ಮೊದಲ ಗೇಮ್ನಲ್ಲಿ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಸಾಧಿಸಿದ ಜಯ ಬೆಂಗಳೂರಿನ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ಹೊಸ ಪ್ರತಿಭೆ ದೇವದತ್ ಪಡಿಕ್ಕಲ್ ಮತ್ತು ಟೀಮಿನ ಬ್ಯಾಟಿಂಗ್ ಆಧಾರಸ್ತಂಭಗಳಲಲ್ಲೊಬ್ಬರಾಗಿರುವ ಎಬಿ ಡಿ ವಿಲಿಯರ್ಸ್ ತಾವು ಉತ್ತಮ ಸ್ಪರ್ಶದಲ್ಲಿರುವುದನ್ನು ಆ ಪಂದ್ಯದಲ್ಲಿ ಸಾಬೀತು ಮಾಡಿದರು. ಆದರೆ ಕ್ರಿಕೆಟ್ ‘ಗ್ರೇಟ್ ಲೆವೆಲ್ಲರ್’ ಅಂತಲೂ ಕರೆಸಿಕೊಳ್ಳುತ್ತದೆ. ಒಂದು ಮ್ಯಾಚ್ನಲ್ಲಿ ಉತ್ತಮವಾಗಿ ಆಡುವ ಒಬ್ಬ ಬ್ಯಾಟ್ಸ್ಮನ್ ಮುಂದಿನ ಪಂದ್ಯದಲ್ಲಿ ಕೆಟ್ಟದಾಗಿ ವಿಫಲನಾಗುತ್ತಾನೆ. ಬೌಲರ್ಗಳ ವಿಷಯದಲ್ಲೂ ಇದು ಅಷ್ಟೇ ಸತ್ಯ.
ಇದನ್ನೂ ಓದಿ: IPL 2020: RCB vs KXIP Live Score
ನಾಯಕ ವಿರಾಟ್ ಕೊಹ್ಲಿ ಹೈದರಾಬಾದ್ ವಿರುದ್ಧ ಫೇಲಾಗಿರುವುದನ್ನು ಗಂಭೀರವಾಗಿ ತೆಗೆದುಕೊಂಡಿರಲಿಕ್ಕೂ ಸಾಕು. ಪ್ರಾಯಶಃ ಲಾಕ್ಡೌನ್ನ ಜಡತ್ವದಿಂದ ಅವರಿನ್ನೂ ಹೊರಬಂದಂತಿಲ್ಲ. ಅವರೊಮ್ಮೆ ಟಚ್ ಕಂಡುಕೊಂಡರೆ ಎದುರಾಳಿಗಳ ರಕ್ತದೊತ್ತಡ ಹೆಚ್ಚಾಗತೊಡಗುತ್ತದೆ.
ಬೆಂಗಳೂರು ಟೀಮಿನಲ್ಲಿ ಒಂದರೆಡು ಬದಲಾವಣೆಗಳನ್ನು ಮಾಡುವ ಸಾಧ್ಯತೆಯಿದೆ. ಮೊದಲ ಪಂದ್ಯದಲ್ಲಿ ಫೇಲಾದ ವಿಕೆಟ್ಕೀಪರ್–ಬ್ಯಾಟ್ಸ್ಮನ್ ಜೊಷುವಾ ಫಿಲಿಪ್ ಅವರ ಸ್ಥಾನದಲ್ಲಿ ಪಾರ್ಥೀವ್ ಪಟೇಲ್ ಬರಬಹುದು. ಹಾಗೆಯೇ, ಹೈದರಾಬಾದ್ ವಿರುದ್ಧ ಕೇವಲ ಒಂದು ಓವರ್ ಮಾತ್ರ ಬೌಲ್ ಮಾಡಿದ ಆಫ್ಸ್ಪಿನ್ನರ್ ವಾಷಿಂಗ್ಟನ್ ಸುಂದರ್ ಸ್ಥಾನಕ್ಕೆ ಆಲ್ರೌಂಡರ್ ಮೊಯೀನ್ ಅಲಿ ಬರುವ ಸಾಧ್ಯತೆಯಿದೆ.
