Weekend Special: ಭಾರತದ ವಿರುದ್ದ ಐತಿಹಾಸಿಕ ಪಂದ್ಯವಾಡಿದ ಆಟಗಾರ, ಬಳಿಕ ಜೈಲು ಪಾಲಾದರು..!
Bill Bowes: ಬಿಲ್ ಕ್ರಿಕೆಟ್ನಲ್ಲೇ ಕೆರಿಯರ್ ರೂಪಿಸಲು ಬಯಸಿದ್ದರು. ಆದರೆ ಅದೇ ಸಮಯದಲ್ಲಿ ಶುರುವಾದ ವಿಶ್ವ ಮಹಾಯುದ್ದ ಅವರ ಎಲ್ಲಾ ಲೆಕ್ಕಾಚಾರಗಳನ್ನು ತಲೆಕೆಳಗಾಗಿಸಿತು.
ಕ್ರಿಕೆಟ್ ಪ್ರೇಮಿಗಳ ಚಿತ್ತ ಇದೀಗ ಭಾರತ-ಇಂಗ್ಲೆಂಡ್ (India vs England) ನಡುವಣ ಪ್ರತಿಷ್ಠಿತ ಟೆಸ್ಟ್ ಸರಣಿಯತ್ತ ನೆಟ್ಟಿದೆ. ಐದು ಪಂದ್ಯಗಳ ಸರಣಿಯಲ್ಲಿ ಮೊದಲ ಮೂರು ಪಂದ್ಯಗಳು ಮುಗಿದಿದ್ದು, ಉಭಯ ತಂಡಗಳು ತಲಾ ಒಂದೊಂದು ಜಯ ದಾಖಲಿಸಿ ಸಮಬಲದಲ್ಲಿದೆ. ಹಾಗೆಯೇ ನಾಲ್ಕನೇ ಟೆಸ್ಟ್ ಪಂದ್ಯವು ರೋಚಕತೆಯಿಂದ ಕೂಡಿದ್ದು, ಈ ಪಂದ್ಯವನ್ನು ಗೆಲ್ಲುವ ಮೂಲಕ ಟೀಮ್ ಇಂಡಿಯಾ (Team India) ಮುನ್ನಡೆ ಸಾಧಿಸುವ ವಿಶ್ವಾಸದಲ್ಲಿದೆ. ಪ್ರಸ್ತುತ ಸರಣಿಯ ವಿಷಯ ಒಂದೆಡೆಯಾದರೆ, ಇದೇ ಇಂಗ್ಲೆಂಡ್ (England) ವಿರುದ್ದ 89 ವರ್ಷಗಳ ಹಿಂದೆ ಭಾರತ ತಂಡ ಚೊಚ್ಚಲ ಬಾರಿ ಟೆಸ್ಟ್ ಸರಣಿ ಆಡಿತ್ತು ಎಂಬುದು ಅನೇಕರಿಗೆ ತಿಳಿದಿಲ್ಲ. ಅಂದರೆ ಸ್ವಾತಂತ್ರ ಪೂರ್ವದಲ್ಲೇ ಟೀಮ್ ಇಂಡಿಯಾ ಇಂಗ್ಲೆಂಡ್ ವಿರುದ್ದ ಮೊದಲ ಟೆಸ್ಟ್ ಸರಣಿ ಆಡಿತ್ತು. ಆ ಸರಣಿಯಲ್ಲಿ ಆಡಿದ್ದ ಇಂಗ್ಲೆಂಡ್ ಆಟಗಾರರಲ್ಲಿ ಬಿಲ್ ಬೋವ್ಸ್ (Bill Bowes) ಕೂಡ ಒಬ್ಬರು. ಈ ಹೆಸರು ಭಾರತೀಯ ಕ್ರಿಕೆಟ್ ಪ್ರೇಮಿಗಳಿಗೆ ಪರಿಚಿತವಲ್ಲ. ಆದರೆ ಇಂಗ್ಲೆಂಡ್ನಲ್ಲಿ ಬೋವ್ಸ್ ಹೆಸರನ್ನು ಪ್ರತಿವರ್ಷ ನೆನೆಯಲಾಗುತ್ತದೆ. ಇದಕ್ಕೆ ದೊಡ್ಡ ಕಾರಣ ಕೂಡ ಇದೆ.
