ನಿಸಲು ಬಯಸುತ್ತೇವೆ. ಇಂತಹ ಪ್ರಯತ್ನದ ನಡುವೆ ಕೆಲವೊಮ್ಮೆ 120-130 ರನ್ಗಳಿಗೆ ಆಲೌಟ್ ಆಗಬಹುದು. ಇದಾಗ್ಯೂ ನಾವು ಸರಿಯಾದ ಹಾದಿಯಲ್ಲಿದ್ದೇವೆ. ನಾವು ಅದನ್ನೇ ಮುಂದುವರಿಸುತ್ತೇವೆ. ನಮ್ಮ ನಿರ್ಭೀತ ಕ್ರಿಕೆಟ್ ಮುಂದುವರೆಯಲಿದೆ ಎಂದು ಗೌತಮ್ ಗಂಭೀರ್ ಹೇಳಿದ್ದಾರೆ.
ಇನ್ನು 5ನೇ ಟಿ20 ಪಂದ್ಯದಲ್ಲಿ 54 ಎಸೆತಗಳಲ್ಲಿ 13 ಸಿಕ್ಸ್ ಹಾಗೂ 7 ಫೋರ್ಗಳೊಂದಿಗೆ 135 ರನ್ ಬಾರಿಸಿದ ಅಭಿಷೇಕ್ ಶರ್ಮಾ ಅವರ ಇನಿಂಗ್ಸ್ ಅನ್ನು ಹಾಡಿ ಹೊಗಳಿದ ಗಂಭೀರ್, ನಾವು ಇಂತಹ ಆಟಗಾರರ ಮೇಲೆ ನಂಬಿಯಿಡಬೇಕು. ಏಕೆಂದರೆ ತಂಡದ ಹೆಚ್ಚಿನ ಆಟಗಾರರು ಆಕ್ರಮಣಕಾರಿಯಾಗಿ ಆಡುವುದನ್ನು ನಂಬುತ್ತಾರೆ. ಇಂತಹ ಆಟಗಳಿಂದ ಮಾತ್ರ ಬಲಿಷ್ಠ ತಂಡಗಳ ವಿರುದ್ಧ ಗೆಲ್ಲಲು ಸಾಧ್ಯವಾಗುತ್ತದೆ ಎಂದು ಗೌತಮ್ ಗಂಭೀರ್ ಅಭಿಪ್ರಾಯಪಟ್ಟಿದ್ದಾರೆ.
ಈ ಆಕ್ರಮಣಕಾರಿ ಆಟದೊಂದಿಗೆ ಟೀಮ್ ಇಂಡಿಯಾ ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಸರಣಿಯನ್ನು 4-1 ಅಂತರದಿಂದ ಗೆದ್ದುಕೊಂಡಿದೆ. ಈ ಸರಣಿಯ ಮೊದಲ ಮ್ಯಾಚ್ನಲ್ಲಿ ಭಾರತ ತಂಡ 7 ವಿಕೆಟ್ಗಳ ಜಯ ಸಾಧಿಸಿದರೆ, ದ್ವಿತೀಯ ಪಂದ್ಯದಲ್ಲಿ ಇಂಗ್ಲೆಂಡ್ 2 ವಿಕೆಟ್ಗಳ ಸೋಲನುಭವಿಸಿತು.
ಇನ್ನು ಮೂರನೇ ಪಂದ್ಯದಲ್ಲಿ ಇಂಗ್ಲೆಂಡ್ ತಂಡ 26 ರನ್ಗಳ ಜಯ ಸಾಧಿಸಿದೆ. ನಾಲ್ಕನೇ ಮ್ಯಾಚ್ನಲ್ಲಿ 15 ರನ್ಗಳ ಗೆಲುವು ದಾಖಲಿಸಿದ್ದ ಟೀಮ್ ಇಂಡಿಯಾ, ಕೊನೆಯ ಪಂದ್ಯವನ್ನು 150 ರನ್ಗಳಿಂದ ಗೆದ್ದುಕೊಂಡಿದೆ. ಈ ಮೂಲಕ ಸರಣಿಯನ್ನು 4-1 ಅಂತರದಿಂದ ವಶಪಡಿಸಿಕೊಂಡಿದೆ.
ಇದನ್ನೂ ಓದಿ: ವಿರಾಟ್ ಕೊಹ್ಲಿಯನ್ನು ಹಿಂದಿಕ್ಕಿದ ಡೇವಿಡ್ ವಾರ್ನರ್
ಭಾರತ ಮತ್ತು ಇಂಗ್ಲೆಂಡ್ ನಡುವಣ ಟಿ20 ಸರಣಿ ಮುಕ್ತಾಯಗೊಂಡಿದ್ದು, ಉಭಯ ತಂಡಗಳ ಏಕದಿನ ಸರಣಿಯು ಫೆಬ್ರವರಿ 6 ರಿಂದ ಶುರುವಾಗಲಿದೆ. ಈ ಸರಣಿಯಲ್ಲಿ ಒಟ್ಟು 3 ಪಂದ್ಯಗಳನ್ನಾಡಲಾಗುತ್ತದೆ. ಇದಾದ ಬಳಿಕ ಟೀಮ್ ಇಂಡಿಯಾ ಚಾಂಪಿಯನ್ಸ್ ಟ್ರೋಫಿ ಟೂರ್ನಿ ಆಡಲಿದೆ.