
ಗ್ಲ್ಯಾಸ್ಗೋ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತದ ಪದಕದ ಖಾತೆ ತೆರೆದಿದೆ. ಪುರುಷರ ಹೆವಿವೇಯ್ಟ್ ಪ್ಯಾರಾ ಪವರ್‌ಲಿಫ್ಟಿಂಗ್ ಸ್ಪರ್ಧೆಯಲ್ಲಿ ಭಾರತದ ಝಂಡು ಕುಮಾರ್ ಭರ್ಜರಿ ಪ್ರದರ್ಶನ ನೀಡಿ ಕಂಚಿನ ಪದಕ ಮುಡಿಗೇರಿಸಿಕೊಂಡಿದ್ದಾರೆ. ಈ ಮೂಲಕ ಈ ಬಾರಿಯ ಕ್ರೀಡಾಕೂಟದಲ್ಲಿ ಭಾರತಕ್ಕೆ ಮೊದಲ ಗೌರವ ತಂದುಕೊಟ್ಟಿದ್ದಾರೆ.
ಸ್ಪರ್ಧೆಯುದ್ದಕ್ಕೂ ಝಂಡು ಕುಮಾರ್ ಅತ್ಯಂತ ಸ್ಥಿರವಾದ ಪ್ರದರ್ಶನ ನೀಡಿದರು. ಈ ಮೂಲಕ ನೈಜೀರಿಯಾದ ರಿಲುವಾನ್ ಇದ್ರಿಸ್ಗೆ ಭರ್ಜರಿ ಪೈಪೋಟಿ ನೀಡಿದ್ದರು.
ಈ ಸ್ಪರ್ಧೆಯಲ್ಲಿ ನೈಜೀರಿಯಾದ ರಿಲುವಾನ್ ಇದ್ರಿಸ್ (132.8 ಅಂಕ) ಚಿನ್ನದ ಪದಕ ಗೆದ್ದರೆ, ಇಂಗ್ಲೆಂಡ್‌ನ ಮ್ಯಾಥ್ಯೂ ಹಾರ್ಡಿಂಗ್ (131.0 ಅಂಕ) ಬೆಳ್ಳಿ ಪದಕ ಪಡೆದರು.
ಝಂಡು ಕುಮಾರ್ ಅವರ ಈ ಐತಿಹಾಸಿಕ ಸಾಧನೆಗೆ ದೇಶಾದ್ಯಂತ ಅಪಾರ ಪ್ರಶಂಸೆ ವ್ಯಕ್ತವಾಗುತ್ತಿದ್ದು, ಮುಂಬರುವ ದಿನಗಳಲ್ಲಿ ಭಾರತದ ಇತರೆ ಅಥ್ಲೀಟ್‌ಗಳಿಗೆ ಇದು ದೊಡ್ಡ ಸ್ಫೂರ್ತಿಯಾಗಲಿದ್ದಾರೆ.
ಪ್ಯಾರಾ ಪವರ್‌ಲಿಫ್ಟಿಂಗ್ ಎಂಬುದು ದೈಹಿಕ ದೌರ್ಬಲ್ಯ ಅಥವಾ ವಿಕಲಚೇತನ ಹೊಂದಿರುವ ಕ್ರೀಡಾಪಟುಗಳಿಗಾಗಿ ನಡೆಸಲಾಗುವ ಒಂದು ಅತ್ಯುನ್ನತ ಕ್ರೀಡೆಯಾಗಿದೆ. ಇದು ಪ್ಯಾರಾಲಿಂಪಿಕ್ಸ್ ಮತ್ತು ಕಾಮನ್‌ವೆಲ್ತ್ ಗೇಮ್ಸ್‌ನ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದೆ.
ಕೆಳಭಾಗದ ಅಂಗವೈಕಲ್ಯ, ಪೋಲಿಯೊ, ಬೆನ್ನುಹುರಿಯ ಗಾಯ, ಅಥವಾ ಕಾಲುಗಳಿಲ್ಲದ ಕ್ರೀಡಾಪಟುಗಳು ಇದರಲ್ಲಿ ಭಾಗವಹಿಸುತ್ತಾರೆ.
ಕ್ರೀಡಾಪಟುಗಳನ್ನು ಅವರ ದೈಹಿಕ ತೂಕದ ಆಧಾರದ ಮೇಲೆ ಬೇರೆ ಬೇರೆ ತೂಕದ ವಿಭಾಗಗಳಲ್ಲಿ ವಿಂಗಡಿಸಲಾಗುತ್ತದೆ.
ಕ್ರೀಡಾಪಟು ಎತ್ತಿದ ತೂಕ ಮತ್ತು ಅವರ ದೇಹದ ತೂಕವನ್ನು ಲೆಕ್ಕ ಹಾಕಿ, ಒಂದು ವಿಶೇಷ ಸೂತ್ರದ ಮೂಲಕ ಅಂಕಗಳನ್ನು ನಿರ್ಧರಿಸಲಾಗುತ್ತದೆ. ಯಾರಿಗೆ ಹೆಚ್ಚು ಅಂಕ ಸಿಗುತ್ತದೆಯೋ ಅವರು ವಿಜೇತರಾಗುತ್ತಾರೆ.
ಇದನ್ನೂ ಓದಿ: ಭಾರತದಲ್ಲಿ ಕಣಕ್ಕಿಳಿಯಲಿದೆ ‘ಬ್ರೆಝಿಲ್’
ಸಾಮಾನ್ಯ ಪವರ್‌ಲಿಫ್ಟಿಂಗ್‌ನಲ್ಲಿ ಸ್ಕ್ವಾಟ್, ಡೆಡ್‌ಲಿಫ್ಟ್ ಮತ್ತು ಬೆಂಚ್ ಪ್ರೆಸ್ ಎಂಬ ಮೂರು ವಿಧಗಳಿರುತ್ತವೆ. ಆದರೆ, ಪ್ಯಾರಾ ಪವರ್‌ಲಿಫ್ಟಿಂಗ್‌ನಲ್ಲಿ ಕೇವಲ ಬೆಂಚ್ ಪ್ರೆಸ್ ಒಂದನ್ನು ಮಾತ್ರ ಅಧಿಕೃತ ಸ್ಪರ್ಧೆಯಾಗಿ ನಡೆಸಲಾಗುತ್ತದೆ.