ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿರುವ ಮಹಿಳಾ ಟಿ20 ವಿಶ್ವಕಪ್ನ (Women’s T20 World Cup 2023) ಲೀಗ್ ಸುತ್ತು ಮುಗಿಯುವ ಹಂತದಲ್ಲಿದೆ. ಈಗಾಗಲೇ ಬಲಿಷ್ಠ ತಂಡಗಳು ನಾಕೌಟ್ನತ್ತ ಹೆಜ್ಜೆ ಇಟ್ಟಿವೆ. ಇತ್ತ ಟೀಂ ಇಂಡಿಯಾ (Team India) ಕೂಡ ಟೂರ್ನಿಯ ಮೊದಲ ಸೋಲಿನೊಂದಿಗೆ ಕೊಂಚ ಆತಂಕಕ್ಕೊಳಗಾಗಿದೆ. ಆದರೆ ನಿನ್ನೆ ನಡೆದ ಪಂದ್ಯದಲ್ಲಿ ಭಾರತಕ್ಕೆ ಕಂಟಕವಾಗಿದ್ದ ಪಾಕ್ ಸೋತಿರುವುದು ಹರ್ಮನ್ ಪಡೆಗೆ ಕೊಂಚ ನೆಮ್ಮದಿ ತಂದಿದೆ. ವಾಸ್ತವವಾಗಿ ವೆಸ್ಟ್ ಇಂಡೀಸ್ ಮತ್ತು ಪಾಕಿಸ್ತಾನ (West Indies vs Pakistan) ನಡುವೆ ಭಾನುವಾರ ನಡೆದ ಪಂದ್ಯದಲ್ಲಿ ಅಲ್ಪ ಸ್ಕೋರ್ ಮುಂದೆಯೂ ಪಾಕ್ ಪಡೆ ಮೂರು ರನ್ಗಳ ರೋಚಕ ಸೋಲು ಅನುಭವಿಸಿದೆ. ಈ ಮೂಲಕ ಪಾಕ್ ತಂಡ ಟೂರ್ನಿಯಲ್ಲಿ ತನ್ನ ಎರಡನೇ ಸೋಲು ಅನುಭವಿಸಿದೆ. ಇತ್ತ ವಿಂಡೀಸ್ ಕೂಡ ತನ್ನ ಎರಡನೇ ಗೆಲುವು ದಾಖಲಿಸಿದೆ.
ಗುಂಪು 2 ರ ಈ ಪಂದ್ಯದಲ್ಲಿ, ಸೆಮಿಫೈನಲ್ಗೆ ಪ್ರವೇಶಿಸುವ ಭರವಸೆಯನ್ನು ಜೀವಂತವಾಗಿಡಲು ಎರಡೂ ತಂಡಗಳು ಗೆಲುವು ದಾಖಲಿಸುವುದು ಅನಿವಾರ್ಯವಾಗಿತ್ತು. ಆದರೆ ಪಾರ್ಲ್ನಲ್ಲಿ ನಡೆದ ಈ ಪಂದ್ಯದಲ್ಲಿ ಉಭಯ ತಂಡಗಳ ರನ್ ರೇಟ್ ಪ್ರತಿ ಓವರ್ಗೆ 6 ರನ್ ಕೂಡ ಮುಟ್ಟಲು ಸಾಧ್ಯವಾಗಲಿಲ್ಲ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ ತಂಡ ಪಾಕಿಸ್ತಾನದ ಬಿಗಿ ಬೌಲಿಂಗ್ ಮುಂದೆ ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 116 ರನ್ ಗಳಿಸಲಷ್ಟೇ ಶಕ್ತವಾಯಿತು.
