Jehan Daruvala: ಫಾರ್ಮುಲಾ-1 ಟೆಸ್ಟ್ ಡ್ರೈವ್ಗೆ ಆಯ್ಕೆಯಾದ ಭಾರತೀಯ ಯುವ ರೇಸರ್
Formula 1: ಫಾರ್ಮುಲಾ 1 ರಲ್ಲಿ ಸ್ಪರ್ಧಿಸಲು ಅಗತ್ಯವಿರುವ ಸೂಪರ್ ಲೈಸೆನ್ಸ್‌ಗೆ ಅರ್ಜಿ ಸಲ್ಲಿಸಲು ಸಾಕಷ್ಟು ಅಂಕಗಳನ್ನು ಪಡೆಯಲು ಈ ಟ್ರ್ಯಾಕ್ ಟೆಸ್ಟ್ ಡ್ರೈವ್ ಸಹಾಯ ಮಾಡುತ್ತದೆ.
ವಿಶ್ವ ಪ್ರಸಿದ್ಧ ಫಾರ್ಮುಲಾ ರೇಸಿಂಗ್ ತಂಡ ಮೆಕ್‌ಲಾರೆನ್‌ನ ಟೆಸ್ಟ್ ಡ್ರೈವ್ಗೆ ಭಾರತದ ಯುವ ರೇಸರ್ ಜೆಹಾನ್ ದಾರುವಾಲಾ (Jehan Daruvala) ಆಯ್ಕೆಯಾಗಿದ್ದಾರೆ. 23 ರ ಹರೆಯದ ಜೆಹಾನ್, ಎರಡು ದಿನ ನಡೆಯಲಿರುವ ಟೆಸ್ಟ್ ಡ್ರೈವ್ನಲ್ಲಿ ಅವಕಾಶ ಪಡೆಯುವ ಮೂಲಕ ತಮ್ಮ ಫಾರ್ಮುಲಾ 1 ಕನಸನ್ನು ನನಸಾಗಿಸುವತ್ತ ಹೆಜ್ಜೆಯಿಟ್ಟಿದ್ದಾರೆ. ಫಾರ್ಮುಲಾ ರೇಸಿಂಗ್ನಲ್ಲಿ 8 ಬಾರಿಯ ಕನ್‌ಸ್ಟ್ರಕ್ಟರ್‌ಗಳ ವಿಜೇತ, 12 ಡ್ರೈವರ್ಸ್ ಟೈಟಲ್ಸ್ ಹೊಂದಿರುವ ಮೆಕ್ಲಾರೆನ್ನಲ್ಲಿ ಇದೇ ಮೊದಲ ಬಾರಿಗೆ ಭಾರತೀಯ ಯುವ ರೇಸರ್ ಟೆಸ್ಟ್ ಡ್ರೈವ್ಗೆ ಸ್ಥಾನ ಪಡೆದಿರುವುದು ವಿಶೇಷ. ಪ್ರಸ್ತುತ ಫಾರ್ಮುಲಾ 2 ರಲ್ಲಿ ಮೂರನೇ ಸೀಸನ್‌ನಲ್ಲಿರುವ ಜೆಹಾನ್, ಇದೇ ಮೊದಲ ಬಾರಿಗೆ ಫಾರ್ಮುಲಾ 1 ಕಾರಿನಲ್ಲಿ ತನ್ನ ಸಾಮರ್ಥ್ಯವನ್ನು ತೆರೆದಿಡಲಿದ್ದಾರೆ.
ಜೂನ್ 21 ಮತ್ತು 22 ರಂದು ಯುನೈಟೆಡ್ ಕಿಂಗ್ಡಮ್ನ ಸಿಲ್ವರ್‌ಸ್ಟೋನ್‌ನಲ್ಲಿ ನಡೆಯಲಿರುವ ಈ ಟೆಸ್ಟ್ ಡ್ರೈವ್ನಲ್ಲಿ ಜೆಹಾನ್, 2021 ರ F1 ಚಾಂಪಿಯನ್‌ಶಿಪ್‌ನಲ್ಲಿ ಸ್ಪರ್ಧಿಸಿದ McLaren MCL35 ಕಾರನ್ನು ಚಾಲನೆ ಮಾಡಲಿದ್ದಾರೆ. ಮೆಕ್‌ಲಾರೆನ್‌ನ ಟೆಸ್ಟಿಂಗ್ ಪ್ರೀವಿಯಸ್ ಕಾರ್ (TPC) ಕಾರ್ಯಕ್ರಮದ ಭಾಗವಾಗಿರುವ ಈ ಟೆಸ್ಟ್ ಜೆಹಾನ್ಗೆ ಫಾರ್ಮುಲಾ 1 ಕಾರಿನಲ್ಲಿ ಹೊಂದಿರಬೇಕಾದ ಅಗತ್ಯವಿರುವ ಅನುಭವವನ್ನು ನೀಡಲಿದೆ. ಹಾಗೆಯೇ ಫಾರ್ಮುಲಾ 1 ರಲ್ಲಿ ಸ್ಪರ್ಧಿಸಲು ಅಗತ್ಯವಿರುವ ಸೂಪರ್ ಲೈಸೆನ್ಸ್‌ಗೆ ಅರ್ಜಿ ಸಲ್ಲಿಸಲು ಸಾಕಷ್ಟು ಅಂಕಗಳನ್ನು ಪಡೆಯಲು ಈ ಟ್ರ್ಯಾಕ್ ಟೆಸ್ಟ್ ಡ್ರೈವ್ ಸಹಾಯ ಮಾಡುತ್ತದೆ.
