೨೦ ಸಿಕ್ಸ್, ೧೯ ಫೋರ್, ಬರೋಬ್ಬರಿ ೨೫೬ ರನ್ಸ್: ವಿಂಡೀಸ್ ದಾಂಡಿಗರ ಆರ್ಭಟ
West Indies vs Ireland: ವೆಸ್ಟ್ ಇಂಡೀಸ್ ಮತ್ತು ಐರ್ಲೆಂಡ್ ನಡುವಣ ಮೂರು ಪಂದ್ಯಗಳ ಟಿ20 ಸರಣಿಯ ಮೊದಲೆರಡು ಮ್ಯಾಚ್ಗಳು ಮಳೆಗೆ ಆಹುತಿಯಾಗಿತ್ತು. ಇದೀಗ ಮೂರನೇ ಪಂದ್ಯದಲ್ಲಿ ಐರ್ಲೆಂಡ್ ತಂಡಕ್ಕೆ ಸೋಲುಣಿಸುವ ಮೂಲಕ ಶಾಯ್ ಹೋಪ್ ಮುಂದಾಳತ್ವದ ವಿಂಡೀಸ್ ಪಡೆ 1-0 ಅಂತರದಿಂದ ಸರಣಿ ಗೆದ್ದುಕೊಂಡಿದೆ.

ಐರ್ಲೆಂಡ್ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಭರ್ಜರಿ ಜಯ ಸಾಧಿಸಿದೆ. ನಾರ್ತನ್ ಐರ್ಲೆಂಡ್ ನ ಬಿಸಿಸಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಐರ್ಲೆಂಡ್ ತಂಡದ ನಾಯಕ ಪೌಲ್ ಸ್ಟೀರ್ಲಿಂಗ್ ಬೌಲಿಂಗ್ ಆಯ್ದುಕೊಂಡರು. ಅದರಂತೆ ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ ತಂಡಕ್ಕೆ ಎವಿನ್ ಲೂಯಿಸ್ ಹಾಗೂ ಶಾಯ್ ಹೋಪ್ ಭರ್ಜರಿ ಆರಂಭ ಒದಗಿಸಿದ್ದರು.
10.3 ಓವರ್‌ಗಳಲ್ಲಿ 122 ರನ್ ಪೇರಿಸಿದ ಬಳಿಕ ಶಾಯ್ ಹೋಪ್ (51) ವಿಕೆಟ್ ಒಪ್ಪಿಸಿದರು. ಆದರೆ ಮತ್ತೊಂದೆಡೆ ಸ್ಫೋಟಕ ಇನಿಂಗ್ಸ್ ಮುಂದುವರೆಸಿದ ಲೂಯಿಸ್ 8 ಭರ್ಜರಿ ಸಿಕ್ಸ್ ಹಾಗೂ 7 ಫೋರ್ ಗಳೊಂದಿಗೆ 44 ಎಸೆತಗಳಲ್ಲಿ 91 ರನ್ ಬಾರಿಸಿದರು.
ಇನ್ನು ಕೊನೆಯ ಓವರ್‌ಗಳ ವೇಳೆ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ ಕೀಸಿ ಕಾರ್ಟಿ 22 ಎಸೆತಗಳಲ್ಲಿ 4 ಸಿಕ್ಸ್ ಹಾಗೂ 4 ಫೋರ್ ಗಳೊಂದಿಗೆ ಅಜೇಯ 49 ರನ್ ಬಾರಿಸಿದರು. ಈ ಮೂಲಕ ವೆಸ್ಟ್ ಇಂಡೀಸ್ ತಂಡವು 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 256 ರನ್ ಕಲೆಹಾಕಿತು.
ಈ ಕಠಿಣ ಗುರಿ ಬೆನ್ನತ್ತಿದ ಐರ್ಲೆಂಡ್ ತಂಡದ ಪರ ರೋಸ್ ಅಡೈರ್ 48 ರನ್ ಬಾರಿಸಿದರೆ, ಹ್ಯಾರಿ ಟೆಕ್ಟರ್ 38 ರನ್ ಚಚ್ಚಿದರು. ಇನ್ನು ಕೆಲ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ಮಾರ್ಕ್ ಅಡೈರ್ 14 ಎಸೆತಗಳಲ್ಲಿ 31 ರನ್ ಕಲೆಹಾಕಿದರು. ಈ ಮೂಲಕ 20 ಓವರ್‌ಗಳಲ್ಲಿ 194 ರನ್ ಕಲೆಹಾಕಿ 62 ರನ್ ಗಳಿಂದ ಸೋಲೊಪ್ಪಿಕೊಂಡರು.