ಕ್ರಿಕೆಟ್ ವೃತ್ತಿಜೀವನವು ಪ್ರಕ್ಷುಬ್ಧತೆಯಿಂದ ಕೂಡಿದ್ದ ಕಾಲದಲ್ಲಿ ಇಂಗ್ಲೆಂಡ್ ತಂಡದಲ್ಲಿ ಅವಕಾಶ ಪಡೆದ ಆಟಗಾರ ಬಿಲ್ ಬೋವ್ಸ್. ಇದೇ ಕಾರಣದಿಂದಾಗಿ ಅವರ ಕ್ರಿಕೆಟ್ ವೃತ್ತಿಜೀವನ ಕೂಡ ದೀರ್ಘಾವಧಿಯಾಗಿರಲಿಲ್ಲ. ಮಧ್ಯಮ ವೇಗಿಯಾಗಿ ಕ್ರಿಕೆಟ್ ಕೆರಿಯರ್ ಆರಂಭಿಸಿದ್ದ ಬಿಲ್ ಕನ್ನಡಕ ಧರಿಸಿ ಕಣಕ್ಕಿಳಿಯುತ್ತಿದ್ದರು. ಬ್ಯಾಟಿಂಗ್ ಮತ್ತು ಫೀಲ್ಡಿಂಗ್ ಮಾಡುವಾಗ ಕೂಡ ಕನ್ನಡಕವನ್ನು ಧರಿಸುತ್ತಿದ್ದರು. ಹೀಗಾಗಿಯೇ ಮೈದಾನದಲ್ಲಿ ಅವರು ಇತರೆ ಆಟಗಾರರ ನಡುವೆ ಎಲ್ಲರ ಗಮನ ಸೆಳೆಯುತ್ತಿದ್ದರು.
ಬಿಲ್‌ರ ಚೊಚ್ಚಲ ಪಂದ್ಯವು ಭಾರತದ ವಿರುದ್ದವಾಗಿತ್ತು ಎಂಬುದು ವಿಶೇಷ. ಅಂದರೆ 1932 ರಲ್ಲಿ ಲಾರ್ಡ್ಸ್‌ನಲ್ಲಿ ಭಾರತ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದರು. ಈ ಐತಿಹಾಸಿಕ ಪಂದ್ಯದಲ್ಲಿ ಪದಾರ್ಪಣೆ ಮಾಡಿದ ಬಿಲ್ ಮೊದಲ ಪಂದ್ಯದಲ್ಲೇ ಇಂಗ್ಲೆಂಡ್ ಪರ ಅತ್ಯಂತ ಯಶಸ್ವಿ ಬೌಲರ್ ಎನಿಸಿಕೊಂಡರು. ಮೊದಲ ಇನ್ನಿಂಗ್ಸ್‌ನಲ್ಲಿ 4 ವಿಕೆಟ್ ಪಡೆದ ಬಿಲ್, ನಂತರ ಎರಡನೇ ಇನ್ನಿಂಗ್ಸ್‌ನಲ್ಲಿ 2 ವಿಕೆಟ್ ಉರುಳಿಸಿ ಭಾರತದ ಸೋಲಿಗೆ ಕಾರಣರಾದರು.
ಚೊಚ್ಚಲ ಪಂದ್ಯದಲ್ಲಿ ಉತ್ತಮ ಪ್ರದರ್ಶನದಿಂದಾಗಿ ಬಿಲ್ಗೆ ಆಶಸ್ ಸರಣಿಯಲ್ಲಿ ಅವಕಾಶ ದೊರೆಯಿತು. ಆದರೆ ಆಸ್ಟ್ರೇಲಿಯಾ ಪ್ರವಾಸದಲ್ಲಿ, ಮೆಲ್ಬೋರ್ನ್‌ನಲ್ಲಿ ಕೇವಲ ಒಂದು ಟೆಸ್ಟ್ ಆಡುವ ಅವಕಾಶವನ್ನು ಮಾತ್ರ ಪಡೆದರು. ಆದಾಗ್ಯೂ, ಸಿಕ್ಕ ಅವಕಾಶದಲ್ಲಿ ಮಿಂಚಲು ಸಾಧ್ಯವಾಗಿರಲಿಲ್ಲ. ಕೇವಲ ಒಂದು ವಿಕೆಟ್ ಮಾತ್ರ ಪಡೆದಿದ್ದರು. ಆದರೆ ಅಂದು ಪಡೆದ ವಿಕೆಟ್ ಅಂತಿಂಥದ್ದವರದ್ದಲ್ಲ ಎಂಬುದು ವಿಶೇಷ. ಹೌದು, ಅಂದು ಬಿಲ್ ಕ್ರಿಕೆಟ್ ದಂತಕಥೆ ಡಾನ್ ಬ್ರಾಡ್ಮನ್ ಅವರನ್ನು ಔಟ್ ಮಾಡಿದ್ದರು. ಹೀಗೆ ಬ್ರಾಡ್ಮನ್ ಅವರನ್ನು ಔಟ್ ಮಾಡಿದ ಕೆಲವೇ ಕೆಲವು ಬೌಲರುಗಳಲ್ಲಿ ಬಿಲ್ ಬೋವ್ಸ್ ಕೂಡ ಒಬ್ಬರು.
