ಲೆಕ್ಕಾಚಾರ ಉಲ್ಟಾ ಪಲ್ಟಾ… ಫೈನಲ್​ನಲ್ಲಿ ಮೆಸ್ಸಿ 2 ಗೋಲು ಬಾರಿಸಲೇಬೇಕು!

FIFA World Cup 2026: ಫಿಫಾ ವಿಶ್ವಕಪ್​ನ ಫೈನಲ್ ಪಂದ್ಯದಲ್ಲಿ ಅರ್ಜೆಂಟೀನಾ ಹಾಗೂ ಸ್ಪೇನ್ ತಂಡಗಳು ಮುಖಾಮುಖಿಯಾಗಲಿದೆ. ಭಾನುವಾರ (ಜುಲೈ 19) ಅಮೆರಿಕದ ನ್ಯೂಜೆರ್ಸಿಯಲ್ಲಿರುವ ಮೆಟ್‌ಲೈಫ್ ಸ್ಟೇಡಿಯಂನಲ್ಲಿ ನಡೆಯಲಿರುವ ಫೈನಲ್ ಮ್ಯಾಚ್​ನಲ್ಲಿ ಲಿಯೋನೆಲ್ ಮೆಸ್ಸಿ 2 ಗೋಲು ದಾಖಲಿಸಬೇಕಾದ ಅನಿವಾರ್ಯತೆ ಎದುರಾಗಿದೆ.

ಲೆಕ್ಕಾಚಾರ ಉಲ್ಟಾ ಪಲ್ಟಾ... ಫೈನಲ್​ನಲ್ಲಿ ಮೆಸ್ಸಿ 2 ಗೋಲು ಬಾರಿಸಲೇಬೇಕು!
Lionel Messi
Image Credit source: FIFA

Updated on: Jul 19, 2026 | 1:36 PM

2026ರ ಫಿಫಾ ವಿಶ್ವಕಪ್‌ನ ಫೈನಲ್ ಪಂದ್ಯಕ್ಕೆ ವೇದಿಕೆ ಸಜ್ಜಾಗಿದೆ. ಒಂದು ಕಡೆ ಸತತ ಎರಡನೇ ಬಾರಿಗೆ ವಿಶ್ವಕಪ್ ಮುಕುಟ ಧರಿಸಲು ಸಜ್ಜಾಗಿರುವ ಚಾಂಪಿಯನ್ ಅರ್ಜೆಂಟೀನಾ ಇದ್ದರೆ, ಮತ್ತೊಂದು ಕಡೆ ಟೂರ್ನಿಯುದ್ದಕ್ಕೂ ಬಲಿಷ್ಠ ಡಿಫೆನ್ಸ್ ಪ್ರದರ್ಶಿಸಿರುವ ಸ್ಪೇನ್ ಪಡೆ ಸಜ್ಜಾಗಿ ನಿಂತಿದೆ. ಈ ಇಬ್ಬರು ಬಲಿಷ್ಠರ ಮುಖಾಮುಖಿಯಲ್ಲಿ, ಇಡೀ ಜಗತ್ತಿನ ಕಣ್ಣುಗಳು ನೆಟ್ಟಿರುವುದು 39 ವರ್ಷದ ಲಿಯೋನೆಲ್ ಮೆಸ್ಸಿ ಮೇಲೆ!

ಹೌದು, ಫೈನಲ್ ಪಂದ್ಯವು ಲಿಯೋನೆಲ್ ಮೆಸ್ಸಿ ಪಾಲಿಗೆ ನಿರ್ಣಾಯಕ. ಏಕೆಂದರೆ ಈ ಪಂದ್ಯದಲ್ಲಿ 2 ಗೋಲು ಬಾರಿಸಿದರೆ ಮಾತ್ರ ಮೆಸ್ಸಿ ಒಂದು ವಿಶ್ವ ದಾಖಲೆಯೊಂದಿಗೆ ಎರಡು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಳ್ಳಬಹುದು.

ಏಕೆಂದರೆ ಟೂರ್ನಿಯುದ್ದಕ್ಕೂ ಅದ್ಭುತ ಪ್ರದರ್ಶನ ನೀಡುತ್ತಾ ಬಂದಿದ್ದ ಲಿಯೋನೆಲ್ ಮೆಸ್ಸಿ ಅವರನ್ನು ಕಳೆದ ಪಂದ್ಯದಲ್ಲಿ ಫ್ರಾನ್ಸ್​ನ ಕಿಲಿಯನ್ ಎಂಬಾಪೆ ಹಿಂದಿಕ್ಕಿದ್ದಾರೆ. ಅದು ಕೂಡ ವಿಶ್ವ ದಾಖಲೆ ನಿರ್ಮಿಸುವ ಮೂಲಕ.

