ಆಯ್ಕೆ ಮಾಡಿ ಸಿರಾಜ್​ರನ್ನು ತಂಡದಿಂದ ಕೈ ಬಿಡಲು ಇದುವೇ ಕಾರಣ!

ಅಫ್ಘಾನಿಸ್ತಾನ್ ವಿರುದ್ಧದ ಏಕದಿನ ಸರಣಿ ಮುಕ್ತಾಯದ ಬೆನ್ನಲ್ಲೇ ಟೀಮ್ ಇಂಡಿಯಾ 7 ಟಿ20 ಪಂದ್ಯಗಳನ್ನಾಡಲಿದೆ. ಮೊದಲಿಗೆ ಐರ್ಲೆಂಡ್ ವಿರುದ್ಧ 2 ಮ್ಯಾಚ್​ಗಳ ಟಿ20 ಸರಣಿ ನಡೆಯಲಿದ್ದು, ಇದಾದ ಬಳಿಕ ಇಂಗ್ಲೆಂಡ್ ವಿರುದ್ಧ 5 ಟಿ20 ಪಂದ್ಯಗಳನ್ನಾಡಿದೆ. ಈ ಎರಡು ಸರಣಿಗಳಿಂದ ಟೀಮ್ ಇಂಡಿಯಾ ವೇಗಿ ಮೊಹಮ್ಮದ್ ಸಿರಾಜ್ ಹೊರಗುಳಿದಿದ್ದಾರೆ.

ಆಯ್ಕೆ ಮಾಡಿ ಸಿರಾಜ್​ರನ್ನು ತಂಡದಿಂದ ಕೈ ಬಿಡಲು ಇದುವೇ ಕಾರಣ!
Mohammed Siraj
Image Credit source: BCCI

Updated on: Jun 10, 2026 | 9:54 AM

ಭಾರತ ಟಿ20 ತಂಡದಿಂದ ಮೊಹಮ್ಮದ್ ಸಿರಾಜ್ ಅವರನ್ನು ಕೈ ಬಿಡಲಾಗಿದೆ. ಇತ್ತೀಚೆಗೆ ಪ್ರಕಟಿಸಲಾದ ಐರ್ಲೆಂಡ್ ಹಾಗೂ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಗೆ ಸಿರಾಜ್ ಅವರನ್ನು ಆಯ್ಕೆ ಮಾಡಲಾಗಿತ್ತು. ಆದರೆ ಇದೀಗ ಅವರಿಗೆ ಈ ಸರಣಿಗಳಿಂದ ಹೊರಗುಳಿಯುವಂತೆ ಸೂಚಿಸಲಾಗಿದೆ. ಇದರ ಬೆನ್ನಲ್ಲೇ ಸಿರಾಜ್ ಅವರನ್ನು ಕೈ ಬಿಡಲು ಕಾರಣವೇನು? ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಈ ಪ್ರಶ್ನೆಗೆ ಉತ್ತರ ಇಲ್ಲಿದೆ.

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಪ್ರಕಟಿಸಿರುವಂತೆ, ಮುಂಬರುವ ದೀರ್ಘ ಹಾಗೂ ಬಿಡುವಿಲ್ಲದ ಅಂತರರಾಷ್ಟ್ರೀಯ ಕ್ರಿಕೆಟ್ ಸರಣಿಗಳನ್ನು ಗಮನದಲ್ಲಿಟ್ಟುಕೊಂಡು ಸಿರಾಜ್ ಅವರ ‘ವರ್ಕ್‌ಲೋಡ್ ಮ್ಯಾನೇಜ್‌ಮೆಂಟ್’ ಯೋಜನೆ ಅಡಿಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಅಂದರೆ ಇಲ್ಲಿ ಸಿರಾಜ್​ಗೆ ವಿಶ್ರಾಂತಿ ನೀಡುವ ಸಲುವಾಗಿಯೇ ಈ ಕ್ರಮ ಕೈಗೊಳ್ಳಲಾಗಿದೆ.

ಇಲ್ಲಿ ಕಡ್ಡಾಯ ವಿಶ್ರಾಂತಿ ಸೂಚಿಸಲು ಮುಖ್ಯ ಕಾರಣ ಮುಂಬರುವ ಟೆಸ್ಟ್ ಸರಣಿಗಳು. ಅಂದರೆ ಭಾರತ ತಂಡಕ್ಕೆ ಮುಂದಿನ 9 ಟೆಸ್ಟ್ ಪಂದ್ಯಗಳು ನಿರ್ಣಾಯಕ. ಏಕೆಂದರೆ ಮುಂದಿನ 9 ಟೆಸ್ಟ್ ಪಂದ್ಯಗಳಲ್ಲಿ  8 ಮ್ಯಾಚ್ ಗೆದ್ದರೆ ಮಾತ್ರ ಭಾರತ ತಂಡವು ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ನಲ್ಲಿ ಫೈನಲ್​ಗೇರಬಹುದು.

ಇದಕ್ಕೂ ಮುನ್ನ ಮೊಹಮ್ಮದ್ ಸಿರಾಜ್ ಅವರ ಕಾರ್ಯದೊತ್ತಡ ನಿರ್ವಹಣೆ ಮತ್ತು ದೈಹಿಕ ದಣಿವು ನಿವಾರಣೆಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ ವಿಶ್ರಾಂತಿ ನೀಡಲಾಗಿದೆ.