ಬಿಲ್ ಕ್ರಿಕೆಟ್ನಲ್ಲೇ ಕೆರಿಯರ್ ರೂಪಿಸಲು ಬಯಸಿದ್ದರು. ಆದರೆ ಅದೇ ಸಮಯದಲ್ಲಿ ಶುರುವಾದ ವಿಶ್ವ ಮಹಾಯುದ್ದ ಅವರ ಎಲ್ಲಾ ಲೆಕ್ಕಾಚಾರಗಳನ್ನು ತಲೆಕೆಳಗಾಗಿಸಿತು. 1939 ರಲ್ಲಿ ಎರಡನೇ ವಿಶ್ವಯುದ್ಧದ ಕಾರಣದಿಂದ ಕ್ರಿಕೆಟ್ ನಿಲ್ಲಿಸಬೇಕಾಗಿ ಬಂತು. ಅಲ್ಲದೆ ಬಿಲ್ ಅನೇಕ ಆಟಗಾರರಂತೆ ಸೇನೆಯ ಭಾಗವಾದರು. ಈ ಯುದ್ದದ ಸಂದರ್ಭದಲ್ಲಿ ಅವರನ್ನು 1942 ರಲ್ಲಿ ಲಿಬಿಯಾದಲ್ಲಿ ಬಂಧಿಸಲಾಯಿತು. 3 ವರ್ಷಗಳ ಕಾಲ ಸೆರೆವಾಸ ಅನುಭವಿಸಿದರು. ಜೈಲಿನಿಂದ ಬಿಡುಗಡೆಯಾಗಿ ಬರುವಷ್ಟರಲ್ಲಿ ಎಲ್ಲವೂ ಬದಲಾಗಿತ್ತು. ವಿಶ್ವ ಯುದ್ಧ ಮುಗಿದು ಕ್ರಿಕೆಟ್ ಆರಂಭವಾಗುಷ್ಟರಲ್ಲಿ ಬಿಲ್ ಬೋವ್ಸ್ಗೆ 38 ವರ್ಷ. ಇದಾಗ್ಯೂ ದೇಶೀಯ ಕ್ರಿಕೆಟ್ನಲ್ಲಿ 2 ವರ್ಷ ಆಡಿದರೂ ನಿರೀಕ್ಷಿತ ಮಟ್ಟದಲ್ಲಿ ಮಿಂಚಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಕ್ರಿಕೆಟ್ಗೆ ಗುಡ್ ಬೈ ಹೇಳಿದರು.
ಅತ್ಯುತ್ತಮವಾಗಿ ಕೆರಿಯರ್ ಆರಂಭಿಸಿದ್ದ ಬಿಲ್ ಬೋವ್ಸ್ ಇಂಗ್ಲೆಂಡ್ ತಂಡವನ್ನು ಪ್ರತಿನಿಧಿಸಿದ್ದು ಕೇವಲ 15 ಪಂದ್ಯಗಳಲ್ಲಿ ಮಾತ್ರ . ಈ ವೇಳೆ 68 ವಿಕೆಟ್ ಪಡೆದು ಮಿಂಚಿದ್ದರು. ಯಾರ್ಕ್‌ಶೈರ್ ಕೌಂಟಿ ಕ್ಲಬ್ ಪರ 372 ಪಂದ್ಯಗಳನ್ನು ಆಡಿದ್ದ ಬೋವ್ಸ್ , 1639 ವಿಕೆಟ್ ಗಳನ್ನು ಉರುಳಿಸಿರುವುದು ಅವರ ಬೌಲಿಂಗ್ ಸಾಧನೆಗೆ ಹಿಡಿದ ಕನ್ನಡಿ. ಆದರೆ ಅವರ ವೃತ್ತಿಜೀವನದ ನಡುವೆ ಜೈಲು ಸೇರಿದ್ದು, ಅವರ ಕೆರಿಯರ್ ಅನ್ನೇ ಬಾಧಿಸಿತು ಎನ್ನಬಹುದು. ಜುಲೈ 25, 1908 ರಂದು ಯಾರ್ಕ್‌ಶೈರ್ ನಗರದಲ್ಲಿ ಜನಿಸಿದ ಬಿಲ್ ಬೋವ್ಸ್ ಸೆಪ್ಟೆಂಬರ್ 4, 1987 ರಂದು 79 ನೇ ವಯಸ್ಸಿನಲ್ಲಿ ನಿಧನರಾದರು. ಅಂದಹಾಗೆ, ಇಂದು ಬಿಲ್ ಬೋವ್ಸ್ ಅವರ ಪುಣ್ಯತಿಥಿ.
ಇದನ್ನೂ ಓದಿ: ಅತ್ಯುತ್ತಮ ಮೈಲೇಜ್ ನೀಡುವ ಅತೀ ಕಡಿಮೆ ಬೆಲೆಯ ಸ್ಕೂಟರ್ ಬಿಡುಗಡೆ
ಇದನ್ನೂ ಓದಿ: Crime News: ಸಿಂಧೂರ ಹಚ್ಚಿದಕ್ಕೆ ಮಗಳನ್ನು ಕೊಂದ ತಾಯಿ
(Weekend Special: Former England Fast Bowler Bill Bowes died on this day)