ಕೊಡಗಿನಲ್ಲಿ ಫುಟ್​ಬಾಲ್ ಕ್ರೇಝ್: ತಲೆ ಎತ್ತಿ ನಿಂತ ಕ್ರಿಸ್ಟಿಯಾನೊ ರೊನಾಲ್ಡೊ!

Fifa World Cup 2026: ಫಿಫಾ ವಿಶ್ವಕಪ್​ 2026 ರಲ್ಲಿ ಪೋರ್ಚುಗಲ್ ತಂಡ ಇನ್ನೂ ಕೂಡ ಅಭಿಯಾನ ಆರಂಭಿಸಿಲ್ಲ. ಅದಕ್ಕೂ ಮುನ್ನವೇ ಕೊಡಗಿನಲ್ಲಿ ಪೋರ್ಚುಗಲ್ ತಂಡದ ನಾಯಕ ಕ್ರಿಸ್ಟಿಯಾನೊ ರೊನಾಲ್ಡೊ (Cristiano Ronaldo) ಅವರ ಬ್ಯಾನರ್ ಹಾಗೂ ಬೃಹತ್ ಆಕಾರದ ಕಟೌಟ್​​ಗಳು ರಾರಾಜಿಸಲಾರಂಭಿಸಿದೆ.

ಕೊಡಗಿನಲ್ಲಿ ಫುಟ್​ಬಾಲ್ ಕ್ರೇಝ್: ತಲೆ ಎತ್ತಿ ನಿಂತ ಕ್ರಿಸ್ಟಿಯಾನೊ ರೊನಾಲ್ಡೊ!
Cristiano Ronaldo
Image Credit source: IG

Updated on: Jun 16, 2026 | 10:12 AM

ಕೊಡಗು ಎಂದರೆ ಕೇವಲ ಕಾಫಿ ನಾಡಲ್ಲ, ಅದು ಕ್ರೀಡಾಪಟುಗಳ ತವರೂರು. ಇಲ್ಲಿನವರ ರಕ್ತದಲ್ಲೇ ಕ್ರೀಡಾ ಪ್ರೇಮ ಹರಿಯುತ್ತದೆ ಎಂಬುದಕ್ಕೆ ಈಗ ಮತ್ತೊಂದು ಉದಾಹರಣೆ ಸಿಕ್ಕಿದೆ. ಹೌದು, ಕೊಡಗು ಜಿಲ್ಲೆಯ ಸುಂಟಿಕೊಪ್ಪದ ಗದ್ದೆಹಳ್ಳದಲ್ಲಿ ವಿಶ್ವ ಫುಟ್​ಬಾಲ್​ನ ಕಾಲ್ಚೆಂಡು ಚತುರ, ಪೋರ್ಚುಗಲ್‌ನ ಕ್ರಿಸ್ಟಿಯಾನೊ ರೊನಾಲ್ಡೊ ಅವರ ಬೃಹತ್ ಕಟೌಟ್ ತಲೆ ಎತ್ತಿ ನಿಂಗಿದೆ.

40 ಅಡಿ ಎತ್ತರದ ಕಟೌಟ್:

ಫಿಫಾ ವಿಶ್ವಕಪ್ ಕಾವೇರುತ್ತಿದ್ದಂತೆ ಸ್ಥಳೀಯ ಫುಟ್‌ಬಾಲ್ ಕ್ಲಬ್ ಆದ​ ‘ಅಮಿಟಿ ಯುನೈಟೆಡ್ ಎಫ್​ಸಿ’ ಮತ್ತು ರೊನಾಲ್ಡೊ ಅವರ ಕಟ್ಟಾ ಅಭಿಮಾನಿಗಳು ಸೇರಿ ಸರಿಸುಮಾರು 40 ಅಡಿ ಎತ್ತರದ ಈ ಬೃಹತ್ ಕಟೌಟ್ ಅನ್ನು ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲೇ ನಿಲ್ಲಿಸಿದ್ದಾರೆ. ಇದೀಗ ಈ ಕಟೌಟ್ ಆ ಭಾಗದಲ್ಲಿ ಹಾದುಹೋಗುವ ಪ್ರವಾಸಿಗರು ಮತ್ತು ಸ್ಥಳೀಯರ ಗಮನ ಸೆಳೆಯುತ್ತಿದೆ.

ಕೊಡಗಿನ ಫುಟ್‌ಬಾಲ್ ಕ್ರೇಝ್:

ಕರ್ನಾಟಕದಲ್ಲಿ ಕೊಡಗು ಜಿಲ್ಲೆಯನ್ನು ‘ಹಾಕಿಯ ತವರೂರು’ ಎಂದು ಕರೆಯಲಾಗುತ್ತದೆ. ಆದರೆ ಇಲ್ಲಿ ಹಾಕಿ ಮತ್ತು ಕ್ರಿಕೆಟ್‌ಗೆ ಎಷ್ಟು ಕ್ರೇಝ್ ಇದೆಯೋ, ಅಷ್ಟೇ ಕ್ರೇಝ್ ಫುಟ್‌ಬಾಲ್​ಗೂ ಇದೆ. ಅದರಲ್ಲೂ ಸುಂಟಿಕೊಪ್ಪ ಕೊಡಗಿನ ‘ಫುಟ್​ಬಾಲ್ ಮೆಕ್ಕಾ’ ಎಂದೇ ಗುರುತಿಸಿಕೊಂಡಿದೆ.

