34 ವರ್ಷಗಳ ಕಾಯುವಿಕೆ ಅಂತ್ಯ: ಪಾಕ್ ಪಡೆಯನ್ನು ಮಕಾಡೆ ಮಲಗಿಸಿದ ವೆಸ್ಟ್ ಇಂಡೀಸ್
Pakistan vs West Indies Test: ಪಾಕಿಸ್ತಾನ್ ಮತ್ತು ವೆಸ್ಟ್ ಇಂಡೀಸ್ ನಡುವಣ 2 ಪಂದ್ಯಗಳ ಟೆಸ್ಟ್ ಸರಣಿ ಮುಕ್ತಾಯಗೊಂಡಿದೆ. ಈ ಸರಣಿಯ ಮೊದಲ ಪಂದ್ಯದಲ್ಲಿ ಪಾಕಿಸ್ತಾನ್ ತಂಡ 127 ರನ್ಗಳ ಜಯ ಸಾಧಿಸಿದರೆ, ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡ 120 ರನ್ಗಳ ಭರ್ಜರಿ ಗೆಲುವು ದಾಖಲಿಸಿದೆ. ಈ ಮೂಲಕ ಸರಣಿಯನ್ನು ಡ್ರಾ ಮಾಡಿಕೊಳ್ಳುವಲ್ಲಿ ವಿಂಡೀಸ್ ಪಡೆ ಯಶಸ್ವಿಯಾಗಿದೆ.
ಬರೋಬ್ಬರಿ 34 ವರ್ಷಗಳ ಬಳಿಕ ಪಾಕಿಸ್ತಾನದಲ್ಲಿ ವೆಸ್ಟ್ ಇಂಡೀಸ್ ತಂಡ ಟೆಸ್ಟ್ ಪಂದ್ಯ ಗೆದ್ದುಕೊಂಡಿದೆ. ಕೊನೆಯ ಬಾರಿ ಪಾಕ್ನಲ್ಲಿ ವಿಂಡೀಸ್ ಪಡೆ ಟೆಸ್ಟ್ ಗೆದ್ದಿದ್ದು 1990 ರಲ್ಲಿ. ಇದಾದ ಬಳಿಕ ಪಾಕಿಸ್ತಾನ್ ಪಿಚ್ನಲ್ಲಿ ವೆಸ್ಟ್ ಇಂಡೀಸ್ ಪಾಲಿಗೆ ಗೆಲುವು ಮರೀಚಿಕೆಯಾಗಿತ್ತು. ಇದೀಗ ಮೂರು ದಶಕಗಳ ಬಳಿಕ ಗೆಲುವು ದಾಖಲಿಸುವಲ್ಲಿ ಕೆರಿಬಿಯನ್ ಪಡೆ ಯಶಸ್ವಿಯಾಗಿದೆ.
ಮುಲ್ತಾನ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಕ್ರೈಗ್ ಬ್ರಾಥ್‌ವೈಟ್ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ವಿಂಡೀಸ್ ನಿರೀಕ್ಷಿತ ಆರಂಭ ಪಡೆಯಲಿಲ್ಲ. ಅಲ್ಲದೆ ಕೇವಲ 58 ರನ್ಗಳಿಗೆ 8 ವಿಕೆಟ್ ಕಳೆದುಕೊಂಡು ಅಲ್ಪ ಮೊತ್ತಕ್ಕೆ ಕುಸಿಯುವ ಭೀತಿಗೆ ಒಳಗಾಗಿತ್ತು.
ಈ ಹಂತದಲ್ಲಿ ಕಣಕ್ಕಿಳಿದ ಗುಡಾಕೇಶ್ ಮೋಟಿ (55) ಅರ್ಧಶತಕ ಬಾರಿಸಿ ಮಿಂಚಿದರು. ಇನ್ನು ಜೋಮೆಲ್ ವಾರಿಕನ್ 36 ರನ್ಗಳ ಕೊಡುಗೆ ನೀಡಿದರು. ಬೌಲರ್ಗಳ ಈ ಉಪಯುಕ್ತ ಕಾಣಿಕೆಯೊಂದಿಗೆ ವೆಸ್ಟ್ ಇಂಡೀಸ್ ತಂಡವು ಮೊದಲ ಇನಿಂಗ್ಸ್ನಲ್ಲಿ 163 ರನ್ ಕಲೆಹಾಕಿತು. ಪಾಕಿಸ್ತಾನ್ ಪರ ನೊಮಾನ್ ಅಲಿ 41 ರನ್ ನೀಡಿ 6 ವಿಕೆಟ್ ಪಡೆದರೆ, ಸಾಜಿದ್ ಖಾನ್ 2 ವಿಕೆಟ್ ಕಬಳಿಸಿ ಮಿಂಚಿದರು.
