F1 Championship: ಚೊಚ್ಚಲ ಎಫ್1 ವರ್ಲ್ಡ್ ಚಾಂಪಿಯನ್‌ಶಿಪ್ ಗೆದ್ದ ಮ್ಯಾಕ್ಸ್ ವರ್ಸ್ಟಪ್ಪೆನ್! ಗೆದ್ದು ಸೋತ ಹ್ಯಾಮಿಲ್ಟನ್

F1 Championship: ಅಬುಧಾಬಿ ಗ್ರ್ಯಾಂಡ್ ಪ್ರಿಕ್ಸ್‌ನಲ್ಲಿ ವರ್ಷದ ಕೊನೆಯ ರೇಸ್‌ನಲ್ಲಿ ಏಳು ಬಾರಿಯ ವಿಶ್ವ ಚಾಂಪಿಯನ್ ಮರ್ಸಿಡಿಸ್ ದಂತಕಥೆ ಲೂಯಿಸ್ ಹ್ಯಾಮಿಲ್ಟನ್ ಅವರನ್ನು ಸೋಲಿಸುವ ಮೂಲಕ ರೆಡ್ ಬುಲ್ ರೇಸಿಂಗ್‌ನ 24 ವರ್ಷದ ಚಾಲಕ ವರ್ಸ್ಟಾಪ್ಪೆನ್ ಮೊದಲ ಬಾರಿಗೆ ಪ್ರಶಸ್ತಿಯನ್ನು ಗೆದ್ದರು.

F1 Championship: ಚೊಚ್ಚಲ ಎಫ್1 ವರ್ಲ್ಡ್ ಚಾಂಪಿಯನ್‌ಶಿಪ್ ಗೆದ್ದ ಮ್ಯಾಕ್ಸ್ ವರ್ಸ್ಟಪ್ಪೆನ್! ಗೆದ್ದು ಸೋತ ಹ್ಯಾಮಿಲ್ಟನ್
ಮ್ಯಾಕ್ಸ್ ವರ್ಸ್ಟಪ್ಪೆನ್
Edited By:

Updated on: Dec 12, 2021 | 10:12 PM

ನೆದರ್ಲೆಂಡ್ಸ್‌ನ ಯುವ ಫಾರ್ಮುಲಾ-1 ರೇಸರ್ ಮ್ಯಾಕ್ಸ್ ವರ್ಸ್ಟಾಪೆನ್ 2021 ರ ಎಫ್1 ವಿಶ್ವ ಚಾಂಪಿಯನ್ ಪಟ್ಟಕ್ಕೇರಿದ್ದಾರೆ. ಅಬುಧಾಬಿ ಗ್ರ್ಯಾಂಡ್ ಪ್ರಿಕ್ಸ್‌ನಲ್ಲಿ ವರ್ಷದ ಕೊನೆಯ ರೇಸ್‌ನಲ್ಲಿ ಏಳು ಬಾರಿಯ ವಿಶ್ವ ಚಾಂಪಿಯನ್ ಮರ್ಸಿಡಿಸ್ ದಂತಕಥೆ ಲೂಯಿಸ್ ಹ್ಯಾಮಿಲ್ಟನ್ ಅವರನ್ನು ಸೋಲಿಸುವ ಮೂಲಕ ರೆಡ್ ಬುಲ್ ರೇಸಿಂಗ್‌ನ 24 ವರ್ಷದ ಚಾಲಕ ವರ್ಸ್ಟಾಪ್ಪೆನ್ ಮೊದಲ ಬಾರಿಗೆ ಪ್ರಶಸ್ತಿಯನ್ನು ಗೆದ್ದರು. ಇದರೊಂದಿಗೆ ಹ್ಯಾಮಿಲ್ಟನ್ ಸತತ 6 ವರ್ಷಗಳ ಗೆಲುವಿನ ಓಟವನ್ನು ವರ್ಸ್ಟಪ್ಪೆನ್ ಮುರಿದರು. ಅಬುಧಾಬಿ ಗ್ರ್ಯಾಂಡ್ ಪ್ರಿಕ್ಸ್‌ಗೆ ಮೊದಲು, ಇಬ್ಬರೂ ರೇಸರ್‌ಗಳು 369.5 ಪಾಯಿಂಟ್‌ಗಳಲ್ಲಿ ಟೈ ಆಗಿದ್ದರು. ಹೀಗಾಗಿ ಚಾಂಪಿಯನ್‌ಶಿಪ್ ವಿಜೇತರು ಯಾರು ಎಂಬುದನ್ನು ನಿರ್ಧರಿಸಲು ರೇಸ್ ನೆಡೆದಿತ್ತು. ವರ್ಸ್ಟಪ್ಪೆನ್ ಕೊನೆಯ ಲ್ಯಾಪ್ ಅನ್ನು ರೋಮಾಂಚಕ ರೀತಿಯಲ್ಲಿ ಗೆದ್ದು 25 ಅಂಕಗಳನ್ನು ಗಳಿಸಿದರು. ಒಟ್ಟು 395.5 ಪಾಯಿಂಟ್​ಗಳೊಂದಿಗೆ ಪ್ರಶಸ್ತಿಯನ್ನು ಗೆದ್ದರು. ಇದರೊಂದಿಗೆ ಈ ಪ್ರಶಸ್ತಿ ಗೆದ್ದ ಮೊದಲ ಡಚ್ ರೇಸರ್ ಎನಿಸಿಕೊಂಡಿದ್ದಾರೆ.

