AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಲಿಷ್ಠ ಸ್ಪೇನ್ ವಿರುದ್ಧ ಸೆಟೆದು ನಿಂತ ಕೇಪ್ ವರ್ಡೆ..!

Spain vs Cape Verde: ಫಿಫಾ ವಿಶ್ವಕಪ್​ನ ಗ್ರೂಪ್-ಹೆಚ್​ನಲ್ಲಿ ನಡೆದ ಮೊದಲ ಪಂದ್ಯವು ಡ್ರಾನಲ್ಲಿ ಅಂತ್ಯಗೊಂಡಿದೆ. ಅದು ಕೂಡ ಬಲಿಷ್ಠ ಸ್ಪೇನ್ ತಂಡವನ್ನು ಕಟ್ಟಿಹಾಕುವ ಮೂಲಕ. ಹೀಗೆ ಸ್ಪೇನ್ ಪಡೆಯನ್ನು ಕಟ್ಟಿಹಾಕಿದ್ದು ಮತ್ಯಾರೂ ಅಲ್ಲ, ವಿಶ್ವ ಫುಟ್​ಬಾಲ್ ಶ್ರೇಯಾಂಕದಲ್ಲಿ 64ನೇ ಸ್ಥಾನದಲ್ಲಿರುವ ಕೇಪ್​ ವರ್ಡೆ ಎಂಬುದು ವಿಶೇಷ.

ಬಲಿಷ್ಠ ಸ್ಪೇನ್ ವಿರುದ್ಧ ಸೆಟೆದು ನಿಂತ ಕೇಪ್ ವರ್ಡೆ..!
Cape Verde - VozinhaImage Credit source: Vozinha IG
ಝಾಹಿರ್ ಯೂಸುಫ್
|

Updated on:Jun 16, 2026 | 8:43 AM

Share

Fifa World Cup 2026: ಸ್ಪೇನ್… ಮೈದಾನಕ್ಕಿಳಿದರೆ ಎದುರಾಳಿಗಳ ಎದೆಯಲ್ಲಿ ನಡುಕ ಹುಟ್ಟಿಸುವ ಜಗತ್ತಿನ ಅತ್ಯಂತ ಬಲಿಷ್ಠ ಪಡೆ. ಮುಂಚೂಣಿಯಲ್ಲಿ ಲಮಿನ್ ಯಮಾಲ್, ಮೈಕೆಲ್ ಒಯರ್ಝಾಬಲ್, ಫೆರಾನ್ ಟೊರೆಸ್ ಮತ್ತು ಡ್ಯಾನಿ ಓಲ್ಮೊ ಅವರಂತಹ ಆಕ್ರಮಣಕಾರಿ ಆಟಗಾರರಿದ್ದರೆ, ಮಿಡ್‌ಫೀಲ್ಡ್​ನಲ್ಲಿ ರೋಡ್ರಿ, ಪೆಡ್ರಿ, ಗಾವಿ ಹಾಗೂ ಫ್ಯಾಬಿಯನ್ ರೂಯಿಝ್ ಅವರಂತಹ ಚಾಣಾಕ್ಷ ತಂತ್ರಜ್ಞರಿದ್ದಾರೆ. ಇಂತಹದೊಂದು ವಿಶ್ವದರ್ಜೆಯ ಬಳಗ ಕಣಕ್ಕಿಳಿದರೆ ಗೆಲುವು ಯಾರದ್ದು ಎಂದು ಪ್ರತ್ಯೇಕವಾಗಿ ಹೇಳುವ ಅವಶ್ಯಕತೆಯೇ ಇಲ್ಲ! ಆದರೆ ಅಟ್ಲಾಂಟಾ ಕ್ರೀಡಾಂಗಣದಲ್ಲಿ ನಡೆದಿದ್ದೇ ಬೇರೆ.

ಹೌದು, ಫಿಫಾ ವಿಶ್ವಕಪ್ ಇತಿಹಾಸದಲ್ಲೇ ಅತ್ಯಂತ ರೋಮಾಂಚನಕಾರಿ ಮತ್ತು ಅನಿರೀಕ್ಷಿತ ಪಂದ್ಯವೊಂದಕ್ಕೆ ಜೂನ್ 15 ಸಾಕ್ಷಿಯಾಗಿದೆ. ಹಾಲಿ ಯುರೋಪಿಯನ್ ಚಾಂಪಿಯನ್ಸ್ ಬಲಿಷ್ಠ ಸ್ಪೇನ್ ವಿರುದ್ಧ ಮೊದಲ ಬಾರಿಗೆ ವಿಶ್ವಕಪ್‌ ಆಡುತ್ತಿರುವ ಪುಟ್ಟ ರಾಷ್ಟ್ರ ಕೇಪ್ ವರ್ಡೆ ಐತಿಹಾಸಿಕ ಡ್ರಾ ಸಾಧಿಸಿ ಇಡೀ ವಿಶ್ವವೇ ತಮ್ಮತ್ತ ಬೆರಗುಗಣ್ಣಿನಿಂದ ನೋಡುವಂತೆ ಮಾಡಿದ್ದಾರೆ.