T20 World Cup 2023:ಕೇವಲ 14 ಎಸೆತಗಳಲ್ಲಿ 56 ರನ್! ಟಿ20ಯಲ್ಲಿ ಪಾಕ್ ಪರ ಸಿಡಿಯಿತು ಮೊದಲ ಶತಕ
ವೆಸ್ಟ್ ಇಂಡೀಸ್ ಪರ ರಶಾದಾ ವಿಲಿಯಮ್ಸ್ ಗರಿಷ್ಠ 30 ರನ್ ಗಳಿಸಿದರು. ಆದರೆ ಇದಕ್ಕಾಗಿ ಅವರು ಬರೋಬ್ಬರಿ 34 ಎಸೆತಗಳನ್ನು ಆಡಬೇಕಾಯಿತು. ಅಷ್ಟೇ ಅಲ್ಲ, ವಿಂಡೀಸ್ ತಂಡದ ಭಾಗಶಃ ಬ್ಯಾಟರ್ಗಳ ಸ್ಟ್ರೈಕ್ ರೇಟ್ 100ಕ್ಕಿಂತ ಕಡಿಮೆ ಇತ್ತು. ತಂಡದ ಅಗ್ರ 6 ಬ್ಯಾಟರ್ಗಳಲ್ಲಿ ಇಬ್ಬರಿಗೆ ಮಾತ್ರ 100 ಸ್ಟ್ರೈಕ್ ರೇಟ್ ದಾಟಲು ಸಾಧ್ಯವಾಯಿತು. ಶಿನ್ನೆಲ್ ಹೆನ್ರಿ 10 ಎಸೆತಗಳಲ್ಲಿ 11 ರನ್ ಗಳಿಸಿದರೆ, ಆಲಿಯಾ ಅಲೆನ್ 9 ಎಸೆತಗಳಲ್ಲಿ 9 ರನ್ ಗಳಿಸಿದರು. ಪಾಕಿಸ್ತಾನ ಪರ ಅನುಭವಿ ಸ್ಪಿನ್ ಆಲ್ ರೌಂಡರ್ ನಿದಾ ದಾರ್ 4 ಓವರ್ಗಳಲ್ಲಿ ಕೇವಲ 13 ರನ್ ನೀಡಿ 2 ವಿಕೆಟ್ ಪಡೆದರು.
ವಿಂಡೀಸ್ ನೀಡಿದ ಅಲ್ಪ ರನ್ಗಳ ಟಾರ್ಗೆಟ್ ಬೆನ್ನಟ್ಟಿದ ಪಾಕಿಸ್ತಾನ ಕೂಡ ಮಂದಗತಿಯ ಬ್ಯಾಟಿಂಗ್ ಮಾಡಿತು. ಕಳೆದ ಪಂದ್ಯದಲ್ಲಿ ಶತಕ ಸಿಡಿಸಿದ್ದ ಆರಂಭಿಕ ಆಟಗಾರ್ತಿ ಮುನೀಬಾ ಅಲಿ 11 ಎಸೆತಗಳಲ್ಲಿ 5 ರನ್ ಗಳಿಸಲಷ್ಟೇ ಶಕ್ತರಾಗಿದ್ದರು. ನಾಯಕಿ ಬಿಸ್ಮಾ ಮರೂಫ್ ಮತ್ತು ನಿದಾ ದಾರ್ ನಡುವೆ 44 ರನ್ ಜೊತೆಯಾಟವಿತ್ತು. ಆದರೆ ಇಬ್ಬರೂ ಇದಕ್ಕಾಗಿ 53 ಎಸೆತಗಳನ್ನು ವ್ಯಯಿಸಿದರು. ಇವರಿಬ್ಬರ ನಿಧಾನಗತಿಯ ಬ್ಯಾಟಿಂಗ್ ಪಾಕಿಸ್ತಾನಕ್ಕೆ ದುಬಾರಿಯಾಯಿತು.
ಈ ನಿದಾನಗತಿಯ ಬ್ಯಾಟಿಂಗ್ನ ಪರಿಣಾಮದಿಂದಾಗಿ ಪಾಕಿಸ್ತಾನಕ್ಕೆ ಕೊನೆಯ ಓವರ್ನಲ್ಲಿ 18 ರನ್ಗಳ ಅಗತ್ಯವಿತ್ತು. ಅಲಿಯಾ ರಿಯಾಜ್ ಮತ್ತು ಫಾತಿಮಾ ಸನಾ 3 ಬೌಂಡರಿಗಳನ್ನು ಹೊಡೆದರೂ ಇದು ಸಾಕಾಗಲಿಲ್ಲ. ಪಾಕಿಸ್ತಾನದ ಪರವಾಗಿ ಈ ಇಬ್ಬರು ಬ್ಯಾಟರ್ಗಳು 100 ಸ್ಟ್ರೈಕ್ ರೇಟ್ನೊಂದಿಗೆ ಬ್ಯಾಟಿಂಗ್ ಮಾಡಿದರಾದರೂ ತಂಡವನ್ನು ಗೆಲುವಿನ ದಡ ಸೇರಿಸಲಾಗಲಿಲ್ಲ. ಅಂತಿಮವಾಗಿ 5 ವಿಕೆಟ್ ಕಳೆದುಕೊಂಡ ಪಾಕಿಸ್ತಾನ ತಂಡ 20 ಓವರ್ಗಳಲ್ಲಿ 113 ರನ್ ಗಳಿಸಿ, 3 ರನ್ಗಳ ರೋಚಕ ಸೋಲನುಭವಿಸಿತು.
