
ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-19 ರಲ್ಲೂ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಈ ಚಾಂಪಿಯನ್ ಪಟ್ಟದೊಂದಿಗೆ ಬ್ಯಾಕ್ ಟು ಬ್ಯಾಕ್ ಐಪಿಎಲ್ ಟ್ರೋಫಿ ಗೆದ್ದ ಮೂರನೇ ತಂಡ ಎನಿಸಿಕೊಂಡಿದೆ. 2025 ರ ಐಪಿಎಲ್ ಫೈನಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಮಣಿಸಿದ್ದ ಆರ್‌ಸಿಬಿ ಈ ಬಾರಿ ಗುಜರಾತ್ ಟೈಟಾನ್ಸ್ ತಂಡವನ್ನು ಬಗ್ಗು ಬಡಿದಿದ್ದಾರೆ. ಈ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ಬಳಿಕ ಸತತವಾಗಿ ಐಪಿಎಲ್ ಟ್ರೋಫಿ ಗೆದ್ದ ಮೂರನೇ ತಂಡ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಐತಿಹಾಸಿಕ ಸಾಧನೆ ಬೆನ್ನಲ್ಲೇ ಆರ್‌ಸಿಬಿ ತಂಡವನ್ನು ಅಂಬಾಟಿ ರಾಯುಡು ಹಾಡಿ ಹೊಗಳಿದ್ದಾರೆ.
” ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ರದರ್ಶನವನ್ನು ಪ್ರಶಂಸಿರುವ ಅಂಬಾಟಿ ರಾಯುಡು, ಪ್ರಸ್ತುತ ಐಪಿಎಲ್ನ ಬಲಿಷ್ಠ ತಂಡ ಎಂದರೆ ಅದು ಆರ್‌ಸಿಬಿ. ಐಪಿಎಲ್ನ ಈ ಯುಗವನ್ನು ಆರ್‌ಸಿಬಿ ಈಗಾಗಲೇ ತಮ್ಮದಾಗಿಸಿಕೊಂಡಿದ್ದಾರೆ” .
” ಪ್ರಸ್ತುತ ಇರುವ ಆರ್‌ಸಿಬಿ ತಂಡವು ತುಂಬಾ ಬಲಿಷ್ಠವಾಗಿದೆ. ತಂಡದಲ್ಲಿ ಸ್ಫೋಟಕ ದಾಂಡಿಗರ ಬಳಗವೇ ಇದೆ. ಇದರ ಜೊತೆಗೆ ವಿಶ್ವದ ಅತ್ಯುತ್ತಮ ಬೌಲರ್ಗಳಿದ್ದಾರೆ. ಹೀಗಾಗಿ ಬಲಿಷ್ಠತೆಯ ವಿಷಯದಲ್ಲಿ ಬೇರೆ ಯಾವುದೇ ತಂಡ ಆರ್‌ಸಿಬಿ ಹತ್ತಿರಕ್ಕೂ ಬರಲ್ಲ. ಅವರಿಗೆ ಸರಿಸಮಾನವಾಗಿ ನಿಲ್ಲಬಲ್ಲ ಸಾಮರ್ಥ್ಯ ಹೊಂದಿಲ್ಲ” ಎಂದು ಅಂಬಾಟಿ ರಾಯುಡು ಹೇಳಿದ್ದಾರೆ.
ಅಂದರೆ ಈಗಿರುವ ಆರ್‌ಸಿಬಿ ವಿರುದ್ಧ ಗೆಲ್ಲಲು ಇತರೆ ತಂಡಗಳಿಗೆ ಅಂದುಕೊಂಡಷ್ಟು ಸುಲಭವಲ್ಲ. ಅವರಿಗೆ ಸರಿಸಮಾನವಾಗಿ ನಿಲ್ಲಬಲ್ಲ ಮತ್ತೊಂದು ತಂಡವಿಲ್ಲ. ಇತರೆ 9 ತಂಡಗಳಿಗಿಂತ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸಿಕ್ಕಾಪಟ್ಟೆ ಬಲಿಷ್ಠವಾಗಿದೆ ಎಂದು ಅಂಬಾಟಿ ರಾಯುಡು ಅಭಿಪ್ರಾಯಪಟ್ಟಿದ್ದಾರೆ.
ಕುತೂಹಲಕಾರಿ ವಿಷಯ ಎಂದರೆ ಕಳೆದ ವರ್ಷ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಚೊಚ್ಚಲ ಟ್ರೋಫಿ ಗೆದ್ದಾಗ ಇದೇ ಅಂಬಾಟಿ ರಾಯುಡು ಆರ್‌ಸಿಬಿ ತಂಡವನ್ನು ಹೀಯಾಳಿಸಿದ್ದರು.
“ನಿಮಗೆ ಒಂದು ಕಪ್ ಗೆಲ್ಲಲು 18 ವರ್ಷ ಬೇಕಾಯಿತು, ಹಾಗಾದರೆ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡದ 5 ಟ್ರೋಫಿಗಳ ದಾಖಲೆ ಸರಿಗಟ್ಟಲು ನಿಮಗೆ 72 ವರ್ಷ ಬೇಕಾಗಬಹುದು” ಎಂದು ಅಂಬಾಟಿ ರಾಯುಡು ಆರ್ಸಿಬಿಯನ್ನು ಲೇವಡಿ ಮಾಡಿದ್ದರು.
ಇದನ್ನೂ ಓದಿ: ಇದು ಅನ್ಯಾಯ… ಫೈನಲ್ ಮ್ಯಾಚ್ ಮುಂದೂಡಬೇಕಿತ್ತು: ಸುನಿಲ್ ಗವಾಸ್ಕರ್
ಆದರೆ ಇದೀಗ ಆರ್‌ಸಿಬಿ ತಂಡವು ಬ್ಯಾಕ್ ಟು ಬ್ಯಾಕ್ ಟ್ರೋಫಿ ಗೆಲ್ಲುತ್ತಿದ್ದಂತೆ ಅಂಬಾಟಿ ರಾಯುಡು ತಮ್ಮ ಹಳೆಯ ಡೈಲಾಗ್ ಮರೆತಿದ್ದಾರೆ. ಬದಲಾಗಿ ಇದು ಆರ್‌ಸಿಬಿ ತಂಡದ ಯುಗ, ಪ್ರಸ್ತುತ ಐಪಿಎಲ್ನಲ್ಲಿ ಆರ್ಸಿಬಿಗೆ ಸರಿಸಾಟಿಯಾಗಿ ಯಾವುದೇ ತಂಡವಿಲ್ಲ. ಯಾವುದೇ ತಂಡದ ಬಲಿಷ್ಠತೆ ಅವರ ಹತ್ತಿರಕ್ಕೂ ಬರಲ್ಲ ಎನ್ನುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.