ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆದ ಭಾರತ-ದಕ್ಷಿಣ ಆಫ್ರಿಕಾ (India vs South Africa) ನಡುವಣ ಮೊದಲ ಟಿ20 ಪಂದ್ಯವು ಹಲವು ಕಾರಣಗಳಿಂದ ಎಲ್ಲರ ಗಮನ ಸೆಳೆದಿತ್ತು. ಈ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ (Team India) ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿತ್ತು. ಅದರಲ್ಲೂ ಆರಂಭಿಕ ಆಟಗಾರ ಇಶಾನ್ ಕಿಶನ್ ಕೇವಲ 48 ಎಸೆತಗಳಲ್ಲಿ 3 ಸಿಕ್ಸ್ ಹಾಗೂ 11 ಫೋರ್ನೊಂದಿಗೆ 76 ರನ್ ಬಾರಿಸಿದ್ದರು. ಇನ್ನು ಅಂತಿಮ ಹಂತದಲ್ಲಿ ಹಾರ್ದಿಕ್ ಪಾಂಡ್ಯ ಅಬ್ಬರಿಸಿದ್ದರು. ಕೇವಲ 12 ಎಸೆತಗಳನ್ನು ಎದುರಿಸಿದ ಪಾಂಡ್ಯ 3 ಸಿಕ್ಸ್ ಹಾಗೂ 2 ಫೋರ್ನೊಂದಿಗ31 ರನ್ ಚಚ್ಚಿದ್ದರು. ಆದರೆ ಕೊನೆಯ ಓವರ್ನಲ್ಲಿ ಹಾರ್ದಿಕ್ ಪಾಂಡ್ಯ ತೆಗೆದುಕೊಂಡ ನಿರ್ಧಾರ ಹಲವರ ಕೆಂಗಣ್ಣಿಗೆ ಗುರಿಯಾಗಿತ್ತು.
ಏಕೆಂದರೆ ಅನ್ರಿಕ್ ನೋಕಿಯಾ ಎಸೆದ ಕೊನೆಯ ಓವರ್ನ ಮೊದಲ ಎಸೆತದಲ್ಲಿ ರಿಷಭ್ ಪಂತ್ ಔಟ್ ಆಗಿದ್ದರು. ಈ ವೇಳೆ ಕಣಕ್ಕಿಳಿದ ದಿನೇಶ್ ಕಾರ್ತಿಕ್ ಎದುರಿಸಿದ 2ನೇ ಎಸೆತದಲ್ಲಿ ರನ್ಗಳಿಸಲು ಸಾಧ್ಯವಾಗಿಲ್ಲ. ಮೂರನೇ ಎಸೆತದಲ್ಲಿ ಡಿಕೆ 1 ರನ್ ಓಡಿದರು. ನಾಲ್ಕನೇ ಎಸೆತಕ್ಕೆ ಸ್ಟ್ರೈಕ್ಗೆ ಬಂದ ಹಾರ್ದಿಕ್ ಪಾಂಡ್ಯ ಭರ್ಜರಿ ಸಿಕ್ಸ್ ಸಿಡಿಸಿದರು. ಇನ್ನು 5ನೇ ಎಸೆತದಲ್ಲಿ ರನ್ ಕದಿಯುವ ಅವಕಾಶವಿದ್ದರೂ ಪಾಂಡ್ಯ ರನ್ ಓಡಲು ನಿರಾಕರಿಸಿದರು. ಇತ್ತ ನಾನ್ ಸ್ಟ್ರೈಕ್ನಿಂದ ರನ್ಗಾಗಿ ಮುಂದೆ ಬಂದಿದ್ದ ದಿನೇಶ್ ಕಾರ್ತಿಕ್ ನಿರಾಸೆಯಿಂದ ಹಿಂತಿರುಗಿದರು. ಆದರೆ ಅತ್ತ ಕೊನೆಯ ಎಸೆತದಲ್ಲಿ ಹಾರ್ದಿಕ್ ಪಾಂಡ್ಯ ಕೇವಲ 2 ರನ್ಗಳಿಸಲಷ್ಟೇ ಶಕ್ತರಾಗಿದ್ದರು.