ಇವತ್ತಿನ ಪಂದ್ಯದಲ್ಲೂ ಪಡಿಕ್ಕಲ್ ಮತ್ತು ಆರನ್ ಫಿಂಚ್ ಇನ್ನಿಂಗ್ಸ್ ಆರಂಭಿಸಲಿದ್ದಾರೆ. ಪಟೇಲ್ ಸಹ ಎಡಗೈ ಓಪನರ್ ಆಗಿರುವರಾದರೂ, ಪಡಿಕ್ಕಲ್ ಉತ್ತಮ ಫಾರ್ಮ್ನಲ್ಲಿರುವುದರಿಂದ ಬದಲಾವಣೆ ಅನಾವಶ್ಯಕ. ಆಲ್ರೌಂಡರ್ ಶಿವಂ ದುಬೆ ಸ್ಥಾನ ಉಳಿಸಿಕೊಳ್ಳಬಹುದು. ವೇಗದ ಬೌಲಿಂಗ್ ವಿಭಾಗವನ್ನು ಮತ್ತೊಮ್ಮೆ ಡೇಲ್ ಸ್ಟೀನ್, ಉಮೇಶ್ ಯಾದವ್, ಮತ್ತು ನವದೀಪ್ ಸೈನಿ ನಿಭಾಯಿಸಬಹುದು. ಹೈದರಾಬಾದ್ ವಿರುದ್ಧ ಮ್ಯಾಚ್ವಿನ್ನಿಂಗ್ ಬೌಲಿಂಗ್ ಪ್ರದರ್ಶನ ನೀಡಿದ 30 ವರ್ಷ ವಯಸ್ಸಿನ ಯುಜ್ವೇಂದ್ರ ಚಹಲ್ ಉತ್ತಮ ಲಯದಲ್ಲಿದ್ದಾರೆ.
ಮರಳುಗಾಡಿನ ಮೈದಾನಗಳಲ್ಲಿ ಇಬ್ಬನಿ ನಿರ್ಣಾಯಕ ಪಾತ್ರವಹಿಸುತ್ತಿರುವುದರಿಂದ ಟಾಸ್ ಗೆದ್ದ ಟೀಮು ಮೊದಲು ಫೀಲ್ಡ್ ಮಾಡುವ ನಿರ್ಧಾರ ತೆಗೆದುಕೊಳ್ಳುತ್ತಿವೆ. ಇವತ್ತು ಸಹ ಅದೇ ಆಗಲಿದೆ.
ಅತ್ತ, ಕೆ ಎಲ್ ರಾಹುಲ್ ನೇತೃತ್ವದ ಪಂಜಾಬ್ಗೆ ಮೊದಲ ಪಂದ್ಯದ ಸೋಲು ಸ್ವಲ್ಪ ಧೃತಿಗೆಡಿಸಿರಬಹುದು. ವಾಸ್ತವದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಆಡಿದ ಆ ಪಂದ್ಯವನ್ನು ಪಂಜಾಬ್ ಗೆದ್ದಿತ್ತು. ಆನ್ಫೀಲ್ಡ್ ಅಂಪೈರ್ ನಿತಿನ್ ಮೆನನ್ ಎಸಗಿದ ಪ್ರಮಾದದಿಂದ ಸೋಲಬೇಕಾಗಿ ಬಂತು. ಆರಂಭ ಆಟಗಾರ ಮಾಯಾಂಕ್ ಅಗರವಾಲ್ ಅವರ ಅಪ್ರತಿಮ ಬ್ಯಾಟಿಂಗ್ ಪ್ರದರ್ಶನ ಹೊಳೆಯಲ್ಲಿ ಹುಣಸೆಹಣ್ಣು ತೊಳೆದಂತಾಯಿತು.
