ಒಂದೇ ಒಂದು ಗೋಲು… ಎಲ್ಲಾ ತಂಡಗಳಿಗೆ ಪೇನ್ ನೀಡಿದ ಸ್ಪೇನ್!

FIFA World Cup 2026: ಫುಟ್‌ಬಾಲ್ ಜಗತ್ತಿನ ಮಹಾಸಮರಕ್ಕೆ ಅದ್ಭುತ ತೆರೆ ಬಿದ್ದಿದ್ದು, ಮೆಟ್‌ಲೈಫ್ ಸ್ಟೇಡಿಯಂನಲ್ಲಿ ನಡೆದ ಫೈನಲ್ ಹಣಾಹಣಿಯಲ್ಲಿ ಅರ್ಜೆಂಟೀನಾವನ್ನು ಮಣಿಸಿದ ಸ್ಪೇನ್ ತಂಡ ಹೊಸ ಇತಿಹಾಸ ನಿರ್ಮಿಸಿದೆ. ಕೋಚ್ ಲೂಯಿಸ್ ಡಿ ಲಾ ಫ್ಯುಯೆಂಟೆ ಗರಡಿಯಲ್ಲಿ ಪಳಗಿದ ಸ್ಪೇನ್ ಪಡೆ, ತನ್ನ ಸಾಂಪ್ರದಾಯಿಕ 'ಟಿಕಿ-ಟಾಕಾ' ಶೈಲಿಗೆ ಆಧುನಿಕ ಆಕ್ರಮಣಕಾರಿ ತಂತ್ರಗಾರಿಕೆಯನ್ನು ಬೆರೆಸಿ ಫಿಫಾ ವಿಶ್ವಕಪ್ ಟ್ರೋಫಿಯನ್ನು ಎರಡನೇ ಬಾರಿಗೆ ಮುಡಿಗೇರಿಸಿಕೊಂಡಿದೆ. 

ಒಂದೇ ಒಂದು ಗೋಲು... ಎಲ್ಲಾ ತಂಡಗಳಿಗೆ ಪೇನ್ ನೀಡಿದ ಸ್ಪೇನ್!
Spain
Image Credit source: FIFA

Updated on: Jul 21, 2026 | 9:06 AM

ಒಂದೇ ಒಂದು ಗೋಲು… ಫಿಫಾ ವಿಶ್ವಕಪ್​ ಅನ್ನು ಹೀಗೂ ಗೆಲ್ಲಬಹುದಾ? ಅದು ಕೂಡ ಒಂದು ಗೋಲು ಬಾರಿಸಿ, ಒಂದು ಗೋಲು ಹೊಡೆಸಿಕೊಂಡು… ಅಚ್ಚರಿ ಎನಿಸಿದರೂ ಇದುವೇ ಸತ್ಯ. ಫುಟ್‌ಬಾಲ್ ಇತಿಹಾಸದ ಸಕಲ ದಾಖಲೆಗಳನ್ನು ಧೂಳೀಪಟ ಮಾಡಿ ಸ್ಪೇನ್ ಪಡೆ ವಿಶ್ವ ಚಾಂಪಿಯನ್ ಕಿರೀಟ ಮುಡಿಗೇರಿಸಿಕೊಂಡಿದೆ. ಅದು ಸಹ ಎದುರಾಳಿಗಳ ಆಕ್ರಮಣಕ್ಕೆ ಬಂಡೆಯಂತೆ ಎದುರಾಗಿ ನಿಂತು ಎಂಬುದು ವಿಶೇಷ.

ಏಕೆಂದರೆ ಈ ಬಾರಿಯ ಟೂರ್ನಿಯಲ್ಲಿ ಸ್ಪೇನ್ ನೆಟ್ ಒಳಗೆ ನುಗ್ಗಿದ್ದು ಕೇವಲ ಒಂದೇ ಒಂದು ಗೋಲು ಎಂದರೆ ನೀವು ನಂಬಲೇಬೇಕು. ಅಂದರೆ, ಮೈದಾನದಲ್ಲಿ ಟಿಕಿ-ಟಾಕಾ ಜಾದೂ ಪ್ರದರ್ಶಿಸಿದ ‘ಲಾ ರೋಜಾ’ ಪಡೆ, ರಕ್ಷಣಾ ವಿಭಾಗದಲ್ಲಿಇಡೀ ಜಗತ್ತೇ ಬೆರಗಾಗುವಂತಹ ಪಾರುಪತ್ಯ ಮೆರೆಯಿತು. ಈ ಮೂಲಕ ವಿಶ್ವಕಪ್ ಫುಟ್‌ಬಾಲ್ ಇತಿಹಾಸದಲ್ಲೇ ಅಪ್ರತಿಮ ರಕ್ಷಣಾತ್ಮಕ ಶೈಲಿಯಲ್ಲಿ ವಿಶ್ವ ಕಿರಿಟ ಮುಡಿಗೇರಿಸಿಕೊಂಡ ತಂಡವೆಂಬ ಹೆಗ್ಗಳಿಕೆಯನ್ನು ತನ್ನದಾಗಿಸಿಕೊಂಡಿತು.

