3 ಸುಲಭ ಕ್ಯಾಚ್ ಕೈಚೆಲ್ಲಿದ ಜೈಸ್ವಾಲ್: ಮೈದಾನದಲ್ಲೇ ಆಕ್ರೋಶ ಹೊರಹಾಕಿದ ರೋಹಿತ್ ಶರ್ಮಾ
India vs Australia: ಈ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ಸ್ಟೀವ್ ಸ್ಮಿತ್ (140) ಭರ್ಜರಿ ಶತಕ ಸಿಡಿಸಿದ್ದರು. ಈ ಮೂಲಕ ಆಸ್ಟ್ರೇಲಿಯಾ ತಂಡವು ಮೊದಲ ಇನಿಂಗ್ಸ್ನಲ್ಲಿ 474 ರನ್ ಪೇರಿಸಿತು. ಇದಕ್ಕುತ್ತರವಾಗಿ ಬ್ಯಾಟ್ ಬೀಸಿದ ಟೀಮ್ ಇಂಡಿಯಾ ಪರ ನಿತೀಶ್ ಕುಮಾರ್ ರೆಡ್ಡಿ (114) ಆಕರ್ಷಕ ಶತಕ ಸಿಡಿಸಿ ಮಿಂಚಿದ್ದಾರೆ. ಈ ಸೆಂಚುರಿ ನೆರವಿನಿಂದ ಭಾರತ ತಂಡವು ಮೊದಲ ಇನಿಂಗ್ಸ್ನಲ್ಲಿ 369 ರನ್ಗಳಿಸಿ ಆಲೌಟ್ ಆಗಿದೆ.
ಮೆಲ್ಬೋರ್ನ್ನಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ 4ನೇ ಟೆಸ್ಟ್ ಪಂದ್ಯದ 2ನೇ ಇನಿಂಗ್ಸ್ನಲ್ಲಿ ಟೀಮ್ ಇಂಡಿಯಾ ಆಟಗಾರ ಯಶಸ್ವಿ ಜೈಸ್ವಾಲ್ 3 ಕ್ಯಾಚ್ಗಳನ್ನು ಕೈಚೆಲ್ಲಿದ್ದಾರೆ. ಈ ಪಂದ್ಯದ ದ್ವಿತೀಯ ಇನಿಂಗ್ಸ್ನ ಆರಂಭದಲ್ಲಿ ಉಸ್ಮಾನ್ ಖ್ವಾಜಾ ಅವರು ನೀಡಿದ ಸುಲಭ ಕ್ಯಾಚ್ ಅನ್ನು ಜೈಸ್ವಾಲ್ ಬಿಟ್ಟಿದ್ದರು.
ಇದಾದ ಬಳಿಕ ಆಕಾಶ್ ದೀಪ್ ಎಸೆತದಲ್ಲಿ ಮಾರ್ನಸ್ ಲಾಬುಶೇನ್ ಸ್ಲಿಪ್ನಲ್ಲಿ ನೀಡಿದ ಸುಲಭ ಕ್ಯಾಚ್ ಅನ್ನು ಕೈಚೆಲ್ಲಿದರು. ಇದರಿಂದ ಕುಪಿತಗೊಂಡ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಮೈದಾನದಲ್ಲೇ ಆಕ್ರೋಶ ಹೊರಹಾಕಿದ್ದರು.
ಅಲ್ಲದೆ ಯಶಸ್ವಿ ಜೈಸ್ವಾಲ್ ಅವರನ್ನು ಸಿಲ್ಲಿ ಪಾಯಿಂಟ್ನಲ್ಲಿ ಫೀಲ್ಡಿಂಗ್ ನಿಲ್ಲಿಸಿದರು. ಜಡೇಜಾ ಎಸೆತದಲ್ಲಿ ಸಿಪ್ಲಿ ಪಾಯಿಂಟ್ನಲ್ಲಿದ್ದ ಜೈಸ್ವಾಲ್ಗೆ ಕಮಿನ್ಸ್ ಸುಲಭ ಕ್ಯಾಚ್ ನೀಡಿದರು. ಆದರೆ ಇದನ್ನು ಹಿಡಿಯುವಲ್ಲಿಯೂ ಯಶಸ್ವಿ ಜೈಸ್ವಾಲ್ ವಿಫಲರಾಗಿದ್ದಾರೆ.
ಈ ಮೂಲಕ ಕ್ಯಾಚ್ಗಳು ಟೀಮ್ ಇಂಡಿಯಾ ಪಾಲಿಗೆ ದುಬಾರಿಯಾಗಿ ಪರಿಣಮಿಸಿತು. ಅದರಲ್ಲೂ 46 ರನ್ಗಳಿಸಿದ್ದ ವೇಳೆ ಸಿಕ್ಕ ಜೀವದಾನವನ್ನು ಬಳಸಿಕೊಂಡ ಮಾರ್ನಸ್ ಲಾಬುಶೇನ್ ಅರ್ಧಶತಕ ಪೂರೈಸಿದರು. ಅಲ್ಲದೆ 4ನೇ ದಿನದಾಟದ ಟೀ ಬ್ರೇಕ್ ವೇಳೆ ಪ್ಯಾಟ್ ಕಮಿನ್ಸ್ (21) ಜೊತೆ 65 ರನ್ಗಳೊಂದಿಗೆ ಅಜೇಯರಾಗಿ ಉಳಿದಿದ್ದಾರೆ.
ಮೊದಲ ಇನಿಂಗ್ಸ್ನಲ್ಲಿ 474 ರನ್ ಕಲೆಹಾಕಿದ್ದ ಆಸ್ಟ್ರೇಲಿಯಾ ತಂಡವು ದ್ವಿತೀಯ ಇನಿಂಗ್ಸ್ನಲ್ಲಿ 6 ವಿಕೆಟ್ ಕಳೆದುಕೊಂಡು 135 ರನ್ ಬಾರಿಸಿದೆ. ಈ ಮೂಲಕ ಮೊದಲ ಇನಿಂಗ್ಸ್ ಮುನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ನಲ್ಲಿ ಒಟ್ಟು 240 ರನ್ಗಳ ಲೀಡ್ನೊಂದಿಗೆ ಬ್ಯಾಟಿಂಗ್ ಮುಂದುವರೆಸಿದ್ದಾರೆ.