ಇದು ಅಂತಿಂಥ ಗೆಲುವಲ್ಲ… ಇತಿಹಾಸವನ್ನೇ ಬದಲಿಸಿದ ವಿಂಡೀಸ್ ಪಡೆ!

ವಿಶ್ವ ಕ್ರಿಕೆಟ್‌ನ ಬಲಿಷ್ಠ ತಂಡಗಳಲ್ಲಿ ಒಂದಾದ ಟೀಮ್ ಇಂಡಿಯಾಗೆ ತನ್ನದೇ ತಾಯ್ನಾಡಿನಲ್ಲಿ ಚೇಸಿಂಗ್ ವೇಳೆ ಇಂತಹದೊಂದು ಆಘಾತ ಎದುರಾಗಬಹುದು ಎಂದು ಯಾರೂ ಊಹಿಸಿರಲಿಲ್ಲ! ಆದರೆ ರಾಂಚಿಯ ಅಂಗಳದಲ್ಲಿ ರನ್‌ ರಾಶಿ ಪೇರಿಸುವ ಮೂಲಕ ವೆಸ್ಟ್ ಇಂಡೀಸ್ ಪಡೆ ಹೊಸ ಇತಿಹಾಸ ಬರೆಯುವಲ್ಲಿ ಯಶಸ್ವಿಯಾಗಿದೆ.

ಇದು ಅಂತಿಂಥ ಗೆಲುವಲ್ಲ... ಇತಿಹಾಸವನ್ನೇ ಬದಲಿಸಿದ ವಿಂಡೀಸ್ ಪಡೆ!
Ind Vs Wi
Image Credit source: GettyImages

Updated on: Oct 10, 2026 | 9:57 AM

ಟಿ20 ಅಂತರರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲಿ ಕೇವಲ 2 ತಂಡಗಳು ಮಾತ್ರ 250ಕ್ಕೂ ಅಧಿಕ ರನ್‌ಗಳ ಬೃಹತ್ ಗುರಿಯನ್ನು ಯಶಸ್ವಿಯಾಗಿ ಚೇಸ್ ಮಾಡಿ ಗೆದ್ದಿವೆ. ಈ ಐತಿಹಾಸಿಕ ಸಾಧನೆ ಮಾಡಿದ ವಿಶ್ವದ ಮೊದಲ ತಂಡ ಸೌತ್ ಆಫ್ರಿಕಾ. ಈ ಪಟ್ಟಿಗೆ ಸೇರ್ಪಡೆಯಾದ ಎರಡನೇ ತಂಡ ವೆಸ್ಟ್ ಇಂಡೀಸ್. ಅದು ಕೂಡ ಬಲಿಷ್ಠ ಭಾರತ ತಂಡವನ್ನು ಅವರದ್ದೇ ತಾಯ್ನಾಡಿನಲ್ಲಿ ಬಗ್ಗುಬಡಿಯುವ ಮೂಲಕ ಈ ಸಾಧನೆ ಮಾಡಿರುವುದು ವಿಶೇಷ.

ರಾಂಚಿಯಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ 20 ಓವರ್​ಗಳಲ್ಲಿ 5 ವಿಕೆಟ್ ಕಳೆದುಕೊಂಡು ಕಲೆಹಾಕಿದ್ದು ಬರೋಬ್ಬರಿ 249 ರನ್​ಗಳು. ಈ ಕಠಿಣ ಗುರಿಯನ್ನು ಬೆನ್ನತ್ತಿದ ವೆಸ್ಟ್ ಇಂಡೀಸ್ ಪ್ರಚಂಡ ಬ್ಯಾಟಿಂಗ್ ಪ್ರದರ್ಶಿಸಿತು.

ನಾಯಕ ಶಾಯ್ ಹೋಪ್ (102) ಹಾಗೂ ಶೆಫೇರ್ನ್ ರದರ್​ಫೋರ್ಡ್​ (84) ಸಿಡಿಲಬ್ಬರಕ್ಕೆ ತತ್ತರಿಸಿದ ಟೀಮ್ ಇಂಡಿಯಾ 18.3 ಓವರ್​ಗಳಲ್ಲಿ 252 ರನ್​ಗಳನ್ನು ಬಿಟ್ಟು ಕೊಟ್ಟು 6 ವಿಕೆಟ್​ಗಳಿಂದ ಸೋಲೊಪ್ಪಿಕೊಂಡಿತು. ಈ ಮೂಲಕ ವೆಸ್ಟ್ ಇಂಡೀಸ್ ತಂಡ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಅತೀ ವೇಗವಾಗಿ 250 ರನ್​ಗಳನ್ನು ಚೇಸ್ ಮಾಡಿದ ದಾಖಲೆಯನ್ನು ಬರೆಯಿತು. ಇದಕ್ಕೂ ಮುನ್ನ ಈ ಭರ್ಜರಿ ದಾಖಲೆ ಸೌತ್ ಆಫ್ರಿಕಾ ತಂಡದ ಹೆಸರಿನಲ್ಲಿತ್ತು.

