Lionel Messi: ವಿಶ್ವ ದಾಖಲೆ ಬರೆದ ಲಿಯೋನೆಲ್ ಮೆಸ್ಸಿ
Lionel Messi Record: ಈ ಗೆಲುವಿನೊಂದಿಗೆ ಫುಟ್ಬಾಲ್ ಇತಿಹಾಸದಲ್ಲೇ ಅತ್ಯಧಿಕ ಟ್ರೋಫಿ ಗೆದ್ದ ವಿಶ್ವ ದಾಖಲೆ ಕೂಡ ಲಿಯೋನೆಲ್ ಮೆಸ್ಸಿ ಪಾಲಾಗಿದೆ. ಇದಕ್ಕೂ ಮುನ್ನ ಈ ದಾಖಲೆ ಬ್ರೆಝಿಲ್ಗೆ ಡ್ಯಾನಿ ಅಲ್ವೆಸ್ ಹೆಸರಿನಲ್ಲಿತ್ತು.

ಯುಎಸ್ಎಯ ಲೀಗ್ಸ್ ಕಪ್ ಫೈನಲ್ ಪಂದ್ಯದಲ್ಲಿ ಗೆದ್ದು ಲಿಯೋನೆಲ್ ಮೆಸ್ಸಿ (Lionel Messi) ನೇತೃತ್ವದ ಇಂಟರ್ ಮಿಯಾಮಿ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿದೆ. ನ್ಯಾಶ್ವಿಲ್ಲೆ ಕ್ಲಬ್ ವಿರುದ್ಧ ನಡೆದ ಅಂತಿಮ ಪಂದ್ಯವು ರಣರೋಚಕ ಹೋರಾಟಕ್ಕೆ ಸಾಕ್ಷಿಯಾಗಿತ್ತು. ಪಂದ್ಯದ 23ನೇ ನಿಮಿಷದಲ್ಲಿ ಗೋಲು ಬಾರಿಸುವ ಮೂಲಕ ಮೆಸ್ಸಿ ಇಂಟರ್ ಮಿಯಾಮಿ ತಂಡಕ್ಕೆ ಯಶಸ್ಸು ತಂದುಕೊಟ್ಟರು.
ಆದರೆ ದ್ವಿತಿಯಾರ್ಧದ 57ನೇ ನಿಮಿಷದಲ್ಲಿ ನ್ಯಾಶ್ವಿಲ್ಲೆ ಫಾಫಾ ಪಿಕಾಲ್ಟ್ ಗೋಲು ದಾಖಲಿಸಿದರು. ಇದಾದ ಬಳಿಕ ಉಭಯ ತಂಡಗಳ ನಡುವೆ ಭರ್ಜರಿ ಪೈಪೋಟಿ ಕಂಡು ಬಂತು. ಆದರೆ ಎರಡೂ ತಂಡಗಳು ಗೋಲುಗಳಿಸುವಲ್ಲಿ ಮಾತ್ರ ಯಶಸ್ವಿಯಾಗಿರಲಿಲ್ಲ. ಪರಿಣಾಮ ಪಂದ್ಯವು 1-1 ಸಮಬಲದೊಂದಿಗೆ ಅಂತ್ಯವಾಯಿತು.
ಪಂದ್ಯ ಸಮಬಲಗೊಂಡಿದ್ದರಿಂದ ಫಲಿತಾಂಶ ನಿರ್ಧಾರಕ್ಕಾಗಿ ಪೆನಾಲ್ಟಿ ಶೂಟೌಟ್ ಮೊರೆ ಹೋಗಲಾಯಿತು. 5 ಅವಕಾಶಗಳ ಪೆನಾಲ್ಟಿ ಶೂಟೌಟ್ನಲ್ಲಿ ಉಭಯ ತಂಡಗಳು 4-4 ಅಂತರದಿಂದ ಸಮಬಲ ಸಾಧಿಸಿದ್ದರು. ಹೀಗಾಗಿ 2ನೇ ಸುತ್ತಿನ ಅವಕಾಶ ನೀಡಲಾಯಿತು.
