
ಭಾರತೀಯ ಕ್ರೀಡಾಲೋಕಕ್ಕೆ ಭಾರಿ ಆಘಾತ ಎದುರಾಗಿದ್ದು, ರೋಯಿಂಗ್ ಇತಿಹಾಸದಲ್ಲೇ ದೇಶಕ್ಕೆ ಲಭಿಸಿದ್ದ ಮೊದಲ ಐತಿಹಾಸಿಕ ವಿಶ್ವಕಪ್ ಚಿನ್ನದ ಪದಕ ಈಗ ಡೋಪಿಂಗ್ ಗ್ರಹಣಕ್ಕೆ ಸಿಲುಕಿ ಕೈತಪ್ಪುವುದು ಬಹುತೇಕ ಖಚಿತವಾಗಿದೆ. ಕಳೆದ ಜೂನ್ ತಿಂಗಳಲ್ಲಿ ಸ್ವಿಟ್ಜರ್ಲೆಂಡ್‌ನಲ್ಲಿ ನಡೆದ ವಿಶ್ವ ರೋಯಿಂಗ್ ಕಪ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದ ರೋವರ್ ಲಕ್ಷಯ್, ಉದ್ದೀಪನ ಮದ್ದು (ಡೋಪಿಂಗ್) ಪರೀಕ್ಷೆಯಲ್ಲಿ ನಿಷೇಧಿತ ಸ್ಟೆರಾಯ್ಡ್ ಬಳಸಿ ಸಿಕ್ಕಿಬಿದ್ದಿದ್ದಾರೆ. ಹೀಗಾಗಿ ವಿಶ್ವ ರೋಯಿಂಗ್ ಕಪ್‌ನಲ್ಲಿ ಗೆದ್ದಿದ್ದ ಚಿನ್ನದ ಪದಕವನ್ನು ವಾಪಸ್ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ.
ಕಳೆದ ಜೂನ್ 28, 2026 ರಂದು ಸ್ವಿಟ್ಜರ್ಲೆಂಡ್‌ನ ಲುಸರ್ನ್‌ನಲ್ಲಿ ನಡೆದ ವಿಶ್ವ ರೋಯಿಂಗ್ ಕಪ್ III ರ ಲೈಟ್‌ವೇಟ್ ಪುರುಷರ ಡಬಲ್ ಸ್ಕಲ್ಸ್ ವಿಭಾಗದಲ್ಲಿ ಲಕ್ಷಯ್ ಮತ್ತು ಉಜ್ವಲ್ ಕುಮಾರ್ ಸಿಂಗ್ ಜೋಡಿ 6:26.09 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಭಾರತಕ್ಕೆ ಚೊಚ್ಚಲ ವಿಶ್ವಕಪ್ ಚಿನ್ನದ ಪದಕ ಗೆದ್ದು ಕೊಟ್ಟಿದ್ದರು. ಆದರೀಗ ಈ ಸಂಭ್ರಮವು ತೆರೆಬಿದ್ದಿದೆ.
ಲಕ್ಷಯ್ ಅವರು ಭಾರತೀಯ ಸೇನೆಯಲ್ಲಿ ಹವಿಲ್ದಾರ್ ಆಗಿದ್ದು, ಪುಣೆಯ ಆರ್ಮಿ ರೋಯಿಂಗ್ ನೋಡ್ನಲ್ಲಿ ತರಬೇತಿ ಪಡೆಯುತ್ತಿದ್ದರು. ಮೇ 25, 2026 ರಂದು ಪುಣೆಯ ಆರ್ಮಿ ರೋಯಿಂಗ್ ನೋಡ್ನಲ್ಲಿ ತರಬೇತಿ ಪಡೆಯುತ್ತಿದ್ದಾಗ ಅಧಿಕಾರಿಗಳು ಹಠಾತ್ ಭೇಟಿ ನೀಡಿ ಈ ‘ಸ್ಪರ್ಧೆಯ ಹೊರಗಿನ’ ಮಾದರಿಯನ್ನು ಸಂಗ್ರಹಿಸಿದ್ದರು. ಕ್ರೀಡಾಪಟುಗಳು ತರಬೇತಿಯ ಸಮಯದಲ್ಲಿ ರಹಸ್ಯವಾಗಿ ಶಕ್ತಿವರ್ಧಕಗಳನ್ನು ಬಳಸದಂತೆ ತಡೆಯಲು ಈ ರೀತಿ ಮಾಡಲಾಗುತ್ತದೆ.
