ಟೀಮ್ ಇಂಡಿಯಾಗೆ ಮಾಡು ಇಲ್ಲವೇ ಮಡಿ ಸ್ಥಿತಿ: ಇಲ್ಲಿದೆ WTC ಫೈನಲ್ ಲೆಕ್ಕಾಚಾರ

ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) 2025–2027ರ ಫೈನಲ್ ರೇಸ್ ಈಗ ಅತ್ಯಂತ ರೋಚಕ ಘಟ್ಟ ತಲುಪಿದ್ದು, ಟೀಮ್ ಇಂಡಿಯಾ ಪಾಲಿಗೆ ಮುಂದಿನ ಪ್ರತಿಯೊಂದು ಪಂದ್ಯವೂ ಮಾಡು ಇಲ್ಲವೇ ಮಡಿ ಹೋರಾಟವಾಗಿ ಮಾರ್ಪಟ್ಟಿದೆ. ವೆಲ್ಲಿಂಗ್ಟನ್‌ನಲ್ಲಿ ನ್ಯೂಝಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಡ್ರಾ ಆದ ಬೆನ್ನಲ್ಲೇ ಅಂಕಪಟ್ಟಿಯಲ್ಲಿ 4ನೇ ಸ್ಥಾನಕ್ಕೆ ಕುಸಿದಿರುವ ಭಾರತ, ಸತತ ಮೂರನೇ ಬಾರಿಗೆ ಫೈನಲ್ ಟಿಕೆಟ್ ಗಿಟ್ಟಿಸಿಕೊಳ್ಳಲು ತನ್ನ ಉಳಿದ 6 ಟೆಸ್ಟ್ ಪಂದ್ಯಗಳಲ್ಲಿ ಕನಿಷ್ಠ 5 ಗೆಲುವುಗಳನ್ನು ದಾಖಲಿಸಲೇಬೇಕಾದ ಒತ್ತಡಕ್ಕೆ ಸಿಲುಕಿದೆ.

ಟೀಮ್ ಇಂಡಿಯಾಗೆ ಮಾಡು ಇಲ್ಲವೇ ಮಡಿ ಸ್ಥಿತಿ: ಇಲ್ಲಿದೆ WTC ಫೈನಲ್ ಲೆಕ್ಕಾಚಾರ
Team India
Image Credit source: BCCI

Updated on: Nov 26, 2026 | 2:24 PM

ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) 2025–2027ರ ಫೈನಲ್ ತಲುಪಲು ಟೀಮ್ ಇಂಡಿಯಾ ತನ್ನ ಉಳಿದ 6 ಟೆಸ್ಟ್ ಪಂದ್ಯಗಳಲ್ಲಿ ಕನಿಷ್ಠ 5 ಪಂದ್ಯಗಳನ್ನು ಗೆಲ್ಲಲೇಬೇಕಾದ ಕಠಿಣ ಸವಾಲಿನಲ್ಲಿದೆ. ವೆಲ್ಲಿಂಗ್ಟನ್‌ನಲ್ಲಿ ನ್ಯೂಝಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಡ್ರಾ ಆದ ನಂತರ, ಭಾರತ ತಂಡವು ಪ್ರಸ್ತುತ PCT 50.00% ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. 2027ರ ಜೂನ್‌ನಲ್ಲಿ ಲಂಡನ್‌ನ ‘ದಿ ಓವಲ್’ ಮೈದಾನದಲ್ಲಿ ನಡೆಯಲಿರುವ ಫೈನಲ್ ಪಂದ್ಯಕ್ಕೆ ಅರ್ಹತೆ ಪಡೆಯಲು ಶುಭ್​ಮನ್ ಗಿಲ್ ನಾಯಕತ್ವದ ಭಾರತ ತಂಡಕ್ಕೆ ಇನ್ನು ಮುಂದೆ ಯಾವುದೇ ತಪ್ಪುಗಳಿಗೆ ಅವಕಾಶವಿಲ್ಲ. ಅಂದರೆ ಮುಂದಿನ 6 ಪಂದ್ಯಗಳೂ ಕೂಡ ಟೀಮ್ ಇಂಡಿಯಾ ಪಾಲಿಗೆ ನಿರ್ಣಾಯಕ.

