
ಭಾರತದ ಪುರುಷರ ಮತ್ತು ಮಹಿಳೆಯರ ರಾಷ್ಟ್ರೀಯ ಫುಟ್‌ಬಾಲ್ ತಂಡಗಳು ಮುಂಬರುವ ಏಷ್ಯನ್ ಗೇಮ್ಸ್ 2026 ಟೂರ್ನಿಯಿಂದ ಅಧಿಕೃತವಾಗಿ ಹೊರಬಿದ್ದಿವೆ. ಇದಕ್ಕೆ ಮುಖ್ಯ ಕಾರಣ ಕ್ರೀಡಾ ಸಚಿವಾಲಯದ ಕಠಿಣ ನಿಯಮಾವಳಿಗಳು. ಅಂದರೆ ಭಾರತ ಸರ್ಕಾರದ ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯವು ಬಹು-ಕ್ರೀಡಾಕೂಟಗಳಿಗೆ ಕಳುಹಿಸುವ ತಂಡಗಳಿಗೆ ಕಟ್ಟುನಿಟ್ಟಾದ ನಿಯಮಗಳನ್ನು ಜಾರಿಗೆ ತಂದಿದೆ.
ಏಷ್ಯನ್ ಗೇಮ್ಸ್ ಕೇವಲ ಅನುಭವ ಪಡೆಯುವ ಪ್ರವಾಸವಲ್ಲ. ಅದು ಪದಕ ಗೆಲ್ಲುವ ವೇದಿಕೆ ಎಂದು ಕೇಂದ್ರ ಕೀಡಾ ಸಚಿವಾಲಯ ಸ್ಪಷ್ಟಪಡಿಸಿದೆ. ಅಲ್ಲದೆ ಇದಕ್ಕಾಗಿಯೇ ಸರ್ಕಾರ ಕೆಲ ಮಾನದಂಡಗಳನ್ನು ಪರಿಚಯಿಸಿದೆ.
ಭಾರತ ಸರ್ಕಾರದ ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯದ ಅಧಿಕೃತ ಪಾಲಿಸಿಯ ಪ್ರಕಾರ, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್ ಮತ್ತು ಕಾಮನ್‌ವೆಲ್ತ್ ಗೇಮ್ಸ್‌ನಂತಹ ಪ್ರಮುಖ ಅಂತಾರಾಷ್ಟ್ರೀಯ ಕ್ರೀಡಾಕೂಟಗಳಿಗೆ ಕ್ರೀಡಾಪಟುಗಳು ಮತ್ತು ತಂಡಗಳನ್ನು ಆಯ್ಕೆ ಮಾಡಲು ಕಟ್ಟುನಿಟ್ಟಾದ “ಮೆಡಲ್ ಪ್ರೊಫೈಲ್” ಮಾನದಂಡಗಳನ್ನು ನಿಗದಿಪಡಿಸಲಾಗಿದೆ.
ಫುಟ್‌ಬಾಲ್, ಹಾಕಿ, ಕ್ರಿಕೆಟ್, ಬ್ಯಾಸ್ಕೆಟ್‌ಬಾಲ್‌ನಂತಹ ತಂಡಗಳು ಏಷ್ಯನ್ ಗೇಮ್ಸ್‌ಗೆ ಅರ್ಹತೆ ಪಡೆಯಬೇಕಾದರೆ ಈ ಕೆಳಗಿನ ಮಾನದಂಡವನ್ನು ತಲುಪಿರಬೇಕು.
ಈ ಎರಡು ನಿಯಮಗಳ ಕಾರಣವೇ ಇದೀಗ ಭಾರತ ಫುಟ್‌ಬಾಲ್ ತಂಡ ಏಷ್ಯನ್ ಗೇಮ್ಸ್ 2026 ರಿಂದ ಹೊರಗುಳಿಯಬೇಕಾಗಿ ಬಂದಿದೆ.
ಕಳೆದ ಬಾರಿ (2023ರ ಏಷ್ಯನ್ ಗೇಮ್ಸ್‌ನಲ್ಲಿ) ಸರ್ಕಾರವು ಕೊನೆಯ ಕ್ಷಣದಲ್ಲಿ ನಿಯಮ ಸಡಿಲಿಸಿ ಫುಟ್‌ಬಾಲ್ ತಂಡಕ್ಕೆ ಅನುಮತಿ ನೀಡಿತ್ತು. ಆದರೆ ಈ ಬಾರಿ ಅಖಿಲ ಭಾರತ ಫುಟ್‌ಬಾಲ್ ಫೆಡರೇಶನ್ (AIFF) ಮಾಡಿದ ವಿಶೇಷ ಮನವಿಯನ್ನು ಕ್ರೀಡಾ ಸಚಿವಾಲಯ ತಿರಸ್ಕರಿಸಿದೆ.
