ನೀರಜ್ ಚೋಪ್ರಾ ಕಂಬ್ಯಾಕ್: ಕಾಮನ್‌ವೆಲ್ತ್ ಗೇಮ್ಸ್​ಗೆ ಎಂಟ್ರಿ!

Doha Diamond League 2026: ದೋಹಾ ಡೈಮಂಡ್ ಲೀಗ್​ ಜಾವೆಲಿನ್ ಥ್ರೋನಲ್ಲಿ ಶ್ರೀಲಂಕಾದ ರುಮೇಶ್ ಪತಿರಾಗೆ (88.68 ಮೀಟರ್) ಮೊದಲ ಸ್ಥಾನ ಪಡೆದರೆ, ಗ್ರೆನಡಾದ ಆಂಡರ್ಸನ್ ಪೀಟರ್ಸ್ (86.38 ಮೀಟರ್) ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ. ಇನ್ನು ಅಮೆರಿಕದ ಕರ್ಟಿಸ್ ಥಾಂಪ್ಸನ್ (85.99 ಮೀಟರ್) ಮೂರನೇ ಸ್ಥಾನವನ್ನು ತಮ್ಮದಾಗಿಸಿಕೊಂಡಿದ್ದಾರೆ. ಹಾಗೆಯೇ ಭಾರತದ ನೀರಜ್ ಚೋಪ್ರಾ 4ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.

ನೀರಜ್ ಚೋಪ್ರಾ ಕಂಬ್ಯಾಕ್: ಕಾಮನ್‌ವೆಲ್ತ್ ಗೇಮ್ಸ್​ಗೆ ಎಂಟ್ರಿ!
Neeraj Chopra

Updated on: Jun 20, 2026 | 12:42 PM

ಭಾರತದ ಒಲಿಂಪಿಕ್ ಪದಕ ವಿಜೇತ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಖತಾರ್​ನ ದೋಹಾದಲ್ಲಿ ನಡೆದ ಡೈಮಂಡ್ ಲೀಗ್​ ಮೂಲಕ ಕಂಬ್ಯಾಕ್ ಮಾಡಿದ್ದಾರೆ. ಬೆನ್ನು ನೋವಿನ ಸಮಸ್ಯೆಯ ಕಾರಣ ಕಳೆದ ಕೆಲ ತಿಂಗಳುಗಳಿಂದ ಮೈದಾನಕ್ಕಿಳಿಯದ ನೀರಜ್  ಈ ಬಾರಿ 85.69 ಮೀಟರ್ ದೂರ ಭರ್ಜಿ ಎಸೆಯುವ ಮೂಲಕ ಗಮನ ಸೆಳೆದಿದ್ದಾರೆ.

4ನೇ ಸ್ಥಾನ ಪಡೆದ ನೀರಜ್:

ಬೆನ್ನು ನೋವಿನ ಸಮಸ್ಯೆಯ ಕಾರಣ ಸುಮಾರು 9 ತಿಂಗಳುಗಳ ಕಾಲ ಸ್ಪರ್ಧಾತ್ಮಕ ಕ್ರೀಡೆಯಿಂದ ದೂರವಿದ್ದ ನೀರಜ್ ಚೋಪ್ರಾ ದೋಹಾ ಡೈಮಂಡ್ ಲೀಗ್​ನಲ್ಲಿ ಉತ್ತಮ ಆರಂಭ ಪಡೆದಿರಲಿಲ್ಲ. ಇದಾಗ್ಯೂ ಅವರು 85.69 ಮೀಟರ್ ದೂರ ಎಸೆಯುವಲ್ಲಿ ಯಶಸ್ವಿಯಾಗಿದ್ದಾರೆ.

85.69 ಮೀಟರ್ ದೂರದೊಂದಿಗೆ ಈ ಲೀಗ್​ನಲ್ಲಿ ನೀರಜ್ ಚೋಪ್ರಾ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ. ಆದರೆ ಈ ಭರ್ಜರಿ ಪ್ರದರ್ಶನದ ಫಲವಾಗಿ ಅವರು 2026ರ ಕಾಮನ್‌ವೆಲ್ತ್ ಕ್ರೀಡಾಕೂಟಕ್ಕೆ ಅಧಿಕೃತವಾಗಿ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ.

ಕಾಮನ್‌ವೆಲ್ತ್ ಕ್ರೀಡಾಕೂಟಕ್ಕೆ ಎಂಟ್ರಿ:

ಅಥ್ಲೆಟಿಕ್ಸ್ ಫೆಡರೇಶನ್ ಆಫ್ ಇಂಡಿಯಾ (AFI) ಮುಂಬರುವ ಗ್ಲ್ಯಾಸ್ಗೋ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾಗವಹಿಸಲು 82.61 ಮೀಟರ್ ಅರ್ಹತಾ ಮಾನದಂಡವನ್ನು ನಿಗದಿಪಡಿಸಿತ್ತು. ಈ ಗುರಿಯನ್ನೇ ಟಾರ್ಗೆಟ್ ಮಾಡಿಕೊಂಡಿದ್ದ ನೀರಜ್ 2ನೇ ಎಸೆತದಲ್ಲೇ ಯಶಸ್ಸು ಸಾಧಿಸಿದ್ದರು.

