FIFA World Cup 2026: ಗೆಲ್ಲದ ಬ್ರೆಝಿಲ್, ಸೋಲದ ಮೊರಾಕೊ..!

Brazil vs Morocco: ಫಿಫಾ ವಿಶ್ವಕಪ್ 2026 ರಲ್ಲಿ ಗೆಲುವಿನೊಂದಿಗೆ ಅಭಿಯಾನ ಆರಂಭಿಸುವ ನಿರೀಕ್ಷೆಯಲ್ಲಿದ್ದ 5 ಬಾರಿಯ ಚಾಂಪಿಯನ್ಸ್​ ಬ್ರೆಝಿಲ್ ತಂಡಕ್ಕೆ ಮೊದಲ ಮ್ಯಾಚ್​ನಲ್ಲೇ ನಿರಾಸೆಯಾಗಿದೆ. ಏಕೆಂದರೆ ಬಲಿಷ್ಠ ಮುನ್ಪಡೆ ಆಟಗಾರರನ್ನು ಒಳಗೊಂಡಿದ್ದರೂ ಬ್ರೆಝಿಲ್ ತಂಡಕ್ಕೆ ಗೆಲುವಿಗಾಗಿ ಮೊರಾಕೊ ರಕ್ಷಣಾ ಕೋಟೆ ಭೇದಿಸಲು ಸಾಧ್ಯವಾಗಿಲ್ಲ.

FIFA World Cup 2026: ಗೆಲ್ಲದ ಬ್ರೆಝಿಲ್, ಸೋಲದ ಮೊರಾಕೊ..!
Brazil Vs Morocco
Image Credit source: AFP

Updated on: Jun 14, 2026 | 9:29 AM

ನ್ಯೂಜೆರ್ಸಿಯ ಮೆಟ್‌ಲೈಫ್ ಸ್ಟೇಡಿಯಂನಲ್ಲಿ ನಡೆದ ಫಿಫಾ ವಿಶ್ವಕಪ್ 2026ರ ಗ್ರೂಪ್ ‘ಸಿ’ ನ ರೋಚಕ ಪಂದ್ಯದಲ್ಲಿ ಬ್ರೆಝಿಲ್ ಮತ್ತು ಮೊರಾಕೊ ತಂಡಗಳು 1-1 ಗೋಲುಗಳ ಸಮಬಲ ಸಾಧಿಸಿವೆ. ಆಫ್ರಿಕನ್ ಚಾಂಪಿಯನ್ಸ್ ಮೊರಾಕೊ ಆರಂಭದಲ್ಲೇ ಮುನ್ನಡೆ ಸಾಧಿಸಿ ಬ್ರೆಝಿಲ್‌ಗೆ ಶಾಕ್ ನೀಡಿತಾದರೂ, ವಿನೀಸಿಯಸ್ ಜೂನಿಯರ್ ಅವರ ಅದ್ಭುತ ಗೋಲಿನ ನೆರವಿನಿಂದ ಬ್ರೆಝಿಲ್ ಸೋಲಿನಿಂದ ಪಾರಾಯಿತು ಎನ್ನಬಹುದು.

ಪಂದ್ಯದ ಆರಂಭದಲ್ಲೇ ಮೊರಾಕೊ ಆಕ್ರಮಣಕಾರಿ ಆಟಕ್ಕೆ ಮುಂದಾಯಿತು. ಮಿಡ್‌ಫೀಲ್ಡ್‌ನಲ್ಲಿ ಬ್ರೆಝಿಲ್ ಮಾಡಿದ ತಪ್ಪನ್ನು ಬಳಸಿಕೊಂಡ ಬ್ರಾಹಿಂ ಡಿಯಾಜ್, ಇಸ್ಮಾಯಿಲ್ ಸೈಬಾರಿ ಅವರಿಗೆ ಅದ್ಭುತ ಪಾಸ್ ನೀಡಿದರು. ಸೈಬಾರಿ ಚೆಂಡನ್ನು ಬ್ರೆಝಿಲ್ ಗೋಲ್‌ಕೀಪರ್ ಅಲಿಸನ್ ಬೆಕರ್ ತಲೆಯ ಮೇಲಿಂದ ನೆಟ್‌ಗೆ ತಳ್ಳುವ ಮೂಲಕ ಮೊರಾಕೊ ತಂಡಕ್ಕೆ 1-0 ಮುನ್ನಡೆ ತಂದುಕೊಟ್ಟರು.

ಐದು ಬಾರಿಯ ವಿಶ್ವ ಚಾಂಪಿಯನ್ ಬ್ರೆಝಿಲ್ ಕೇವಲ 10 ನಿಮಿಷಗಳಲ್ಲಿ ಮೊರಾಕೊಗೆ ತಿರುಗೇಟು ನೀಡಿತು. ಎಡಭಾಗದಿಂದ ಚೆಂಡನ್ನು ಪಡೆದ ಸ್ಟಾರ್ ಆಟಗಾರ ವಿನೀಸಿಯಸ್ ಜೂನಿಯರ್, ಮೊರಾಕೊದ ರಕ್ಷಣಾ ಕೋಟೆಯನ್ನು ಭೇದಿಸಿದರು. ಅಲ್ಲದೆ ಭರ್ಜರಿ ಆಂಗಲ್ಡ್ ಶಾಟ್ ಮೂಲಕ ಚೆಂಡನ್ನು ಗೋಲ್ ಪೋಸ್ಟ್‌ನ ಮೇಲ್ಭಾಗಕ್ಕೆ ತಲುಪಿಸಿದರು. ವಿನೀಸಿಯಸ್ ಜೂನಿಯರ್ ಬಾರಿಸಿದ ಈ ಅದ್ಭುತ ಗೋಲು ನೋಡಿ ಇಡೀ ಪ್ರೇಕ್ಷಕರು ರೋಮಾಂಚನಭರಿತರಾದರು.