ಪುರುಷರ ತಂಡ: ಪುರುಷರ ವಿಭಾಗದಲ್ಲಿ, 2026ರ AFC U-23 ಏಷ್ಯನ್ ಕಪ್ ಟೂರ್ನಿಗೆ ಅರ್ಹತೆ ಪಡೆದ ಅಗ್ರ 16 ತಂಡಗಳ ಪೈಕಿ 15 ತಂಡಗಳಿಗೆ ಏಷ್ಯನ್ ಗೇಮ್ಸ್‌ನಲ್ಲಿ ಆಡುವ ಅವಕಾಶ ನೀಡಲಾಗಿತ್ತು (ಆಸ್ಟ್ರೇಲಿಯಾವನ್ನು ಹೊರತುಪಡಿಸಿ). ಭಾರತ ತಂಡವು ಈ ಕಠಿಣ ಅರ್ಹತಾ ಸುತ್ತಿನ ಮಾನದಂಡಗಳನ್ನು ಯಶಸ್ವಿಯಾಗಿ ಪೂರೈಸಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿತ್ತು.
ಮಹಿಳಾ ತಂಡ: ಮಹಿಳಾ ವಿಭಾಗದಲ್ಲಿ, ಪ್ರಮುಖ ಕಾಂಟಿನೆಂಟಲ್ ಟೂರ್ನಿಯಾದ 2026ರ AFC ಮಹಿಳಾ ಏಷ್ಯನ್ ಕಪ್ ಒಟ್ಟು 12 ತಂಡಗಳ ಟೂರ್ನಿಯಾಗಿದೆ. ಈ ಪ್ರತಿಷ್ಠಿತ ಟೂರ್ನಿಗೆ ಅಧಿಕೃತವಾಗಿ ಅರ್ಹತೆ ಗಿಟ್ಟಿಸಿಕೊಂಡಿದ್ದ ಹಿನ್ನೆಲೆಯಲ್ಲಿ ಭಾರತ ಮಹಿಳಾ ತಂಡಕ್ಕೂ ಏಷ್ಯನ್ ಗೇಮ್ಸ್‌ನಲ್ಲಿ ಅವಕಾಶ ಲಭಿಸಿತ್ತು.
ಹೀಗೆ ಏಷ್ಯನ್ ಕ್ರೀಡಾ ಸಂಸ್ಥೆಗಳು ನಿಗದಿಪಡಿಸಿದ್ದ ಕ್ರೀಡಾ ನಿಯಮಾವಳಿಗಳ ಅಡಿಯಲ್ಲಿ ಭಾರತದ ಎರಡೂ ತಂಡಗಳು ನ್ಯಾಯಯುತವಾಗಿಯೇ ಟೂರ್ನಿಗೆ ಆಯ್ಕೆಯಾಗಿದ್ದವು. ಇದಾಗ್ಯೂ ಭಾರತ ಸರ್ಕಾರದ ಕ್ರೀಡಾ ಸಚಿವಾಲಯದ ಆಂತರಿಕ ಶ್ರೇಯಾಂಕದ ನಿಯಮಗಳ ಕಾರಣದಿಂದಾಗಿ ಇದೀಗ ಭಾರತ ಏಷ್ಯನ್ ಗೇಮ್ಸ್ ಫುಟ್‌ಬಾಲ್ ಟೂರ್ನಿಯಿಂದ ಹೊರಗುಳಿಯಬೇಕಾಗಿ ಬಂದಿದೆ.
ಇದನ್ನೂ ಓದಿ: ಇಂಗ್ಲೆಂಡ್ ಟೆಸ್ಟ್ ತಂಡಕ್ಕೆ ರಾಹುಲ್ ದ್ರಾವಿಡ್ ಹೊಸ ಕೋಚ್?
ಭಾರತ ಪುರುಷರ ತಂಡವು ಏಷ್ಯನ್ ಗೇಮ್ಸ್ನಿಂದ ಹೊರಗುಳಿಯುತ್ತಿರುವ ಪರಿಣಾಮ ಫಿಲಿಪೈನ್ಸ್ ದೇಶಕ್ಕೆ ಅವಕಾಶ ಸಿಕ್ಕಿದೆ. ಇನ್ನು ಮಹಿಳಾ ಫುಟ್‌ಬಾಲ್ ವಿಭಾಗದಲ್ಲಿ ಭಾರತ, ಇರಾನ್ ಹಾಗೂ ಆಸ್ಟ್ರೇಲಿಯಾ ಹೊರಗುಳಿದಿದ್ದು, ಈ ತಂಡಗಳ ಬದಲಿಗೆ ಹಾಂಗ್ ಕಾಂಗ್, ಮ್ಯಾನ್ಮಾರ್ ಮತ್ತು ಥೈಲ್ಯಾಂಡ್ ತಂಡಗಳನ್ನು ಅಂತಿಮ ಪಟ್ಟಿಗೆ ಸೇರಿಸಿಕೊಳ್ಳಲಾಗಿದೆ.
Published On - 11:00 am, Mon, 13 July 26