WTC final 2023: ಟೀಮ್ ಇಂಡಿಯಾ ವಿರುದ್ಧ ವೊಬಲ್ ಅಸ್ತ್ರ ಪ್ರಯೋಗಿಸಿದ ಆಸ್ಟ್ರೇಲಿಯನ್ನರು..!
WTC final 2023: ಆಫ್ ಸ್ಟಂಪ್ನಲ್ಲಿ ಬಂದ ಸ್ಕಾಟ್ ಬೋಲ್ಯಾಂಡ್ ಎಸೆತವನ್ನು ಶುಭ್ಮನ್ ಗಿಲ್ ನಿರ್ಲಕ್ಷಿಸಿದ್ದರು. ಆದರೆ ಚೆಂಡು ಅನಿರೀಕ್ಷಿತವಾಗಿ ಸ್ವಿಂಗ್ ಪಡೆದು ವಿಕೆಟ್ ಅನ್ನು ಉರುಳಿಸಿತು. ತುಸು ಹೊತ್ತಿನಲ್ಲೇ ಚೇತೇಶ್ವರ ಪೂಜಾರ ಕೂಡ ಇದೇ ಮಾದರಿಯಲ್ಲಿ ಕ್ಯಾಮರೋನ್ ಗ್ರೀನ್ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆಗಿದ್ದರು.

WTC final 2023: ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯ…ಟೀಮ್ ಇಂಡಿಯಾದ ಪ್ರಥಮ ಇನಿಂಗ್ಸ್…ಆಸ್ಟ್ರೇಲಿಯಾ ವೇಗಿ ಪ್ಯಾಟ್ ಕಮಿನ್ಸ್ ಎಸೆತವನ್ನು ನಾಯಕ ರೋಹಿತ್ ಶರ್ಮಾ (Rohit Sharma) ರಕ್ಷಣಾತ್ಮಕವಾಗಿ ಆಡಲು ಯತ್ನಿಸಿದ್ದರು…ಆದರೆ ಚೆಂಡನ್ನು ಗುರುತಿಸಲು ಎಡವಿದ ಹಿಟ್ಮ್ಯಾನ್ ಎಲ್ಬಿಡಬ್ಲ್ಯೂ ಆಗಿ ಹೊರ ನಡೆಯಬೇಕಾಯಿತು. ಇದರ ಬೆನ್ನಲ್ಲೇ ಆಫ್ ಸ್ಟಂಪ್ನತ್ತ ಬಂದ ಸ್ಕಾಟ್ ಬೋಲ್ಯಾಂಡ್ ಎಸೆತವನ್ನು ಶುಭ್ಮನ್ ಗಿಲ್ (Shubhman Gill) ನಿರ್ಲಕ್ಷಿಸಿದ್ದರು. ಆದರೆ ಚೆಂಡು ಅನಿರೀಕ್ಷಿತ ತಿರುವು ಪಡೆದು ವಿಕೆಟ್ ಅನ್ನು ಉರುಳಿಸಿತು. ತುಸು ಹೊತ್ತಿನಲ್ಲೇ ಚೇತೇಶ್ವರ ಪೂಜಾರ ಕೂಡ ಇದೇ ಮಾದರಿಯಲ್ಲಿ ಕ್ಯಾಮರೋನ್ ಗ್ರೀನ್ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆಗಿದ್ದರು. ಈ ಮೂರು ಔಟ್ಗಳನ್ನು ಗಮನಿಸಿದರೆ ಇವರೇಕೆ ಇಷ್ಟೊಂದು ಸುಲಭವಾಗಿ ಔಟಾಗಿದ್ದಾರೆಂಬ ಪ್ರಶ್ನೆ ಮೂಡುತ್ತೆ. ಅದರಲ್ಲೂ ಗಿಲ್ ಹಾಗೂ ಪೂಜಾರ ಚೆಂಡನ್ನೇ ಗುರುತಿಸಲಿಲ್ಲವೇ? ಪ್ರಶ್ನೆ ಮೂಡುವುದು ಸಹಜ. ಈ ಎಲ್ಲಾ ಪ್ರಶ್ನೆಗಳಿಗೆ ಸಿಗುವ ಉತ್ತರ ವೊಬಲ್.