ಹಾರ್ದಿಕ್ ಪಾಂಡ್ಯ ಐದನೇ ಎಸೆತದಲ್ಲಿ ರನ್ ಓಡದಿರುವುದು ಚರ್ಚೆಗೆ ಕಾರಣವಾಗಿತ್ತು. ಏಕೆಂದರೆ ಐಪಿಎಲ್ನಲ್ಲಿ ಬೆಸ್ಟ್ ಫಿನಿಶರ್ ಎನಿಸಿಕೊಂಡಿದ್ದ ಡಿಕೆ ಕೂಡ ಅನುಭವಿ ಆಟಗಾರ. ಅದರಲ್ಲೂ ಭರ್ಜರಿ ಫಾರ್ಮ್ನಲ್ಲಿದ್ದಾರೆ. ಇದಾಗ್ಯೂ ಹಾರ್ದಿಕ್ ಪಾಂಡ್ಯ ಸ್ಟ್ರೈಕ್ನಲ್ಲೇ ಉಳಿದುಕೊಂಡಿದ್ದು ದಿನೇಶ್ ಕಾರ್ತಿಕ್ ಅವರಿಗೆ ಮಾಡಿದ ಅವಮಾನ ಎನ್ನಲಾಗಿತ್ತು. ಇತ್ತ ಗುಜರಾತ್ ಟೈಟಾನ್ಸ್ ತಂಡ ಕೋಚ್ ಆಶಿಶ್ ನೆಹ್ರಾ ಕೂಡ ಹಾರ್ದಿಕ್ ಪಾಂಡ್ಯ ಅವರ ನಡೆಯನ್ನು ಟೀಕಿಸಿದ್ದರು. ಸೋಷಿಯಲ್ ಮೀಡಿಯಾದಲ್ಲಿ ಈ ಚರ್ಚೆಗಳು ಶುರುವಾಗುತ್ತಿದ್ದಂತೆ, 2019 ರ ಸನ್ನಿವೇಶವೊಂದು ಬೆಳಕಿಗೆ ಬಂದಿದೆ. ಅಂದು ದಿನೇಶ್ ಕಾರ್ತಿಕ್ ಮಾಡಿದ್ದನ್ನೇ ಇದೀಗ ಹಾರ್ದಿಕ್ ಪಾಂಡ್ಯ ಮಾಡಿದ್ದಾರೆ ಎಂದು ಕೆಲವರು ವಾದಿಸುತ್ತಿದ್ದಾರೆ.
ಹೌದು, ಅದು 2019, ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳು ಟಿ20 ಸರಣಿಯಲ್ಲಿ ಮುಖಾಮುಖಿಯಾಗಿತ್ತು. ಈ ಸರಣಿಯ ಮೂರನೇ ಪಂದ್ಯದಲ್ಲಿ ಭಾರತಕ್ಕೆ ಗೆಲ್ಲಲು ಕೊನೆಯ ಓವರ್ನಲ್ಲಿ 16 ರನ್ಗಳ ಅವಶ್ಯಕತೆಯಿತ್ತು. ಈ ವೇಳೆ ಕ್ರೀಸ್ನಲ್ಲಿದ್ದದ್ದು ದಿನೇಶ್ ಕಾರ್ತಿಕ್ ಹಾಗೂ ಕೃನಾಲ್ ಪಂಡ್ಯ. ಮೊದಲ ಎರಡು ಎಸೆತಗಳನ್ನು ಎದುರಿಸಿದ ದಿನೇಶ್ ಕಾರ್ತಿಕ್ ಕೇವಲ 2 ರನ್ ಮಾತ್ರ ಗಳಿಸಿದ್ದರು. ಅಲ್ಲದೆ ಮೂರನೇ ಎಸೆತದಲ್ಲಿ ರನ್ ಓಡುವ ಅವಕಾಶವಿದ್ದರೂ ಸ್ಟ್ರೈಕ್ನತ್ತ ಓಡಿಬಂದ ಕೃನಾಲ್ ಪಾಂಡ್ಯರನ್ನು ದಿನೇಶ್ ಕಾರ್ತಿಕ್ ಹಿಂದಕ್ಕೆ ಕಳುಹಿಸಿದ್ದರು. ಅಲ್ಲದೆ ಇಡೀ ಓವರ್ನ 5 ಎಸೆತಗಳನ್ನು ಡಿಕೆ ಎದುರಿಸಿದ್ದರು. ಆದರೆ ಅಂತಿಮವಾಗಿ ಟೀಮ್ ಇಂಡಿಯಾ 4 ರನ್ಗಳಿಂದ ಸೋಲನುಭವಿಸಿತ್ತು.
