ಬಾಂಗ್ಲಾ ವಿರುದ್ಧ 2 ಗೋಲು ಬಾರಿಸಿ ಲಿಯೊನಿಲ್ ಮೆಸ್ಸೀಯನ್ನು ಹಿಂದಿಕ್ಕಿರುವ ಸುನಿಲ್ ಛೆತ್ರಿ ಮುಂದಿನ ಗುರಿ ಕ್ರಿಸ್ಟಿಯಾನೊ ರೊನಾಲ್ಡೊ!

ಸೋಮವಾರದಂದು ಕತಾರ್​ನ ಜಾಸಿಮ್ ಹಮದ್ ಸ್ಟೇಡಿಯಂನಲ್ಲಿ ಬಾಂಗ್ಲಾ ವಿರುದ್ಧ ಆಡಿದ ಪಂದ್ಯದಲ್ಲಿ ಛೆತ್ರಿ ಪಂದ್ಯದ 79 ನೇ ನಿಮಿಷ ಆಶಿಕ್ ಕುನ್ನಿಯನ್ ಅವರು ಎಡಭಾಗದಿಂದ ಕಳಿಸಿದ ಕ್ರಾಸನ್ನು ಹೆಡ್​ ಮಾಡಿ ಚೆಂಡನ್ನು ಗೋಲಿನೊಳಗೆ ತೂರಿಸಿ ಈ ಪಂದ್ಯದಲ್ಲಿ ತಮ್ಮ ಮೊದಲ ಗೋಲು ಗಳಿಸಿದರು.

ಬಾಂಗ್ಲಾ ವಿರುದ್ಧ 2 ಗೋಲು ಬಾರಿಸಿ ಲಿಯೊನಿಲ್ ಮೆಸ್ಸೀಯನ್ನು ಹಿಂದಿಕ್ಕಿರುವ ಸುನಿಲ್ ಛೆತ್ರಿ ಮುಂದಿನ ಗುರಿ ಕ್ರಿಸ್ಟಿಯಾನೊ ರೊನಾಲ್ಡೊ!
ಸುನಿಲ್ ಛೆತ್ರಿ

ಭಾರತದ ಸಾಕರ್ ಸ್ಕಿಪ್ಪರ್ ಸುನಿಲ್ ಛೆತ್ರಿ ಸಮಕಾಲೀನ ಸೂಪರ್ ಸ್ಟಾರ್​ಗಳಾಗಿರುವ ಲಿಯೋನಿಲ್ ಮೆಸ್ಸಿ ಮತ್ತು ಕ್ರಿಸ್ಟಿಯಾನೋ ರೊನಾಲ್ಟೊ ಅವರಷ್ಟು ಜನಪ್ರಿಯರಲ್ಲದಿರಬಹುದು ಮತ್ತು ಹಣ ಗಳಿಕೆ ಮತ್ತು ಹಾಗೂ ಕ್ಲಬ್​ನಿಂದ ಪಡೆಯುವ ಸಂಭಾವನೆಯ ವಿಷಯದಲ್ಲಿ ಅವರಿಗಿಂತ ಬಹಳ ಹಿಂದಿರಬಹುದು. ಆದರೆ ತನ್ನ ದೇಶಕ್ಕೆ ಈ ಪ್ರಚಂಡ ಕ್ರೀಡೆಯ ಮೂಲಕ ಸೇವೆ ಒದಗಿಸುತ್ತಾ ಮಾಡಿರುವ ವೈಯಕ್ತಿಕ ಸಾಧನೆ ದೃಷ್ಟಿಯಿಂದ ನೋಡಿದರೆ ಛೆತ್ರಿ ಯಾವ ಲೆಜೆಂಡ್​ಗೂ ಕಮ್ಮಿಯಿಲ್ಲ. ಹೌದು, ನಮ್ಮ ಬೆಂಗಳೂರು ಹುಡುಗ, ಪ್ರಸಕ್ತವಾಗಿ ಅಂತರರಾಷ್ಟ್ರೀಯ ಫುಟ್ಬಾಲ್​ನಲ್ಲಿ ಅತಿಹೆಚ್ಚು ಗೋಲು ಬಾರಿಸಿರುವ ಪಟ್ಟಿಯಲ್ಲಿ ಅರ್ಜೆಂಟೀನಾದ ಮೆಸ್ಸೀಯನ್ನು ಹಿಂದಿಕ್ಕಿ ಎರಡನೇ ಸ್ಥಾನದಲ್ಲಿ ವಿರಾಜಮಾನರಾಗಿದ್ದಾರೆ. 36-ವರ್ಷ ವಯಸ್ಸಿನ ಛೆತ್ರಿ ಅವರು ಸೋಮವಾರದಂದು 2022 ಫಿಫಾ ವಿಶ್ವಕಪ್ ಮತ್ತು 2023 ಎಎಫ್​ಸಿ ಏಷ್ಯನ್ ಕಪ್ ಜಂಟಿ ಅರ್ಹತಾ ಸುತ್ತಿನ ಪಂದ್ಯವೊಂದರಲ್ಲಿ ಬಾಂಗ್ಲಾದೇಶ ವಿರುದ್ಧ ಎರಡು ಗೋಲುಗಳನ್ನು ಬಾರಿಸಿ ತಮ್ಮ ಗೋಲುಗಳ ಟ್ಯಾಲಿಯನ್ನು 74 ಕ್ಕೆ ಕೊಂಡೊಯ್ದಿದ್ದಾರೆ. ಮೆಸ್ಸಿ ಇದುವರೆಗೆ 72 ಅಂತರರಾಷ್ಟ್ರೀಯ ಗೋಲುಗಳನ್ನು ಬಾರಿಸಿದ್ದಾರೆ. ಈ ಪಟ್ಟಿಯ ಲೀಡರ್​ ಆಗಿರುವ ಪೋರ್ಚುಗಲ್​ನ ರೊನಾಲ್ಡೊ 103 ಗೋಲು ಗಳಿಸಿದ್ದಾರೆ. ಯುನೈಟೆಡ್ ಅರಬ್ ಎಮಿರೇಟ್ಸ್​ನ ಅಲಿ ಮಬ್ಖೌತ್ 73 ಗೋಲುಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ.

