
ಸಾಮಾನ್ಯವಾಗಿ ಯಾವುದೇ ದೇಶದಲ್ಲಿ ನಡೆಯುವ ದೇಶೀಯ ಕ್ರಿಕೆಟ್ ಟೂರ್ನಿಗಳಲ್ಲಿ ಅದೇ ದೇಶದ ಅಂಪೈರ್‌ಗಳು ಕಾರ್ಯನಿರ್ವಹಿಸುತ್ತಾರೆ. ಉದಾಹರಣೆಗೆ, ಭಾರತದಲ್ಲಿ ನಡೆಯುವ ರಣಜಿ ಟ್ರೋಫಿಯಲ್ಲಿ ಭಾರತೀಯ ಅಂಪೈರ್‌ಗಳೇ ಪಂದ್ಯಗಳನ್ನು ನಡೆಸಿಕೊಡುತ್ತಾರೆ. ಆದರೆ ಇನ್ನು ಮುಂದೆ ಈ ವಿಚಾರದಲ್ಲಿ ಬದಲಾವಣೆ ಆಗಲಿದೆ. ರಣಜಿ ಟ್ರೋಫಿಯಲ್ಲಿ ಆಸ್ಟ್ರೇಲಿಯಾದ ಅಂಪೈರ್‌ಗಳು ಕೂಡ ಕಾಣಿಸಿಕೊಳ್ಳಲಿದ್ದಾರೆ. ಇದಕ್ಕೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಕೂಡ ಒಪ್ಪಿಗೆ ನೀಡಿದೆ. ಅಷ್ಟೇ ಅಲ್ಲ, ಆಸ್ಟ್ರೇಲಿಯಾದ ದೇಶೀಯ ಕ್ರಿಕೆಟ್ ಟೂರ್ನಿಗಳಲ್ಲೂ ಭಾರತೀಯ ಅಂಪೈರ್‌ಗಳು ಅಂಪೈರಿಂಗ್ ಮಾಡಲಿದ್ದಾರೆ. ಹಾಗಾದರೆ, ಈ ಹೊಸ ನಿರ್ಧಾರಕ್ಕೆ ಕಾರಣವೇನು?
ವಾಸ್ತವವಾಗಿ, ಕ್ರಿಕೆಟ್ ಆಸ್ಟ್ರೇಲಿಯಾ ಮತ್ತು ಬಿಸಿಸಿಐ ಜಂಟಿಯಾಗಿ ಅಂಪೈರ್ ವಿನಿಮಯ ಕಾರ್ಯಕ್ರಮವನ್ನು ಆರಂಭಿಸಿವೆ. ಈ ಕಾರ್ಯಕ್ರಮದ ಅಡಿಯಲ್ಲಿ ಎರಡೂ ದೇಶಗಳ ಅಂಪೈರ್‌ಗಳು ಪರಸ್ಪರ ದೇಶಗಳಿಗೆ ತೆರಳಿ ಅಲ್ಲಿನ ದೇಶೀಯ ಕ್ರಿಕೆಟ್ ಪಂದ್ಯಗಳಲ್ಲಿ ಅಂಪೈರಿಂಗ್ ಮಾಡಲಿದ್ದಾರೆ. ಈ ಕಾರ್ಯಕ್ರಮದ ಭಾಗವಾಗಿ ಆಸ್ಟ್ರೇಲಿಯಾದ ಅಂಪೈರ್ ಬೆನ್ ಟ್ರೆಲೋರ್ ಅವರು ಅಕ್ಟೋಬರ್ 18ರಂದು ಆರಂಭವಾದ ದೆಹಲಿ ಮತ್ತು ಗುಜರಾತ್ ನಡುವಿನ ರಣಜಿ ಟ್ರೋಫಿ ಪಂದ್ಯದಲ್ಲಿ ಅಂಪೈರಿಂಗ್ ಮಾಡುತ್ತಿದ್ದಾರೆ. ಇದಾದ ಬಳಿಕ ಅಕ್ಟೋಬರ್ 26ರಂದು ಆರಂಭವಾಗಲಿರುವ ಮುಂಬೈ ಮತ್ತು ಹರಿಯಾಣ ನಡುವಿನ ಪಂದ್ಯದಲ್ಲೂ ಅವರು ಅಂಪೈರ್ ಆಗಿ ಕಾರ್ಯನಿರ್ವಹಿಸಲಿದ್ದಾರೆ.
