ಮೆಸ್ಸಿ ಮ್ಯಾಜಿಕ್… 2 ಗೋಲುಗಳು 2 ವಿಶ್ವ ದಾಖಲೆ!

Lionel Messi Records: ಜಾಗತಿಕ ಫುಟ್‌ಬಾಲ್ ಇತಿಹಾಸದಲ್ಲಿ ಜೂನ್ 22, 2026ರ ದಿನವು ಸುವರ್ಣಾಕ್ಷರಗಳಲ್ಲಿ ಬರೆದಿಡುವಂತಹ ಒಂದು ಅದ್ಭುತ ಕ್ಷಣಕ್ಕೆ ಸಾಕ್ಷಿಯಾಗಿದೆ. ಡಲ್ಲಾಸ್ ಮೈದಾನದಲ್ಲಿ ನಡೆದ ಆಸ್ಟ್ರಿಯಾ ವಿರುದ್ಧದ ರೋಚಕ ಪಂದ್ಯದಲ್ಲಿ ಅರ್ಜೆಂಟೀನಾದ ಫುಟ್‌ಬಾಲ್ ಧ್ರುವತಾರೆ ಲಿಯೋನೆಲ್ ಮೆಸ್ಸಿ ವಿಶ್ವ ದಾಖಲೆಯೊಂದನ್ನು ಸೃಷ್ಟಿಸಿದ್ದಾರೆ. 

ಮೆಸ್ಸಿ ಮ್ಯಾಜಿಕ್... 2 ಗೋಲುಗಳು 2 ವಿಶ್ವ ದಾಖಲೆ!
Lionel Messi
Image Credit source: Roberto Tuero

Updated on: Jun 23, 2026 | 7:35 AM

ಫುಟ್‌ಬಾಲ್ ಲೋಕದ ಮಾಂತ್ರಿಕ ಲಿಯೋನೆಲ್ ಮೆಸ್ಸಿ ಫಿಫಾ ವಿಶ್ವಕಪ್​ನಲ್ಲಿ ಹೊಸ ಇತಿಹಾಸ ಬರೆದಿದ್ದಾರೆ. ಅದು ಸಹ ಇಬ್ಬರ ಹೆಸರಿನಲ್ಲಿದ್ದ ವಿಶ್ವ ದಾಖಲೆಗಳನ್ನು ಮುರಿಯುವ ಮೂಲಕ ಎಂಬುದು ವಿಶೇಷ. ಡಲ್ಲಾಸ್ ಸ್ಟೇಡಿಯಂನಲ್ಲಿ ನಡೆದ ಆಸ್ಟ್ರಿಯಾ ವಿರುದ್ಧದ ಪಂದ್ಯದಲ್ಲಿ ಅರ್ಜೆಂಟೀನಾ ತಂಡ 2-0 ಗೋಲುಗಳ ಅಂತರದಿಂದ ಭರ್ಜರಿ ಜಯ ಸಾಧಿಸಿದೆ. ಈ ಗೋಲುಗಳು ಮೂಡಿಬಂದಿರುವುದು ಕಾಲ್ಚೆಂಡು ಚತುರ ಲಿಯೋನೆಲ್ ಮೆಸ್ಸಿ ಕಾಲುಗಳಿಂದ.

ಪಂದ್ಯದ 38ನೇ ನಿಮಿಷದಲ್ಲಿ ಫಾಕುಂಡೋ ಮಡೀನಾ ನೀಡಿದ ಅದ್ಭುತ ಪಾಸ್ ಅನ್ನು ಮೆಸ್ಸಿ ಗೋಲು ಪೆಟ್ಟಿಗೆಯತ್ತ ತಳ್ಳುವ ಮೂಲಕ ಮೊದಲ ಗೋಲು ದಾಖಲಿಸಿದರು.  ಇದಾದ ಬಳಿಕ ಹಲವು ಬಾರಿ ಪ್ರಯತ್ನ ನಡೆಸಿದರೂ ಅರ್ಜೆಂಟೀನಾ ಆಟಗಾರರಿಗೆ ಚೆಂಡನ್ನು ಗುರಿ ತಲುಪಿಸಲು ಸಾಧ್ಯವಾಗಿರಲಿಲ್ಲ.

ಆದರೆ ಇನ್ನೇನು ಪಂದ್ಯ ಮುಗಿಯಲಿದೆ ಅನ್ನುವಷ್ಟರಲ್ಲಿ ಇಂಜುರಿ ಟೈಮ್‌ನಲ್ಲಿ ((90+5ನೇ ನಿಮಿಷ) ಮೆಸ್ಸಿ ಮತ್ತೊಂದು ಆಕರ್ಷಕ ಗೋಲು ಬಾರಿಸಿದರು.

ಈ ಗೋಲುಗಳೊಂದಿಗೆ ಫಿಫಾ ವಿಶ್ವಕಪ್ ಇತಿಹಾಸದಲ್ಲೇ ಅತ್ಯಧಿಕ ಗೋಲು ದಾಖಲಿಸಿದ ಪ್ಲೇಯರ್ ಎಂಬ ವಿಶ್ವ ದಾಖಲೆಯನ್ನು ಲಿಯೋನೆಲ್ ಮೆಸ್ಸಿ ತಮ್ಮದಾಗಿಸಿಕೊಂಡರು. ಇದಕ್ಕೂ ಮುನ್ನ ಈ ದಾಖಲೆ ಇಬ್ಬರ ಹೆಸರಿನಲ್ಲಿತ್ತು.