ಮೆಸ್ಸಿ ತಮ್ಮ ಇಂಟರ್​ನ್ಯಾಶನಲ್ ಕರೀಯರ್​ನ 72 ನೇ ಗೋಲನ್ನು ಕಳೆದ ಶುಕ್ರವಾರದಂದು ಚಿಲಿ ವಿರುದ್ಧ ನಡೆದ ವಿಶ್ವಕಪ್ ಅರ್ಹತಾ ಸುತ್ತಿನ ಪಂದ್ಯದಲ್ಲಿ ಬಾರಿಸಿದರು. ಹಾಗೆಯೇ ಮಬ್ಖೌತ್ ತಮ್ಮ 73 ನೇ ಗೋಲನ್ನು ಕಳೆದ ವಾರ ಮಲೇಶಿಯಾ ವಿರುದ್ಧ ಹೊಡೆದರು.

ಸೋಮವಾರದಂದು ಕತಾರ್​ನ ಜಾಸಿಮ್ ಹಮದ್ ಸ್ಟೇಡಿಯಂನಲ್ಲಿ ಬಾಂಗ್ಲಾ ವಿರುದ್ಧ ಆಡಿದ ಪಂದ್ಯದಲ್ಲಿ ಛೆತ್ರಿ ಪಂದ್ಯದ 79 ನೇ ನಿಮಿಷ ಆಶಿಕ್ ಕುನ್ನಿಯನ್ ಅವರು ಎಡಭಾಗದಿಂದ ಕಳಿಸಿದ ಕ್ರಾಸನ್ನು ಹೆಡ್​ ಮಾಡಿ ಚೆಂಡನ್ನು ಗೋಲಿನೊಳಗೆ ತೂರಿಸಿ ಈ ಪಂದ್ಯದಲ್ಲಿ ತಮ್ಮ ಮೊದಲ ಗೋಲು ಗಳಿಸಿದರು. ನಂತರ ಹೆಚ್ಚುವರಿ ಸಮಯದಲ್ಲಿ ಅವರು ದೂರದ ಅಂತರದಿಂದ ಬಾಲು ಗೋಲಿನೊಳಗೆ ಕರ್ಲ್​ ಆಗುವ ಹಾಗೆ ಒದ್ದು ಎರಡನೇ ಗೋಲು ಗಳಿಸಿದ್ದೂ ಅಲ್ಲದೆ ಭಾರತಕ್ಕೆ ಗೆಲುವು ದೊರಕಿಸಿಕೊಟ್ಟರು.