ಟಿಕಿ-ಟಾಕಾ ಫೈನಲ್:

ಮೆಟ್‌ಲೈಫ್ ಸ್ಟೇಡಿಯಂನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಅರ್ಜೆಂಟೀನಾವನ್ನು ಹೆಚ್ಚುವರಿ ಸಮಯದಲ್ಲಿ 1-0 ಗೋಲಿನಿಂದ ಮಣಿಸಿದ ಸ್ಪೇನ್, 2026ರ ಫಿಫಾ ವಿಶ್ವಕಪ್ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಕೋಚ್ ಲೂಯಿಸ್ ಡಿ ಲಾ ಫ್ಯುಯೆಂಟೆ ನೇತೃತ್ವದ ‘ಲಾ ರೋಜಾ’ (ಸ್ಪೇನ್), ಆಧುನಿಕ ಟ್ಯಾಕ್ಟಿಕಲ್ ಶೈಲಿ ಮತ್ತು ಅಪ್ರತಿಮ ಪಾಸಿಂಗ್ ಆಟದ ಮೂಲಕ ಹಾಲಿ ಚಾಂಪಿಯನ್ ಅರ್ಜೆಂಟೀನಾವನ್ನು ಸಂಪೂರ್ಣವಾಗಿ ಕಟ್ಟಿಹಾಕಿತು. ಈ ಮೂಲಕ ಲಿಯೋನೆಲ್ ಮೆಸ್ಸಿಯವರ ವಿಶ್ವಕಪ್ ವಿದಾಯದ ಪಂದ್ಯಕ್ಕೆ ಸ್ಪೇನ್ ಶಾಕ್ ನೀಡಿತು.

ಸ್ಪೇನ್ ತಂಡದ ಈ ಗೆಲುವು ಕೇವಲ ಅದೃಷ್ಟದ್ದಲ್ಲ, ಅದು ಅವರ ಅತ್ಯುತ್ತಮ ಆಟದ ತಂತ್ರಕ್ಕೆ ಸಿಕ್ಕ ಪ್ರತಿಫಲವಾಗಿತ್ತು. ಏಕೆಂದರೆ  ಫೈನಲ್​ ಪಂದ್ಯದಲ್ಲಿ ಸ್ಪೇನ್ ಬರೋಬ್ಬರಿ 853 ಪಾಸ್‌ಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿತು. ಅರ್ಜೆಂಟೀನಾ ಆಟಗಾರರಿಗಿಂತ 400ಕ್ಕೂ ಹೆಚ್ಚು ಬಾರಿ ಸ್ಪೇನ್ ಚೆಂಡನ್ನು ತನ್ನ ಬಳಿಯೇ ಇಟ್ಟುಕೊಳ್ಳುವ ಮೂಲಕ ಎದುರಾಳಿಗಳಿಗೆ ಆಕ್ರಮಣ ಮಾಡಲು ಅವಕಾಶವನ್ನೇ ನೀಡಲಿಲ್ಲ.

ಬಲಿಷ್ಠ ರಕ್ಷಣಾ ಕೋಟೆ:

2026ರ ಫಿಫಾ ವಿಶ್ವಕಪ್ ಟೂರ್ನಮೆಂಟ್‌ನಲ್ಲಿ ಸ್ಪೇನ್ ಎದುರಾಳಿಗಳಿಗೆ ಬಿಟ್ಟುಕೊಟ್ಟಿದ್ದು ಕೇವಲ ಒಂದೇ ಒಂದು ಗೋಲು. ಈ ಮೂಲಕ ಫಿಫಾ ವಿಶ್ವಕಪ್ ಇತಿಹಾಸದಲ್ಲೇ ಅತ್ಯಂತ ಬಲಿಷ್ಠ ರಕ್ಷಣಾತ್ಮಕ ಆಟ ಆಡಿದ ಐತಿಹಾಸಿಕ ದಾಖಲೆಯನ್ನು ಸ್ಪೇನ್ ತನ್ನದಾಗಿಸಿಕೊಂಡಿದೆ.