ಇನ್ನು ದ್ವಿತೀಯಾರ್ಧದಲ್ಲಿ ನ್ಯೂಜೆರ್ಸಿಯ ಅತಿಯಾದ ಹವಾಮಾನ ಮತ್ತು ತೇವಾಂಶದಿಂದಾಗಿ ಆಟಗಾರರ ವೇಗ ಸ್ವಲ್ಪ ಕಡಿಮೆಯಾಯಿತು. ಬ್ರೆಝಿಲ್ ತನ್ನ ಮಿಡ್‌ಫೀಲ್ಡ್ ರಕ್ಷಣೆಯನ್ನು ಬಲಪಡಿಸಿಕೊಂಡರೆ, ಮೊರಾಕೊದ ಗೋಲ್‌ಕೀಪರ್ ಯಾಸಿನ್ ಬೌನೊ ಅವರು ರಫಿನ್ಹಾ ಅವರ ಕೆಲವು ಅಪಾಯಕಾರಿ ಗೋಲು ಯತ್ನಗಳನ್ನು ಯಶಸ್ವಿಯಾಗಿ ತಡೆದರು. ಪರಿಣಾಮ ಪಂದ್ಯವು ಸಮಬಲದೊಂದಿಗೆ ಸಾಗಿತು.

ಇದಾದ ಬಳಿಕ ಪಂದ್ಯದ ಹೆಚ್ಚುವರಿ ಸಮಯದಲ್ಲಿ ಮೊರಾಕೊದ ನೀಲ್ ಎಲ್ ಐನೌಯಿ ಹೊಡೆದ ಆಕರ್ಷಕ ಕಿಕ್ ಶಾಟ್​ ಅನ್ನು ಬ್ರೆಝಿಲ್ ಗೋಲ್ ಕೀಪರ್ ಅಲಿಸನ್ ಬೆಕರ್ ಅದ್ಭುತವಾಗಿ ಡೈವ್ ಮಾಡುವ ಮೂಲಕ ತಡೆದರು. ಇದರೊಂದಿಗೆ ಪಂದ್ಯವು 1-1 ರಿಂದ ಡ್ರಾದಲ್ಲಿ ಕೊನೆಗೊಂಡಿತು.

YouTube video player

ಅಂದರೆ ಈ ಬಾರಿಯ ಟೂರ್ನಿಯಲ್ಲಿ ಬಲಿಷ್ಠ ಪಡೆಯಾಗಿ ಗುರುತಿಸಿಕೊಂಡಿರುವ ಬ್ರೆಝಿಲ್ ತಂಡವು ಗೆಲುವಿನೊಂದಿಗೆ ಅಭಿಯಾನ ಆರಂಭಿಸುವಲ್ಲಿ ವಿಫಲವಾಗಿದೆ. ಅತ್ತ ಫಿಫಾ ಅಂಗಳದ ಡಾರ್ಕ್ ಹಾರ್ಸ್ ಎಂದೇ ಗುರುತಿಸಿಕೊಂಡಿರುವ ಮೊರಾಕೊ ಮೊದಲ ಮ್ಯಾಚ್​ನಲ್ಲೇ ಅದ್ಭುತ ಪ್ರದರ್ಶನ ನೀಡುವ ಮೂಲಕ ಎಲ್ಲಾ ತಂಡಗಳಿಗೆ ಎಚ್ಚರಿಕೆ ರವಾನಿಸಿದೆ.

ಇದನ್ನೂ ಓದಿ: ಗಿಲ್ ಗಿಲಕ್ಕು… ಒಂದೇ ಕೈಯಲ್ಲಿ ಅತ್ಯದ್ಭುತ ಕ್ಯಾಚ್..!

ಇದೀಗ ಮೊದಲ ಪಂದ್ಯ ಡ್ರಾ ಮಾಡಿಕೊಂಡಿರುವ ಬ್ರೆಝಿಲ್ ತಂಡವು ತನ್ನ ಮುಂದಿನ ಪಂದ್ಯವನ್ನು ಹೈಟಿ ವಿರುದ್ಧ ಆಡಲಿದೆ. ಇನ್ನು ಮೊರಾಕೊ ತಂಡವು ಸ್ಕಾಟ್ಲೆಂಡ್ ವಿರುದ್ಧ ಕಣಕ್ಕಿಳಿಯಲಿದೆ. ಈ ಪಂದ್ಯಗಳ ಮೂಲಕ ಯಾವ ತಂಡ ಗೆಲುವಿನ ಖಾತೆ ತೆರೆಯಲಿದೆ ಎಂಬುದನ್ನು ಕಾದು ನೋಡಬೇಕಿದೆ.

 

Follow Us