ಈ ಪುಟ್ಟ ಪುಟಾಣಿಯೇ ಈಗ ಮೆಸ್ಸಿಯ ಎದುರಾಳಿ!

FIFA World Cup 2026: ಜುಲೈ 19 ರಂದು ನಡೆಯಲಿರುವ ಫಿಫಾ ವಿಶ್ವಕಪ್​ನ ಫೈನಲ್ ಪಂದ್ಯದಲ್ಲಿ ಅರ್ಜೆಂಟೀನಾ ಮತ್ತು ಸ್ಪೇನ್ ತಂಡಗಳು ಮುಖಾಮುಖಿಯಾಗಲಿದೆ. ಈ ಪಂದ್ಯವು ಇದೀಗ ಲಿಯೋನೆಲ್ ಮೆಸ್ಸಿ vs ಲಾಮಿನ್ ಯಮಾಲ್ ಕದನವಾಗಿ ಮಾರ್ಪಟ್ಟಿದೆ. ಈ ಕದನವನ್ನು ಅಭಿಮಾನಿಗಳು "ಗುರು ಮತ್ತು ಶಿಷ್ಯನ ನಡುವಿನ ದಿವ್ಯ ಹೋರಾಟ" ಎಂದು ಬಣ್ಣಿಸುತ್ತಿರುವುದು ವಿಶೇಷ.

ಈ ಪುಟ್ಟ ಪುಟಾಣಿಯೇ ಈಗ ಮೆಸ್ಸಿಯ ಎದುರಾಳಿ!
Lionel Messi
Image Credit source: x.com

Updated on: Jul 16, 2026 | 10:28 AM

ವಿಶ್ವ ಫುಟ್‌ಬಾಲ್ ಇತಿಹಾಸದಲ್ಲಿ ಕೆಲವು ಘಟನೆಗಳು ಕೇವಲ ಕಾಕತಾಳೀಯವಾಗಿರಲು ಸಾಧ್ಯವೇ ಇಲ್ಲ, ಅವುಗಳನ್ನು ವಿಧಿಯೇ ಬರೆದಿಟ್ಟಿರುತ್ತದೆ ಅನಿಸುತ್ತದೆ. ಇದಕ್ಕೆ ಅತ್ಯುತ್ತಮ ಉದಾಹರಣೆ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸಂಚಲನ ಸೃಷ್ಟಿಸುತ್ತಿರುವ ಒಂದು ಹಳೆಯ ಫೋಟೋ. ಜಗತ್ತಿನ ಸಾರ್ವಕಾಲಿಕ ಶ್ರೇಷ್ಠ ಫುಟ್‌ಬಾಲ್ ಆಟಗಾರ ಲಿಯೋನೆಲ್ ಮೆಸ್ಸಿ, ಕೇವಲ ಕೆಲವು ತಿಂಗಳ ಮಗುವಿಗೆ ಜಳಕ ಮಾಡಿಸುತ್ತಿರುವ ಅಪರೂಪದ ಚಿತ್ರವಿದು. ಅಷ್ಟಕ್ಕೂ ಮೆಸ್ಸಿ ಕೈಯಲ್ಲಿದ್ದ ಆ ಪುಟ್ಟ ಮಗು ಬೇರೆ ಯಾರೂ ಅಲ್ಲ. ಇಂದು ಇಡೀ ಫುಟ್‌ಬಾಲ್ ಜಗತ್ತನ್ನು ತನ್ನ ಅದ್ಭುತ ಆಟದ ಮೂಲಕ ಮಂತ್ರಮುಗ್ಧಗೊಳಿಸುತ್ತಿರುವ ಸ್ಪೇನ್ ದೇಶದ ಯುವ ತಾರೆ ಲಾಮಿನ್ ಯಮಾಲ್!

2007 ರಲ್ಲಿ ಮುಖಾಮುಖಿ:

ಲಿಯೋನೆಲ್ ಮೆಸ್ಸಿ ಮತ್ತು ಲಾಮಿನ್ ಯಮಾಲ್ ಮುಖಾಮುಖಿಯಾಗಿದ್ದು 2007 ರಲ್ಲಿ. ಮೆಸ್ಸಿ ಅವರು ಬಾರ್ಸಿಲೋನಾ ಕ್ಲಬ್ ಪರ ಕಣಕ್ಕಿಳಿಯುತ್ತಿದ್ದ ದಿನಗಳಲ್ಲಿ. ಸ್ಪೇನ್‌ನ ಪ್ರಸಿದ್ಧ ಪತ್ರಿಕೆ ‘ಡಿಯಾರಿಯೋ ಸ್ಪೋರ್ಟ್’ ಮತ್ತು ವಿಶ್ವಸಂಸ್ಥೆಯ ಯುನಿಸೆಫ್ ಸಂಸ್ಥೆಗಳು ಜಂಟಿಯಾಗಿ ಒಂದು ಚಾರಿಟಿ ಕ್ಯಾಲೆಂಡರ್ ತಯಾರಿಸಲು ನಿರ್ಧರಿಸಿದ್ದವು.