ಹೌದು, ಆಸ್ಟ್ರೇಲಿಯನ್ನರು ಟೀಮ್ ಇಂಡಿಯಾದ ಅಗ್ರ ಕ್ರಮಾಂಕದ ಬ್ಯಾಟರ್ಗಳ ವಿರುದ್ಧ ವೊಬಲ್ ಅಸ್ತ್ರವನ್ನು ಪ್ರಯೋಗಿಸಿದ್ದರು. ಅಂದರೆ ಬ್ಯಾಟ್ಸ್ಮನ್ಗಳನ್ನು ಗೊಂದಲಕ್ಕೀಡು ಮಾಡಿ ಔಟ್ ಮಾಡುವ ಹೊಸ ರಣತಂತ್ರ.
ಸಾಮಾನ್ಯವಾಗಿ ವೇಗದ ಬೌಲರ್ ಚೆಂಡನ್ನು ಹೇಗೆ ಹಿಡಿದಿದ್ದಾರೆ ಎಂಬುದನ್ನು ಗುರುತಿಸಿ ಬ್ಯಾಟ್ಸ್ಮನ್ಗಳು ಅದನ್ನು ಎದುರಿಸಲು ಸಿದ್ಧರಾಗಿರುತ್ತಾರೆ. ಆದರೆ ವೊಬಲ್ ಎಸೆತಗಳನ್ನು ನಿಖರವಾಗಿ ಗುರುತಿಸಲು ಸಾಧ್ಯವಿಲ್ಲ. ಇದೇ ಕಾರಣದಿಂದಾಗಿ ಔಟ್ ಸೈಡ್ ಆಫ್ ಸ್ಟಂಪ್ನತ್ತ ಬಂದ ಚೆಂಡನ್ನು ಶುಭ್ಮನ್ ಗಿಲ್ ಆಡದೇ ಬಿಟ್ಟಿದ್ದರು. ಆದರೆ ದಿಢೀರಣೆ ಸ್ವಿಂಗ್ ಪಡೆದ ಬಾಲ್ ವಿಕೆಟ್ ಅನ್ನು ಎಗರಿಸಿತು. ಇದುವೇ ವೊಬಲ್ ಬಾಲ್ ತಂತ್ರ.
ಏನಿದು ಹೊಸ ತಂತ್ರ?
ಸಾಮಾನ್ಯವಾಗಿ ಟೆಸ್ಟ್ ಕ್ರಿಕೆಟ್ನಲ್ಲಿ ವೇಗದ ಬೌಲರ್ಗಳು ಇನ್ ಸ್ವಿಂಗ್ ಹಾಗೂ ಔಟ್ ಸ್ವಿಂಗ್ ಮಾಡಲು ಹೆಚ್ಚಿನ ಒತ್ತು ನೀಡುತ್ತಾರೆ. ಮೊದಲೇ ಹೇಳಿದಂತೆ, ಇಲ್ಲಿ ಚೆಂಡಿನ ಹಿಡಿತ ಹಾಗೂ ಬಾಲ್ನ ಮೇಲ್ಮೈಯನ್ನು ಗುರುತಿಸಿ ಬ್ಯಾಟ್ಸ್ಮನ್ಗಳು ನಿಖರವಾಗಿ ಔಟ್ ಸ್ವಿಂಗ್ ಅಥವಾ ಇನ್ ಸ್ವಿಂಗ್ ಎಸೆತಗಳನ್ನು ಗುರುತಿಸಬಲ್ಲರು. ಆದರೆ ವೊಬಲ್ ತಂತ್ರಗಾರಿಕೆಯಲ್ಲಿ ಇದು ಸಾಧ್ಯವಾಗುವುದಿಲ್ಲ. ಏಕೆಂದರೆ ವೊಬಲ್ನ ಹಾದಿಯನ್ನು ನಿರ್ಧರಿಸುವುದೇ ಚೆಂಡು..!
ಬೌಲರ್ಗಳಿಗೇ ಗೊತ್ತಿರುವುದಿಲ್ಲ..!
ವೊಬಲ್ ಸೀಮ್ನ ಹಾದಿಯನ್ನು ನಿರ್ಧರಿಸುವುದೇ ಚೆಂಡು…ಅಂದರೆ ಅದನ್ನು ಎಸೆದಿರುವ ಬೌಲರ್ಗಳಿಗೆ ಈ ಚೆಂಡು ಇನ್ ಸ್ವಿಂಗ್ ಆಗಲಿದೆಯಾ ಅಥವಾ ಔಟ್ ಸ್ವಿಂಗ್ ಆಗಲಿದೆಯಾ ಎಂಬುದು ಗೊತ್ತಿರುವುದಿಲ್ಲ. ಇಲ್ಲಿ ಚೆಂಡೆಸೆದ ಬೌಲರ್ಗೆ ಚೆಂಡು ಯಾವ ದಿಕ್ಕಿನಲ್ಲಿ ಹೋಗುತ್ತೆ ಎಂಬುದೇ ಗೊತ್ತಿರದ ಎಂದ ಮೇಲೆ, ಬ್ಯಾಟ್ಸ್ಮನ್ಗಳ ಅದರ ಬಗ್ಗೆ ಯಾವುದೇ ಐಡಿಯಾ ಇರುವುದಿಲ್ಲ. ಇದರಿಂದಾಗಿ ಬ್ಯಾಟರ್ಗಳು ಚೆಂಡನ್ನು ಎದುರಿಸುವಾಗ ಗೊಂದಲಕ್ಕೀಡಾಗುತ್ತಾರೆ.