ಅಂದು 16 ಎಸೆತಗಳಲ್ಲಿ 4 ಸಿಕ್ಸ್ನೊಂದಿಗೆ ದಿನೇಶ್ ಕಾರ್ತಿಕ್ 33 ರನ್ ಬಾರಿಸಿದ್ದರೆ, ಮತ್ತೊಂದೆಡೆ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿದ್ದ ಕೃನಾಲ್ ಪಾಂಡ್ಯ ಒತ್ತಡದ ನಡುವೆಯೂ ಕೇವಲ 13 ಎಸೆತಗಳಲ್ಲಿ 2 ಫೋರ್ ಹಾಗೂ 2 ಸಿಕ್ಸ್ನೊಂದಿಗೆ 26 ರನ್ ಸಿಡಿಸಿದ್ದರು. ಇಲ್ಲಿ ಕೃನಾಲ್ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ್ದರೂ ಕೊನೆಯ ಓವರ್ನಲ್ಲಿ ದಿನೇಶ್ ಕಾರ್ತಿಕ್ ಸ್ಟ್ರೈಕ್ ನೀಡಲು ಮುಂದಾಗಿರಲಿಲ್ಲ. ಅಲ್ಲದೆ ಅಂತಿಮ ಓವರ್ನಲ್ಲಿ ದಿನೇಶ್ ಕಾರ್ತಿಕ್ ಅವರ ನಿರ್ಧಾರ ಎಲ್ಲರನ್ನೂ ಆಶ್ಚರ್ಯಗೊಳಿಸಿತ್ತು. ಇದಾಗಿ ಮೂರು ವರ್ಷಗಳ ಬಳಿಕ ಕೊನೆಯ ಓವರ್ನಲ್ಲಿ ಕೃನಾಲ್ ಸಹೋದರ ಹಾರ್ದಿಕ್ ಪಾಂಡ್ಯ ಹಾಗೂ ದಿನೇಶ್ ಕಾರ್ತಿಕ್ ಮುಖಾಮುಖಿಯಾಗಿದ್ದಾರೆ. ಈ ವೇಳೆ ಹಾರ್ದಿಕ್ ಪಾಂಡ್ಯ ರನ್ ಓಡಲು ನಿರಾಕರಿಸಿ ದಿನೇಶ್ ಕಾರ್ತಿಕ್ ವಿರುದ್ದ ಸೇಡು ತೀರಿಸಿಕೊಂಡರಾ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ.
ಏಕೆಂದರೆ ಅಂದು ಕೃನಾಲ್ ಪಾಂಡ್ಯಗೆ ಕೊನೆಯ ಓವರ್ನಲ್ಲಿ ಸ್ಟ್ರೈಕ್ ಲಭಿಸಿ ಪಂದ್ಯವನ್ನು ಗೆಲ್ಲಿಸುವ ಅವಕಾಶವಿತ್ತು. ಆ ಅವಕಾಶ ಕೃನಾಲ್ಗೆ ಲಭಿಸಿದ್ರೆ ಟೀಮ್ ಇಂಡಿಯಾ ಪರ ಫಿನಿಶರ್ ಆಗಿ ಗುರುತಿಸಿಕೊಳ್ಳುತ್ತಿದ್ದರು. ಹೀಗಾಗಿಯೇ ಇದೀಗ ಹಾರ್ದಿಕ್ ಪಾಂಡ್ಯ ಹಳೆಯ ಸೇಡನ್ನು ತೀರಿಸಿಕೊಂಡಿದ್ದಾರೆ ಎಂಬುದು ಕೆಲವರ ವಾದವಾಗಿದೆ.
ಕ್ರಿಕೆಟ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:41 pm, Sat, 11 June 22