ಕ್ಯಾಲೆಂಡರ್‌ನ ಚಿತ್ರೀಕರಣಕ್ಕಾಗಿ ಬಾರ್ಸಿಲೋನಾ ಆಟಗಾರರೊಂದಿಗೆ ಫೋಟೋ ತೆಗೆಸಿಕೊಳ್ಳಲು ಯುನಿಸೆಫ್ ಸಂಸ್ಥೆಯು ಬಾರ್ಸಿಲೋನಾದ ರೊಕಾಫೊಂಡಾ ಎಂಬ ಬಡ ಪ್ರದೇಶದಲ್ಲಿ ಒಂದು ಲಾಟರಿ ಪ್ರಕ್ರಿಯೆ ನಡೆಸಿತ್ತು. ಈ ಲಾಟರಿ ಪ್ರಕ್ರಿಯೆಯಲ್ಲಿ ವಿಜೇತರಾದದ್ದೇ ಲಾಮಿನ್ ಯಮಾಲ್ ಅವರ ಪೋಷಕರು!

ಲಾಕರ್ ರೂಮ್​ನಲ್ಲೇ ಮೊದಲ ಭೇಟಿ:

ಲಿಯೋನೆಲ್ ಮೆಸ್ಸಿ ಹಾಗೂ ಲಾಮಿನ್ ಯಮಾಲ್ ಮೊದಲ ಭೇಟಿಯಾಗಿದ್ದು ಬಾರ್ಸಿಲೋನಾ ಕ್ಲಬ್‌ನ ತವರು ಮೈದಾನವಾದ ‘ಕಂಪ್ ನೌ’ ಕ್ರೀಡಾಂಗಣದ ಲಾಕರ್ ರೂಮ್‌ನಲ್ಲಿ. ಅಂದರೆ ಚಾರಿಟಿ ಕ್ಯಾಲೆಂಡರ್ ಫೋಟೋ ಶೂಟ್​ಗಾಗಿ ಛಾಯಾಗ್ರಾಹಕ ಜೋನ್ ಮಾನ್‌ಫೋರ್ಟ್ ‘ಕಂಪ್ ನೌ’ ಕ್ರೀಡಾಂಗಣದ ಲಾಕರ್ ರೂಮ್​ಗೆ ಆಗಮಿಸಿದ್ದರು. ಈ ವೇಳೆ ಸೆರೆ ಹಿಡಿದ ಫೋಟೋವೇ ಇದೀಗ ವೈರಲ್ ಆಗುತ್ತಿದೆ.

ಮಾನ್‌ಫೋರ್ಟ್ ಇತ್ತೀಚೆಗೆ ನೆನಪಿಸಿಕೊಂಡಂತೆ, ಆ ದಿನ ಮೆಸ್ಸಿ ತುಂಬಾ ನಾಚಿಕೆ ಸ್ವಭಾವದವರಾಗಿದ್ದರು. ಯುವ ಮೆಸ್ಸಿಗೆ ಪ್ಲಾಸ್ಟಿಕ್ ಟಬ್‌ನಲ್ಲಿದ್ದ ಪುಟ್ಟ ಮಗುವನ್ನು ಹೇಗೆ ಎತ್ತಿಕೊಳ್ಳಬೇಕು, ಹೇಗೆ ನಿಭಾಯಿಸಬೇಕು ಎಂಬುದು ಆರಂಭದಲ್ಲಿ ತಿಳಿಯದೆ ತಬ್ಬಿಬ್ಬಾಗಿದ್ದರು.

ಆಗ ಮಗುವಿನ ತಾಯಿ ಶೀಲಾ ಎಬಾನಾ ಅವರು ಅಲ್ಲಿಯೇ ಇದ್ದು ಮೆಸ್ಸಿಗೆ ಸಹಾಯ ಮಾಡಿದರು. ಹಾಗೆ ಹುಟ್ಟಿಕೊಂಡಿದ್ದೇ ಈ ಐತಿಹಾಸಿಕ ಫೋಟೋ. ಈ ವೇಳೆ ನಾನು ತೆಗೆದ ಫೋಟೋ ಇದು ಜೋನ್ ಮಾನ್‌ಫೋರ್ಟ್  ನೆನಪಿಸಿಕೊಂಡಿದ್ದಾರೆ.

ವೈರಲ್ ಆಗಿದ್ದು ಹೇಗೆ?