ಫಾರ್ಮುಲಾ 1 ಕನಸಿಗೆ ಸಂಬಂಧಿಸಿದಂತೆ ಪ್ರಸ್ತುತ ಫಾರ್ಮುಲಾ 2 ಸೀಸನ್ ತನಗೆ ಮಾಡು ಇಲ್ಲವೇ ಬ್ರೇಕ್ ಆಗಿದೆ ಎಂದು ಜೆಹಾನ್ ತಿಳಿಸಿದ್ದಾರೆ. ಪ್ರಸ್ತುತ ಆರು ಸುತ್ತುಗಳಲ್ಲಿ ಅತ್ಯುತ್ತಮ ಅಂಕಗಳನ್ನು ಪಡೆಯುವ ಮೂಲಕ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಇದೀಗ ಮೆಕ್ಲಾರೆನ್ನಲ್ಲಿ ಫಾರ್ಮುಲಾ 1 ಟೆಸ್ಟ್ ಡ್ರೈವ್ನಲ್ಲಿ ಅವಕಾಶ ಪಡೆಯುವ ಮೂಲಕ ತಮ್ಮ ಕನಸನ್ನು ನನಸಾಗಿಸುವತ್ತ ಹೆಜ್ಜೆ ಇಟ್ಟಿದ್ದಾರೆ.
ಇದು ಮುಂದಿನ ವರ್ಷ ಫಾರ್ಮುಲಾ 1 ರಲ್ಲಿ ಚಾಲನೆ ಪಡೆಯುವುದಕ್ಕೆ ಸಂಬಂಧಿಸಿದ ಟೆಸ್ಟ್ ಡ್ರೈವ್ ಆಗಿದೆ. ಎಫ್ 1 ನಲ್ಲಿ ಹೆಚ್ಚು ಅವಕಾಶ ಇರುವುದಿಲ್ಲ. ಆದರೆ ನಾನು ಎಫ್1 ಕಾರಿನಲ್ಲಿ ಇರಲು ಮತ್ತು ಉತ್ತಮವಾಗಿ ಕಾರ್ಯನಿರ್ವಹಿಸಲು ಈ ಅವಕಾಶವನ್ನು ಪಡೆದುಕೊಂಡಿದ್ದೇನೆ. ಈ ಅವಕಾಶವನ್ನು ಬಳಸಿಕೊಳ್ಳುವ ವಿಶ್ವಾಸ ಹೊಂದಿದ್ದೇನೆ ಎಂದು ಜೆಹಾನ್ ದಾರುವಾಲ ತಿಳಿಸಿದ್ದಾರೆ.
ನಾನು ನನ್ನ ರೇಸಿಂಗ್ (ಎಫ್ 2) ನಲ್ಲಿ ನಿರತನಾಗಿದ್ದೆ. ನಾನು ಸಾಮಾನ್ಯವಾಗಿ ತುಂಬಾ ಫಿಟ್ ಆಗಿದ್ದೇನೆ ಮತ್ತು ಹೆಚ್ಚು ಕಷ್ಟಪಡುವುದಿಲ್ಲ. ಈ ಬಾರಿಯ ಟೆಸ್ಟ್ಗೆ ನನ್ನ ದೇಹವನ್ನು ಎಷ್ಟು ಸಾಧ್ಯವೋ ಅಷ್ಟು ಸಿದ್ಧಪಡಿಸಿದ್ದೇನೆ. ನರೇನ್ ಕಾರ್ತಿಕೇಯನ್ ಮತ್ತು ಕರುಣ್ ಚಾಂಧೋಕ್ ನಂತರ ಫಾರ್ಮುಲಾ 1 ನಲ್ಲಿ ರೇಸ್ನಲ್ಲಿ ಭಾಗವಹಿಸಿದ ಮೂರನೇ ಭಾರತೀಯನಾಗುವ ಗುರಿಯನ್ನು ಹೊಂದಿದ್ದೇನೆ ಎಂದು ಇದೇ ವೇಳೆ ಜೆಹಾನ್ ದಾರುವಾಲ ತಿಳಿಸಿದ್ದಾರೆ.
ಕ್ರಿಕೆಟ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.