
ಕರ್ನಾಟಕದ ಟಿ20 ಲೀಗ್ ಮಹಾರಾಜ ಟ್ರೋಫಿ ಟೂರ್ನಿಯ 5ನೇ ಸೀಸನ್ಗೆ ಹರಾಜು ಪ್ರಕ್ರಿಯೆ ನಡೆದಿದೆ. ಈ ಹರಾಜಿನಲ್ಲಿ ಕಾಣಿಸಿಕೊಂಡಿದ್ದ ಕರ್ನಾಟಕದ ಸ್ಟಾರ್ ಬ್ಯಾಟರ್ ಕೆಎಲ್ ರಾಹುಲ್ (KL Rahul) ಬಿಕರಿಯಾಗದೇ ಉಳಿದಿದ್ದಾರೆ. 2 ಲಕ್ಷ ರೂ. ಮೂಲ ಬೆಲೆಯೊಂದಿಗೆ ಹರಾಜು ಪಟ್ಟಿಯಲ್ಲಿದ್ದ ರಾಹುಲ್ ಅವರನ್ನು ಖರೀದಿಸಲು ಯಾವುದೇ ಫ್ರಾಂಚೈಸಿಗಳು ಆಸಕ್ತಿ ತೋರಿರಲಿಲ್ಲ.
ಇದರ ಬೆನ್ನಲ್ಲೇ ಕೆಎಲ್ ರಾಹುಲ್ ‘ಅನ್‌ಸೋಲ್ಡ್’ ಸುದ್ದಿ ಮಹತ್ವ ಪಡೆದುಕೊಂಡಿತು. ಆದರೆ ಅವರ ಬಿಕರಿಯಾಗದೇ ಉಳಿಯಲು ಮುಖ್ಯ ಕಾರಣ ಮುಂಬರುವ ಸರಣಿಗಳು. ಅಂದರೆ ಮಹಾರಾಜ ಟ್ರೋಫಿ ಟಿ20 ಟೂರ್ನಿಗೆ ಕೆಎಲ್ಆರ್ ಅಲಭ್ಯರಾಗುವುದು ಖಚಿತ. ಹೀಗಾಗಿಯೇ ಯಾವುದೇ ಫ್ರಾಂಚೈಸಿ ಅವರ ಖರೀದಿಗೆ ಮುಂದಾಗಲಿಲ್ಲ.
ಅಂದರೆ ಕೆಎಲ್ ರಾಹುಲ್ ಜೂನ್-ಜುಲೈ ತಿಂಗಳಲ್ಲಿ ಟೀಮ್ ಇಂಡಿಯಾ ಪರ ಕಣಕ್ಕಿಳಿಯುವುದು ಖಚಿತ. ಇತ್ತ ಮಹಾರಾಜ ಟ್ರೋಫಿ ಟಿ20 ಟೂರ್ನಿ ನಡೆಯಲಿರುವುದು ಜೂನ್ 20 ರಿಂದ ಜುಲೈ 12 ರವರೆಗೆ. ಈ ಅವಧಿಯಲ್ಲಿ ಕೆಎಲ್ ರಾಹುಲ್ ಲಭ್ಯರಿರುವುದಿಲ್ಲ ಎಂಬುದು ಕನ್ಫರ್ಮ್ ಆಗಿದೆ.
ಹೀಗಾಗಿಯೇ ಟೂರ್ನಿಗೆ ಲಭ್ಯರಿರದ ಆಟಗಾರನಿಗೆ ಹಣ ವ್ಯಯಿಸಿ, ತಂಡದ ಒಂದು ಸ್ಲಾಟ್ ವ್ಯರ್ಥ ಮಾಡಿಕೊಳ್ಳಲು ಫ್ರಾಂಚೈಸಿಗಳು ಮುಂದಾಗಿಲ್ಲ.