ಇದಕ್ಕುತ್ತರವಾಗಿ ಮೊದಲ ಇನಿಂಗ್ಸ್ ಶುರು ಮಾಡಿದ ಪಾಕಿಸ್ತಾನ್ ತಂಡ ನಿರೀಕ್ಷಿತ ಬ್ಯಾಟಿಂಗ್ ಪ್ರದರ್ಶಿಸಿರಲಿಲ್ಲ. ಸ್ಪಿನ್ ಸ್ನೇಹಿ ಪಿಚ್ನಲ್ಲಿ ರನ್ಗಳಿಸಲು ಪರದಾಡಿದ ಪಾಕ್ ಬ್ಯಾಟರ್ಗಳು ಪೆವಿಲಿಯನ್ ಪರೇಡ್ ನಡೆಸಿದರು. ಇದರ ನಡುವೆ ವಿಕೆಟ್ ಕೀಪರ್ ಬ್ಯಾಟರ್ ಮೊಹಮ್ಮದ್ ರಿಝ್ವಾನ್ 49 ರನ್ ಬಾರಿಸಿದ್ದು ಗರಿಷ್ಠ ಸ್ಕೋರ್.
ಇತ್ತ ಸ್ಪಿನ್ ಮೋಡಿ ಮಾಡಿದ ಗುಡಾಕೇಶ್ ಮೋಟಿ 3 ವಿಕೆಟ್ ಪಡೆದರೆ, ಜೋಮೆಲ್ ವಾರಿಕನ್ 4 ವಿಕೆಟ್ ಕಬಳಿಸಿದರು. ಪರಿಣಾಮ ಪಾಕಿಸ್ತಾನ್ ತಂಡವು ಮೊದಲ ಇನಿಂಗ್ಸ್ನಲ್ಲಿ 154 ರನ್ಗಳಿಗೆ ಆಲೌಟ್ ಆಯಿತು.
ದ್ವಿತೀಯ ಇನಿಂಗ್ಸ್:
ಪ್ರಥಮ ಇನಿಂಗ್ಸ್ನಲ್ಲಿನ 9 ರನ್ಗಳ ಮುನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿದ ವೆಸ್ಟ್ ಇಂಡೀಸ್ ಪರ ನಾಯಕ ಕ್ರೈಗ್ ಬ್ರಾಥ್‌ವೈಟ್ (54) ಅರ್ಧಶತಕ ಬಾರಿಸಿ ಮಿಂಚಿದರು.
ಇನ್ನು ಅಮೀರ್ ಜಾಂಗೂ 30 ರನ್ಗಳ ಕೊಡುಗೆ ನೀಡಿದರೆ, ವಿಕೆಟ್ ಕೀಪರ್ ಬ್ಯಾಟರ್ ಟೆವಿನ್ ಇಮ್ಲಾಚ್ 35 ರನ್ ಸಿಡಿಸಿದರು. ಈ ಮೂಲಕ ವೆಸ್ಟ್ ಇಂಡೀಸ್ ತಂಡವು ದ್ವಿತೀಯ ಇನಿಂಗ್ಸ್ನಲ್ಲಿ 244 ರನ್ ಕಲೆಹಾಕಿತು. ಪಾಕಿಸ್ತಾನ್ ಪರ ನೊಮಾನ್ ಅಲಿ ಹಾಗೂ ಸಾಜಿದ್ ಖಾನ್ ತಲಾ 4 ವಿಕೆಟ್ ಕಬಳಿಸಿದರು.
