ಭಾರತದ ವಿರುದ್ಧ ಅತಿ ವೇಗದ ಶತಕ ಬಾರಿಸಿದ ಕೆರಿಬಿಯನ್ ಬ್ಯಾಟರ್ ಕ್ಯಾಂಪ್ಬೆಲ್..!
ಗುವಾಹಟಿ ಏಕದಿನ ಪಂದ್ಯದಲ್ಲಿ ಜಾನ್ ಕ್ಯಾಂಪ್ಬೆಲ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿ 65 ಎಸೆತಗಳಲ್ಲಿ ಶತಕ ಸಿಡಿಸಿದ್ದಾರೆ. ಭಾರತದ ವಿರುದ್ಧ ಅತಿ ವೇಗದ ಶತಕ ಬಾರಿಸಿದ ವೆಸ್ಟ್ ಇಂಡೀಸ್ ಬ್ಯಾಟ್ಸ್‌ಮನ್ ಎಂಬ ದಾಖಲೆ ನಿರ್ಮಿಸಿದ್ದಾರೆ. ರಿಕಾರ್ಡೊ ಪೊವೆಲ್ ಅವರ 24 ವರ್ಷಗಳ ಹಳೆಯ ದಾಖಲೆಯನ್ನು ಮುರಿದು, ವಿಂಡೀಸ್ ತಂಡಕ್ಕೆ ಭದ್ರ ಬುನಾದಿ ಹಾಕಿದರು. ಕೇವಲ 29 ಎಸೆತಗಳಲ್ಲಿ ಅರ್ಧಶತಕ ಪೂರೈಸಿ ಮಿಂಚಿದರು.
Updated on: Sep 30, 2026 | 3:56 PM

ತಿರುವನಂತಪುರಂ ನಡೆದ ಮೊದಲ ಏಕದಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡಕ್ಕೆ ಅದ್ಭುತ ಆರಂಭ ನೀಡಿದ್ದ ಆರಂಭಿಕ ಆಟಗಾರ ಜಾನ್ ಕ್ಯಾಂಪ್ಬೆಲ್, ಗುವಾಹಟಿಯಲ್ಲಿಯೂ ತಮ್ಮ ಬ್ಯಾಟಿಂಗ್ ಪ್ರತಿಭೆಯನ್ನು ಪ್ರದರ್ಶಿಸಿ ಸ್ಫೋಟಕ ಶತಕ ಸಿಡಿಸಿ ಮಿಂಚಿದ್ದಾರೆ. ಆರಂಭದಿಂದಲೂ ಬೌಂಡರಿಗಳ ಮಳೆಗರೆದ ಕ್ಯಾಂಪ್ಬೆಲ್ ಕೇವಲ 65 ಎಸೆತಗಳಲ್ಲಿ 9 ಬೌಂಡರಿ ಹಾಗೂ 5 ಸಿಕ್ಸರ್ ಸಹಿತ ತಮ್ಮ ಶತಕವನ್ನು ಪೂರೈಸಿದರು(PC-PTI).

ಮೊದಲ ಏಕದಿನ ಪಂದ್ಯದಲ್ಲಿ 60 ಎಸೆತಗಳಲ್ಲಿ 60 ರನ್‌ಗಳ ಇನ್ನಿಂಗ್ಸ್ ಆಡಿದ್ದ ಜಾನ್ ಕ್ಯಾಂಪ್ಬೆಲ್, ಎರಡನೇ ಏಕದಿನ ಪಂದ್ಯದಲ್ಲಿ ಕೇವಲ 29 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಟೀಂ ಇಂಡಿಯಾದ ಪ್ರತಿಯೊಬ್ಬ ವೇಗಿಯನ್ನು ದಂಡಿಸಿದ ಜಾನ್ ಕ್ಯಾಂಪ್ಬೆಲ್, ಪ್ರಸಿದ್ಧ್ ಕೃಷ್ಣ ಅವರ ಒಂದೇ ಓವರ್‌ನಲ್ಲಿ 22 ರನ್‌ಗಳನ್ನು ಕಲೆಹಾಕಿದರು(PC-PTI).