ವಿಂಡೀಸ್ ದಾಖಲೆಯ ಮೊತ್ತ:
ಈ ಪಂದ್ಯದಲ್ಲಿ ಒಟ್ಟು 20 ಸಿಕ್ಸ್ ಹಾಗೂ 19 ಫೋರ್ ಗಳೊಂದಿಗೆ ಕಲೆಹಾಕಿದ 256 ರನ್ ಗಳು ಟಿ20 ಕ್ರಿಕೆಟ್ ನಲ್ಲಿ ವೆಸ್ಟ್ ಇಂಡೀಸ್ ತಂಡದ ಎರಡನೇ ಗರಿಷ್ಠ ಸ್ಕೋರ್ ಎಂಬುದು ವಿಶೇಷ.
ಇದಕ್ಕೂ ಮುನ್ನ 2023 ರಲ್ಲಿ ಸೌತ್ ಆಫ್ರಿಕಾ ವಿರುದ್ಧ ವೆಸ್ಟ್ ಇಂಡೀಸ್ 258 ರನ್ ಬಾರಿಸಿದ್ದರು. ಇದೀಗ ಮತ್ತೊಮ್ಮೆ 250 ರನ್ ಗಳ ಗಡಿದಾಟುವಲ್ಲಿ ವಿಂಡೀಸ್ ದಾಂಡಿಗರು ಯಶಸ್ವಿಯಾಗಿದ್ದಾರೆ.
ಐರ್ಲೆಂಡ್ ಪ್ಲೇಯಿಂಗ್ 11: ಪಾಲ್ ಸ್ಟಿರ್ಲಿಂಗ್ (ನಾಯಕ) , ರಾಸ್ ಅಡೈರ್ , ಹ್ಯಾರಿ ಟೆಕ್ಟರ್ , ಲೋರ್ಕನ್ ಟಕರ್ (ವಿಕೆಟರ್) , ಟಿಮ್ ಟೆಕ್ಟರ್ , ಜಾರ್ಜ್ ಡಾಕ್ರೆಲ್ , ಮಾರ್ಕ್ ಅಡೈರ್ , ಬ್ಯಾರಿ ಮೆಕಾರ್ಥಿ , ಮ್ಯಾಥ್ಯೂ ಹಂಫ್ರೀಸ್ , ಲಿಯಾಮ್ ಮೆಕಾರ್ಥಿ , ಬೆಂಜಮಿನ್ ವೈಟ್.
ಇದನ್ನೂ ಓದಿ: ಸೋಲಿನ ಸರಪಳಿ ಬ್ರೇಕ್… 3 ತಂಡಗಳಿಗೆ ಒಲಿದ ಚಾಂಪಿಯನ್ ಪಟ್ಟ
ವೆಸ್ಟ್ ಇಂಡೀಸ್ ಪ್ಲೇಯಿಂಗ್ 11: ಎವಿನ್ ಲೂಯಿಸ್ , ಶಾಯ್ ಹೋಪ್ (ನಾಯಕ) , ಕೀಸಿ ಕಾರ್ಟಿ , ಶಿಮ್ರಾನ್ ಹೆಟ್ಮೆಯರ್ , ರೋವ್ಮನ್ ಪೊವೆಲ್ , ರೋಸ್ಟನ್ ಚೇಸ್ , ರೊಮಾರಿಯೋ ಶೆಫರ್ಡ್ , ಜೇಸನ್ ಹೋಲ್ಡರ್ , ಅಕೇಲ್ ಹೋಸೇನ್ , ಗುಡಾಕೇಶ್ ಮೋಟಿ , ಅಲ್ಝಾರಿ ಜೋಸೆಫ್.
Published On - 7:00 am, Mon, 16 June 25