  • ಇಂಗ್ಲೆಂಡ್ ವಿರುದ್ಧದಲ್ಲಿ ಎಂಬಾಪೆ 2 ಗೋಲು ದಾಖಲಿಸಿ ಮಿಂಚಿದ್ದರು.
  • ಈ ಎರಡು ಗೋಲುಗಳೊಂದಿಗೆ ಈ ಬಾರಿ ವಿಶ್ವಕಪ್​ನಲ್ಲಿ ಅತ್ಯಧಿಕ ಗೋಲು ದಾಖಲಿಸಿದ ಆಟಗಾರರಲ್ಲಿ ಪಟ್ಟಿ ಎಂಬಾಪೆ ಅಗ್ರಸ್ಥಾನಕ್ಕೇರಿದ್ದಾರೆ.
  • ಈ ಪಟ್ಟಿಯಲ್ಲಿ ಎಂಬಾಪೆ 10 ಗೋಲುಗಳೊಂದಿಗೆ ಅಗ್ರಸ್ಥಾನದಲ್ಲಿದ್ದರೆ, ಮೆಸ್ಸಿ 8 ಗೋಲುಗಳೊಂದಿಗೆ ದ್ಚಿತೀಯ ಸ್ಥಾನದಲ್ಲಿದ್ದಾರೆ.

ಹಾಗೆಯೇ ಈ ಎರಡು ಗೋಲುಗಳೊಂದಿಗೆ ಫಿಫಾ ವಿಶ್ವಕಪ್ ಇತಿಹಾಸದಲ್ಲೇ ಅತ್ಯಧಿಕ ಗೋಲು ದಾಖಲಿಸಿದ ಆಟಗಾರರ ಪಟ್ಟಿಯಲ್ಲೂ ಕಿಲಿಯನ್ ಎಂಬಾಪೆ ಅಗ್ರಸ್ಥಾನಕ್ಕೇರಿದ್ದಾರೆ.

  • ಎಂಬಾಪೆ ಒಟ್ಟು 22 ಗೋಲುಗಳನ್ನು ಬಾರಿಸುವ ಮೂಲಕ ಹೊಸ ವಿಶ್ವ ದಾಖಲೆ ನಿರ್ಮಿಸಿದ್ದಾರೆ.
  • ಮೆಸ್ಸಿ 21 ಗೋಲುಗಳೊಂದಿಗೆ ಈ ಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿದ್ದಾರೆ.

ಅಂದರೆ ಕಿಲಿಯನ್ ಎಂಬಾಪೆ ಕೊನೆಯ ಮ್ಯಾಚ್​ನಲ್ಲಿ ಬಾರಿಸಿದ 2 ಗೋಲುಗಳಿಂದಾಗಿ ಲಿಯೋನೆಲ್ ಮೆಸ್ಸಿ ಅವರ ಗೋಲ್ಡನ್ ಬೂಟ್, ಗೋಲ್ಡನ್ ಬಾಲ್ ಲೆಕ್ಕಾಚಾರಗಳು ಉಲ್ಟಾ ಪಲ್ಟಾ ಆಗಿದೆ.

ಮೆಸ್ಸಿಗೆ 2 ಗೋಲುಗಳ ಅನಿವಾರ್ಯತೆ ಏಕೆ?

ಸ್ಪೇನ್ ವಿರುದ್ಧದ ಫೈನಲ್‌ನಲ್ಲಿ ಲಿಯೋನೆಲ್ ಮೆಸ್ಸಿ ಕೇವಲ ಮೈದಾನಕ್ಕಿಳಿಯುತ್ತಿಲ್ಲ, ಬದಲಿಗೆ ಸಾರ್ವಕಾಲಿಕ ಶ್ರೇಷ್ಠತೆಯ ಮುದ್ರೆ ಒತ್ತಲು ಸಜ್ಜಾಗಿದ್ದಾರೆ. ಅವರು ಕನಿಷ್ಠ 2 ಗೋಲುಗಳನ್ನು ಗಳಿಸಲೇಬೇಕಾದ ಲೆಕ್ಕಾಚಾರ ಇಲ್ಲಿದೆ.

