IPL 2021: ಪಂಜಾಬ್- ಮುಂಬೈ ಪಂದ್ಯದ ಬಳಿಕ ಚೆನ್ನೈ ಪಿಚ್ ಬಗ್ಗೆ ಅಪಸ್ವರ ಎತ್ತಿದ ಕ್ರಿಕೆಟಿಗರು; ಕಾರಣವೇನು?
ನಿನ್ನೆಯ ಪಂದ್ಯದಲ್ಲಿ ಗೆಲ್ಲುವ ಮೂಲಕ ಪಂಜಾಬ್ ಕಿಂಗ್ಸ್ ಟೂರ್ನಿಯ ಎರಡನೇ ಜಯ ದಾಖಲಿಸಿತ್ತು. ಮುಂಬೈ ಇಂಡಿಯನ್ಸ್ ಮೂರನೇ ಸೋಲು ಕಂಡಿತು.
ಪಂಜಾಬ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ನಡುವಿನ ಐಪಿಎಲ್ 2021 ಟೂರ್ನಿಯ 17ನೇ ಪಂದ್ಯದಲ್ಲಿ (ಏಪ್ರಿಲ್ 23) ಪಂಜಾಬ್ ತಂಡದ ನಾಯಕ ಕೆ.ಎಲ್. ರಾಹುಲ್ ಹಾಗೂ ಕ್ರಿಸ್ ಗೈಲ್ ಉತ್ತಮ ಪ್ರದರ್ಶನ ತೋರಿದ್ದರು. ಮುಂಬೈ ಇಂಡಿಯನ್ಸ್ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದ್ದರು. ಆದರೆ, ವಿಶೇಷ ಎಂಬಂತೆ, ಬಲಾಢ್ಯ ಬ್ಯಾಟ್ಸ್ಮನ್ ಕ್ರಿಸ್ ಗೈಲ್ ಹಾಗೂ ಕೆ.ಎಲ್. ರಾಹುಲ್ಗೆ 132 ರನ್ಗಳ ಸಣ್ಣ ಟಾರ್ಗೆಟ್ ಬೆನ್ನತ್ತಲು 17.4 ಓವರ್ಗಳು ಬೇಕಾಯಿತು. ಚೆನ್ನೈ ಮೈದಾನವು ಬ್ಯಾಟಿಂಗ್ಗೆ ಅಷ್ಟಾಗಿ ಸಹಕರಿಸುತ್ತಿಲ್ಲ. ಚಿದಂಬರಂ ಮೈದಾನದಲ್ಲಿ ದಾಂಡಿಗರು ದೊಡ್ಡ ಮೊತ್ತ ಪೇರಸಿಲು ಆಗುತ್ತಿಲ್ಲ ಎಂದು ಕೂಡ ಕಳೆದ ಅಷ್ಟು ಪಂದ್ಯಗಳನ್ನು ಗಮನಿಸಿದರೆ ತಿಳಿಯುತ್ತದೆ. ಈ ನಡುವೆ, ನಿನ್ನೆಯ ಪಂದ್ಯದ ಬಳಿಕ ಚೆನ್ನೈ ಪಿಚ್ ಬಗ್ಗೆ ಕೆಲವಾರು ವಿಭಿನ್ನ ಅಭಿಪ್ರಾಯಗಳು ಕೇಳಿ ಬಂದಿದೆ. ಬ್ರೆಟ್ ಲೀ, ಬೆನ್ ಸ್ಟೋಕ್ಸ್ ಹಾಗೂ ಪಾರ್ಥೀವ್ ಪಟೇಲ್ ಈ ಬಗ್ಗೆ ಧ್ವನಿ ಎತ್ತಿದ್ದಾರೆ.
ಇದು ಬ್ಯಾಟಿಂಗ್ ಮಾಡಲು ಸುಲಭದ ಸಂದರ್ಭವಾಗಿರಲಿಲ್ಲ. ಕೆ.ಎಲ್. ರಾಹುಲ್ ಹಾಗೂ ಕ್ರಿಸ್ ಗೈಲ್ಗೆ ಯಶಸ್ಸಿನ ಸಂಪೂರ್ಣ ಗೌರವ ನೀಡಬೇಕು. ಅವರು ಸಂದರ್ಭೋಚಿತವಾಗಿ ಆಟವಾಡಿದರು. ಹಾಗಾಗಿ, ಪಂಜಾಬ್ ಕಿಂಗ್ಸ್ ನಿನ್ನೆಯ ಪಂದ್ಯಕ್ಕೆ ಪೂರ್ಣ ಅಂಕ ನೀಡಬೇಕು ಎಂದು ನಿನ್ನೆಯ ಪಂಜಾಬ್ ಕಿಂಗ್ಸ್- ಮುಂಬೈ ಇಂಡಿಯನ್ಸ್ ಪಂದ್ಯದ ಬಳಿಕ ಪಾರ್ಥೀವ್ ಪಟೇಲ್ ಸ್ಟಾರ್ ಸ್ಪೋರ್ಟ್ಸ್ ವಾಹಿನಿಯಲ್ಲಿ ಮಾತನಾಡಿದ್ದಾರೆ.