ಇದೇ ವೇಳೆ ಭಾರತದ ಅಂಪೈರ್ ಪರಾಶರ್ ಜೋಶಿ ಅವರು ಆಸ್ಟ್ರೇಲಿಯಾಕ್ಕೆ ತೆರಳಿ ಅಲ್ಲಿನ ದೇಶೀಯ ಕ್ರಿಕೆಟ್ ಪಂದ್ಯಗಳಲ್ಲಿ ಅಂಪೈರಿಂಗ್ ಮಾಡಲಿದ್ದಾರೆ. ಜೋಶಿ ಅವರು ಆಸ್ಟ್ರೇಲಿಯಾದ ಪ್ರಥಮ ದರ್ಜೆ ಕ್ರಿಕೆಟ್ ಟೂರ್ನಿಯಾದ ಶೆಫೀಲ್ಡ್ ಶೀಲ್ಡ್‌ನ ಎರಡು ಪಂದ್ಯಗಳಲ್ಲಿ ಅಂಪೈರಿಂಗ್ ಮಾಡಲಿದ್ದಾರೆ. ಇದರ ಜೊತೆಗೆ ಏಕದಿನ ಕಪ್‌ನ ಒಂದು ಪಂದ್ಯದಲ್ಲೂ ಅಂಪೈರ್ ಆಗಿ ಕಾರ್ಯನಿರ್ವಹಿಸಲಿದ್ದಾರೆ.
ನವೆಂಬರ್ 11ರಿಂದ 14ರವರೆಗೆ ಬ್ರಿಸ್ಬೇನ್‌ನ ಗಬ್ಬಾ ಮೈದಾನದಲ್ಲಿ ನಡೆಯಲಿರುವ ಕ್ವೀನ್ಸ್‌ಲ್ಯಾಂಡ್ ಮತ್ತು ಟ್ಯಾಸ್ಮೇನಿಯಾ ನಡುವಿನ ಶೆಫೀಲ್ಡ್ ಶೀಲ್ಡ್ ಪಂದ್ಯದಲ್ಲಿ ಅವರು ಅಂಪೈರಿಂಗ್ ಮಾಡಲಿದ್ದಾರೆ. ನಂತರ ನವೆಂಬರ್ 18ರಂದು ನಡೆಯಲಿರುವ ಏಕದಿನ ಕಪ್ ಪಂದ್ಯದಲ್ಲೂ ಕರ್ತವ್ಯ ನಿರ್ವಹಿಸಲಿದ್ದಾರೆ. ಇದಾದ ಬಳಿಕ ನವೆಂಬರ್ 22ರಿಂದ 25ರವರೆಗೆ ನ್ಯೂ ಸೌತ್ ವೇಲ್ಸ್ ಮತ್ತು ಕ್ವೀನ್ಸ್‌ಲ್ಯಾಂಡ್ ನಡುವಿನ ಶೆಫೀಲ್ಡ್ ಶೀಲ್ಡ್ ಪಂದ್ಯದಲ್ಲೂ ಜೋಶಿ ಅಂಪೈರ್ ಆಗಿ ಕಾಣಿಸಿಕೊಳ್ಳಲಿದ್ದಾರೆ.
ಆಸ್ಟ್ರೇಲಿಯಾದ ಅಂಪೈರ್ ಬೆನ್ ಟ್ರೆಲೋರ್ ಮತ್ತು ಭಾರತದ ಅಂಪೈರ್ ಪರಾಶರ್ ಜೋಶಿ ಇಬ್ಬರೂ ದೇಶೀಯ ಹಾಗೂ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಉತ್ತಮ ಅನುಭವ ಹೊಂದಿದ್ದಾರೆ.
ರಣಜಿಯಲ್ಲಿ ಚಿನ್ಮಯ್ ಸುತಾರ್ ಇತಿಹಾಸ! ಅಜೇಯ 400 ರನ್ ಸಿಡಿಸಿದ ಮಿಜೋರಾಂ ಬ್ಯಾಟರ್
ಬಿಸಿಸಿಐ ಮತ್ತು ಕ್ರಿಕೆಟ್ ಆಸ್ಟ್ರೇಲಿಯಾ ಆರಂಭಿಸಿರುವ ಈ ವಿನಿಮಯ ಕಾರ್ಯಕ್ರಮದಿಂದ ಎರಡೂ ದೇಶಗಳ ಅಂಪೈರ್‌ಗಳಿಗೆ ಹೊಸ ಪರಿಸರದಲ್ಲಿ ಕೆಲಸ ಮಾಡುವ ಅವಕಾಶ ಸಿಗಲಿದೆ. ವಿಭಿನ್ನ ಪರಿಸ್ಥಿತಿಗಳಲ್ಲಿ ಪಂದ್ಯಗಳನ್ನು ನಿರ್ವಹಿಸುವ ಅನುಭವವೂ ಹೆಚ್ಚಲಿದೆ. ಅಲ್ಲದೆ ಈ ಕಾರ್ಯಕ್ರಮವು ಭಾರತೀಯ ಮತ್ತು ಆಸ್ಟ್ರೇಲಿಯಾದ ಅಂಪೈರ್‌ಗಳ ಅನುಭವವನ್ನು ಮತ್ತಷ್ಟು ಹೆಚ್ಚಿಸುವುದರ ಜೊತೆಗೆ, ಎರಡೂ ದೇಶಗಳ ದೇಶೀಯ ಕ್ರಿಕೆಟ್‌ನಲ್ಲಿ ಅಂಪೈರಿಂಗ್ ಗುಣಮಟ್ಟವನ್ನು ಉತ್ತಮಪಡಿಸಲು ಸಹಕಾರಿಯಾಗಬಹುದು.