ಕೆಎಲ್ ರಾಹುಲ್ ರಾಷ್ಟ್ರೀಯ ತಂಡಗಳ ಪರ ಕಣಕ್ಕಿಳಿಯುವುದಾದರೆ ಮತ್ತೆ ಯಾಕೆ ಹೆಸರು ನೀಡಿದ್ದರು ಎಂಬ ಪ್ರಶ್ನೆ ಮೂಡುವುದು ಸಹಜ. ಈ ಪ್ರಶ್ನೆಗೆ ಉತ್ತರ ಈ ಹಿಂದಿನ ಪ್ರಕ್ರಿಯೆ.
ಅಂದರೆ ಮಹಾರಾಜ ಟೂರ್ನಿಯ ಹರಾಜಿನ ದಿನಾಂಕಕ್ಕಿಂತ ಮುಂಚೆಯೇ ಆಟಗಾರರು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕಾಗುತ್ತದೆ.ರಾಹುಲ್ ಅವರು ಕರ್ನಾಟಕದ ಆಟಗಾರನಾಗಿರುವುದರಿಂದ ಆರಂಭದಲ್ಲಿ ತಮ್ಮ ರಾಜ್ಯದ ಟೂರ್ನಿಯಲ್ಲಿ ಆಡುವ ಆಸಕ್ತಿಯಿಂದ ಹೆಸರು ನೀಡಿದ್ದರು.
ಇದಾದ ಬಳಿಕವಷ್ಟೇ ಅಫ್ಘಾನಿಸ್ತಾನ್ ವಿರುದ್ಧದ ಸರಣಿಯ ದಿನಾಂಕ ನಿಗದಿಯಾಗಿದೆ. ಹೀಗಾಗಿ ರಾಷ್ಟ್ರೀಯ ತಂಡದ ಪರ ಕಣಕ್ಕಿಳಿಯಬೇಕಾದ ಅನಿವಾರ್ಯತೆ ಎದುರಾಗಿದೆ.
ಹಾಗೆಯೇ ಕೆಎಸ್ಸಿಎ ನಿಯಮಗಳ ಪ್ರಕಾರ, ಒಮ್ಮೆ ಒಬ್ಬ ಆಟಗಾರ ಅಧಿಕೃತವಾಗಿ ಹರಾಜಿನ ಡ್ರಾಫ್ಟ್‌ಗೆ ಹೆಸರು ನೋಂದಾಯಿಸಿದರೆ, ಅವರ ಹೆಸರನ್ನು ಹರಾಜಿನ ಪಟ್ಟಿಯಿಂದ ದಿಢೀರ್ ಎಂದು ತೆಗೆಯಲು ಬರುವುದಿಲ್ಲ. ಆ ಹೆಸರನ್ನು ಹರಾಜುದಾರರು ಕರೆದೇ ಕರೆಯಬೇಕು.
ಇದನ್ನೂ ಓದಿ: ಟೀಮ್ ಇಂಡಿಯಾದ ಮುಂದಿನ ಪಂದ್ಯಗಳ ವೇಳಾಪಟ್ಟಿ ಇಲ್ಲಿದೆ
ಹೀಗಾಗಿ ಕೆಎಲ್ ರಾಹುಲ್ ಹೆಸರು ಹರಾಜಿನಲ್ಲಿ ಕಾಣಿಸಿಕೊಂಡಿದೆ. ಅಷ್ಟೇ ಅಲ್ಲದೆ ಹರಾಜುದಾರರು ಫ್ರಾಂಚೈಸಿಗಳಿಗೆ ಮುಂಚಿತವಾಗಿಯೇ “ಇವರು ಟೂರ್ನಿಗೆ ಅಲಭ್ಯರಾಗಲಿದ್ದಾರೆದ್ದಾರೆ” ಎಂಬ ಅಧಿಕೃತ ಮಾಹಿತಿಯನ್ನು ತಿಳಿಸಿದ್ದರು. ಹೀಗಾಗಿಯೇ ಯಾವುದೇ ಫ್ರಾಂಚೈಸಿ ಅವರ ಮೇಲೆ ಬಿಡ್ ಮಾಡಲಿಲ್ಲ.