ಇಡೀ ಟೂರ್ನಿಯಲ್ಲಿ ಸ್ಪೇನ್ ವಿರುದ್ಧ ಗೋಲು ಬಾರಿಸಲು ಸಾಧ್ಯವಾಗಿದ್ದು ಬೆಲ್ಜಿಯಂ ತಂಡಕ್ಕೆ ಮಾತ್ರ (ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ). ಅದನ್ನು ಬಿಟ್ಟರೆ ಉಳಿದ ಯಾವುದೇ ತಂಡಕ್ಕೂ ಸ್ಪೇನ್ ವಿರುದ್ಧ ಗೋಲು ಹೊಡೆಯಲು ಸಾಧ್ಯವಾಗಲಿಲ್ಲಎಂಬುದೇ ಅಚ್ಚರಿ.

ಉನೈ ಸಿಮನ್ ವಿಶ್ವ ದಾಖಲೆ:

ಸ್ಪೇನ್ ತಂಡದ ಗೋಲ್‌ಕೀಪರ್ ಉನೈ ಸಿಮನ್ ಸತತ 650 ನಿಮಿಷಗಳ ಕಾಲ ಎದುರಾಳಿಗಳಿಗೆ ಒಂದೂ ಗೋಲು ಬಿಟ್ಟುಕೊಡದೆ ವಿಶ್ವಕಪ್ ಇತಿಹಾಸದಲ್ಲೇ ಸುದೀರ್ಘ ಸಮಯ ಕ್ಲೀನ್ ಶೀಟ್ ಸಾಧಿಸಿದ ಹೊಸ ದಾಖಲೆ ಬರೆದಿದ್ದಾರೆ. ಅಂದರೆ ವಿಶ್ವಕಪ್ ಇತಿಹಾಸದಲ್ಲೇ ಯಾವುದೇ ಗೋಲ್ ಕೀಪರ್ ಇಷ್ಟೊತ್ತು ನಿಂತು ಕೇವಲ ಒಂದು ಗೋಲು ಬಿಟ್ಟು ಕೊಟ್ಟಿರುವುದು ಇದೇ ಮೊದಲು.

ಸ್ಪೇನ್ ಆಡಿದ ಒಟ್ಟು 8 ಪಂದ್ಯಗಳಲ್ಲಿ 7 ಪಂದ್ಯಗಳನ್ನು ಎದುರಾಳಿಗಳಿಗೆ ಒಂದು ಗೋಲನ್ನೂ ಬಿಟ್ಟುಕೊಡದೆ ಟೂರ್ನಿ ಮುಗಿಸಿದೆ. ಅದರಲ್ಲೂ ಸೆಮಿಫೈನಲ್‌ನಲ್ಲಿ ಬಲಿಷ್ಠ ಫ್ರಾನ್ಸ್ ಮತ್ತು ಫೈನಲ್‌ನಲ್ಲಿ ಅರ್ಜೆಂಟೀನಾದಂತಹ ತಂಡಗಳನ್ನೂ ಸ್ಪೇನ್ ಶೂನ್ಯಕ್ಕೆ ಕಟ್ಟಿಹಾಕಿ ಇಡೀ ವಿಶ್ವವೇ ನಿಬ್ಬೆರಗಾಗುವಂತೆ ಮಾಡಿದೆ.

ಐತಿಹಾಸಿಕ ಸಾಧನೆ:

ವಿಶ್ವಕಪ್ ಇತಿಹಾಸದಲ್ಲಿ ಅತ್ಯಂತ ಕಡಿಮೆ ಗೋಲು ಹೊಡೆಸಿಕೊಂಡ ಚಾಂಪಿಯನ್ ಪಟ್ಟ ಅಲಂಕರಿಸಿದ ವಿಶ್ವ ದಾಖಲೆ ಸ್ಪೇನ್ ತಂಡದ ಹೆಸರಿನಲ್ಲಿತ್ತು. ಇದೀಗ ತನ್ನದೇ ದಾಖಲೆಯನ್ನು ಮುರಿದು ‘ಲಾ ರೋಜಾ’ ಪಡೆ ಹೊಸ ಇತಿಹಾಸ ನಿರ್ಮಿಸಿದೆ.

