WPL 2024: ಯುಪಿ ವಾರಿಯರ್ಸ್ ಎದುರಾಳಿ ಬಲಿಷ್ಠ ಮುಂಬೈ ಇಂಡಿಯನ್ಸ್
Mumbai Indians vs UP Warriorz: ವುಮೆನ್ಸ್ ಪ್ರೀಮಿಯರ್ ಲೀಗ್ನಲ್ಲಿ ಯುಪಿ ವಾರಿಯರ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಒಟ್ಟು 3 ಬಾರಿ ಮುಖಾಮುಖಿಯಾಗಿವೆ. ಈ ವೇಳೆ 2 ಬಾರಿ ಮುಂಬೈ ಇಂಡಿಯನ್ಸ್ ತಂಡ ಗೆಲುವು ಸಾಧಿಸಿದರೆ, ಒಂದು ಬಾರಿ ಮುಂಬೈ ಪಡೆಗೆ ಸೋಲುಣಿಸುವಲ್ಲಿ ಯುಪಿ ವಾರಿಯರ್ಸ್ ಯಶಸ್ವಿಯಾಗಿದೆ.
ವುಮೆನ್ಸ್ ಪ್ರೀಮಿಯರ್ ಲೀಗ್ನ (WPL 2024) 6ನೇ ಪಂದ್ಯದಲ್ಲಿ ಇಂದು (ಫೆ.28) ಮುಂಬೈ ಇಂಡಿಯನ್ಸ್ ಹಾಗೂ ಯುಪಿ ವಾರಿಯರ್ಸ್ ಮುಖಾಮುಖಿಯಾಗಲಿದೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಗೆಲ್ಲುವ ಮೂಲಕ ಗೆಲುವಿನ ಖಾತೆ ತೆರೆಯುವ ಇರಾದೆಯಲ್ಲಿದೆ ಯುಪಿ ವಾರಿಯರ್ಸ್. ಏಕೆಂದರೆ ಇದಕ್ಕೂ ಮುನ್ನ ಆಡಿದ 2 ಪಂದ್ಯಗಳಲ್ಲೂ ಯುಪಿ ತಂಡವು ಸೋಲನುಭವಿಸಿದೆ.
ಆರ್ಸಿಬಿ ವಿರುದ್ಧ ಆಡಿದ್ದ ಮೊದಲ ಪಂದ್ಯದಲ್ಲಿ ಯುಪಿ ವಾರಿಯರ್ಸ್ 2 ರನ್ಗಳಿಂದ ಸೋಲೊಪ್ಪಿಕೊಂಡಿತ್ತು. ಇದಾದ ಬಳಿಕ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದದ ಪಂದ್ಯದಲ್ಲಿ 9 ವಿಕೆಟ್ಗಳ ಹೀನಾಯ ಸೋಲನುಭವಿಸಿದೆ. ಹೀಗಾಗಿ ಇಂದಿನ ಪಂದ್ಯದಲ್ಲಿ ಗೆಲ್ಲಲೇಬೇಕಾದ ಒತ್ತಡದಲ್ಲಿದೆ.
ಮತ್ತೊಂದೆಡೆ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಆಡಿರುವ 2 ಪಂದ್ಯಗಳಲ್ಲೂ ಭರ್ಜರಿ ಪ್ರದರ್ಶನ ನೀಡಿದೆ. ಮೊದಲ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 4 ವಿಕೆಟ್ಗಳಿಂದ ಗೆದ್ದು ಬೀಗಿದ್ದ ಹರ್ಮನ್‌ಪ್ರೀತ್ ಕೌರ್ ಪಡೆ, 2ನೇ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ತಂಡಕ್ಕೆ 5 ವಿಕೆಟ್ಗಳ ಸೋಲುಣಿಸಿದೆ.
ಈ ಎರಡು ಭರ್ಜರಿ ಗೆಲುವುಗಳೊಂದಿಗೆ ಆತ್ಮ ವಿಶ್ವಾಸದಿಂದ ಪುಟಿದೇಳುತ್ತಿರುವ ಮುಂಬೈ ಇಂಡಿಯನ್ಸ್ ತಂಡವು ಇದೀಗ ಹ್ಯಾಟ್ರಿಕ್ ಗೆಲುವಿನ ನಿರೀಕ್ದೆಯಲ್ಲಿದೆ. ಹೀಗಾಗಿ ಇಂದಿನ ಪಂದ್ಯದಲ್ಲಿ ಯುಪಿ ವಾರಿಯರ್ಸ್ ತಂಡಕ್ಕೆ ಹರ್ಮನ್ ಪಡೆಯಿಂದ ಕಠಿಣ ಪೈಪೋಟಿ ಎದುರಾಗುವುದರಲ್ಲಿ ಅನುಮಾನವೇ ಇಲ್ಲ.
ಉಭಯ ತಂಡಗಳ ಮುಖಾಮುಖಿ:
ವುಮೆನ್ಸ್ ಪ್ರೀಮಿಯರ್ ಲೀಗ್ 2023ರಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಯುಪಿ ವಾರಿಯರ್ಸ್ ತಂಡಗಳು ಒಟ್ಟು 3 ಬಾರಿ ಮುಖಾಮುಖಿಯಾಗಿವೆ. ಈ ವೇಳೆ ಮುಂಬೈ ಇಂಡಿಯನ್ಸ್ ತಂಡ 2 ಬಾರಿ ಗೆಲುವು ದಾಖಲಿಸಿದರೆ. ಯುಪಿ ವಾರಿಯರ್ಸ್ ಒಂದು ಪಂದ್ಯದಲ್ಲಿ ಜಯ ಸಾಧಿಸಿದೆ.
ಯಾವ ಚಾನೆಲ್ನಲ್ಲಿ ನೇರ ಪ್ರಸಾರ?
ಮುಂಬೈ ಇಂಡಿಯನ್ಸ್ ಹಾಗೂ ಯುಪಿ ವಾರಿಯರ್ಸ್ ನಡುವಣ ಈ ಪಂದ್ಯಗಳನ್ನು ಸ್ಪೋರ್ಟ್ಸ್ 18 ಚಾನೆಲ್ನಲ್ಲಿ ಲೈವ್ ವೀಕ್ಷಿಸಬಹುದು. ಹಾಗೆಯೇ ಜಿಯೋ ಸಿನಿಮಾ ಆ್ಯಪ್ನಲ್ಲೂ ಉಚಿತ ಲೈವ್ ಸ್ಟ್ರೀಮಿಂಗ್ ಇರಲಿದೆ.