ಟೀಮ್ ಇಂಡಿಯಾದ ಫೈನಲ್ ಹಾದಿ:

ಪ್ರಸ್ತುತ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಭಾರತ ಒಟ್ಟು 18 ಟೆಸ್ಟ್ ಪಂದ್ಯಗಳನ್ನು ಆಡಬೇಕಿದ್ದು, ಈಗಾಗಲೇ 12 ಪಂದ್ಯಗಳನ್ನು ಪೂರ್ಣಗೊಳಿಸಿದೆ. ಬಾಕಿ ಉಳಿದಿರುವ ಎಲ್ಲಾ 6 ಪಂದ್ಯಗಳು ಅಗ್ರ ಮೂರರಲ್ಲಿರುವ ನ್ಯೂಝಿಲೆಂಡ್ ಮತ್ತು ಆಸ್ಟ್ರೇಲಿಯಾ ವಿರುದ್ಧವೇ ಇರುವುದರಿಂದ, ಭಾರತದ ಪ್ರತಿ ಗೆಲುವು ಎದುರಾಳಿಗಳ ಅಂಕಗಳನ್ನು ನೇರವಾಗಿ ಕಡಿತಗೊಳಿಸಲಿದೆ. ಈ ಲೆಕ್ಕಾಚಾರದ ಪ್ರಕಾರ ಟೀಮ್ ಇಂಡಿಯಾ ಫೈನಲ್‌ಗೇರುವ ಹಾದಿ ಹೇಗಿದೆ ಎಂದು ನೋಡುವುದಾದರೆ…

Loading...

6 ಗೆಲುವು – 0 ಸೋಲು:

ಭಾರತ ತಂಡವು ಮುಂದಿನ 6 ಟೆಸ್ಟ್ ಪಂದ್ಯಗಳನ್ನೂ ಗೆದ್ದರೆ, ಅಂದರೆ ಕ್ರೈಸ್ಟ್‌ಚರ್ಚ್‌ನಲ್ಲಿ ನ್ಯೂಝಿಲೆಂಡ್ ವಿರುದ್ಧದ ಒಂದು ಪಂದ್ಯ ಹಾಗೂ ತವರಿನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಸರಣಿಯನ್ನು 5-0 ಅಂತರದಿಂದ ಕ್ಲೀನ್ ಸ್ವೀಪ್ ಮಾಡಿದರೆ, ಇತರ ತಂಡಗಳ ಫಲಿತಾಂಶವನ್ನು ಅವಲಂಬಿಸದೆ ನೇರವಾಗಿ ಫೈನಲ್‌ಗೆ ಪ್ರವೇಶಿಸಲಿದೆ. ಈ ಎಲ್ಲಾ ಪಂದ್ಯಗಳನ್ನು ಗೆಲ್ಲುವುದರಿಂದ ಭಾರತದ ಶೇಕಡಾವಾರು ಅಂಕಗಳು 66.67% ಕ್ಕೆ ಏರಲಿದ್ದು, ಆಸ್ಟ್ರೇಲಿಯಾ ತಂಡವು ಭಾರತವನ್ನು ಹಿಂದಿಕ್ಕಲು ಸಾಧ್ಯವಾಗುವುದಿಲ್ಲ.

5 ಗೆಲುವು – 1 ಡ್ರಾ:

ಟೀಮ್ ಇಂಡಿಯಾ ತನ್ನ ಉಳಿದ 6 ಟೆಸ್ಟ್ ಪಂದ್ಯಗಳಲ್ಲಿ 5 ಗೆಲುವು ಮತ್ತು 1 ಡ್ರಾ ಸಾಧಿಸಿದರೆ, ಒಟ್ಟು 136 ಅಂಕಗಳೊಂದಿಗೆ (62.96% ಶೇಕಡಾವಾರು) ಅಂಕಪಟ್ಟಿಯಲ್ಲಿ ಉತ್ತಮ ಸ್ಥಾನಕ್ಕೇರಲಿದೆ. ಇದು ಭಾರತದ ಪಾಲಿಗೆ ಅತ್ಯಂತ ವಾಸ್ತವಿಕ ಗುರಿಯಾಗಿದ್ದರೂ, ಫೈನಲ್ ಸ್ಥಾನವನ್ನು ಖಚಿತಪಡಿಸಿಕೊಳ್ಳಲು ಇತರ ತಂಡಗಳ ಫಲಿತಾಂಶವನ್ನೂ ಅವಲಂಬಿಸಬೇಕಾಗುತ್ತದೆ. ವಿಶೇಷವಾಗಿ ಡಿಸೆಂಬರ್‌ನಲ್ಲಿ ನಡೆಯಲಿರುವ ಆಸ್ಟ್ರೇಲಿಯಾ ಮತ್ತು ನ್ಯೂಝಿಲೆಂಡ್ ನಡುವಿನ 4 ಟೆಸ್ಟ್‌ಗಳ ಸರಣಿಯಲ್ಲಿ ಆಸ್ಟ್ರೇಲಿಯಾ ತಂಡವು ನ್ಯೂಝಿಲೆಂಡ್ ಅನ್ನು 3-0 ಅಥವಾ 3-1 ಅಂತರದಿಂದ ಮಣಿಸಿದರೆ ಮಾತ್ರ ನ್ಯೂಝಿಲೆಂಡ್‌ನ ಶೇಕಡಾವಾರು ಅಂಕಗಳು 62.96% ಕ್ಕಿಂತ ಕೆಳಗಿಳಿದು ಭಾರತಕ್ಕೆ ಫೈನಲ್ ಬಾಗಿಲು ತೆರೆಯಲಿದೆ.