ಪಂದ್ಯದ ಆರಂಭದಿಂದಲೇ ಸ್ಪೇನ್ ತಂಡ ಪೂರ್ಣ ಹಿಡಿತ ಸಾಧಿಸಿತ್ತು. ಶೇ. 62 ರಷ್ಟು ಸಮಯ ಚೆಂಡನ್ನು ತನ್ನ ಬಳಿಯೇ ಇಟ್ಟುಕೊಂಡಿದ್ದ ಸ್ಪೇನ್, ಕೇಪ್ ವರ್ಡೆ ಗೋಲು ಪೆಟ್ಟಿಗೆಯ ಮೇಲೆ ಸರಣಿ ದಾಳಿ ನಡೆಸಿತು. ಆದರೆ ಕೇಪ್ ವರ್ಡೆ ತಂಡದ 40 ವರ್ಷದ ಅನುಭವಿ ಗೋಲ್‌ಕೀಪರ್ ‘ವೊಝಿನ್ಹಾ’ ಸ್ಪೇನ್ ಪಾಲಿಗೆ ಬಂಡೆಯಂತೆ ನಿಂತರು. ಪಂದ್ಯದುದ್ದಕ್ಕೂ ಸ್ಪೇನ್ ಹೊಡೆದ 8 ಅತ್ಯಂತ ಅಪಾಯಕಾರಿ ಶಾಟ್‌ಗಳನ್ನು ಅದ್ಭುತವಾಗಿ ತಡೆಯುವ ಮೂಲಕ ಅವರು ಪಂದ್ಯದ ಹೀರೊ ಆಗಿ ಹೊರಹೊಮ್ಮಿದರು.

ಕೈಕೊಟ್ಟ ಅದೃಷ್ಟ, ಮಿಸ್ ಆದ ಅವಕಾಶಗಳು:

ಮೊದಲಾರ್ಧದಲ್ಲಿ ಸ್ಪೇನ್ ತಂಡದ ಫೆರಾನ್ ಟೊರೆಸ್ ಹೊಡೆದ ಪ್ರಬಲ ಶಾಟ್ ಗೋಲ್ ಪೋಸ್ಟ್‌ಗೆ ಬಡಿದು ವಾಪಸ್ಸಾಯಿತು. ಅದರ ಬೆನ್ನಲ್ಲೇ ಮೈಕೆಲ್ ಒಯರ್ಝಾಬಲ್ ಹೆಡರ್ ಮೂಲಕ ಗೋಲು ಗಳಿಸಲು ಯತ್ನಿಸಿದರಾದರೂ ವೊಝಿನ್ಹಾ ಅದನ್ನು ತಡೆದರು. ಇನ್ನು ಮೊದಲಾರ್ಧ ಮುಗಿಯುವ ಕೆಲವೇ ಕ್ಷಣಗಳ ಮುನ್ನ ಐಮೆರಿಕ್ ಲ್ಯಾಪೋರ್ಟೆ ಅವರ ತಲೆಯ ಮೂಲಕ ಬಂದ ಚೆಂಡನ್ನು ವೊಝಿನ್ಹಾ ಅದ್ಭುತವಾಗಿ ಡೈವ್ ಮಾಡುವ ಮೂಲಕ ರಕ್ಷಿಸಿದರು.