  • ಗೋಲ್ಡನ್ ಬೂಟ್: ಫಿಫಾ ವಿಶ್ವಕಪ್​ 2026ರ ಗೋಲ್ಡನ್ ಬೂಟ್ ಪ್ರಶಸ್ತಿ ಪಟ್ಟಿಯಲ್ಲಿ ಕಿಲಿಯನ್ ಎಂಬಾಪೆ ಅಗ್ರಸ್ಥಾನದಲ್ಲಿದ್ದಾರೆ. ಒಟ್ಟು 10 ಗೋಲು ದಾಖಲಿಸಿರುವ ಎಂಬಾಪೆಯನ್ನು ಹಿಂದಿಕ್ಕಿ ಗೋಲ್ಡನ್ ಬೂಟ್ ಪ್ರಶಸ್ತಿ ಪಡೆಯಲು ಲಿಯೋನೆಲ್ ಮೆಸ್ಸಿ (8) ಫೈನಲ್ ಮ್ಯಾಚ್​ನಲ್ಲಿ 2 ಗೋಲು ದಾಖಲಿಸಲೇಬೇಕು.
  • ವಿಶ್ವ ದಾಖಲೆ: ವಿಶ್ವಕಪ್ ಇತಿಹಾಸದಲ್ಲಿ ಅತಿ ಹೆಚ್ಚು ಗೋಲು ಗಳಿಸಿದ ದಾಖಲೆ ಸದ್ಯ ಕಿಲಿಯನ್ ಎಂಬಾಪೆ (22 ಗೋಲು) ಹೆಸರಲ್ಲಿದೆ. ಸದ್ಯ 21 ಗೋಲುಗಳನ್ನು ಹೊಂದಿರುವ ಮೆಸ್ಸಿ, ಫೈನಲ್​ನಲ್ಲಿ 2 ಗೋಲು ಬಾರಿಸಿದರೆ ಫಿಫಾ ವಿಶ್ವಕಪ್​ನಲ್ಲಿ ಅತ್ಯಧಿಕ ಗೋಲು ಬಾರಿಸಿದ ಆಟಗಾರ ಎಂಬ ವಿಶ್ವ ದಾಖಲೆಯನ್ನು ತಮ್ಮದಾಗಿಸಿಕೊಳ್ಳಲಿದ್ದಾರೆ.
  • ಗೋಲ್ಡನ್ ಬಾಲ್: ಈ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ನೀಡಿರುವ ಮೆಸ್ಸಿ ಈಗಾಗಲೇ ಟೂರ್ನಿಯ ಅತ್ಯುತ್ತಮ ಆಟಗಾರನಿಗೆ ನೀಡುವ ‘ಗೋಲ್ಡನ್ ಬಾಲ್’ ಪ್ರಶಸ್ತಿ ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದಾರೆ. ಈ ಪ್ರಶಸ್ತಿಯನ್ನು ಖಚಿತಪಡಿಸಿಕೊಳ್ಳಲ;ಉ ಫೈನಲ್​ ಮ್ಯಾಚ್​ನಲ್ಲಿ 2 ಗೋಲು ದಾಖಲಿಸಿದರೆ ಸಾಕು.

ಇದನ್ನೂ ಓದಿ: ಫೈನಲ್ ಪಂದ್ಯಕ್ಕೂ ಮುನ್ನ ಯಮಾಲ್ ವಿಚಿತ್ರ ‘ಶಪಥ’

ಈ ಮೂರು ಕಾರಣಗಳಿಂದಾಗಿ ಲಿಯೋನೆಲ್ ಮೆಸ್ಸಿ ಫೈನಲ್ ಮ್ಯಾಚ್​ನಲ್ಲಿ 2 ಗೋಲು ದಾಖಲಿಸಲೇಬೇಕು. ಹೀಗಾಗಿ, ಇಂದಿನ ಮಹಾ ಫೈನಲ್ ಕೇವಲ ಅರ್ಜೆಂಟೀನಾ ಮತ್ತು ಸ್ಪೇನ್ ನಡುವಿನ ಕಿರೀಟದ ಹೋರಾಟವಲ್ಲ. ಇದು ಮೆಸ್ಸಿ ಪಾಲಿಗೆ ಸಾರ್ವಕಾಲಿಕ ಶ್ರೇಷ್ಠತೆಯ ಸಿಂಹಾಸನವನ್ನು ಮರಳಿ ಪಡೆಯುವ ಅಂತಿಮ ಯುದ್ಧ.

ಅದರಂತೆ, ಫೈನಲ್‌ ಪಂದ್ಯದಲ್ಲಿ 2 ಗೋಲು ಬಾರಿಸಿ ಲಿಯೋನೆಲ್ ಮೆಸ್ಸಿ ಗೋಲ್ಡನ್ ಬೂಟ್, ಗೋಲ್ಡನ್ ಬಾಲ್ ಮತ್ತು ವಿಶ್ವ ದಾಖಲೆಯನ್ನು ತಮ್ಮದಾಗಿಸಿಕೊಳ್ಳಲಿದ್ದಾರಾ ಕಾದು ನೋಡಬೇಕಿದೆ.

 

Follow Us