ಹೀಗೆ ಸಂಗ್ರಹಿಸಲಾದ ಲಕ್ಷಯ್ ಅವರ ಮಾದರಿಯಲ್ಲಿ ವಿಶ್ವ ಉದ್ದೀಪನ ಮದ್ದು ಪ್ರತಿರೋಧಕ ಸಂಸ್ಥೆ (WADA) ನಿಷೇಧಿಸಿರುವ ‘ಸ್ಟಾನೋಜೋಲೋಲ್’ ಎಂಬ ಶಕ್ತಿ ವರ್ಧಕ ಅನಾಬೊಲಿಕ್ ಸ್ಟೆರಾಯ್ಡ್ ಪತ್ತೆಯಾಗಿದೆ. ಇದರ ಬೆನ್ನಲ್ಲೇ ರಾಷ್ಟ್ರೀಯ ಉದ್ದೀಪನ ಮದ್ದು ಪ್ರತಿರೋಧಕ ಸಂಸ್ಥೆ ತಕ್ಷಣದಿಂದ ಜಾರಿಗೆ ಬರುವಂತೆ ಲಕ್ಷಯ್ ಅವರನ್ನು ತಾತ್ಕಾಲಿಕ ಅಮಾನತ್ತಿನಲ್ಲಿಟ್ಟಿದ್ದಾರೆ.
ವಿಶ್ವ ರೋಯಿಂಗ್ ನಿಯಮಾವಳಿಗಳ ಪ್ರಕಾರ, ಒಬ್ಬ ಕ್ರೀಡಾಪಟು ಡೋಪಿಂಗ್ ಪರೀಕ್ಷೆಯಲ್ಲಿ ಫೇಲ್ ಆದ ದಿನಾಂಕದ ನಂತರ ಅವರು ಭಾಗವಹಿಸಿದ ಎಲ್ಲಾ ಸ್ಪರ್ಧೆಗಳ ಫಲಿತಾಂಶಗಳನ್ನು ರದ್ದುಗೊಳಿಸಲಾಗುತ್ತದೆ. ಲಕ್ಷಯ್ ಅವರ ಮಾದರಿಯನ್ನು ಮೇ ತಿಂಗಳಲ್ಲಿ ಪಡೆಯಲಾಗಿದ್ದು, ಪದಕವನ್ನು ಜೂನ್ ಅಂತ್ಯದಲ್ಲಿ ಗೆಲ್ಲಲಾಗಿದೆ. ಹಾಗಾಗಿ ಈ ಚಿನ್ನದ ಪದಕವನ್ನು ಹಿಂಪಡೆಯಲಾಗುತ್ತದೆ. ಇದು ಅವರೊಂದಿಗೆ ಶ್ರಮ ಪಟ್ಟಿದ್ದ ಸಹ-ರೋವರ್ ಉಜ್ವಲ್ ಕುಮಾರ್ ಸಿಂಗ್ ಅವರಿಗೂ ಭಾರಿ ಅನ್ಯಾಯ ಮಾಡಿದಂತಾಗಿದೆ.
ಭಾರತೀಯ ರೋಯಿಂಗ್ ಫೆಡರೇಶನ್ (RFI) ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಲಕ್ಷಯ್ ಅವರ ನಿರಪರಾಧಿತ್ವವನ್ನು ಸಾಬೀತುಪಡಿಸಲು ಪ್ರಯೋಗಾಲಯದಲ್ಲಿ ‘ಬಿ’ ಮಾದರಿಯ ಪರೀಕ್ಷೆಗೆ ವಿನಂತಿಸಲು ಕ್ರೀಡಾಪಟುವಿಗೆ ಸಂಪೂರ್ಣ ಬೆಂಬಲ ನೀಡುವುದಾಗಿ ತಿಳಿಸಿದೆ.
ಇದನ್ನೂ ಓದಿ: ಸ್ಕ್ವಾಷ್ ಚಾಂಪಿಯನ್ಶಿಪ್ನಲ್ಲಿ ಹೊಸ ಇತಿಹಾಸ ಬರೆದ ಅನಾಹತ್ ಸಿಂಗ್
ಒಂದು ವೇಳೆ ‘ಬಿ’ ಮಾದರಿ ಪರೀಕ್ಷೆಯಲ್ಲೂ ಡೋಪಿಂಗ್ ಸಾಬೀತಾದರೆ, ಲಕ್ಷಯ್ ಅವರಿಗೆ ಕನಿಷ್ಠ 4 ವರ್ಷಗಳ ಕಾಲ ಕ್ರೀಡಾ ನಿಷೇಧ ವಿಧಿಸಲಾಗುತ್ತದೆ.