ವೈದ್ಯಕೀಯ ತಂಡ ಮತ್ತು ಭಾರತೀಯ ತಂಡದ ಮ್ಯಾನೇಜ್‌ಮೆಂಟ್ ನಡುವೆ ನಡೆದ ಸಮಾಲೋಚನೆಯ ನಂತರ ಈ ಅಧಿಕೃತ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಇದಕ್ಕೆ ಪ್ರಮುಖ ಕಾರಣಗಳು ಈ ಕೆಳಗಿನಂತಿವೆ…

  • ನಿರಂತರ ಬೌಲಿಂಗ್ ದಣಿವು: ಮೊಹಮ್ಮದ್ ಸಿರಾಜ್ ಅವರು 2025 ರಿಂದ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಓವರ್‌ಗಳನ್ನು  ಎಸೆದಿದ್ದಾರೆ. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯೊಂದರಲ್ಲೇ ಅವರು 185.3 ಓವರ್ ಬೌಲಿಂಗ್ ಮಾಡಿದ್ದರು.
  • ಅತೀ ಹೆಚ್ಚು ಓವರ್​: 2025 ರಿಂದ ಟೆಸ್ಟ್ ಕ್ರಿಕೆಟ್​ನಲ್ಲಿ ಅತೀ ಹೆಚ್ಚು ಓವರ್​ಗಳನ್ನು ಎಸೆದ ವೇಗಿಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವುದು ಕೂಡ ಸಿರಾಜ್. 2025 ರಿಂದ ಈವರೆಗೆ ಸಿರಾಜ್ 324.4 ಓವರ್​ಗಳನ್ನು ಎಸೆದಿದ್ದಾರೆ. ವಿಶ್ವ ಯಾವುದೇ ವೇಗದ ಬೌಲರ್ ಕಳೆದೊಂದು ವರ್ಷದಲ್ಲಿ 310 ಕ್ಕಿಂತ ಹೆಚ್ಚು ಓವರ್ ಎಸೆದಿಲ್ಲ ಎಂಬುದು ಇಲ್ಲಿ ಉಲ್ಲೇಖಾರ್ಹ.
  • ಐಪಿಎಲ್ ಪಂದ್ಯಗಳು: ಮೊಹಮ್ಮದ್ ಸಿರಾಜ್ ಇತ್ತೀಚೆಗಷ್ಟೇ ಮುಕ್ತಾಯಗೊಂಡ ಐಪಿಎಲ್​ನಲ್ಲಿ ಗುಜರಾತ್ ಟೈಟಾನ್ಸ್ ಪರ ಎಲ್ಲಾ 17 ಪಂದ್ಯಗಳನ್ನು ಆಡಿದ್ದರು. ಇದರ ಬೆನ್ನಲ್ಲೇ ಅಫ್ಘಾನಿಸ್ತಾನ್ ವಿರುದ್ಧದ ಏಕೈಕ ಟೆಸ್ಟ್ ಪಂದ್ಯದಲ್ಲೂ ಭಾಗವಹಿಸಿದ್ದರು.
  • ದೀರ್ಘಾವಧಿಯ ಸರಣಿಗಳಿಗೆ ಸಿದ್ಧತೆ: ಮುಂಬರುವ ಸುದೀರ್ಘ ಅಂತರರಾಷ್ಟ್ರೀಯ ಕ್ರಿಕೆಟ್ ಸೀಸನ್ ಮತ್ತು ಪ್ರಮುಖ ಸರಣಿಗಳಿಗೆ ಸಿರಾಜ್ ಅವರ ಅವಶ್ಯಕತೆ ಟೀಮ್ ಇಂಡಿಯಾಗೆ ಇದೆ. ಹೀಗಾಗಿ ಅವರು ಸಂಪೂರ್ಣ ದೈಹಿಕ ಫಿಟ್‌ನೆಸ್ ಹಾಗೂ ವೇಗವನ್ನು ಕಾಯ್ದುಕೊಳ್ಳಲು ಈ ವಿಶ್ರಾಂತಿ ಅನಿವಾರ್ಯವಾಗಿತ್ತು.

ಸದ್ಯ ಭಾರತ ಟಿ20 ತಂಡದಿಂದ ಹೊರಗುಳಿದಿರುವ ಮೊಹಮ್ಮದ್ ಸಿರಾಜ್, ಇಂಗ್ಲೆಂಡ್ ವಿರುದ್ಧದ ಮೂರು ಮ್ಯಾಚ್​ಗಳ ಏಕದಿನ ಸರಣಿಯಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಅಂದರೆ ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ಮುಂಬರುವ ಏಕದಿನ ವಿಶ್ವಕಪ್ ಹಾಗೂ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ ಫೈನಲ್​ಗಾಗಿ ಈಗಲೇ ಬಲಿಷ್ಠ ಪಡೆಯನ್ನು ರೂಪಿಸಲು ಪ್ಲ್ಯಾನ್ ರೂಪಿಸುತ್ತಿದೆ.

ಇದನ್ನೂ ಓದಿ: ಬರೋಬ್ಬರಿ 21 ವರ್ಷ… ಆಸ್ಟ್ರೇಲಿಯಾವನ್ನು ಮಕಾಡೆ ಮಲಗಿಸಿದ ಬಾಂಗ್ಲಾದೇಶ್!

ಈ ಪ್ಲ್ಯಾನ್​ನ ಭಾಗವಾಗಿ ಇದೀಗ ಮೊಹಮ್ಮದ್ ಸಿರಾಜ್ ಅವರನ್ನು ಟಿ20 ತಂಡದಿಂದ ಕೈ ಬಿಡಲಾಗಿದೆ. ಅಲ್ಲದೆ ಅವರನ್ನು ಮುಂಬರುವ ಏಕದಿನ ಹಾಗೂ ಟೆಸ್ಟ್ ಪಂದ್ಯಗಳಲ್ಲಿ ಮಾತ್ರ ಕಣಕ್ಕಿಳಿಸಲು ಬಿಸಿಸಿಐ ನಿರ್ಧರಿಸಿದೆ.

ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
Follow Us