ವರ್ಕ್ ಆಗದ ಯಮಾಲ್ ಮ್ಯಾಜಿಕ್:

ಪಂದ್ಯದ 71ನೇ ನಿಮಿಷದಲ್ಲಿ ಸ್ಪೇನ್ ತನ್ನ ಸ್ಟಾರ್ ಆಟಗಾರ ಲಮಿನ್ ಯಮಾಲ್ ಅವರನ್ನು ಮೈದಾನಕ್ಕಿಳಿಸಿತು. ಗಾಯದಿಂದ ಚೇತರಿಸಿಕೊಂಡು ಬಂದ ಯಮಾಲ್ ಕೆಲವೇ ನಿಮಿಷಗಳಲ್ಲಿ 5 ಡ್ರಿಬಲ್ಸ್ ಮಾಡಿ ಕೇಪ್ ವರ್ಡೆ ರಕ್ಷಣಾ ಕೋಟೆಯನ್ನು ಭೇದಿಸಲು ಯತ್ನಿಸಿದರು. ಆದರೆ ಕೇಪ್ ವರ್ಡೆ ಡಿಫೆಂಡರ್‌ಗಳು ಯಮಾಲ್ ಅವರಿಗೆ ಯಾವುದೇ ಅವಕಾಶ ನೀಡದೆ ಕಮಾಲ್ ಮಾಡಿದರು.

ಕೊನೆಯ ಕ್ಷಣದ ರೋಮಾಂಚನ:

ಈ ಪಂದ್ಯ ಮುಕ್ತಾಯಗೊಳ್ಳಲು ಕೆಲವೇ ನಿಮಿಷಗಳಿರುವಾಗ ಒಯರ್ಝಾಬಲ್ ಹೊಡೆದ ಚೆಂಡು ಕೇಪ್ ವರ್ಡೆಯ ಪಿಕೊ ಲೋಪೆಸ್ ತಮ್ಮ ದೇಹವನ್ನು ಅಡ್ಡವಿಟ್ಟು ತಡೆದರು. ಇಂಜುರಿ ಟೈಮ್‌ನಲ್ಲಿ ಒಯರ್ಝಾಬಲ್ ಅವರ ಕೊನೆಯ ಹೆಡರ್ ಶಾಟ್ ಗೋಲ್ ಪೋಸ್ಟ್‌ನ ಪಕ್ಕದಿಂದ ಹೊರಹೋಗುತ್ತಿದ್ದಂತೆ, ಕೇಪ್ ವರ್ಡೆ ಆಟಗಾರರು ಮತ್ತು ಅಭಿಮಾನಿಗಳು ಸಂಭ್ರಮಾಚರಣೆಯಲ್ಲಿ ಮುಳುಗಿದರು.

ಪಂದ್ಯದ ಪ್ರಮುಖ ಮುಖ್ಯಾಂಶಗಳು:

  • ಸ್ಪೇನ್ ಸಂಪೂರ್ಣ ನಿಯಂತ್ರಣ: ಪಂದ್ಯದುದ್ದಕ್ಕೂ ಸ್ಪೇನ್ ತಂಡ ಶೇ. 62 ರಷ್ಟು ಸಮಯ ಚೆಂಡನ್ನು ತನ್ನ ನಿಯಂತ್ರಣದಲ್ಲಿಟ್ಟುಕೊಂಡು ನೂರಾರು ನಿಖರ ಪಾಸ್‌ಗಳ ಮೂಲಕ ಕೇಪ್ ವರ್ಡೆ ತಂಡದ ಮೇಲೆ ನಿರಂತರ ಒತ್ತಡ ಹೇರಿತು. ಕೇಪ್ ವರ್ಡೆ ಕೇವಲ ಶೇ. 38 ರಷ್ಟು ನಿಯಂತ್ರಣ ಹೊಂದಿದ್ದರೂ ಅತ್ಯಂತ ಶಿಸ್ತಿನ ರಕ್ಷಣಾತ್ಮಕ ಆಟ ಆಡಿತು.
  • ಗೋಲು ಶಾಟ್‌ಗಳ ಸುರಿಮಳೆ: ಸ್ಪೇನ್ ಒಟ್ಟು 23 ಬಾರಿ ಗೋಲು ಗಳಿಸಲು ಯತ್ನಿಸಿತು. ಇದರಲ್ಲಿ 8 ಶಾಟ್‌ಗಳು ನೇರವಾಗಿ ಗೋಲು ಪೆಟ್ಟಿಗೆಯತ್ತ ನುಗ್ಗಿದ್ದವು. ಆದರೆ ಕೇಪ್ ವರ್ಡೆ ಕೇವಲ 6 ಯತ್ನಗಳನ್ನು ನಡೆಸಿ, ಅದರಲ್ಲಿ 1 ಶಾಟ್ ಮಾತ್ರ ಆನ್ ಟಾರ್ಗೆಟ್ ಇಟ್ಟಿತ್ತು.
  • ವೊಝಿನ್ಹಾ ಅದ್ಭುತ ಸೇವ್ಸ್: ಕೇಪ್ ವರ್ಡೆಯ 40 ವರ್ಷದ ಗೋಲ್‌ಕೀಪರ್ ವೊಝಿನ್ಹಾ, ಸ್ಪೇನ್ ಗೋಲಾಗಬಹುದಾಗಿದ್ದ ಎಲ್ಲಾ 8 ಆನ್ ಟಾರ್ಗೆಟ್ ಶಾಟ್‌ಗಳನ್ನು ಅದ್ಭುತವಾಗಿ ತಡೆದು ಪಂದ್ಯ ಡ್ರಾ ಆಗುವಲ್ಲಿ ಪ್ರಮುಖ ಪಾತ್ರವಹಿಸಿದರು.
  • ಕಾರ್ನರ್ ಕಿಕ್ಸ್ ಅವಕಾಶಗಳು: ಸ್ಪೇನ್ ತಂಡಕ್ಕೆ ಪಂದ್ಯದಲ್ಲಿ ಬರೋಬ್ಬರಿ 11 ಕಾರ್ನರ್ ಕಿಕ್ ಅವಕಾಶಗಳು ಸಿಕ್ಕವು. ಆದರೆ ಕೇಪ್ ವರ್ಡೆಯ ಬಲಿಷ್ಠ ಡಿಫೆಂಡರ್‌ಗಳು ಈ ಯಾವುದೇ ಕಾರ್ನರ್ ಅನ್ನು ಗೋಲಾಗಿ ಪರಿವರ್ತಿಸಲು ಬಿಡಲಿಲ್ಲ. ಕೇಪ್ ವರ್ಡೆಗೆ ಸಿಕ್ಕಿದ್ದು ಕೇವಲ 1 ಕಾರ್ನರ್ ಕಿಕ್ ಮಾತ್ರ.
  • ಶಿಸ್ತಿನ ಆಟ: ಪಂದ್ಯದಲ್ಲಿ ಸ್ಪೇನ್ ತಂಡ 10 ಫೌಲ್‌ಗಳನ್ನು ಮಾಡಿದರೆ, ಕೇಪ್ ವರ್ಡೆ ಕೇವಲ 1 ಫೌಲ್ ಮಾಡುವ ಮೂಲಕ ಅತ್ಯಂತ ಕ್ಲೀನ್ ಮತ್ತು ಶಿಸ್ತಿನ ಡಿಫೆನ್ಸ್ ಪ್ರದರ್ಶಿಸಿತು.

ಈ ಮೂಲಕ ಕೇಪ್ ವರ್ಡೆ ತಂಡವು ಬಲಿಷ್ಠ ಸ್ಪೇನ್ ವಿರುದ್ಧ ಒಂದೇ ಒಂದು ಗೋಲು ಹೊಡೆಸಿಕೊಳ್ಳದೇ 0-0 ಅಂತರದಿಂದ ಪಂದ್ಯವನ್ನು ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಈ ಡ್ರಾನೊಂದಿಗೆ ಕೇಪ್ ವರ್ಡೆ ತಂಡವು ಒಂದು ಅಂಕ ಪಡೆದುಕೊಂಡಿದೆ.

ಇದನ್ನೂ ಓದಿ: ಮೈದಾನದಲ್ಲಿ ಕಿರಿಕ್… ಆಟಗಾರನ ಮೇಲೆ ಕೈ ಮಾಡಿದ ವೈಭವ್ ಸೂರ್ಯವಂಶಿ..!

ವಿಶ್ವದ ನಂ.1 ತಂಡಗಳಲ್ಲೊಂದಾದ ಸ್ಪೇನ್ ವಿರುದ್ಧ ಪಡೆದ ಈ 1 ಪಾಯಿಂಟ್, ಕೇಪ್ ವರ್ಡೆ ಫುಟ್‌ಬಾಲ್ ಇತಿಹಾಸದಲ್ಲೇ ಸುವರ್ಣಾಕ್ಷರಗಳಲ್ಲಿ ಬರೆದಿಡುವಂತಹ ಸಾಧನೆಯಾಗಿದೆ.

