
ವಿಶ್ವದ ಖ್ಯಾತ ಕಾಲ್ಚೆಂಡು ಚತುರ ಲಿಯೋನೆಲ್ ಮೆಸ್ಸಿ TIME ನಿಯತಕಾಲಿಕೆಯ ವರ್ಷದ ಕ್ರೀಡಾಪಟು ಗೌರವಕ್ಕೆ ಪಾತ್ರರಾಗಿದ್ದಾರೆ. ವಿಶೇಷ ಎಂದರೆ ಟೈಮ್ ಮ್ಯಾಗಝಿನ್ನ ಈ ಗೌರವಕ್ಕೆ ಪಾತ್ರವಾದ ಮೊದಲ ಫುಟ್ಬಾಲ್ ಆಟಗಾರ ಮೆಸ್ಸಿ. ಇದರೊಂದಿಗೆ ಅರ್ಜೇಂಟೀನಾ ತಾರೆ ಮುಡಿಗೆ ಮತ್ತೊಂದು ಗರಿ ಸೇರಿಕೊಂಡಿದೆ.
ಫಿಫಾ ವಿಶ್ವಕಪ್ನಲ್ಲಿ ಅರ್ಜೆಂಟೀನಾವನ್ನು ಮುನ್ನಡೆಸಿ ಚಾಂಪಿಯನ್ ಪಟ್ಟಕ್ಕೇರಿಸಿದ್ದ ಲಿಯೋನೆಲ್ ಮೆಸ್ಸಿ ಕೆಲ ದಿನಗಳ ಹಿಂದೆಯಷ್ಟೇ 8ನೇ ಬ್ಯಾಲನ್ ಡಿ’ಓರ್ ಪ್ರಶಸ್ತಿಯನ್ನು ಗೆದ್ದಿದ್ದರು. ಇದೀಗ ವಾರಗಳ ಅಂತರದಲ್ಲಿ ಟೈಮ್ ಮ್ಯಾಗಝಿನ್ನ ವರ್ಷದ ಅಥ್ಲೀಟ್ ಎಂದು ಹೆಸರಿಸಲ್ಪಟ್ಟ ಮೊದಲ ಫುಟ್ಬಾಲ್ ಆಟಗಾರ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ.
ಯುನೈಟೆಡ್ ಸ್ಟೇಟ್ಸ್ ಸುದ್ದಿ ನಿಯತಕಾಲಿಕೆ ‘ಟೈಮ್’ ವರ್ಷದ ಕ್ರೀಡಾಪಟುಗಳ ಪಟ್ಟಿಯಲ್ಲಿ ಲಿಯೋನೆಲ್ ಮೆಸ್ಸಿಗೆ ಪ್ರತಿಸ್ಪರ್ಧಿಯಾಗಿ ಫ್ರಾನ್ಸ್ನ ಫುಟ್ಬಾಲ್ ತಾರೆ ಕೈಲಿಯನ್ ಎಂಬಾಪ್ಪೆ ಮತ್ತು ಮ್ಯಾಂಚೆಸ್ಟರ್ ಸಿಟಿಯ ನಾರ್ವೇಜಿಯನ್ ಸ್ಟ್ರೈಕರ್ ಎರ್ಲಿಂಗ್ ಹಾಲೆಂಡ್ ಇದ್ದರು.
ಹಾಗೆಯೇ ಟೆನಿಸ್ ದಿಗ್ಗಜ ನೊವಾಕ್ ಜೊಕೊವಿಕ್ ಮತ್ತು ಮೇಜರ್ ಲೀಗ್ ಬೇಸ್‌ಬಾಲ್ ತಾರೆ ಆರನ್ ಜಡ್ಜ್ ಕೂಡ ನಾಮನಿರ್ದೇಶನಗೊಂಡಿದ್ದರು. ಆದರೆ ಇವರೆಲ್ಲರನ್ನೂ ಹಿಂದಿಕ್ಕಿ ಲಿಯೋನೆಲ್ ಮೆಸ್ಸಿ ವರ್ಷದ ಕ್ರೀಡಾಪಟುವಾಗಿ ಹೊರಹೊಮ್ಮಿದ್ದಾರೆ.
ಇದನ್ನೂ ಓದಿ: Lionel Messi: ವಿಶ್ವ ದಾಖಲೆ ಬರೆದ ಲಿಯೋನೆಲ್ ಮೆಸ್ಸಿ