ಅದಾದ ಬಳಿಕವೂ ತನ್ನ ಸ್ಫೋಟಕ ಬ್ಯಾಟಿಂಗ್ ಮುಂದುವರೆಸಿದ ಜಾನ್ ಕ್ಯಾಂಪ್ಬೆಲ್, 65 ಎಸೆತಗಳಲ್ಲಿ ತಮ್ಮ ಏಕದಿನ ವೃತ್ತಿಜೀವನದ ಎರಡನೇ ಶತಕವನ್ನು ಪೂರೈಸಿದರು. ಕ್ಯಾಂಪ್ಬೆಲ್ ಅವರ ಈ ಆಟದಿಂದಾಗಿ ವಿಂಡೀಸ್ ತಂಡ 20 ಓವರ್ ಮುಗಿಯುವ ಮೊದಲೇ 150 ರನ್‌ಗಳ ಗಡಿ ದಾಟಿತು(PC-PTI).

ಕ್ಯಾಂಪ್ಬೆಲ್ ಈಗ ಭಾರತದ ವಿರುದ್ಧ ಅತಿ ವೇಗದ ಶತಕ ಬಾರಿಸಿದ ಕೆರಿಬಿಯನ್ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ. 1999 ರಲ್ಲಿ ಭಾರತದ ವಿರುದ್ಧ 72 ಎಸೆತಗಳಲ್ಲಿ ಶತಕ ಗಳಿಸಿದ್ದ ರಿಕಾರ್ಡೊ ಪೊವೆಲ್ ಅವರ ದಾಖಲೆಯನ್ನು ಕ್ಯಾಂಪ್ಬೆಲ್ ಮುರಿದಿದ್ದಾರೆ. ಮರ್ಲಾನ್ ಸ್ಯಾಮುಯೆಲ್ಸ್ (73 ಎಸೆತಗಳು, ವಿಜಯವಾಡ, 2002) ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ(PC-PTI).

ಇದರೊಂದಿಗೆ ಕ್ಯಾಂಪ್ಬೆಲ್ ಏಕದಿನ ಪಂದ್ಯಗಳಲ್ಲಿ ವೆಸ್ಟ್ ಇಂಡೀಸ್ ಪರ ವೇಗದ ಶತಕ ಬಾರಿಸಿದ 5ನೇ ಬ್ಯಾಟ್ಸ್ ಮನ್ ಎನಿಸಿಕೊಂಡಿದ್ದಾರೆ. ಇನ್ನು ಈ ಪಂದ್ಯದಲ್ಲಿ ಕ್ಯಾಂಪ್ಬೆಲ್, ನಾಯಕ ಶೈ ಹೋಪ್ ಅವರೊಂದಿಗೆ ಎರಡನೇ ವಿಕೆಟ್‌ಗೆ 110 ರನ್‌ಗಳ ಪಾಲುದಾರಿಕೆಯನ್ನು ಸಹ ಹಂಚಿಕೊಂಡರು(PC-PTI).

33 ವರ್ಷದ ಕ್ಯಾಂಪ್‌ಬೆಲ್ 2019 ರಿಂದ 16 ಏಕದಿನ ಪಂದ್ಯಗಳನ್ನು ಆಡಿದ್ದು, ತಮ್ಮ 14 ಇನ್ನಿಂಗ್ಸ್‌ಗಳಲ್ಲಿ ಸುಮಾರು 40 ಸರಾಸರಿಯಲ್ಲಿ 500 ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಇದರಲ್ಲಿ ಎರಡು ಶತಕ ಮತ್ತು ಒಂದು ಅರ್ಧಶತಕವೂ ಸೇರಿದೆ. ಕ್ಯಾಂಪ್ಬೆಲ್ 2019 ರಲ್ಲಿ ಐರ್ಲೆಂಡ್ ವಿರುದ್ಧ ತಮ್ಮ ಮೊದಲ ಶತಕವನ್ನು ಬಾರಿಸಿದ್ದರು(PC-PTI).

ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ, ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ನೆಲೆ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ನಾನು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ನನ್ನ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್ ಪ್ರೊಡ್ಯೂಸರ್ ಆಗಿ ನನ್ನ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.
Read More