ಈ ಫೋಟೋ ಶೂಟ್ ಮುಗಿದ ನಂತರ ಎಲ್ಲರೂ ಇದನ್ನು ಮರೆತುಬಿಟ್ಟಿದ್ದರು. ಆದರೆ ಇತ್ತೀಚೆಗೆ ಲಾಮಿನ್ ಯಮಾಲ್ ಅವರ ತಂದೆ ಮುನೀರ್ ನಸ್ರಾವಿ ಅವರು “ಎರಡು ದಂತಕಥೆಗಳ ಆರಂಭ” ಎಂಬ ಶೀರ್ಷಿಕೆಯೊಂದಿಗೆ ಈ ಫೋಟೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಾಗ ಇಡೀ ಜಗತ್ತೇ ಆಶ್ಚರ್ಯಚಕಿತವಾಯಿತು.

ಹಲವರು ಇದನ್ನು ಎಐ ಸೃಷ್ಟಿಸಿದ ನಕಲಿ ಫೋಟೋ ಇರಬಹುದು ಎಂದು ಶಂಕಿಸಿದ್ದರು. ಆದರೆ ಛಾಯಾಗ್ರಾಹಕ ಮತ್ತು ಪತ್ರಿಕೆ ಇದನ್ನು ಅಧಿಕೃತವಾಗಿ ಹೌದು ಎಂದು ಖಚಿತಪಡಿಸಿದಾಗ ಫುಟ್‌ಬಾಲ್ ಅಭಿಮಾನಿಗಳಿಗೆ ರೋಮಾಂಚನವಾಯಿತು.

ಪುಟ್ಟ ಪುಟಾಣಿಯೇ ಎದುರಾಳಿ:

19 ವರ್ಷಗಳ ಹಿಂದೆ ಟಬ್‌ನಲ್ಲಿ ಮಲಗಿದ್ದ ಲಾಮಿನ್ ಯಮಾಲ್ ಇದೀಗ ಫೈನಲ್​ ಪಂದ್ಯದಲ್ಲಿ ಸ್ಪೇನ್ ತಂಡದ ಪ್ರಮುಖ ಆಟಗಾರನಾಗಿ ಕಣಕ್ಕಿಳಿಯಲು ಸಜ್ಜಾಗಿದ್ದಾನೆ. ಅದು ಕೂಡ ತನ್ನನ್ನು ಸ್ನಾನ ಮಾಡಿಸಿದ ಲಿಯೋನೆಲ್ ಮೆಸ್ಸಿ ವಿರುದ್ಧ ವಿಶ್ವಕಪ್ ಕಿರೀಟಕ್ಕಾಗಿ ಎಂಬುದು ವಿಶೇಷ.

Yamal Messi

ಲಾಮಿನ್ ಯಮಾಲ್ ಮತ್ತು ಲಿಯೋನೆಲ್ ಮೆಸ್ಸಿ

ಇದನ್ನೂ ಓದಿ: ಟಿ20 ವಿಶ್ವಕಪ್​ನಲ್ಲೂ ಎಲಿಮಿನೇಟರ್ ರೌಂಡ್: ಸೆಮಿಫೈನಲ್ ಎಂಟ್ರಿ ಮತ್ತಷ್ಟು ರೋಚಕ!

ಒಟ್ಟಾರೆಯಾಗಿ ಹೇಳುವುದಾದರೆ, ಇದು ಕೇವಲ ಒಂದು ಫುಟ್‌ಬಾಲ್ ಪಂದ್ಯವಲ್ಲ. ಇತಿಹಾಸ ಮತ್ತು ಭವಿಷ್ಯದ ನಡುವಿನ ಮಹಾಸಂಗಮ. ಅಂದು ಮೆಸ್ಸಿಯ ಕೈಯಲ್ಲಿದ್ದ ಪುಟ್ಟ ಮಗು ಇಂದು ಜಾಗತಿಕ ಫುಟ್‌ಬಾಲ್‌ನ ದೈತ್ಯ ತಾರೆಯಾಗಿ ಬೆಳೆದು ನಿಂತಿದೆ. ಮೆಸ್ಸಿಯ ವೃತ್ತಿಜೀವನದ ಅಂತಿಮ ಹಂತದಲ್ಲಿ ಯಮಾಲ್ ಅವರಂತಹ ಉದಯೋನ್ಮುಖ ಆಟಗಾರ ಎದುರಾಳಿಯಾಗಿ ನಿಂತಿರುವುದು ಕ್ರೀಡಾಲೋಕದ ಸಾರ್ವಕಾಲಿಕ ಶ್ರೇಷ್ಠ ಮತ್ತು ಭಾವುಕ ಕ್ಷಣವಾಗಿ ಇತಿಹಾಸದ ಪುಟ ಸೇರಲಿದೆ.

 

 

Follow Us