ವಿಶ್ವಕಪ್ ಅಥವಾ ಪ್ರಮುಖ ಅಂತಾರಾಷ್ಟ್ರೀಯ ಫುಟ್‌ಬಾಲ್ ಟೂರ್ನಿಗಳು ಬಂದಾಗಲೆಲ್ಲಾ ಕೊಡಗಿನ ಮೂಲೆ ಮೂಲೆಗಳಲ್ಲೂ ಫುಟ್‌ಬಾಲ್ ಫೀವರ್ ಮುಗಿಲೇರುತ್ತದೆ. ಈ ಬಾರಿ ಕ್ರಿಸ್ಟಿಯಾನೊ ರೊನಾಲ್ಡೊ ಅಭಿಮಾನಿಗಳು ತಮ್ಮ ನೆಚ್ಚಿನ ಆಟಗಾರನ ಮೇಲಿನ ಪ್ರೀತಿಯನ್ನು ಈ ಬೃಹತ್ ಕಟೌಟ್ ಮೂಲಕ ಜಗತ್ತಿಗೆ ಸಾರಿದ್ದಾರೆ.

ಫಿಫಾ ಫೀವರ್:

ಸುಂಟಿಕೊಪ್ಪದ ಗದ್ದೆಹಳ್ಳದಲ್ಲಿ ಕೇವಲ ಕ್ರಿಸ್ಟಿಯಾನೊ ರೊನಾಲ್ಡೊ ಅವರ ಕಟೌಟ್ ಮಾತ್ರ ತಲೆ ಎತ್ತಿ ನಿಂತಿಲ್ಲ. ಜಿ-ಟೌನ್ ಫುಟ್​ಬಾಲ್ ಕ್ಲಬ್ ಕೂಡ ಬ್ರೆಝಿಲ್, ಪೋರ್ಚುಗಲ್, ಅರ್ಜೆಂಟೀನಾ ತಂಡಗಳ ಬೃಹತಾಕಾರದ ಬ್ಯಾನರ್​​ ಅನ್ನು ಕೂಡ ನಿಲ್ಲಿಸಿದ್ದಾರೆ. ಈ ಮೂಲಕ ತಮ್ಮ ನೆಚ್ಚಿನ ತಂಡಗಳ ಗೆಲುವಿಗಾಗಿ ಹಾರೈಸಿದ್ದಾರೆ.

ಮೈದಾನದ ಬೇಡಿಕೆ:

ಸುಂಟಿಕೊಪ್ಪ ಕೊಡಗಿನ ‘ಫುಟ್​ಬಾಲ್ ಮೆಕ್ಕಾ’ ಎಂದು ಗುರುತಿಸಿಕೊಂಡರೂ, ಈ ಭಾಗದಲ್ಲಿ ಫುಟ್‌ಬಾಲ್‌ಗೆ ಸೂಕ್ತವಾದ ಸುಸಜ್ಜಿತ ಆಟದ ಮೈದಾನ ಹಾಗೂ ಕ್ರೀಡಾ ಸೌಲಭ್ಯಗಳಿಲ್ಲ ಎಂಬುದೇ ಸತ್ಯ. ಇದೀ ತಂಡಗಳ ಬ್ಯಾನರ್ ಹಾಗೂ ಕಟೌಟ್ ನಿಲ್ಲಿಸುವ ಮೂಲಕ ಸುಂಟಿಕೊಪ್ಪ ಫುಟ್​ಬಾಲ್ ಪ್ರೇಮಿಗಳು ಸುಸಜ್ಜಿತ ಆಟದ ಮೈದಾನಕ್ಕಾಗಿ ಸರ್ಕಾರದ ಗಮನ ಸೆಳೆಯಲು ಮುಂದಾಗಿದ್ದಾರೆ.

ಪ್ರವಾಸಿಗರ ಸೆಲ್ಫಿ ಸ್ಪಾಟ್:

ಸುಂಟಿಕೊಪ್ಪ ಮಾರ್ಗವಾಗಿ ಮಡಿಕೇರಿಗೆ ತೆರಳುವ ಪ್ರವಾಸಿಗರು ಈ 40 ಅಡಿಯ ರೊನಾಲ್ಡೊ ಕಟೌಟ್ ನೋಡಿ ಗಾಡಿ ನಿಲ್ಲಿಸಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲೂ ಈ ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, “ಕೊಡಗಿನ ಹುಡುಗರ ಫುಟ್‌ಬಾಲ್ ಪ್ರೇಮಕ್ಕೆ ಸಾಟಿಯೇ ಇಲ್ಲ” ಎಂದು ನೆಟ್ಟಿಗರು ಕೊಂಡಾಡುತ್ತಿದ್ದಾರೆ.

ಇದನ್ನೂ ಓದಿ: ಬಿಗ್ ಶಾಕ್… ಬಲಿಷ್ಠ ಸ್ಪೇನ್ ವಿರುದ್ಧ ಸೆಟೆದು ನಿಂತ ಕೇಪ್ ವರ್ಡೆ..!

ಒಟ್ಟಾರೆಯಾಗಿ ಫುಟ್​ಬಾಲ್ ಎನ್ನುವುದು ಕೇವಲ ಆಟವಲ್ಲ, ಅದೊಂದು ಭಾವನೆ ಎಂಬುದನ್ನು ಕೊಡಗಿನ ಕ್ರೀಡಾಭಿಮಾನಿಗಳು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.

 

Published On - 10:08 am, Tue, 16 June 26

ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
Follow Us