  • 2010ರ ವಿಶ್ವಕಪ್​ನಲ್ಲಿ ಸ್ಪೇನ್ ತಂಡವು ಕೇವಲ 2 ಗೋಲು ಹೊಡೆಸಿಕೊಂಡು ವಿಶ್ವ ಚಾಂಪಿಯನ್ ಪಟ್ಟ ಅಲಂಕರಿಸಿದ್ದರು.
  • 2026 ರಲ್ಲಿ ಕೇವಲ ಒಂದು ಗೋಲು ಮಾತ್ರ ಹೊಡೆಸಿಕೊಂಡು ಚಾಂಪಿಯನ್ ಪಟ್ಟ ಅಲಂಕರಿಸುವ ಮೂಲಕ ಸ್ಪೇನ್ ಪಡೆ ತನ್ನದೇ ವಿಶ್ವ ದಾಖಲೆಯನ್ನು ಮುರಿದಿದೆ.

ಅತೀ ಕಡಿಮೆ ಹೊಡೆಸಿಕೊಂಡು ವಿಶ್ವ ಚಾಂಪಿಯನ್ ಪಟ್ಟ ಅಲಂಕರಿಸಿದ ತಂಡ:

  • ಸ್ಪೇನ್ (2026): 1 ಗೋಲು
  • ಸ್ಪೇನ್ (2010): 2 ಗೋಲುಗಳು
  • ಇಟಲಿ (2006): 2 ಗೋಲುಗಳು
  • ಫ್ರಾನ್ಸ್ (1998): 2 ಗೋಲುಗಳು

ಒಟ್ಟಾರೆಯಾಗಿ ಹೇಳುವುದಾದರೆ, 2026ರ ಫಿಫಾ ವಿಶ್ವಕಪ್ ಸ್ಪೇನ್ ತಂಡದ ಅದ್ಭುತ ರಕ್ಷಣಾತ್ಮಕ ಶಿಸ್ತು ಮತ್ತು ಟ್ಯಾಕ್ಟಿಕಲ್ ಪ್ರಾಬಲ್ಯಕ್ಕೆ ಸಿಕ್ಕ ಐತಿಹಾಸಿಕ ಜಯ ಎನ್ನಬಹುದು. ಏಕೆಂದರೆ ತಂಡಗಳ ಸಂಖ್ಯೆ ಹೆಚ್ಚಾದಾಗ, ಪಂದ್ಯಗಳ ಸಂಖ್ಯೆ ಬೆಳೆದಾಗ ಆಟಗಾರರ ದಣಿವು ಮತ್ತು ರಕ್ಷಣಾ ವಿಭಾಗದ ತಪ್ಪುಗಳು ಹೆಚ್ಚಾಗುವುದು ಸಹಜ. ಆದರೆ ಸ್ಪೇನ್ ಪಡೆ ಮಾತ್ರ ರಣರಂಗದಲ್ಲಿ ಶಿಸ್ತಿನ ಸಿಪಾಯಿಗಳಂತೆ ಹೋರಾಡಿತು.

ಇದನ್ನೂ ಓದಿ: ಓವರ್ ಇಲ್ಲ, ಸೂಪರ್ ಫೈವ್, ಬೋನಸ್ ರನ್: ದಿ ಹಂಡ್ರೆಡ್ ಲೀಗ್ ಹೊಸ ನಿಯಮ

48 ತಂಡಗಳ ಈ ಸುದೀರ್ಘ ಹಾಗೂ ಕಠಿಣ ವಿಶ್ವಕಪ್ ಮಹಾಸಮರದಲ್ಲಿ, ಎದುರಾಳಿಗಳು ಎಷ್ಟೇ ತಂತ್ರ ಹೂಡಿದರೂ ಸ್ಪೇನ್‌ನ ರಕ್ಷಣಾ ಕೋಟೆಯನ್ನು ಭೇದಿಸಲು ಸಾಧ್ಯವಾಗಲೇ ಇಲ್ಲ. ಕೇವಲ ಒಂದು ಗೋಲು ಒಪ್ಪಿಕೊಂಡು ವಿಶ್ವಕಿರಿಟ ಧರಿಸಿದ ಈ ‘ಲಾ ರೋಜಾ’ ಪಡೆಯ ಅಪರೂಪದ ದಾಖಲೆ, ಮುಂಬರುವ ತಲೆಮಾರುಗಳ ಫುಟ್‌ಬಾಲ್ ಪ್ರೇಮಿಗಳು ಸದಾ ಕಾಲ ನೆನಪಿಸಿಕೊಳ್ಳುವಂತಹ ಅದ್ಭುತ ಮೈಲಿಗಲ್ಲಾಗಿ ಇತಿಹಾಸದ ಪುಟಗಳಲ್ಲಿ ಅಚ್ಚಳಿಯದೆ ಉಳಿಯಲಿದೆ.

ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
Loading...
Unable to load recommendations.
Follow Us