ಭಾರತದ ಸಾಕರ್ ಸ್ಕಿಪ್ಪರ್ ವಿಶ್ವದ ಸಾರ್ವಕಾಲಿಕ ಟಾಪ್ 10 ಪಟ್ಟಿಯಿಂದ ಕೇವಲ ಒಂದು ಗೋಲು ದೂರದಲ್ಲಿದ್ದಾರೆ. ತಲಾ 75 ಗೋಲುಗಳನ್ನು ಬಾರಿಸಿರುವ ಹಂಗರಿಯ ಸ್ಯಾಂಡರ್ ಕಾಕ್ಸಿಸ್, ಜಪಾನಿನ ಕುನಿಶಿಗೆ ಕಮಮೊಟೊ ಮತ್ತು ಕುವೈಟ್​ನ ಬಶರ್ ಅಬ್ದುಲ್ಲಾ ಅವರಿಗಿಂತ ಛೆತ್ರಿ 1 ಗೋಲು ಹಿಂದಿದ್ದಾರೆ.
ಛೆತ್ರಿ ಅವರ ಸಾದನೆಯ ಬಗ್ಗೆ ಅತೀವ ಹರ್ಷ ವ್ಯಕ್ತಪಡಿಸಿರುವ ಅಖಿಲ ಭಾರತ ಫುಟ್ಬಾಲ್ ಫೆಡರೇಶನ್ (ಎಐಎಪ್​ಎಫ್) ಅಧ್ಯಕ್ಷ ಪ್ರಫುಲ್ ಪಟೇಲ್, ವೈಯಕ್ತಿಕ ಉತ್ಕೃಷ್ಟತೆಯಿಂದ ಅವರು ಭಾರತಕ್ಕೆ ಗೆಲುವು ಕೊಡಿಸಿದರು ಅಂತ ಹೇಳಿದ್ದಾರೆ.

‘ನಮ್ಮ @IndianFootball ಸ್ಕಿಪ್ಪರ್ ಸುನಿಲ್ ಛೆತ್ರಿ 74ನೇ ಗೋಲು ಬಾರಿಸುವ ಮೂಲಕ ಗೋಲು ಗಳಿಕೆಯಲ್ಲಿ ಲಿಯೊನಿಲ್ ಮೆಸ್ಸಿ ಅವರನ್ನು ಹಿಂದಕ್ಕಿ ಅತಿ ಹೆಚ್ಚು ಅಂತರರಾಷ್ಟ್ರೀಯ ಗೋಲು ಗಳಿಸಿರುವ ಸಮಕಾಲೀನ ಆಟಗಾರರ ಪೈಕಿ ಎರಡನೇ ಸ್ಥಾನಕ್ಕ ಜಿಗಿದು ಉಜ್ವಲ ವೃತ್ತಿಬದುಕಿಗೆ ಮತ್ತೊಂದು ಗರಿ ಸೇರಿಸಿಕೊಂಡ್ಡಿದ್ದಾರೆ,’ ಎಂದು ಟ್ವೀಟ್ ಮಾಡಿದ್ದಾರೆ.

‘ಕ್ಯಾಪ್ಟನ್​ ಫೆಂಟ್ಯಾಸ್ಟಿಕ್​ಗೆ ಅಭಿನಂದನೆಗಳು ಮತ್ತು ಭವಿಷ್ಯದಲ್ಲಿ ಇನ್ನೂ ಹೆಚ್ಚು ಸಾಧನೆ ಮಾಡಲಿ ಎಂದು ಹಾರೈಸುತ್ತೇನೆ,‘’ಎಂದು ಪಟೇಲ್ ಟ್ವೀಟ್​ ಮಾಡಿದ್ದಾರೆ.

ಛೆತ್ರಿ ವೈಯಕ್ತಿಕ ಶ್ರೇಷ್ಠತೆಯೊಂದಿಗೆ ಬಾಂಗ್ಲಾದೇಶ ವಿರುದ್ಧ ಅತ್ಯುತ್ತಮ ಪದರ್ಶನ ನೀಡಿದ ಭಾರತೀಯ ಟೀಮನ್ನು ಸಹ ಪಟೇಲ್ ಕೊಂಡಾಡಿದ್ದಾರೆ.