ಸೀಮಿತ ಓವರ್ಗಳ ಕ್ರಿಕೆಟ್ನಲ್ಲಿ ರಾಹುಲ್ ಯಾವುದೇ ಬ್ಯಾಟ್ಸ್ಮನ್ಗಿಂತ ಕಮ್ಮಿಯಿಲ್ಲ. ಅವರ ಬತ್ತಳಿಕೆಯಲ್ಲಿ ಎಲ್ಲ ಹೊಡೆತಗಳಿವೆ, ಹಾಗೂ ಸರ್ವ ಬಗೆಯ ಬೌಲಿಂಗನ್ನು ನಿರ್ದಯತೆಯಿಂದ ಚಚ್ಚಬಲ್ಲರು. ಮೊದಲ ಪಂದ್ಯದಲಿ ಬೆಂಚ್ ಕಾಯಿಸಿದ ಕ್ರಿಸ್ ಗೇಲ್ ಇವತ್ತಿನ ಪಂದ್ಯಕ್ಕೆ ಮತ್ತೊಬ್ಬ ಕನ್ನಡಿಗ ಕರುಣ್ ನಾಯರ್ ಸ್ಥಾನದಲ್ಲಿ ಬರಬಹುದು. ಒಂದು ಪಕ್ಷ ಗೇಲ್ ಆಡಿದರೆ, ರಾಹುಲ್ ಮೂರನೇ ಕ್ರಮಾಂಕದಲ್ಲಿ ಆಡಬಹುದು. ಸರ್ಫ್ರಾಜ್ ಖಾನ್ ಮತ್ತ್ತು ಗ್ಲೆನ್ ಮ್ಯಾಕ್ಸ್ವೆಲ್ ಬಿಗ್ ಹಿಟ್ಟರ್ಗಳು. ಮ್ಯಾಚಿನ ದಿಕ್ಕು ಬದಲಿಸುವ ಕ್ಷಮತೆ ಇಬ್ಬರಲ್ಲೂ ಇದೆ.
ಗೇಲ್ ಆಡಿದರೆ ಎದುರಾಳಿ ಮತ್ತು ಉಳದೆಲ್ಲರ ದೃಷ್ಟಿ ಅವರ ಮೇಲಿರುತ್ತದೆ. ಟಿ20 ಕ್ರಿಕೆಟ್ನಲ್ಲಿ ಅವರು ಇದುವರೆಗೆ ಬಾರಿಸಿರುವ ಶತಕಗಳ ಸಂಖ್ಯೆ 22. ಎರಡನೇ ಸ್ಥಾನದಲ್ಲಿರುವ ಬ್ರೆಂಡನ್ ಮೆಕಲ್ಲಮ್ಗಿಂತ (7) 15 ಶತಕಗಳು ಜಾಸ್ತಿ. ಗೇಲ್ಎದುರಾಳಿ ಬಾಲರ್ಗಳ ಎದೆಯಲ್ಲಿ ನಡುಕ ಹುಟ್ಟಿಸುವ ಬ್ಯಾಟ್ಸ್ಮನ್, ಅದು ಕೊಹ್ಲಿಗೂ ಚೆನ್ನಾಗಿ ಗೊತ್ತು. ಗೇಲ್ರನ್ನು ಕಟ್ಟಿ ಹಾಕಿದರೆ ಮುಕ್ಕಾಲು ಪಂದ್ಯ ಗೆದ್ದಂತೆಯೇ. ಉತ್ತಮ ಫಾರ್ಮ್ನಲ್ಲಿರುವ ಅಗರ್ವಾಲ್ ಗೇಲ್ ಜೊತೆ ಇನ್ನಿಂಗ್ಸ್ ಆರಂಭಿಸಿದರೆ ರೈಟ್-ಲೆಫ್ಟ್ ಕಾಂಬಿನೇಶನ್ ಕೊಹ್ಲಿಯ ಬೌಲರ್ಗಳಿಗೆ ಸಮಸ್ಯೆ ಉಂಟು ಮಾಡುವುದು ನಿಶ್ಚಿತ.
ಒಟ್ಟಿನಲ್ಲಿ ಕನ್ನಡನಾಡಿನ ಮತ್ತು ಕನ್ನಡಿಗರ ಟೀಮುಗಳ ನಡುವಿನ ಇವತ್ತಿನ ಪಂದ್ಯ ರೋಚಕವಾಗಿರಲಿದೆ.
Published On - 5:06 pm, Thu, 24 September 20