5 ಗೆಲುವು – 1 ಸೋಲು:

ಟೀಮ್ ಇಂಡಿಯಾ ತನ್ನ ಉಳಿದ 6 ಟೆಸ್ಟ್ ಪಂದ್ಯಗಳಲ್ಲಿ 5 ಗೆಲುವು ಮತ್ತು 1 ಸೋಲು ಕಂಡರೆ, ಒಟ್ಟು 132 ಅಂಕಗಳೊಂದಿಗೆ (61.11% ಶೇಕಡಾವಾರು) ಫೈನಲ್ ರೇಸ್‌ನಲ್ಲಿ ಉಳಿಯಲಿದೆಯಾದರೂ ಹಾದಿ ಅತ್ಯಂತ ಕಠಿಣವಾಗಲಿದೆ. ಈ ಹಂತದಲ್ಲಿ ಭಾರತಕ್ಕೆ ಕೇವಲ ತನ್ನ ಗೆಲುವಷ್ಟೇ ಸಾಲದು, ಬದಲಿಗೆ ಅದೃಷ್ಟ ಮತ್ತು ಇತರ ತಂಡಗಳ ಫಲಿತಾಂಶಗಳ ಬೆಂಬಲವೂ ಅತ್ಯಗತ್ಯವಾಗುತ್ತದೆ. ಮುಖ್ಯವಾಗಿ ನ್ಯೂಝಿಲೆಂಡ್ ತಂಡವು ಆಸ್ಟ್ರೇಲಿಯಾ ವಿರುದ್ಧ ಹೀನಾಯವಾಗಿ ಸೋಲುವುದರ ಜೊತೆಗೆ, ಶ್ರೀಲಂಕಾ ಅಥವಾ ಪಾಕಿಸ್ತಾನ್ ವಿರುದ್ಧದ ಸರಣಿಗಳಲ್ಲೂ ಅಂಕಗಳನ್ನು ಕಳೆದುಕೊಳ್ಳಬೇಕಾಗುತ್ತದೆ. ಅಲ್ಲದೆ ಆಸ್ಟ್ರೇಲಿಯಾ ಕೂಡ ತನ್ನ ಉಳಿದ ಪಂದ್ಯಗಳಲ್ಲಿ ಮುಗ್ಗರಿಸಿದರೆ ಮಾತ್ರ ಭಾರತಕ್ಕೆ ಫೈನಲ್ ಬಾಗಿಲು ತೆರೆಯುವ ಕ್ಷೀಣ ಅವಕಾಶವಿರುತ್ತದೆ.

4 ಗೆಲುವು – 2 ಡ್ರಾ:

ಟೀಮ್ ಇಂಡಿಯಾ ತನ್ನ ಉಳಿದ 6 ಟೆಸ್ಟ್ ಪಂದ್ಯಗಳಲ್ಲಿ 4 ಗೆಲುವು ಮತ್ತು 2 ಡ್ರಾ ಸಾಧಿಸಿದರೆ (ಅಥವಾ ಅದಕ್ಕಿಂತ ಕಡಿಮೆ ಫಲಿತಾಂಶ ಪಡೆದರೆ), ಒಟ್ಟು 128 ಅಂಕಗಳೊಂದಿಗೆ (59.26% ಶೇಕಡಾವಾರು) ಬಹುತೇಕ ಫೈನಲ್ ರೇಸ್‌ನಿಂದ ಹೊರಬಿದ್ದಂತೆಯೇ ಸರಿ. ಇತಿಹಾಸವನ್ನು ಗಮನಿಸಿದರೆ ಕಳೆದ ನಾಲ್ಕು ಆವೃತ್ತಿಗಳಲ್ಲಿ ಮೂರು ಬಾರಿ ಫೈನಲ್ ತಲುಪಿದ ತಂಡಗಳು 65% ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿದ್ದವು. ಹೀಗಾಗಿ, 60% ಕ್ಕಿಂತ ಕಡಿಮೆ ಅಂಕಗಳೊಂದಿಗೆ ಭಾರತ ಫೈನಲ್ ಪ್ರವೇಶಿಸುವುದು ಅಸಾಧ್ಯ ಎಂದೇ ಹೇಳಬಹುದು.