ನೀರಜ್ ಚೋಪ್ರಾ ಎಸೆದ 2ನೇ ಎಸೆವು ಬರೋಬ್ಬರಿ 82.77 ಮೀಟರ್ ದೂರಕ್ಕೆ ಸಾಗಿತ್ತು. ಇನ್ನು ಮೂರನೇ ಯತ್ನದಲ್ಲಿ 85.69 ಮೀಟರ್ ದೂರ ಎಸೆಯುವ ಮೂಲಕ ಕಾಮನ್‌ವೆಲ್ತ್ ಕ್ರೀಡಾಕೂಟಕ್ಕೆ ಎಂಟ್ರಿಯನ್ನು ಖಚಿತಪಡಿಸಿಕೊಂಡರು.

6 ಎಸೆತಗಳು ಹೇಗಿದ್ದವು?

  • ಮೊದಲ ಎಸೆತ: ನೀರಜ್ ಚೋಪ್ರಾ ಲೈನ್ ದಾಟಿದ್ದರಿಂದ ಮೊದಲ ಎಸೆತವು ಫೌಲ್ ಆಗಿತ್ತು.
  • ಎರಡನೇ ಎಸೆತ: ದ್ವಿತೀಯ ಪ್ರಯತ್ನದಲ್ಲಿ ನೀರಜ್ 82.77 ಮೀಟರ್ ದೂರಕ್ಕೆ ಭರ್ಜಿ ತಲುಪಿಸಿದ್ದರು.
  • ಮೂರನೇ ಎಸೆತ: ಮೂರನೇ ಎಸೆತವನ್ನು 85.69 ಮೀಟರ್ ದೂರಕ್ಕೆ ಎಸೆಯುವ ಮೂಲಕ ತನ್ನ ಕಂಬ್ಯಾಕ್ ಅನ್ನು ಖಚಿತಪಡಿಸಿದರು.
  • ನಾಲ್ಕನೇ ಎಸೆತ: ಈ ಬಾರಿ ಉತ್ತಮ ಲಯ ಕಾಯ್ದುಕೊಂಡರೂ ಮೂರನೇ ಎಸೆತದ ದೂರವನ್ನು ಕ್ರಮಿಸಲು ಸಾಧ್ಯವಾಗಿರಲಿಲ್ಲ. ಈ ಮೂಲಕ 83.45 ಮೀಟರ್ ದೂರದೊಂದಿಗೆ ತೃಪ್ತಿಪಟ್ಟಕೊಂಡರು.
  • ಐದನೇ ಎಸೆತ: ಮೊದಲ ಎಸೆತದಂತೆ ಐದನೇ ಎಸೆತದಲ್ಲೂ ಲೈನ್ ದಾಟುವ ಮೂಲಕ ಫೌಲ್ ಮಾಡಿದರು.
  • ಆರನೇ ಎಸೆತ: ಅರ್ಹತೆ ಪಡೆಯಲಿಲ್ಲ.

ಆರನೇ ಎಸೆತಕ್ಕೆ ಅವಕಾಶ ಯಾಕೆ ಸಿಕ್ಕಿಲ್ಲ?

ಡೈಮಂಡ್ ಲೀಗ್​ ನಿಯಮದ ಪ್ರಕಾರ, ಮೊದಲ 5 ಸುತ್ತುಗಳ ಮುಕ್ತಾಯದ ನಂತರ ಅಂಕ ಪಟ್ಟಿಯಲ್ಲಿ ಮೊದಲ 3 ಸ್ಥಾನಗಳಲ್ಲಿರುವ ಕ್ರೀಡಾಪಟುಗಳು ಮಾತ್ರ 6ನೇ ಸುತ್ತಿನಲ್ಲಿ ಮುಖಾಮುಖಿಯಾಗುತ್ತಾರೆ. ಅಂದರೆ ಮೊದಲ ಐದು ಸುತ್ತುಗಳಲ್ಲಿ ಟಾಪ್-3 ನಲ್ಲಿ ಕಾಣಿಸಿಕೊಂಡರೆ ಮಾತ್ರ 6ನೇ ಎಸೆತ ಎಸೆಯಲು ಅವಕಾಶ ನೀಡಲಾಗುತ್ತದೆ. ಆದರೆ ನೀರಜ್ ಚೋಪ್ರಾ ತಮ್ಮ 5 ಸುತ್ತುಗಳ ಮುಕ್ತಾಯದ ವೇಳೆಗೆ 4ನೇ ಸ್ಥಾನ ಪಡೆದಿದ್ದರು. ಹೀಗಾಗಿ ಆರನೇ ಎಸೆತ ಎಸೆಯಲು ಅವಕಾಶ ನೀಡಲಾಗಿಲ್ಲ.

ದೋಹಾ ಡೈಮಂಡ್ ಲೀಗ್​ ಟಾಪ್-4:

  • ರುಮೇಶ್ ಪತಿರಾಗೆ – 88.68 ಮೀಟರ್ (ಶ್ರೀಲಂಕಾ) – ಚಿನ್ನದ ಪದಕ
  • ಆಂಡರ್ಸನ್ ಪೀಟರ್ಸ್ – 86.38 ಮೀಟರ್ (ಗ್ರೆನಡಾ) – ಬೆಳ್ಳಿ ಪದಕ
  • ಕರ್ಟಿಸ್ ಥಾಂಪ್ಸನ್ – 85.99 ಮೀಟರ್ (ಅಮೆರಿಕ) – ಕಂಚಿನ ಪದಕ
  • ನೀರಜ್ ಚೋಪ್ರಾ-  85.69 ಮೀಟರ್ (ಭಾರತ)

 

Published On - 12:38 pm, Sat, 20 June 26

Loading...
Unable to load recommendations.
Follow Us