2ನೇ ಸುತ್ತಿನ ಪೆನಾಲ್ಟಿ ಶೂಟೌಟ್ನ ಕೊನೆಯ ಅವಕಾಶದಲ್ಲಿ ನ್ಯಾಶ್ವಿಲ್ಲೆ ಗೋಲು ಕೀಪರ್ ಚೆಂಡನ್ನು ಬಲೆಯೊಳಗೆ ತಲುಪಿಸುವಲ್ಲಿ ಎಡವಿದರು. ಇದರೊಂದಿಗೆ ಇಂಟರ್ ಮಿಯಾಮಿ ತಂಡ 10-9 ಅಂತರದಿಂದ ಜಯ ಸಾಧಿಸಿತು. ಈ ಮೂಲಕ ಅಮೆರಿಕನ್ ಲೀಗ್ನಲ್ಲೂ ಲಿಯೋನೆಲ್ ಮೆಸ್ಸಿ ಟ್ರೋಫಿಯನ್ನು ಮುಡಿಗೇರಿಸಿಕೊಂಡರು. ಅಲ್ಲದೆ ಟೂರ್ನಿಯ ಬೆಸ್ಟ್ ಪ್ಲೇಯರ್ ಹಾಗೂ ಅತೀ ಹೆಚ್ಚು ಗೋಲು ಬಾರಿಸಿದ ಪ್ರಶಸ್ತಿಯನ್ನು ಸಹ ಬಾಚಿಕೊಂಡರು.
ಮೆಸ್ಸಿ ವಿಶ್ವ ದಾಖಲೆ:
ಈ ಗೆಲುವಿನೊಂದಿಗೆ ಫುಟ್ಬಾಲ್ ಇತಿಹಾಸದಲ್ಲೇ ಅತ್ಯಧಿಕ ಟ್ರೋಫಿ ಗೆದ್ದ ವಿಶ್ವ ದಾಖಲೆ ಕೂಡ ಲಿಯೋನೆಲ್ ಮೆಸ್ಸಿ ಪಾಲಾಗಿದೆ. ಇದಕ್ಕೂ ಮುನ್ನ ಈ ದಾಖಲೆ ಬ್ರೆಝಿಲ್ಗೆ ಡ್ಯಾನಿ ಅಲ್ವೆಸ್ ಹೆಸರಿನಲ್ಲಿತ್ತು. ಅಲ್ವೆಸ್ ಒಟ್ಟು 43 ಟ್ರೋಫಿಗಳನ್ನು ಗೆದ್ದು ಇತಿಹಾಸ ನಿರ್ಮಿಸಿದ್ದರು.
ಇದೀಗ 44ನೇ ಕಿರೀಟವನ್ನು ಮುಡಿಗೇರಿಸಿಕೊಳ್ಳುವ ಮೂಲಕ ಅರ್ಜೆಂಟೀನಾ ತಾರೆ ಲಿಯೋನೆಸ್ ಮೆಸ್ಸಿ ಫುಟ್ಬಾಲ್ ಇತಿಹಾಸದಲ್ಲೇ ಅತೀ ಹೆಚ್ಚು ಟ್ರೋಫಿಗಳನ್ನು ಗೆದ್ದ ಆಟಗಾರ ಎನಿಸಿಕೊಂಡಿದ್ದಾರೆ.
ಇದನ್ನೂ ಓದಿ: ವರ್ಷಕ್ಕೆ 1,248 ಕೋಟಿ ರೂ: ಅಲ್ ಹಿಲಾಲ್ ಕ್ಲಬ್ ಜೊತೆ ನೇಮರ್ ಒಪ್ಪಂದ
7ನೇ ಸ್ಥಾನದಲ್ಲಿ ರೊನಾಲ್ಡೊ:
ಫುಟ್ಬಾಲ್ ಇತಿಹಾಸದಲ್ಲಿ ಅತ್ಯಧಿಕ ಟ್ರೋಫಿಗಳನ್ನು ಮುಡಿಗೇರಿಸಿಕೊಂಡ ಆಟಗಾರರಲ್ಲಿ ಪೋರ್ಚುಗಲ್ನ ಖ್ಯಾತ ಕಾಲ್ಚೆಂಡು ಚತುರ ಕ್ರಿಸ್ಟಿಯಾನೊ ರೊನಾಲ್ಡೊ 7ನೇ ಸ್ಥಾನದಲ್ಲಿದ್ದಾರೆ. ರೊನಾಲ್ಡೊ ಒಟ್ಟು 35 ಟ್ರೋಫಿಗಳನ್ನು ಗೆದ್ದುಕೊಂಡಿದ್ದಾರೆ.
Published On - 3:13 pm, Sun, 20 August 23