‘ಬಾಂಗ್ಲಾದೇಶ ವಿರುದ್ಧ ಅದ್ಭುತ ಪ್ರದರ್ಶನ ನೀಡಿದ #BlueTigersಗೆ ಅಭಿನಂದನೆಗಳು. ನಾಯಕ @chetrisunil11 ವೈಯಕ್ತಿಕ ಶ್ರೇಷ್ಠತೆ ಮೂಲಕ ಭಾರತದ ಗೆಲುವಿಗೆ ಕಾರಣರಾದರು,’ ಎಂದು ಪಟೇಲ್ ಹೇಳಿದ್ದಾರೆ.

‘ನಿಮ್ಮ ಕಠಿಣ ಪರಿಶ್ರಮ ಮತ್ತು ಸಂಕಲ್ಪ ಮೈದಾನದಲ್ಲಿ ನಿಚ್ಚಳವಾಗಿ ಕಂಡುಬಂತು. ಮುಂದಿನ ಪಂದ್ಯಗಳಿಗೆ ಶುಭ ಹಾರೈಸುವೆ,’ ಎಂದು ಮತ್ತೊಂದು ಟ್ವೀಟ್​ನಲ್ಲಿ ಹೇಳಿದ್ದಾರೆ

ಭಾರತದ ಪಾಲಿಗೆ ಅತ್ಯಂತ ನಿರಾಶಾದಾಯಕವಾಗಿ ಪರಿಣಮಿಸುತ್ತಿರುವ ವಿಶ್ವಕಪ್​ ಅರ್ಹತಾ ಸುತ್ತಿನ ಪಂದ್ಯಗಳಲ್ಲಿ ಸೋಮವಾರದಂದು ಛೆತ್ರಿ ಬಾರಿಸಿದ ಎರಡು ಗೋಲುಗಳ ನೆರವಿನಿಂದ ಭಾರತ ಮೊದಲ ಜಯ ಸಾಧಿಸಿದೆ. ಹಾಗೆಯೇ, ಭಾರತದಿಂದ ಆಚೆ ನಡೆದಿರುವ ವಿಶ್ವಕಪ್​ ಅರ್ಹತಾ ಸುತ್ತಿನ ಪಂದ್ಯಗಳಲ್ಲಿ ಭಾರತ 20 ವರ್ಷಗಳ ನಂತರ ಗೆಲುವು ಕಂಡಿದೆ.

ಈ ಗೆಲುವಿನೊಂದಿಗೆ ಆಡಿರುವ7 ಪಂದ್ಯಗಳಿಂದ 6 ಅಂಕ ಗಳಿಸಿರುವ ಭಾರತ ಇ ಗುಂಪಿನಲ್ಲಿ ಮೂರನೇ ಸ್ಥಾನಕ್ಕೇರಿದೆ. ಜೂನ್ 15 ರಂದು ನಡೆಯುವ ಮುಂದಿನ ಸುತ್ತಿನ ಪಂದ್ಯದಲ್ಲಿ ಅದು ಅಫ್ಘಾನಿಸ್ತಾನನ್ನು ಎದುರಿಸಲಿದೆ.

2022 ರಲ್ಲಿ ನಡೆಯುವ ವಿಶ್ವಕಪ್​ಗೆ ಅರ್ಹತೆ ಪಡೆಯಲು ಈಗಾಗಲೇ ವಿಫಲಗೊಂಡಿರುವ ಭಾರತ, ಚೀನದಲ್ಲಿ ನಡೆಯಲಿರುವ ಏಷ್ಯನ್ ಕಪ್​ಗೆ ಅರ್ಹತೆ ಗಿಟ್ಟಿಸುವ ಅವಕಾಶವನ್ನು ಇನ್ನೂ ಹೊಂದಿದೆ.

ಇದನ್ನೂಓದಿ: ಭಾರತದ ಫುಟ್ಬಾಲ್ ಮಾಂತ್ರಿಕ ಸುನಿಲ್ ಛೆತ್ರಿಗೆ ಕೊರೊನಾ ವೈರಸ್ ಪಾಸಿಟಿವ್