254 ರನ್ಗಳ ಗುರಿ:
ಪ್ರಥಮ ಇನಿಂಗ್ಸ್ನಲ್ಲಿನ 9 ರನ್ಗಳ ಹಿನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ನಲ್ಲಿ 254 ರನ್ಗಳ ಗುರಿ ಪಡೆದ ಪಾಕಿಸ್ತಾನ್ ಬ್ಯಾಟರ್ಗಳು ರನ್ ಗಳಿಸುವುದಿರಲಿ, ಜೋಮೆಲ್ ವಾರಿಕನ್ ಸ್ಪಿನ್ ಮುಂದೆ ಕ್ರೀಸ್ ಕಚ್ಚಿ ನಿಲ್ಲಲು ಕೂಡ ಪರದಾಡಿದರು. ಪರಿಣಾಮ ದ್ವಿತೀಯ ಇನಿಂಗ್ಸ್ನಲ್ಲಿ ಕೇವಲ 133 ರನ್ಗಳಿಗೆ ಆಲೌಟ್ ಆಗಿ 120 ರನ್ಗಳಿಂದ ಹೀನಾಯವಾಗಿ ಸೋಲೊಪ್ಪಿಕೊಂಡಿದೆ.
ಈ ಭರ್ಜರಿ ಗೆಲುವಿನೊಂದಿಗೆ ವೆಸ್ಟ್ ಇಂಡೀಸ್ ತಂಡವು ಪಾಕಿಸ್ತಾನದಲ್ಲಿನ 34 ವರ್ಷಗಳ ಸೋಲಿನ ಸರಪಳಿಯನ್ನು ಕಳಚಿಕೊಂಡಿದೆ. ಅಲ್ಲದೆ 2 ಪಂದ್ಯಗಳ ಸರಣಿಯನ್ನು 1-1 ಅಂತರದಿಂದ ಡ್ರಾ ಮಾಡಿಕೊಂಡಿದೆ.
ಪಾಕಿಸ್ತಾನ್ ಪ್ಲೇಯಿಂಗ್ 11: ಶಾನ್ ಮಸೂದ್ (ನಾಯಕ) , ಮುಹಮ್ಮದ್ ಹುರ್ರೈರಾ , ಬಾಬರ್ ಆಝಂ , ಕಮ್ರಾನ್ ಗುಲಾಮ್ , ಸೌದ್ ಶಕೀಲ್ , ಮೊಹಮ್ಮದ್ ರಿಝ್ವಾನ್ ( ವಿಕೆಟ್ ಕೀಪರ್ ) , ಸಲ್ಮಾನ್ ಅಘಾ , ಸಾಜಿದ್ ಖಾನ್ , ನೊಮಾನ್ ಅಲಿ , ಕಾಶಿಫ್ ಅಲಿ , ಅಬ್ರಾರ್ ಅಹ್ಮದ್.
ಇದನ್ನೂ ಓದಿ: ವಿರಾಟ್ ಕೊಹ್ಲಿಯನ್ನು ಹಿಂದಿಕ್ಕಿ ವಿಶೇಷ ದಾಖಲೆ ಬರೆದ ಫಾಫ್ ಡುಪ್ಲೆಸಿಸ್
ವೆಸ್ಟ್ ಇಂಡೀಸ್ ಪ್ಲೇಯಿಂಗ್ 11: ಕ್ರೈಗ್ ಬ್ರಾಥ್‌ವೈಟ್ (ನಾಯಕ) , ಮೈಕೈಲ್ ಲೂಯಿಸ್ , ಅಮೀರ್ ಜಾಂಗೂ , ಕವೆಮ್ ಹಾಡ್ಜ್ , ಅಲಿಕ್ ಅಥನಾಝ್ , ಜಸ್ಟಿನ್ ಗ್ರೀವ್ಸ್ , ಟೆವಿನ್ ಇಮ್ಲಾಚ್ (ವಿಕೆಟ್ ಕೀಪರ್) , ಕೆವಿನ್ ಸಿಂಕ್ಲೇರ್ , ಗುಡಾಕೇಶ್ ಮೋಟಿ , ಕೆಮರ್ ರೋಚ್ , ಜೋಮೆಲ್ ವಾರಿಕನ್.