ಜೈಹೋ ಜೈಸ್ವಾಲ್… ಗಾಳಿಯಲ್ಲಿ ಹಾರಿ ಒಂದೇ ಕೈಯಲ್ಲಿ ಅತ್ಯದ್ಭುತ ಕ್ಯಾಚ್!

ಬ್ಯಾಟಿಂಗ್‌ನಲ್ಲಿ ಸದಾ ಅಬ್ಬರಿಸುವ ಟೀಮ್ ಇಂಡಿಯಾದ ಯುವ ತಾರೆ ಯಶಸ್ವಿ ಜೈಸ್ವಾಲ್, ಇದೀಗ ತಮ್ಮ ಮಿಂಚಿನ ಫೀಲ್ಡಿಂಗ್‌ನಿಂದಲೂ ಮೋಡಿ ಮಾಡಿದ್ದಾರೆ. ನ್ಯೂಝಿಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ಮೂರನೇ ದಿನದಂದು ಗಾಳಿಯಲ್ಲಿ ಜಿಗಿದು ಒಂದೇ ಕೈಯಲ್ಲಿ ಅತ್ಯದ್ಭುತ ಕ್ಯಾಚ್ ಹಿಡಿಯುವ ಮೂಲಕ ಅರ್ಧಶತಕ ಗಳಿಸಿ ಅಪಾಯಕಾರಿಯಾಗುತ್ತಿದ್ದ ಡೆವೊನ್ ಕಾನ್ವೇಗೆ ಜೈಸ್ವಾಲ್ ಪೆವಿಲಿಯನ್ ಹಾದಿ ತೋರಿಸಿದ್ದಾರೆ.

ಜೈಹೋ ಜೈಸ್ವಾಲ್... ಗಾಳಿಯಲ್ಲಿ ಹಾರಿ ಒಂದೇ ಕೈಯಲ್ಲಿ ಅತ್ಯದ್ಭುತ ಕ್ಯಾಚ್!
Yashasvi Jaiswal
Image Credit source: BCCI

Updated on: Nov 29, 2026 | 12:43 PM

ಕ್ರೈಸ್ಟ್‌ಚರ್ಚ್‌ನ ಹ್ಯಾಗ್ಲಿ ಓವಲ್ ಮೈದಾನದಲ್ಲಿ ನಡೆಯುತ್ತಿರುವ ಭಾರತ ಮತ್ತು ನ್ಯೂಝಿಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯದ ಮೂರನೇ ದಿನದಂದು ಯುವ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಅದ್ಭುತ ಫೀಲ್ಡಿಂಗ್ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ವಾಷಿಂಗ್ಟನ್ ಸುಂದರ್ ಬೌಲಿಂಗ್‌ನಲ್ಲಿ ನ್ಯೂಝಿಲೆಂಡ್ ಬ್ಯಾಟರ್ ಡೆವೊನ್ ಕಾನ್ವೇ ಅವರ ಕ್ಯಾಚ್ ಅನ್ನು ಜೈಸ್ವಾಲ್ ಗಾಳಿಯಲ್ಲಿ ಹಾರಿ ಒಂದೇ ಕೈಯಲ್ಲಿ ಹಿಡಿಯುವ ಮೂಲಕ ಮೈದಾನದಲ್ಲಿ ಸಂಚಲನ ಮೂಡಿಸಿದರು.

ಅತ್ಯದ್ಭುತ ಕ್ಯಾಚ್:

ನ್ಯೂಝಿಲೆಂಡ್‌ನ ಎರಡನೇ ಇನ್ನಿಂಗ್ಸ್‌ನ 33ನೇ ಓವರ್‌ನ ಮೊದಲ ಎಸೆತದಲ್ಲಿ ಈ ಘಟನೆ ನಡೆಯಿತು. ಅರ್ಧಶತಕ ಬಾರಿಸಿ ಕ್ರೀಸ್‌ನಲ್ಲಿ ಭದ್ರವಾಗಿ ನೆಲೆಯೂರಿದ್ದ ಡೆವೊನ್ ಕಾನ್ವೇ (51 ರನ್, 97 ಎಸೆತ), ವಾಷಿಂಗ್ಟನ್ ಸುಂದರ್ ಅವರ ಆಫ್-ಸ್ಟಂಪ್ ಹೊರಗಿನ ಎಸೆತವನ್ನು ಬಲವಾಗಿ ಕಟ್ ಮಾಡಲು ಯತ್ನಿಸಿದರು. ಆದರೆ ಚೆಂಡು ಬ್ಯಾಟ್‌ನ ಅಂಚಿಗೆ ತಾಗಿ ಬ್ಯಾಕ್‌ವರ್ಡ್ ಪಾಯಿಂಟ್ ಮತ್ತು ಶಾರ್ಟ್ ಥರ್ಡ್ ಮ್ಯಾನ್ ದಿಕ್ಕಿನಲ್ಲಿ ಗಾಳಿಯಲ್ಲಿ ಚಿಮ್ಮಿತು. ತಕ್ಷಣವೇ ಹಿಂದಕ್ಕೆ ಓಡಿದ ಯಶಸ್ವಿ ಜೈಸ್ವಾಲ್, ತಮ್ಮ ಎಡಭಾಗಕ್ಕೆ ಪೂರ್ಣವಾಗಿ ಜಿಗಿದು ಒಂದೇ ಕೈಯಲ್ಲಿ ಚೆಂಡನ್ನು ಹಿಡಿದರು. ಈ ಅಸಾಧಾರಣ ಕ್ಯಾಚ್ ಕಂಡು ಬೌಲರ್ ವಾಷಿಂಗ್ಟನ್ ಸುಂದರ್ ಹಾಗೂ ಸಹ ಆಟಗಾರರು ಅಚ್ಚರಿ ವ್ಯಕ್ತಪಡಿಸಿದರು.

Loading...

ಪಂದ್ಯದ ಮೇಲಾದ ಪರಿಣಾಮ:

ಜೈಸ್ವಾಲ್ ಅವರ ಈ ಮಿಂಚಿನ ಫೀಲ್ಡಿಂಗ್‌ನಿಂದಾಗಿ ನ್ಯೂಝಿಲೆಂಡ್‌ನ ಅಪಾಯಕಾರಿ ಜೊತೆಯಾಟಕ್ಕೆ ಬ್ರೇಕ್ ಬಿದ್ದಿತು ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ ವಾಷಿಂಗ್ಟನ್ ಸುಂದರ್ ತಮ್ಮ ಮೊದಲ ವಿಕೆಟ್ ಪಡೆದರು. ಆದಾಗ್ಯೂ, ಮೂರನೇ ದಿನದಾಟದ ಅಂತ್ಯಕ್ಕೆ ನ್ಯೂಝಿಲೆಂಡ್ 3 ವಿಕೆಟ್ ನಷ್ಟಕ್ಕೆ 133 ರನ್ ಗಳಿಸಿದ್ದು, ಒಟ್ಟಾರೆ 243 ರನ್‌ಗಳ ಬೃಹತ್ ಮುನ್ನಡೆ ಸಾಧಿಸಿದೆ.

ಇದನ್ನೂ ಓದಿ: ಏನಿದು ‘ಕಂಕಷನ್ ಸಬ್‌ಸ್ಟಿಟ್ಯೂಟ್’ ನಿಯಮ? ಇದರ ನಿಬಂಧನೆಗಳೇನು?

ಮೊದಲ ಟೆಸ್ಟ್ ಡ್ರಾ ಆಗಿರುವುದರಿಂದ ಸರಣಿ ಗೆಲುವಿನ ದೃಷ್ಟಿಯಿಂದ ಈ ಪಂದ್ಯ ಎರಡೂ ತಂಡಗಳಿಗೆ ನಿರ್ಣಾಯಕವಾಗಿದೆ. ನಾಲ್ಕನೇ ದಿನವಾದ ನವೆಂಬರ್ 30ರಂದು ಕಿವೀಸ್ ಪಡೆಯನ್ನು ಬೇಗನೆ ಆಲೌಟ್ ಮಾಡಿ ಅಲ್ಪ ಗುರಿ ಪಡೆಯುವ ಇರಾದೆಯಲ್ಲಿ ಭಾರತೀಯ ಬೌಲರ್‌ಗಳಿದ್ದರೆ, ಅತ್ತ ನ್ಯೂಜಿಲೆಂಡ್ ಬೃಹತ್ ಮೊತ್ತ ಪೇರಿಸುವ ವಿಶ್ವಾಸದಲ್ಲಿದೆ. ಹೀಗಾಗಿ ನಾಲ್ಕನೇ ದಿನದಾಟದಲ್ಲಿ ಉಭಯ ತಂಡಗಳಿಂದ ಭರ್ಜರಿ ಪೈಪೋಟಿ ನಿರೀಕ್ಷಿಸಬಹುದು.

ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಚೀಫ್ ಸಬ್ ಎಡಿಟರ್. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
Loading...
Unable to load recommendations.
Follow Us