ಒಂದು ವೇಳೆ ಚೆಂಡು ಔಟ್ ಸ್ವಿಂಗ್ ಆಗಲಿದೆ ಎಂದು ನಿರೀಕ್ಷಿಸಿದರೆ ಅದು ಇನ್ ಸ್ವಿಂಗ್ ಆಗಿ ಬರಬಹುದು. ಇದಕ್ಕೆ ತಾಜಾ ಉದಾಹರಣೆ ಆಸ್ಟ್ರೇಲಿಯಾ ವಿರುದ್ಧ ಶುಭ್ಮನ್ ಗಿಲ್ ಹಾಗೂ ಚೇತೇಶ್ವರ ಪೂಜಾರ ಬೌಲ್ಡ್ ಆಗಿರುವುದು. ಇಲ್ಲಿ ಚೆಂಡು ಪಿಚ್ ಆದ ಬಳಿಕ ತನ್ನ ಸಾಗುವ ಹಾದಿಯನ್ನು ನಿರ್ಧರಿಸುತ್ತದೆ. ಹೀಗಾಗಿಯೇ ವೊಬಲ್ ಬಾಲ್ ಎದುರಿಸಲು ಬ್ಯಾಟರ್ಗಳು ತಿಣುಕಾಡುತ್ತಾರೆ.
ವೊಬಲ್ ಬಾಲ್ ಎಂದರೇನು?
ಹೆಸರೇ ಸೂಚಿಸುವಂತೆ ವೊಬಲ್ ಬಾಲ್ ಎಂದರೆ ಅತ್ತಿತ್ತ ಸಾಗುವ ಚೆಂಡು. ಅಂದರೆ ಬೌಲರ್ ಚೆಂಡನ್ನು ರಿಲೀಸ್ ಮಾಡಿದಾಗ ಬಾಲ್ ನೇರವಾಗಿ ಹೋಗಿ ಪಿಚ್ ಆಗುವುದಿಲ್ಲ. ಬದಲಾಗಿ ಗಾಳಿಯಲ್ಲಿ ತುಸು ವಕ್ರ-ವಕ್ರವಾಗಿ ಸಾಗುವ ಚೆಂಡು ಪಿಚ್ ಆದೊಡನೆ ವಿಕೆಟ್ನ ಹೊರ ಭಾಗಕ್ಕೆ ಅಥವಾ ಒಳಭಾಗಕ್ಕೆ ಮುನ್ನುಗ್ಗುತ್ತದೆ. ಇದೇ ಕಾರಣದಿಂದಾಗಿ ಇದನ್ನು ವೊಬಲ್ ಬಾಲ್ ಅಥವಾ ವೊಬಲ್ ಸೀಮ್ ಎಂದು ಕರೆಯಲಾಗುತ್ತದೆ.
ವೊಬಲ್ ಬಾಲ್ ಮಾಡುವುದೇಗೆ?
ಸಾಮಾನ್ಯವಾಗಿ ರೆಡ್ ಬಾಲ್ ಕ್ರಿಕೆಟ್ನಲ್ಲಿ ವೇಗವಾಗಿ ಚೆಂಡೆಸೆಯಲು ಸೀಮ್ (ಚೆಂಡಿನ ಹೊಲಿಗೆ) ಮೇಲೆ ಎರಡು ಬೆರಳುಗಳನ್ನು ನೇರವಾಗಿ ಹಿಡಿದು ಮುಂಗೈ ಬಲ ಪ್ರಯೋಗದೊಂದಿಗೆ ಚೆಂಡನ್ನು ರಿಲೀಸ್ ಮಾಡಲಾಗುತ್ತದೆ. ಆದರೆ ವೊಬಲ್ ಬಾಲ್ ಎಸೆಯುವಾಗ ಚೆಂಡಿನ ಹಿಡಿತದ ಮೇಲೆ ತುಸು ಬದಲಾವಣೆ ಮಾಡಿಕೊಳ್ಳಲಾಗುತ್ತದೆ.