Published On - 8:37 am, Tue, 16 June 26

Follow Us
ಕೆಎಂಎಫ್ ಪಶು ಆಹಾರ ಕಲಬೆರಕೆ ಹಗರಣ: ನಾಲ್ವರು ಅಧಿಕಾರಿಗಳ ಅಮಾನತು
ಕೆಎಂಎಫ್ ಪಶು ಆಹಾರ ಕಲಬೆರಕೆ ಹಗರಣ: ನಾಲ್ವರು ಅಧಿಕಾರಿಗಳ ಅಮಾನತು
440 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಪೈಕಿ 428 ರಲ್ಲಿ ಪ್ರಾಂಶುಪಾಲರೇ ಇಲ್ಲ
440 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಪೈಕಿ 428 ರಲ್ಲಿ ಪ್ರಾಂಶುಪಾಲರೇ ಇಲ್ಲ
ದೆಹಲಿಯಲ್ಲಿರುವ ಪಾಕ್ ಹೈಕಮಿಷನ್ ಹೊರಗಿನ ಬ್ಯಾರಿಕೇಡ್‌ಗಳ ತೆರವು
ದೆಹಲಿಯಲ್ಲಿರುವ ಪಾಕ್ ಹೈಕಮಿಷನ್ ಹೊರಗಿನ ಬ್ಯಾರಿಕೇಡ್‌ಗಳ ತೆರವು
ಚಿಕ್ಕಮಗಳೂರು: 3000 ಅಡಿ ಪ್ರಪಾತದ ಅಂಚಿನಲ್ಲಿ ಥಾರ್ ಜೀಪ್ ಓಡಿಸಿ ಹುಚ್ಚಾಟ
ಚಿಕ್ಕಮಗಳೂರು: 3000 ಅಡಿ ಪ್ರಪಾತದ ಅಂಚಿನಲ್ಲಿ ಥಾರ್ ಜೀಪ್ ಓಡಿಸಿ ಹುಚ್ಚಾಟ
ರಾಜ್ಯಾದ್ಯಂತ ಮೆಡಿಕಲ್ ಸ್ಟೋರ್‌ಗಳ ಪರಿಶೀಲನೆಗೆ ಮಹತ್ವದ ಆದೇಶ
ರಾಜ್ಯಾದ್ಯಂತ ಮೆಡಿಕಲ್ ಸ್ಟೋರ್‌ಗಳ ಪರಿಶೀಲನೆಗೆ ಮಹತ್ವದ ಆದೇಶ
ವಿಶೇಷ ಭೂಸ್ವಾಧೀನಾಧಿಕಾರಿ ಮನೆಯಲ್ಲಿ ಕೋಟಿಗಟ್ಟಲೆ ಆಸ್ತಿ ಪತ್ತೆ!
ವಿಶೇಷ ಭೂಸ್ವಾಧೀನಾಧಿಕಾರಿ ಮನೆಯಲ್ಲಿ ಕೋಟಿಗಟ್ಟಲೆ ಆಸ್ತಿ ಪತ್ತೆ!
ವರಮಹಾಲಕ್ಷ್ಮೀ ಹಬ್ಬದ ಖರೀದಿಗೆ ಮಾರ್ಕೆಟ್‌ನಲ್ಲಿ ಜನಸಾಗರ: ಟ್ರಾಫಿಕ್ ಜಾಮ್
ವರಮಹಾಲಕ್ಷ್ಮೀ ಹಬ್ಬದ ಖರೀದಿಗೆ ಮಾರ್ಕೆಟ್‌ನಲ್ಲಿ ಜನಸಾಗರ: ಟ್ರಾಫಿಕ್ ಜಾಮ್
ಈ ರಾಶಿಯವರಿಗೆ ಗಜಕೇಸರಿ ಯೋಗ, ವೃಶ್ಚಿಕಕ್ಕೆ ಧನಯೋಗ
ಈ ರಾಶಿಯವರಿಗೆ ಗಜಕೇಸರಿ ಯೋಗ, ವೃಶ್ಚಿಕಕ್ಕೆ ಧನಯೋಗ
ಕಿಸೆಯಿಂದ ಫೋನ್ ಹೊರತೆಗೆಯುತ್ತಿದ್ದಂತೆ ಸ್ಪೋಟ
ಕಿಸೆಯಿಂದ ಫೋನ್ ಹೊರತೆಗೆಯುತ್ತಿದ್ದಂತೆ ಸ್ಪೋಟ
ಅಸ್ಸಾಂನಲ್ಲಿ ಆನೆಗಳ ಹಿಂಡು ರೈಲ್ವೆ ಹಳಿ ದಾಟುವವರೆಗೂ ಕಾದು ನಿಂತ ರೈಲು
ಅಸ್ಸಾಂನಲ್ಲಿ ಆನೆಗಳ ಹಿಂಡು ರೈಲ್ವೆ ಹಳಿ ದಾಟುವವರೆಗೂ ಕಾದು ನಿಂತ ರೈಲು