
ವಿಶ್ವ ಫುಟ್ಬಾಲ್ ಸ್ಟಾರ್ ಕ್ರಿಸ್ಟಿಯಾನೋ ರೊನಾಲ್ಡೊ ಅವರ ಫಿಪಾ ವಿಶ್ವಕಪ್ ಕನಸು ಕೊನೆಗೊಂಡಿದೆ. ಅಮೆರಿಕದ ಟೆಕ್ಸಾಸ್ನಲ್ಲಿ ಸೋಮವಾರ (ಭಾರತೀಯ ಕಾಲಮಾನ ಮುಂಜಾನೆ 1.30) ನಡೆದ ಪ್ರೀ-ಕ್ವಾರ್ಟರ್ಫೈನಲ್ ಪಂದ್ಯದಲ್ಲಿ ಪೋರ್ಚುಗಲ್ ತಂಡ ಸ್ಪೇನ್ ವಿರುದ್ಧ 1-0 ಗೋಲುಗಳಿಂದ ಸೋಲು ಅನುಭವಿಸಿತು. ಈ ಆಘಾತಕಾರಿ ಸೋಲಿನೊಂದಿಗೆ ಪೋರ್ಚುಗಲ್ ಟೂರ್ನಿಯಿಂದ ಹೊರಬಿದ್ದಿದೆ. ಈ ಮೂಲಕ ರೊನಾಲ್ಡೊ ಅವರ ದೊಡ್ಡ ಕನಸು ಅಪೂರ್ಣವಾಗಿಯೇ ಉಳಿದಂತೆ ಆಗಿದೆ.
90 ನಿಮಿಷಗಳ ಅವಧಿ ಪೂರ್ಣಗೊಂಡಿತ್ತು. ಆ ಬಳಿಕ ಸ್ಟಾಪೇಜ್ ಟೈಮ್ ಅಲ್ಲಿ ಸ್ಪೇನ್ನ ಮೈಕೆಲ್ ಮೆರಿನೊ ಏಕೈಕ ಗೋಲು ಬಾರಿಸಿದರು. ಈ ಭರ್ಜರಿ ಗೋಲಿನ ನೆರವಿನಿಂದ ಸ್ಪೇನ್ ಕ್ವಾರ್ಟರ್ಫೈನಲ್ ತಲುಪಿತು. ಈ ಮೂಲಕ ಪೋರ್ಚುಗಲ್ ತಂಡ ವಿಶ್ವಕಪ್ನಿಂದ ಹೊರಬೀಳುವಂತಾಯಿತು.
ಕಣ್ಣೀರಿಟ್ಟ ರೊನಾಲ್ಡೊ; ಪಂದ್ಯ ಮುಗಿದ ತಕ್ಷಣ ಕ್ರಿಸ್ಟಿಯಾನೋ ರೊನಾಲ್ಡೊ ಮೈದಾನದಲ್ಲೇ ಕಣ್ಣೀರು ಹಾಕಿದರು. ಅಭಿಮಾನಿಗ ಎದುರು ಚಪ್ಪಾಳೆ ತಟ್ಟುತ್ತಾ ಅವರು ಭಾವುಕರಾಗಿ ಮೈದಾನದಿಂದ ಹೊರನಡೆದರು. ಇದು ತಮ್ಮ ಕೊನೆಯ ವಿಶ್ವಕಪ್ ಪಂದ್ಯ ಎಂಬುದನ್ನು ಅವರು ನಂತರ ಖಚಿತಪಡಿಸಿದರು.
‘ವಿಶ್ವಕಪ್ನಿಂದ ಈ ರೀತಿ ಹೊರಬೀಳುತ್ತಿರುವುದಕ್ಕೆ ನನಗೆ ಬೇಸರವಿದೆ. ಆದರೆ ನಾನು ನನ್ನ ದೇಶಕ್ಕಾಗಿ ಸರ್ವಸ್ವವನ್ನೂ ನೀಡಿದ್ದೇನೆ. ನಾನು ಯಾವುದೇ ಅಪರಾಧ ಪ್ರಜ್ಞೆ ಇಲ್ಲದೆ, ಮುಕ್ತ ಮನಸ್ಸಿನಿಂದ ಹೊರಹೋಗುತ್ತಿದ್ದೇನೆ’ ಎಂದು ರೊನಾಲ್ಡೊ ಹೇಳಿದರು.
ರೊನಾಲ್ಡೊ ತಮ್ಮ ಸುದೀರ್ಘ ವೃತ್ತಿಜೀವನದಲ್ಲಿ ಪೋರ್ಚುಗಲ್ ತಂಡಕ್ಕೆ 2016ರ ಯುರೋ ಕಪ್ ಮತ್ತು ಎರಡು ನೇಷನ್ಸ್ ಲೀಗ್ ಟ್ರೋಫಿಗಳನ್ನು ಗೆದ್ದುಕೊಟ್ಟಿದ್ದಾರೆ. ಆದರೆ ಅವರಿಗೆ ವಿಶ್ವಕಪ್ ಟ್ರೋಫಿ ಗೆಲ್ಲಲು ಸಾಧ್ಯವಾಗುಲ್ಲ. ವಿಶ್ವಕಪ್ನಲ್ಲಿ ಅವರು ಆಡಿದ 27 ಪಂದ್ಯಗಳಲ್ಲಿ ಒಟ್ಟು 11 ಗೋಲುಗಳನ್ನು ಬಾರಿಸಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ
Published On - 7:33 am, Tue, 7 July 26