ಸಿಕ್ಸರ್ ಕಿಂಗ್ ಯುವರಾಜ್ ಸಿಂಗ್ (Yuvraj Singh) ನಿವೃತ್ತರಾದರೂ ಭಾರತೀಯ ಕ್ರಿಕೆಟ್ ಅಂಗಳದಲ್ಲಿ ಇಂದಿಗೂ ನೇಮ್ ಫೇಮ್ ಉಳಿಸಿಕೊಂಡಿರುವ ಕ್ರಿಕೆಟಿಗ. ಹೀಗಾಗಿಯೇ ಅವರು ಹೋದಲ್ಲಿ, ಬಂದಲ್ಲಿ ಅಭಿಮಾನಿಗಳು ಮುತ್ತಿಕೊಳ್ಳುತ್ತಾರೆ. ಸದ್ಯ ಯುವಿ ಅಮೆರಿಕದಲ್ಲಿದ್ದಾರೆ. ಅಲ್ಲಿ ನಡೆಯುತ್ತಿರುವ ಯುನಿಟಿ ಕಪ್ನಲ್ಲಿ ಟೀಮ್ ಇಂಡಿಯಾದ ಮಾಜಿ ಆಲ್ರೌಂಡರ್ ಕೂಡ ಕಾಣಿಸಿಕೊಂಡಿದ್ದಾರೆ. ಈ ವೇಳೆ ಪಾಕಿಸ್ತಾನದ ಮಾಜಿ ವೇಗದ ಬೌಲರ್ ಮೊಹಮ್ಮದ್ ಆಸಿಫ್ ಯುವರಾಜ್ ಸಿಂಗ್ ಜೊತೆ ತೆಗೆದುಕೊಂಡ ಫೋಟೋವೊಂದನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಮೊಹಮ್ಮದ್ ಆಸಿಫ್ ಪಾಕಿಸ್ತಾನ ಕ್ರಿಕೆಟ್‌ನ ಕಳಂಕಿತ ಕ್ರಿಕೆಟಿಗರಲ್ಲಿ ಒಬ್ಬರು. 2010 ರಲ್ಲಿ ಲಾರ್ಡ್ಸ್ ಟೆಸ್ಟ್‌ನಲ್ಲಿ ಸ್ಪಾಟ್ ಫಿಕ್ಸಿಂಗ್‌ನಿಂದಾಗಿ ಭಾರೀ ಸುದ್ದಿಯಲ್ಲಿದ್ದರು. ಈ ಪ್ರಕರಣವು ಸಾಬೀತಾದ ಹಿನ್ನೆಲೆಯಲ್ಲಿ 5 ವರ್ಷಗಳ ಕಾಲ ನಿಷೇಧಕ್ಕೊಳಗಾಗಿದ್ದರು. ಅಷ್ಟೇ ಅಲ್ಲದೆ ಜೈಲು ಶಿಕ್ಷೆ ಅನುಭವಿಸಿದ್ದರು. 2016 ರಲ್ಲಿ ನಿಷೇಧ ಕೊನೆಗೊಂಡರೂ ಆಸಿಫ್ ಪಾಕ್ ತಂಡಕ್ಕೆ ಕಂಬ್ಯಾಕ್ ಮಾಡಲು ವಿಫಲರಾಗಿದ್ದರು.
ಇದಾಗಿ ತೆರೆಮರೆಯಲ್ಲೇ ಉಳಿದಿದ್ದ ಮೊಹಮ್ಮದ್ ಆಸಿಫ್ ಇದೀಗ ಯುವರಾಜ್ ಸಿಂಗ್ ಜೊತೆಗಿನ ಫೋಟೋದೊಂದಿಗೆ ವೈರಲ್ ಆಗಿದ್ದಾರೆ. ಟ್ವಿಟರ್ನಲ್ಲಿ ಹಂಚಿಕೊಂಡಿರುವ ಈ ಫೋಟೋಗೆ ಸ್ನೇಹಕ್ಕೆ ಯಾವುದೇ ಮಿತಿಯಿಲ್ಲ ಎಂದು ಬರೆದುಕೊಂಡಿದ್ದಾರೆ. ಇತ್ತ ಫೋಟೋ ವೈರಲ್ ಆಗುತ್ತಿದ್ದಂತೆ ಅನೇಕರು ಯುವರಾಜ್ ಸಿಂಗ್ ವಿರುದ್ದ ಸೋಷಿಯಲ್ ಮೀಡಿಯಾದಲ್ಲಿ ಹರಿಹಾಯ್ದಿದ್ದಾರೆ. ಕಳಂಕಿತ ಕ್ರಿಕೆಟಿಗರೊಂದಿಗೆ ಯುವಿಗೇನು ಕೆಲಸ? ಎಂದು ಪ್ರಶ್ನಿಸಿದ್ದಾರೆ.
Friendship have no limits. #YuvrajSingh #ICC #USA #dc #unitycup2022 pic.twitter.com/VJ0u5U7z3Z
— Muhammad Asif (@MuhammadAsif_26) May 30, 2022
ಇನ್ನು ಕೆಲವರು ಪಾಕಿಸ್ತಾನ್ ಕ್ರಿಕೆಟಿಗರೊಂದಿಗಿನ ಯುವರಾಜ್ ಸಿಂಗ್ ಅವರ ಸ್ನೇಹವನ್ನು ಗೇಲಿ ಮಾಡಿದ್ದಾರೆ. ಭಾರತದ ಸೈನ್ಯದ ವಿರುದ್ದ ಮತ್ತು ಕಾಶ್ಮೀರ ತಮ್ಮದೆಂದು ಮಾತನಾಡುವ ಆಟಗಾರರು ಸದಾ ಯುವರಾಜ್ ಸಿಂಗ್ ಅವರ ಫ್ರೆಂಡ್ಸ್ ಆಗಿರುತ್ತಾರೆ ಎಂದು ಅಪಹಾಸ್ಯ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಯುವರಾಜ್ ಸಿಂಗ್ ಶಾಹಿದ್ ಅಫ್ರಿದಿ ಅವರ ಸಾಮಾಜಿಕ ಕಾರ್ಯಕ್ಕೆ ಬೆಂಬಲ ವ್ಯಕ್ತಪಡಿಸಿದ್ದರು. ಇದು ಭಾರೀ ವಿವಾದಕ್ಕೆ ಕಾರಣವಾಗಿತ್ತು. ಇದೀಗ ಮ್ಯಾಚ್ ಫಿಕ್ಸಿಂಗ್ನಿಂದ ಕಳಂಕಿತರಾಗಿರುವ ಆಟಗಾರರನೊಂದಿಗೆ ಕಾಣಿಸಿಕೊಳ್ಳುವ ಮೂಲಕ ಮತ್ತೆ ನೆಟ್ಟಿಗರ ಆಕ್ರೋಶಕ್ಕೆ ಕಾರಣರಾಗಿದ್ದಾರೆ.
ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.