  • 2023 ರಲ್ಲಿ ಸೆಂಚುರಿಯನ್‌ನಲ್ಲಿ ನಡೆದ ಟಿ20 ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ ತಂಡ 20 ಓವರ್‌ಗಳಲ್ಲಿ 258 ರನ್ ಕಲೆಹಾಕಿತ್ತು. ಈ ಬೃಹತ್ ಗುರಿಯನ್ನು ಸೌತ್ ಆಫ್ರಿಕಾ ತಂಡ 18.5 ಓವರ್‌ಗಳಲ್ಲಿ ಚೇಸ್ ಮಾಡಿ ಗೆದ್ದಿತ್ತು. ಈ ಮೂಲಕ ಟಿ20 ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತೀ ವೇಗವಾಗಿ 250+ ರನ್ ಚೇಸ್ ಮಾಡಿದ ವಿಶ್ವ ದಾಖಲೆಯನ್ನು ಸೌತ್ ಆಫ್ರಿಕಾ ಬರೆದಿತ್ತು.
  • ಈ ವಿಶ್ವ ದಾಖಲೆಯನ್ನು ಮುರಿಯುವಲ್ಲಿ ವೆಸ್ಟ್ ಇಂಡೀಸ್ ತಂಡ ಯಶಸ್ವಿಯಾಗಿದೆ. ರಾಂಚಿಯಲ್ಲಿ ನಡೆದ ಭಾರತದ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ 250 ರನ್​ಗಳ ಗುರಿ ಪಡೆದ ವಿಂಡೀಸ್ ಪಡೆ ಕೇವಲ 18.3 ಓವರ್​ಗಳಲ್ಲಿ 252 ರನ್ ಬಾರಿಸಿ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಟಿ20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಅತೀ ವೇಗವಾಗಿ 250 ರನ್​ಗಳನ್ನು ಚೇಸ್ ಮಾಡಿದ ವಿಶ್ವ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ಐತಿಹಾಸಿಕ ಸಾಧನೆ:

ಈ ಐತಿಹಾಸಿಕ ವಿಶ್ವ ದಾಖಲೆಯೊಂದಿಗೆ, ಟೀಮ್ ಇಂಡಿಯಾ ವಿರುದ್ಧ ಟಿ20 ಪಂದ್ಯವೊಂದರಲ್ಲಿ 250 ರನ್‌ಗಳ ಬೃಹತ್ ಮೊತ್ತವನ್ನು ಯಶಸ್ವಿಯಾಗಿ ಚೇಸ್ ಮಾಡಿದ ಜಗತ್ತಿನ ಮೊದಲ ತಂಡ ಎಂಬ ಹೆಗ್ಗಳಿಕೆಗೆ ವೆಸ್ಟ್ ಇಂಡೀಸ್ ಪಾತ್ರವಾಗಿದೆ. ಇತಿಹಾಸವನ್ನು ಕೆದಕಿದರೆ, ಭಾರತ ತಂಡ ಟಿ20 ಕ್ರಿಕೆಟ್‌ನಲ್ಲಿ 225ಕ್ಕೂ ಹೆಚ್ಚು ರನ್‌ಗಳನ್ನು ದಾಖಲಿಸಿ ಯಾವತ್ತೂ ಪಂದ್ಯವನ್ನು ಸೋತಿರಲಿಲ್ಲ. ಆದರೆ ಈ ಬಾರಿ ಟೀಮ್ ಇಂಡಿಯಾದ ಎಲ್ಲಾ  ಲೆಕ್ಕಾಚಾರಗಳನ್ನು ತಲೆಕೆಳಗಾಗಿಸುವಲ್ಲಿ ಕೆರಿಬಿಯನ್ ಪಡೆ ಸಂಪೂರ್ಣ ಯಶಸ್ವಿಯಾಗಿದೆ.

2023 ರಲ್ಲಿ ಗುವಾಹಟಿಯಲ್ಲಿ ನಡೆದ ಪಂದ್ಯದಲ್ಲಿ ಭಾರತ ನೀಡಿದ್ದ 222 ರನ್‌ಗಳ ಗುರಿಯನ್ನು ಆಸ್ಟ್ರೇಲಿಯಾ ತಂಡ 5 ವಿಕೆಟ್ ಕಳೆದುಕೊಂಡು (225/5) ಯಶಸ್ವಿಯಾಗಿ ಚೇಸ್ ಮಾಡಿತ್ತು. ಆ ಪಂದ್ಯದಲ್ಲಿ ಆಸ್ಟ್ರೇಲಿಯಾದ ಗ್ಲೆನ್ ಮ್ಯಾಕ್ಸ್‌ವೆಲ್ ಕೇವಲ 48 ಎಸೆತಗಳಲ್ಲಿ ಅಜೇಯ 104 ರನ್ ಸಿಡಿಸಿ ಭಾರತದ ಕೈಯಿಂದ ಜಯ ಕಸಿದುಕೊಂಡಿದ್ದರು.

ಇದನ್ನೂ ಓದಿ: ಬೌಲರ್​ಗಳ ತಪ್ಪಿಲ್ಲ… ಸೋಲಿನ ಬಳಿಕ ಶ್ರೇಯಸ್ ಅಯ್ಯರ್ ಹೇಳಿದ್ದೇನು?

ಇದಾದ ಬಳಿಕ ಟೀಮ್ ಇಂಡಿಯಾ 222ಕ್ಕೂ ಅಧಿಕ ರನ್ ಗಳಿಸಿ ಯಾವತ್ತೂ ಪಂದ್ಯವನ್ನು ಸೋತಿರಲಿಲ್ಲ. ಆದರೆ ಈ ಬಾರಿ ಶೆರ್ಫೇನ್ ರದರ್‌ಫೋರ್ಡ್ ಹಾಗೂ ಶಾಯ್ ಹೋಪ್ ಅವರ ವಿಧ್ವಂಸಕ ಬ್ಯಾಟಿಂಗ್ ಅಬ್ಬರಕ್ಕೆ ಭಾರತದ ಬೌಲರ್‌ಗಳು ಸಂಪೂರ್ಣ ಶರಣಾದರು. ಈ ಮೂಲಕ ವಿಂಡೀಸ್ ಪಡೆ ಐತಿಹಾಸಿಕ ಗೆಲುವು ದಾಖಲಿಸುವಲ್ಲಿ ಯಶಸ್ವಿಯಾಗಿದೆ.

 

ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
Loading...
Unable to load recommendations.
Follow Us