ಇಲ್ಲಿ ಮುಖ್ಯವಾಗಿ ಬಾಲ್ನ ಸ್ಟಿಚ್ನ ಭಾಗದಲ್ಲಿ ಎರಡು ಬೆರಳುಗಳನ್ನು ಸ್ವಲ್ಪ ವಿಭಜಿಸಿ ಅಗಲವಾಗಿಡಲಾಗುತ್ತದೆ. ಇದರಿಂದ ಸೀಮ್ (ಸ್ಟಿಚ್) ಹೆಚ್ಚು ಗೋಚರಿಸುತ್ತದೆ. ಹಾಗೆಯೇ ಚೆಂಡನ್ನು ರಿಲೀಸ್ ಮಾಡುವಾಗ ಮಣಿಕಟ್ಟಿಗೆ ಹೆಚ್ಚಿನ ಬಲ ನೀಡದೇ ಬೆರಳುಗಳಿಂದ ಚೆಂಡನ್ನು ಎಳೆದು ಬಿಡಲಾಗುತ್ತದೆ. ಇದರಿಂದ ಚೆಂಡು ವೇಗವಾಗಿ ಸಾಗುವುದಿಲ್ಲ. ಅತ್ತ ಬ್ಯಾಟರ್ ಚೆಂಡಿನ ಸೀಮ್ ಅನ್ನು ಗುರುತಿಸಿದರೂ ಯಾವ ಕಡೆ ಸಾಗಲಿದೆ ಎಂಬ ಗೊಂದಲದಲ್ಲಿರುತ್ತಾರೆ.
ಇತ್ತ ಸ್ಪೀಡ್ ಇಲ್ಲ, ಅತ್ತ ಸ್ಲೋ ಅಲ್ಲ:
ವೊಬಲ್ ತಂತ್ರಗಾರಿಕೆಯಲ್ಲಿ ಚೆಂಡು ವೇಗದಲ್ಲಿ ಸಾಗಿದರೂ ಅದು ಅತ್ಯಂತ ವೇಗದಿಂದ ಕೂಡಿರುವುದಿಲ್ಲ ಎಂಬುದು ವಿಶೇಷ. ಇಲ್ಲಿ ಬೆರಳುಗಳಿಂದ ಚೆಂಡನ್ನು ಎಳೆದು ಬಿಡುವುದರಿಂದ ಬಾಲ್ ಅತ್ತಿತ್ತ ತಿರುಗುತ್ತಾ ಸಾಗುತ್ತದೆ. ಆದರೆ ಇದು ಸ್ಲೋ ಬಾಲ್ ಕೂಡ ಆಗಿರುವುದಿಲ್ಲ ಎಂಬುದು ಉಲ್ಲೇಖಾರ್ಹ. ಅಂದರೆ ಸ್ಪೀಡ್ ಹಾಗೂ ಸ್ಲೋ ನಡುವಿನ ವೇಗದಲ್ಲಿ ವೊಬಲ್ ತಂತ್ರಗಾರಿಕೆ ಅಡಗಿದೆ.
ಮೊದಲ ಬಾರಿಗೆ ವೊಬಲ್ ಪ್ರಯೋಗಿಸಿದ್ದು ಯಾರು?
2010 ರಲ್ಲಿ ಪಾಕಿಸ್ತಾನ್ ತಂಡದ ಮಾಜಿ ವೇಗಿ ಮೊಹಮ್ಮದ್ ಆಸಿಫ್ ಟೆಸ್ಟ್ ಕ್ರಿಕೆಟ್ನಲ್ಲಿ ಇಂತಹದೊಂದು ತಂತ್ರ ಬಳಸಿದ್ದರು. ಅಂದು ಅತ್ಯುತ್ತಮವಾಗಿ ಬೌಲಿಂಗ್ ಮಾಡಿದ್ದ ಆಸಿಫ್ ಅವರ ಈ ಎಸೆತಗಳನ್ನು ಮ್ಯಾಜಿಕ್ ಡೆಲಿವರಿ ಎಂದು ವರ್ಣಿಸಲಾಗಿತ್ತು. 2010 ರಲ್ಲಿ ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ಸಿಲುಕಿಕೊಂಡ ಆಸೀಫ್ ಕ್ರಿಕೆಟ್ನಿಂದ ನಿಷೇಧಕ್ಕೊಳಗಾಗಿದ್ದರು. ಇದರಿಂದ ಈ ಮ್ಯಾಜಿಕ್ ಡೆಲಿವರಿಯ ಚರ್ಚೆಗಳು ಕೂಡ ಅಲ್ಲಿಗೆ ಅಂತ್ಯಗೊಂಡಿತ್ತು.