ಭಾರತದ ಮುಂದಿನ ಟೆಸ್ಟ್ ಪಂದ್ಯಗಳ ವೇಳಾಪಟ್ಟಿ:

ಕ್ರಮ ಸಂಖ್ಯೆ ಪಂದ್ಯ ಎದುರಾಳಿ ದಿನಾಂಕ ಸ್ಥಳ ಸಮಯ (IST)
1 2ನೇ ಟೆಸ್ಟ್ ನ್ಯೂಝಿಲೆಂಡ್ ನವೆಂಬರ್ 27 – ಡಿಸೆಂಬರ್ 1, 2026 ಹ್ಯಾಗ್ಲಿ ಓವಲ್, ಕ್ರೈಸ್ಟ್‌ಚರ್ಚ್ ಬೆಳಿಗ್ಗೆ 3:30
2 1ನೇ ಟೆಸ್ಟ್ ಆಸ್ಟ್ರೇಲಿಯಾ ಜನವರಿ 21 – ಜನವರಿ 25, 2027 ವಿಸಿಎ ಕ್ರೀಡಾಂಗಣ, ನಾಗ್ಪುರ ಬೆಳಿಗ್ಗೆ 9:30
3 2ನೇ ಟೆಸ್ಟ್ ಆಸ್ಟ್ರೇಲಿಯಾ ಜನವರಿ 29 – ಫೆಬ್ರವರಿ 2, 2027 ಎಂ.ಎ. ಚಿದಂಬರಂ ಕ್ರೀಡಾಂಗಣ, ಚೆನ್ನೈ ಬೆಳಿಗ್ಗೆ 9:30
4 3ನೇ ಟೆಸ್ಟ್ ಆಸ್ಟ್ರೇಲಿಯಾ ಫೆಬ್ರವರಿ 11 – ಫೆಬ್ರವರಿ 15, 2027 ಎಸಿಎ ಕ್ರೀಡಾಂಗಣ, ಗುವಾಹಟಿ ಬೆಳಿಗ್ಗೆ 9:30
5 4ನೇ ಟೆಸ್ಟ್ ಆಸ್ಟ್ರೇಲಿಯಾ ಫೆಬ್ರವರಿ 19 – ಫೆಬ್ರವರಿ 23, 2027 ಜೆಎಸ್‌ಸಿಎ ಕ್ರೀಡಾಂಗಣ, ರಾಂಚಿ ಬೆಳಿಗ್ಗೆ 9:30
6 5ನೇ ಟೆಸ್ಟ್ ಆಸ್ಟ್ರೇಲಿಯಾ ಫೆಬ್ರವರಿ 27 – ಮಾರ್ಚ್ 3, 2027 ನರೇಂದ್ರ ಮೋದಿ ಕ್ರೀಡಾಂಗಣ, ಅಹಮದಾಬಾದ್ ಬೆಳಿಗ್ಗೆ 9:30

ಇದನ್ನೂ ಓದಿ: IPL 2027: ಗರಿಷ್ಠ ಮೂಲ ಬೆಲೆ ಘೋಷಿಸಿದ ಇಬ್ಬರು ಭಾರತೀಯರು!

ಒಟ್ಟಾರೆಯಾಗಿ, ಸತತ ಮೂರನೇ ಬಾರಿಗೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೇರುವ ಟೀಮ್ ಇಂಡಿಯಾದ ಕನಸು ಈಗ ಸಂಪೂರ್ಣವಾಗಿ ಮುಂದಿನ 6 ಟೆಸ್ಟ್ ಪಂದ್ಯಗಳ ಫಲಿತಾಂಶದ ಮೇಲೆ ನಿಂತಿದೆ. ನ್ಯೂಝಿಲೆಂಡ್ ಹಾಗೂ ಆಸ್ಟ್ರೇಲಿಯಾದಂತಹ ಬಲಿಷ್ಠ ತಂಡಗಳ ವಿರುದ್ಧ ಶುಭ್​ಮನ್ ಗಿಲ್ ಪಡೆ ಯಾವ ರೀತಿ ಪ್ರದರ್ಶನ ನೀಡಲಿದೆ ಎಂಬುದರ ಮೇಲೆ 2027ರ ಜೂನ್‌ನಲ್ಲಿ ಲಂಡನ್‌ನ ‘ದಿ ಓವಲ್’ ಮೈದಾನದಲ್ಲಿ ನಡೆಯಲಿರುವ ಮಹಾ ಕದನದ ಟಿಕೆಟ್ ನಿರ್ಧಾರವಾಗಲಿದೆ.

ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಚೀಫ್ ಸಬ್ ಎಡಿಟರ್. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
Loading...
Unable to load recommendations.
Follow Us