ಈ ಗೆಲುವಿನ ಹೊರತಾಗಿಯೂ, ವೆಸ್ಟ್ ಇಂಡೀಸ್ ಸೆಮಿಫೈನಲ್ ತಲುಪುವುದು ಕಷ್ಟಕರವಾಗಿದೆ. ಏಕೆಂದರೆ ವಿಂಡೀಸ್ ತಂಡ ಆಡಿರುವ ಪಂದ್ಯಗಳಲ್ಲಿ 4 ಅಂಕಗಳನ್ನು ಹೊಂದಿದ್ದು, ನಿವ್ವಳ ರನ್ ರೇಟ್ ಕೂಡ ತುಂಬಾ ಕೆಟ್ಟದಾಗಿದೆ. ಮತ್ತೊಂದೆಡೆ, ಪಾಕಿಸ್ತಾನದ ನಿವ್ವಳ ರನ್ ರೇಟ್ ಅದ್ಭುತವಾಗಿದೆ ಆದರೆ ಅಂಕಪಟ್ಟಿಯಲ್ಲಿ ಕೇವಲ 2 ಅಂಕಗಳನ್ನು ಮಾತ್ರ ಹೊಂದಿದೆ. ಹೀಗಾಗಿ ಪಾಕ್ ತಂಡ ಸೆಮಿಫೈನಲ್ ತಲುಪಬೇಕಾದರೆ ಇತರ ತಂಡಗಳ ಸೋಲಿನ ಮೇಲೆ ಅವಲಂಬಿತವಾಗಿದೆ. ಪಾಕ್ ಸೆಮಿಸ್ ಆಡಬೇಕೆಂದರೆ ಮೊದಲನೆಯದಾಗಿ ಭಾರತ (4 ಅಂಕ) ಐರ್ಲೆಂಡ್ ವಿರುದ್ಧ ಸೋಲಬೇಕು. ಎರಡನೆಯದಾಗಿ, ಪಾಕಿಸ್ತಾನವೇ ಹೇಗಾದರೂ ಸರಿ ಇಂಗ್ಲೆಂಡ್ ತಂಡವನ್ನು ಸೋಲಿಸಲೇಬೇಕು. ಹಾಗದರೆ ಮಾತ್ರ ಪಾಕ್ ಸೆಮಿಸ್ ಆಡಬಹುದಾಗಿದೆ.
ಭಾರತ ಮಹಿಳಾ ತಂಡ ಸದ್ಯ ಆಡಿರುವ ಮೂರು ಪಂದ್ಯಗಳ ಪೈಕಿ ಎರಡರಲ್ಲಿ ಗೆದ್ದು ಒಂದರಲ್ಲಿ ಸೋತು 4 ಅಂಕದೊಂದಿಗೆ ದ್ವಿತೀಯ ಸ್ಥಾನದಲ್ಲಿದೆ. ಹಾಗೆಯೆ ವೆಸ್ಟ್ ಇಂಡೀಸ್ ತನಗಿದ್ದ ಎಲ್ಲ 4 ಪಂದ್ಯಗಳಲ್ಲಿ ಆಡಿದ್ದು 4 ಪಾಯಿಂಟ್ ಸಂಪಾದಿಸಿದೆ. ಅತ್ತ ಪಾಕಿಸ್ತಾನ ಮೂರು ಪಂದ್ಯಗಳಲ್ಲಿ ಒಂದು ಗೆಲುವು, ಎರಡು ಸೋಲಿನೊಂದಿಗೆ ಮೂರನೇ ಸ್ಥಾನದಲ್ಲಿದೆ. ಈಗ ಪಾಕ್ ಸೋತಿರುವುದರಿಂದ ಭಾರತ ಇಂದಿನ ಪಂದ್ಯ ಗೆದ್ದರೆ 6 ಅಂಕದೊಂದಿಗೆ ಸೆಮೀಸ್ಗೆ ಲಗ್ಗೆ ಇಡಲಿದೆ. ಎಲ್ಲಾದರು ಟೀಮ್ ಇಂಡಿಯಯಾ ಸೋತರೆ ಅತ್ತ ಪಾಕ್ ಮುಂದಿನ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಸೋಲಬೇಕಿದೆ. ಭಾರತ ಸೋತು ಪಾಕ್ ಗೆದ್ದರೆ ರನ್ರೇಟ್ ಆಧಾರದ ಮೇಲೆ ಪಾಕಿಸ್ತಾನ ಸೆಮಿ ಫೈನಲ್ಗೆ ಏರುವುದು ಬಹುತೇಕ ಖಚಿತ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:03 am, Mon, 20 February 23