ಆದರೆ ಅಂದು ಆಸಿಫ್ ಅವರ ಈ ವಿಶೇಷ ಎಸೆತಗಳನ್ನು ಗಮನಿಸಿದ್ದ ಇಂಗ್ಲೆಂಡ್ನ ಜೇಮ್ಸ್ ಅ್ಯಂಡರ್ಸನ್ ಆ ಬಳಿಕ ಅದೇ ಮಾದರಿಯಲ್ಲಿ ಚೆಂಡೆಸೆಯಲಾರಂಭಿಸಿದರು. ಅಲ್ಲದೆ ಈ ಪ್ರಯೋಗದಲ್ಲಿ ಯಶಸ್ವಿಯಾದರು. ಈ ಯಶಸ್ಸಿನೊಂದಿಗೆ 40ನೇ ವಯಸ್ಸಿನಲ್ಲೂ ಅ್ಯಂಡರ್ಸನ್ ಕ್ರಿಕೆಟ್ ಅಂಗಳದಲ್ಲಿ ಮುಂದುವರೆದಿದ್ದಾರೆ.
ಟೀಮ್ ಇಂಡಿಯಾ ಬೌಲರ್ಗಳಿಗೆ ಈ ತಂತ್ರ ಗೊತ್ತಿಲ್ವಾ?
ವೊಬಲ್ ಎಸೆತಗಳನ್ನು ಎಸೆಯುವುದು ಒಂದು ಕಲೆ. ಮುಖ್ಯವಾಗಿ ಚೆಂಡನ್ನು ರಿಲೀಸ್ ಮಾಡುವಾಗ ಬೆರಳಿಂದ ಎಳೆದು ಬಿಡುವುದು ಅಂದುಕೊಂಡಷ್ಟು ಸುಲಭವಲ್ಲ. ಇದಾಗ್ಯೂ ಈ ಪ್ರಯೋಗದಲ್ಲಿ ಮೊಹಮ್ಮದ್ ಸಿರಾಜ್ ಯಶಸ್ವಿಯಾಗುತ್ತಿದ್ದಾರೆ.
ಕಳೆದ ಒಂದು ವರ್ಷದಲ್ಲಿ ಸಿರಾಜ್ ಟೀಮ್ ಇಂಡಿಯಾದ ಅತ್ಯುತ್ತಮ ಬೌಲರ್ ಆಗಿ ಹೊರಹೊಮ್ಮಿದ್ದಾರೆ. ಈ ಯಶಸ್ಸಿನ ಹಿಂದೆ ವೊಬಲ್ ತಂತ್ರಗಾರಿಕೆ ಕೂಡ ಅಡಗಿದೆ. ಇದೇ ಕಾರಣದಿಂದಾಗಿ ಸಿರಾಜ್ ಆರಂಭಿಕ ವಿಕೆಟ್ಗಳನ್ನು ಉರುಳಿಸುವಲ್ಲಿ ಯಶಸ್ವಿಯಾಗುತ್ತಿದ್ದಾರೆ. ಅಲ್ಲದೆ ಈ ಬಾರಿಯ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನಲ್ಲೂ ಸಿರಾಜ್ ವೊಬಲ್ ಎಸೆತಗಳ ಮೂಲಕ ಗಮನ ಸೆಳೆದಿದ್ದಾರೆ.
ಆದರೆ ಆಸ್ಟ್ರೇಲಿಯಾ ಬೌಲರ್ಗಳು ಸಂಘಟಿತರಾಗಿ ವೊಬಲ್ ಎಸೆತಗಳನ್ನು ಎಸೆಯುವ ಕಲೆಯನ್ನು ಸಿದ್ಧಿಸಿಕೊಂಡಿದ್ದಾರೆ ಎನ್ನಬಹುದು. ಅದರ ಪ್ರಯೋಗ ಇದೀಗ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನಲ್ಲಿ ಟೀಮ್ ಇಂಡಿಯಾ ಮೇಲೆ ನಡೆಯುತ್ತಿದೆ. ಅಲ್ಲದೆ ಇದರ ಮುಂದುವರೆದ ಪ್ರಯೋಗ ಈ ಬಾರಿಯ ಆ್ಯಶಸ್ ಸರಣಿಯಲ್ಲೂ ನಿರೀಕ್ಷಿಸಬಹುದು.
Published On - 6:23 pm, Sat, 10 June 23
