
ದಿ ಹಂಡ್ರೆಡ್ ಲೀಗ್ನಲ್ಲಿ ಪಾಕಿಸ್ತಾನ್ ಆಟಗಾರ ಅಬ್ರಾರ್ ಅಹ್ಮದ್ ಅವರನ್ನು ಖರೀದಿಸಿ ಇದೀಗ ಸನ್‌ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ಇಕ್ಕಟಿಗೆ ಸಿಲುಕಿದೆ. ಮಾರ್ಚ್ 12, 2026 ರಂದು ನಡೆದ ಹರಾಜಿನಲ್ಲಿ ಅಬ್ರಾರ್ ಅಹ್ಮದ್ ಅವರನ್ನುಎಸ್ಆರ್ಹೆಚ್ ಮಾಲೀಕತ್ವದ ಸನ್‌ರೈಸರ್ಸ್ ಲೀಡ್ಸ್ ಫ್ರಾಂಚೈಸಿಯು ಬರೋಬ್ಬರಿ £1,90,000 (ಸುಮಾರು ₹2.34 ಕೋಟಿ) ಮೊತ್ತಕ್ಕೆ ಖರೀದಿಸಿದೆ.
ಇತ್ತ ಭಾರತೀಯ ವಿರೋಧಿ ಮನಸ್ಥಿತಿ ಹೊಂದಿರುವ ಪಾಕ್ ಆಟಗಾರನನ್ನು ಖರೀದಿಸಿರುವುದಕ್ಕೆ ಅಭಿಮಾನಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೆ ಈ ಆಕ್ರೋಶದೊಂದಿಗೆ ಸನ್‌ರೈಸರ್ಸ್ ಲೀಡ್ಸ್‌ನ ‘X’ (ಟ್ವಿಟರ್) ಖಾತೆಯನ್ನು ರಿಪೋರ್ಟ್ ಮಾಡಿದ್ದ ಪರಿಣಾಮ ಎಸ್ಆರ್ಎಲ್ ತಂಡದ ಸೋಷಿಯಲ್ ಮೀಡಿಯಾ ಖಾತೆಯು ತಾತ್ಕಾಲಿಕ ಸ್ಥಗಿತವಾಗಿತ್ತು.
ಇದೀಗ ಭಾರತ ಸೇರಿದಂತೆ ಎಲ್ಲೆಡೆಯಿಂದ ಎಸ್ಆರ್ಹೆಚ್ ಅಭಿಮಾನಿಗಳ ಒತ್ತಡ ಹೆಚ್ಚಾಗುತ್ತಿರುವುದರಿಂದ ಸನ್‌ರೈಸರ್ಸ್ ಹೈದರಾಬಾದ್ ಫ್ರಾಂಚೈಸಿಯು ಪಾಕ್ ಆಟಗಾರನನ್ನು ಕೈ ಬಿಡುವ ಬಗ್ಗೆ ಚಿಂತಿಸಿದ್ದಾರೆ ಎಂದು ವರದಿಯಾಗಿದೆ. ಆದರೆ ಅದಕ್ಕೂ ಮುನ್ನ ಒಂದಷ್ಟು ನಿಯಮಗಳನ್ನು ಪಾಲಿಸಬೇಕಾದ ಅನಿವಾರ್ಯತೆ ಎಸ್ಆರ್ಹೆಚ್ ಫ್ರಾಂಚೈಸಿ ಮುಂದಿದೆ.
ಸದ್ಯದ ಪರಿಸ್ಥಿತಿಯಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ಮಾಲೀಕರಾದ ಕಾವ್ಯ ಮಾರನ್ ಮೌನವಾಗಿದ್ದಾರೆ. ಅಲ್ಲದೆ ಫ್ರಾಂಚೈಸಿ ಅಧಿಕಾರಿಗಳು ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದಾರೆ. ಇನ್ನು ಈ ಬಗ್ಗೆ ಸನ್‌ರೈಸರ್ಸ್ ಫ್ರಾಂಚೈಸಿ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಜೊತೆ ಕೂಡ ಚರ್ಚಿಸಲಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ: Jitesh Sharma: ನನ್ನ ತಂದೆಗೆ ವಿಶ್ವಕಪ್‌ಗಿಂತ ಹೆಚ್ಚಾಗಿ ನನ್ನ ಅಗತ್ಯವಿತ್ತು!
ಒಂದು ವೇಳೆ ಐಪಿಎಲ್ ಆರಂಭಕ್ಕೂ ಮುನ್ನ ‘ಸನ್‌ರೈಸರ್ಸ್’ ಫ್ರಾಂಚೈಸಿ ಮೇಲೆ ಪ್ರಾಯೋಜಕರ ಒತ್ತಡ ಹೆಚ್ಚಾದರೆ “ವೈಯಕ್ತಿಕ ಕಾರಣ” ಅಥವಾ “ಗಾಯದ ಸಮಸ್ಯೆ” ಎಂಬ ಕಾರಣ ನೀಡಿ ಅಬ್ರಾರ್ ಅಹ್ಮದ್ ಅವರನ್ನು ದಿ ಹಂಡ್ರೆಡ್ ಟೂರ್ನಿಯಿಂದ ಕೈಬಿಡಲು ಚಿಂತಿಸಲಾಗಿದೆ. ಹೀಗಾಗಿ ದಿ ಹಂಡ್ರೆಡ್ ಟೂರ್ನಿ ಆರಂಭಕ್ಕೂ ಮುನ್ನವೇ ಸನ್‌ರೈಸರ್ಸ್ ಲೀಡ್ಸ್ ತಂಡದಿಂದ ಪಾಕ್ ಆಟಗಾರನಿಗೆ ಗೇಟ್ ಪಾಸ್ ಸಿಗುವ ಸಾಧ್ಯತೆ ಹೆಚ್ಚಿದೆ.