ಭಾರತವನ್ನು ಬಗ್ಗು ಬಡಿಯುವುದಕ್ಕಿಂತ ಚಾಂಪಿಯನ್ಸ್ ಟ್ರೋಫಿ ಗೆಲ್ಲೋದು ಮುಖ್ಯ: ಪಾಕ್ ಉಪನಾಯಕ
Champions Trophy 2025: 2025ರ ಚಾಂಪಿಯನ್ಸ್ ಟ್ರೋಫಿ ಟೂರ್ನಿಯು ಫೆಬ್ರವರಿ 19 ರಿಂದ ಶುರುವಾಗಲಿದೆ. ಹಾಗೆಯೇ ಫೈನಲ್ ಪಂದ್ಯ ಮಾರ್ಚ್ 9 ರಂದು ನಡೆಯಲಿದೆ. ಹೈಬ್ರಿಡ್ ಮಾದರಿಯಲ್ಲಿ ಜರುಗಲಿರುವ ಈ ಟೂರ್ನಿಯ ಬಹುತೇಕ ಮ್ಯಾಚ್ಗಳು ಪಾಕಿಸ್ತಾನದಲ್ಲಿ ನಡೆಯಲಿದ್ದು, ಭಾರತ ತಂಡದ ಪಂದ್ಯಗಳಿಗೆ ದುಬೈ ಆತಿಥ್ಯವಹಿಸಲಿದೆ.

ಚಾಂಪಿಯನ್ಸ್ ಟ್ರೋಫಿ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಫೆಬ್ರವರಿ 19 ರಿಂದ ಆರಂಭವಾಗಲಿರುವ ಈ ಟೂರ್ನಿಗೆ ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಆತಿಥ್ಯವಹಿಸುತ್ತಿದೆ. ಇದಾಗ್ಯೂ ಈ ಟೂರ್ನಿಯು ಹೈಬ್ರಿಡ್ ಮಾದರಿಯಲ್ಲಿ ನಡೆಯಲಿದ್ದು, ಅದರಂತೆ ಬಹುತೇಕ ಪಂದ್ಯಗಳು ಪಾಕಿಸ್ತಾನದಲ್ಲಿ ನಡೆದರೆ, ಭಾರತದ ಪಂದ್ಯಗಳು ದುಬೈನಲ್ಲಿ ಜರುಗಲಿದೆ.
ಇನ್ನು ಫೆಬ್ರವರಿ 23 ರಂದು ದುಬೈ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆಯಲಿರುವ ಪಂದ್ಯದಲ್ಲಿ ಬದ್ಧ ವೈರಿಗಳಾದ ಭಾರತ ಮತ್ತು ಪಾಕಿಸ್ತಾನ್ ತಂಡಗಳು ಮುಖಾಮುಖಿಯಾಗಲಿದೆ. ಇಡೀ ವಿಶ್ವವೇ ಕಾತುರದಿಂದ ಕಾಯುತ್ತಿರುವ ಈ ಪಂದ್ಯದಲ್ಲಿ ಯಾರು ಗೆಲ್ಲುತ್ತಾರೆ ಎಂಬುದೇ ಈಗ ಕುತೂಹಲ. ಹೀಗಾಗಿಯೇ ಈ ಬಾರಿಯ ಟೂರ್ನಿಯಲ್ಲಿ ಭಾರತದ ವಿರುದ್ಧ ಪಾಕಿಸ್ತಾನ್ ಗೆಲ್ಲಲಿದೆಯಾ ಎಂಬ ಪ್ರಶ್ನೆಯನ್ನು ಪಾಕ್ ತಂಡದ ಉಪನಾಯಕ ಸಲ್ಮಾನ್ ಅಲಿ ಅಘಾ ಅವರಲ್ಲಿ ಕೇಳಲಾಗಿತ್ತು.
ಭಾರತವನ್ನು ಸೋಲಿಸುವುದೇ ಅಥವಾ 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆಲ್ಲುವುದೇ? ಪಾಕಿಸ್ತಾನ್ ತಂಡದ ಮುಖ್ಯ ಗುರಿ ಎಂಬ ಪ್ರಶ್ನೆಯನ್ನು ಪಿಸಿಬಿ ಪಾಡ್ಕಾಸ್ಟ್ನಲ್ಲಿ ಸಲ್ಮಾನ್ ಅಘಾ ಮುಂದಿಡಲಾಗಿತ್ತು. ಇದಕ್ಕೆ ಉತ್ತರಿಸಿದ ಪಾಕ್ ತಂಡದ ಉಪನಾಯಕ, ಪಾಕಿಸ್ತಾನ್-ಭಾರತ ಪಂದ್ಯ ಬಹಳ ಮುಖ್ಯವಾದದ್ದೇ/ ಆದರೆ ಚಾಂಪಿಯನ್ಸ್ ಟ್ರೋಫಿ ಗೆಲ್ಲುವುದು ಅದಕ್ಕಿಂತ ಮುಖ್ಯವಾದ ವಿಷಯ ಎಂದಿದ್ದಾರೆ.
ನಾವು ಭಾರತವನ್ನು ಸೋಲಿಸಿ ಪಂದ್ಯಾವಳಿಯನ್ನು ಗೆಲ್ಲದಿದ್ದರೆ, ಆ ಗೆಲುವಿಗೆ ಯಾವುದೇ ಮೌಲ್ಯವಿಲ್ಲ. ಆದಾಗ್ಯೂ, ನಾವು ಭಾರತ ವಿರುದ್ಧ ಸೋತರೂ ಟ್ರೋಫಿಯನ್ನು ಎತ್ತಿ ಹಿಡಿದರೆ, ಅದು ದೊಡ್ಡ ಸಾಧನೆಯಾಗಲಿದೆ. ಹೀಗಾಗಿ ನನ್ನ ಪ್ರಕಾರ, ಭಾರತ ತಂಡವನ್ನು ಬಗ್ಗು ಬಡಿಯುವುದಕ್ಕಿಂತ, ಚಾಂಪಿಯನ್ಸ್ ಟ್ರೋಫಿ ಗೆಲ್ಲುವುದು ನಮಗೆ ಮುಖ್ಯ ಎಂದು ಸಲ್ಮಾನ್ ಅಲಿ ಅಘಾ ಹೇಳಿದ್ದಾರೆ.