  • ಮಿರೋಸ್ಲಾವ್ ಕ್ಲೋಸ್ (ಜರ್ಮನಿ): ಪುರುಷರ ಫಿಫಾ ವಿಶ್ವಕಪ್ ಇತಿಹಾಸದಲ್ಲಿ ಅತ್ಯಧಿಕ ಗೋಲು ಗಳಿಸಿದ ದಾಖಲೆ ಮಿರೋಸ್ಲಾವ್ ಕ್ಲೋಸ್ ಹೆಸರಲ್ಲಿತ್ತು. ಜರ್ಮನಿ ಪರ 24 ವಿಶ್ವಕಪ್ ಪಂದ್ಯಗಳನ್ನಾಡಿರುವ ಕ್ಲೋಸ್ 16 ಗೋಲುಗಳನ್ನು ಬಾರಿಸಿ ಫಿಫಾ ವಿಶ್ವಕಪ್​ ಇತಿಹಾಸದಲ್ಲೇ ಅತ್ಯಧಿಕ ಗೋಲು ದಾಖಲಿಸಿದ ವಿಶ್ವ ದಾಖಲೆ ನಿರ್ಮಿಸಿದ್ದರು.
  • ಮಾರ್ಟಾ (ಬ್ರೆಝಿಲ್): ಮಹಿಳಾ ವಿಶ್ವಕಪ್‌ನಲ್ಲಿ 17 ಗೋಲುಗಳನ್ನು ಬಾರಿಸಿ ಬ್ರೆಝಿಲ್​ನ ಮಾರ್ಟಾ ಫಿಫಾ ವಿಶ್ವಕಪ್ ಇತಿಹಾಸದಲ್ಲೇ ಅತ್ಯಧಿಕ ಗೋಲು ಗಳಿಸಿದ ಪ್ಲೇಯರ್ ಎನಿಸಿಕೊಂಡಿದ್ದರು.

ಇದೀಗ ಒಂದೇ ಪಂದ್ಯದಲ್ಲಿ ಈ ಇಬ್ಬರ ಸಾರ್ವಕಾಲಿಕ ವಿಶ್ವ ದಾಖಲೆಗಳನ್ನು ಲಿಯೋನೆಲ್ ಮೆಸ್ಸಿ ತಮ್ಮದಾಗಿಸಿಕೊಂಡಿದ್ದಾರೆ.

  • ಲಿಯೋನೆಲ್ ಮೆಸ್ಸಿ: ಅರ್ಜೆಂಟೀನಾ ಪರ ಈವರೆಗೆ 28 ವಿಶ್ವಕಪ್ ಪಂದ್ಯಗಳನ್ನಾಡಿರುವ ಮೆಸ್ಸಿ ಒಟ್ಟು 18 ಗೋಲುಗಳನ್ನು ದಾಖಲಿಸಿದ್ದಾರೆ. ಈ ಮೂಲಕ ಪುರುಷರ ಫಿಫಾ ವಿಶ್ವಕಪ್​ನಲ್ಲಿ ಅತ್ಯಧಿಕ ಗೋಲು ದಾಖಲಿಸಿ ಕ್ಲೋಸ್ ಹೆಸರಿನಲ್ಲಿದ್ದ ವಿಶ್ವ ದಾಖಲೆಯನ್ನು ಮೆಸ್ಸಿ ಅಳಿಸಿ ಹಾಕಿದ್ದಾರೆ. ಹಾಗೆಯೇ 18 ಗೋಲುಗಳೊಂದಿಗೆ ಬ್ರೆಝಿಲ್​ನ ಮಾರ್ಟಾ (17 ಗೋಲು) ಹೆಸರಿನಲ್ಲಿದ್ದ ಐತಿಹಾಸಿಕ ದಾಖಲೆಯನ್ನು ಕೂಡ ಮೆಸ್ಸಿ ಮುರಿದಿದ್ದಾರೆ.

ಈ ಮೂಲಕ ಲಿಯೋನೆಲ್ ಮೆಸ್ಸಿ ಈಗ ಪುರುಷರ ಮತ್ತು ಮಹಿಳಾ ವಿಶ್ವಕಪ್ ಎರಡರಲ್ಲೂ ಸಾರ್ವಕಾಲಿಕ ಗರಿಷ್ಠ ಗೋಲುಗಾರ ಎನಿಸಿಕೊಂಡಿದ್ದಾರೆ.

ಇದನ್ನೂ ಓದಿ: ಟೀಮ್ ಇಂಡಿಯಾದಿಂದ 6 ಆಟಗಾರರು ಔಟ್..!

ಒಟ್ಟಾರೆಯಾಗಿ, ಲಿಯೋನೆಲ್ ಮೆಸ್ಸಿ ಅವರ ಈ ಅಭೂತಪೂರ್ವ ಸಾಧನೆ ಕೇವಲ ಫುಟ್‌ಬಾಲ್ ಇತಿಹಾಸದ ಮತ್ತೊಂದು ಪುಟವಲ್ಲ. ಇದು ಒಂದು ಸುವರ್ಣ ಅಧ್ಯಾಯ. ಮಿರೋಸ್ಲಾವ್ ಕ್ಲೋಸ್ ಮತ್ತು ಮಾರ್ಟಾ ಅವರಂತಹ ಮಹಾನ್ ದಂತಕಥೆಗಳ ವಿಶ್ವ ದಾಖಲೆಗಳನ್ನು ಅಳಿಸಿ ಹಾಕುವ ಮೂಲಕ, ತಾವು ಯಾಕೆ ಜಗತ್ತಿನ ಸಾರ್ವಕಾಲಿಕ ಶ್ರೇಷ್ಠ ಆಟಗಾರ ಎಂಬುದನ್ನು ಮೆಸ್ಸಿ ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.

 

Published On - 7:35 am, Tue, 23 June 26

Follow Us