ಆಸಿಸ್ ವೇಗಿ ಬ್ರೆಟ್ ಲೀ ಒಂದು ಹೆಜ್ಜೆ ಮುಂದುವರಿದು ತಮ್ಮ ಅಭಿಪ್ರಾಯ ಹೇಳಿದರು. ಮೈದಾನದ ಪಿಚ್ ವರ್ತನೆ ಆಶ್ಚರ್ಯಕರವಾಗಿದೆ. ಪ್ರಾಮಾಣಿಕವಾಗಿ ಹೇಳುವುದಾದರೆ ಬ್ಯಾಟ್ಸ್ಮನ್ಗಳಿಗೆ ಅಂಥ ಪಿಚ್ನಲ್ಲಿ ಲಯ ಕಾಯ್ದುಕೊಳ್ಳುವುದು ಕಷ್ಟಕರವಾದ ಕೆಲಸ ಎಂದು ತಿಳಿಸಿದ್ದಾರೆ.
ರಾಜಸ್ಥಾನ್ ರಾಯಲ್ಸ್ ತಂಡದಿಂದ ಕೈ ಬೆರಳು ಗಾಯದ ಕಾರಣದಿಂದ ಹೊರಗುಳಿದಿರುವ ಮತ್ತೊಬ್ಬ ಖ್ಯಾತ ಆಲ್ರೌಂಡರ್ ಬೆನ್ ಸ್ಟೋಕ್ಸ್, ಚೆನ್ನೈನ ಪಿಚ್ ಬಗ್ಗೆ ಟ್ವೀಟ್ ಮಾಡಿದ್ದಾರೆ. 130-140 ರನ್ಗಳಿಗೆ ವಿಕೆಟ್ಗಳು ರಾಶಿ ಬೀಳುತ್ತಿವೆ. ಐಪಿಎಲ್ ಟೂರ್ನಿ ಮುಂದುವರಿಯುತ್ತಿರುವಂತೆ ಹೀಗಾಗದು ಎಂದು ಅಂದುಕೊಳ್ಳುತ್ತೇನೆ ಎಂದು ಸ್ಟೋಕ್ಸ್ ಟ್ವೀಟ್ ಮಾಡಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನಿನ್ನೆಯ ಪಂದ್ಯದಲ್ಲಿ ಗೆಲ್ಲುವ ಮೂಲಕ ಪಂಜಾಬ್ ಕಿಂಗ್ಸ್ ಟೂರ್ನಿಯ ಎರಡನೇ ಜಯ ದಾಖಲಿಸಿತ್ತು. ಮುಂಬೈ ಇಂಡಿಯನ್ಸ್ ಮೂರನೇ ಸೋಲು ಕಂಡಿತು. ಪಂಜಾಬ್ ಕಿಂಗ್ಸ್ 4 ಅಂಕ ಗಳಿಸುವ ಮೂಲಕ ಪಾಯಿಂಟ್ಸ್ ಟೇಬಲ್ನಲ್ಲಿ 5ನೇ ಸ್ಥಾನಕ್ಕೆ ಏರಿದೆ. ಮುಂಬೈ ಇಂಡಿಯನ್ಸ್ ನಿನ್ನೆ ಸೋತ ಬಳಿಕವೂ ನಾಲ್ಕನೇ ಸ್ಥಾನದಲ್ಲಿ ಉಳಿದುಕೊಂಡಿದೆ. ಸೋಮವಾರ ಪಂಜಾಬ್ ಕಿಂಗ್ಸ್ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಸೆಣೆಸಾಡಲಿದೆ.
ಇದನ್ನೂ ಓದಿ: IPL 2021, RCB: ಒಂದೇ ದಿನ ಆರ್ಸಿಬಿ ಸೃಷ್ಟಿ ಮಾಡಿತು ಸಾಲು ಸಾಲು ದಾಖಲೆ! ಇಲ್ಲಿದೆ ವಿವರ
ಇದನ್ನೂ ಓದಿ: IPL 2021: 4 ಕೋಟಿ ಪಡೆದವ ಆಡಿದ 4 ಪಂದ್ಯಗಳಲಿ 3 ಬಾರಿ ಶೂನ್ಯಕ್ಕೆ ಔಟ್! ಪಂಜಾಬ್ ಹೀನಾಯ ಸೋಲಿಗೆ ಇದೇ ಕಾರಣವಾಯ್ತ?
(IPL 2021 Brett Lee Ben Stokes slam Chennai Pitch after PBKS vs MI match)
Published On - 3:34 pm, Sat, 24 April 21