ಯಾಸ್ ಮರೀನಾ ಟ್ರ್ಯಾಕ್‌ನಲ್ಲಿ ನಡೆದ ಈ 58 ಲ್ಯಾಪ್‌ಗಳ ರೇಸ್​ನಲ್ಲಿ, ಹ್ಯಾಮಿಲ್ಟನ್ ಆರಂಭದಿಂದ ಕೊನೆಯವರೆಗೆ ಮೊದಲ ಸ್ಥಾನವನ್ನು ಉಳಿಸಿಕೊಂಡರು. ಆದರೆ 54 ನೇ ನಿಮಿಷದಲ್ಲಿ ನಡೆದ ಘಟನೆ ಎಲ್ಲವನ್ನೂ ಬದಲಾಯಿಸಿತು. ವಿಲಿಯಮ್ಸ್ ರೇಸಿಂಗ್ ತಂಡದ ಚಾಲಕ ನಿಕೋಲಸ್ ಲಾಟಿಫಿ ಅವರ ಕಾರು 54 ನೇ ಲ್ಯಾಪ್‌ನಲ್ಲಿ ಅಪಘಾತಕ್ಕೀಡಾಯಿತು. ಟ್ರ್ಯಾಕ್‌ನಿಂದ ಅವಶೇಷಗಳನ್ನು ತೆರವುಗೊಳಿಸುವವರೆಗೆ ಎಲ್ಲಾ ಚಾಲಕರು ನಿಧಾನವಾಗಿ ಮತ್ತು ಓವರ್‌ಟೇಕ್ ಮಾಡುವ ಅಗತ್ಯವಿತ್ತು. ಈ ಸಮಯದಲ್ಲಿ ಹ್ಯಾಮಿಲ್ಟನ್ ಮೊದಲ ಮತ್ತು ವರ್ಸ್ಟಪ್ಪೆನ್ ಎರಡನೇ ಸ್ಥಾನದಲ್ಲಿದ್ದರು.

ಕೊನೆಯ ಲ್ಯಾಪ್‌ನಲ್ಲಿ ವರ್ಸ್ಟಪ್ಪೆನ್ ಶೈನಿಂಗ್
ನಂತರ ಕೊನೆಯ ಲ್ಯಾಪ್‌ಗೆ ಮೊದಲು ಅಪಘಾತಕ್ಕೀಡಾದ ಕಾರನ್ನು ಟ್ರ್ಯಾಕ್​ನಿಂದ ತೆಗೆದುಹಾಕಲಾಯಿತು ಮತ್ತು ರೇಸ್ ಅನ್ನು ಮರುಪ್ರಾರಂಭಿಸಲಾಯಿತು. ಇಲ್ಲಿಯೇ ವರ್ಸ್ಟಪ್ಪೆನ್ ಅಂತಿಮವಾಗಿ ಹ್ಯಾಮಿಲ್ಟನ್ ಅವರನ್ನು ಈ ಲ್ಯಾಪ್‌ನಲ್ಲಿ ಹಿಂದಿಕ್ಕಿದರು ಮತ್ತು ಅಂತಿಮವಾಗಿ ಕೆಲವು ಮೀಟರ್‌ಗಳಲ್ಲಿ ರೇಸ್​ ಅನ್ನು ಮೊದಲ ಸ್ಥಾನದಲ್ಲಿ ಮುಗಿಸಿದರು. ವರ್ಸ್ಟಪ್ಪೆನ್ 1:30:17.345 ಗಂಟೆಗಳಲ್ಲಿ ರೇಸ್​ ಮುಗಿಸಿದರು. ಹ್ಯಾಮಿಲ್ಟನ್ ಎರಡನೇ ಸ್ಥಾನ ಗಳಿಸಿದರೆ, ಫೆರಾರಿಯ ಕಾರ್ಲೋಸ್ ಶೆಂಜ್ ಮೂರನೇ ಸ್ಥಾನ ಪಡೆದರು.

ವರ್ಸ್ಟಪ್ಪೆನ್ ಈ ಗ್ರ್ಯಾಂಡ್ ಪ್ರಿಕ್ಸ್‌ನಿಂದ 25 ಅಂಕಗಳನ್ನು ಪಡೆದರು ಮತ್ತು 395.5 ನೊಂದಿಗೆ ಪ್ರಶಸ್ತಿಯನ್ನು ಗೆದ್ದರು. ಎರಡನೇ ಸ್ಥಾನ ಪಡೆದ ಹ್ಯಾಮಿಲ್ಟನ್ 18 ಅಂಕಗಳನ್ನು ಪಡೆದು ಒಟ್ಟು 387.5 ಅಂಕಗಳೊಂದಿಗೆ ಋತುವಿನಲ್ಲಿ ಎರಡನೇ ಸ್ಥಾನ ಪಡೆದರು. ಹ್ಯಾಮಿಲ್ಟನ್ ತಂಡದ ವಾಲ್ಟೆರಿ ಬೊಟ್ಟಾಸ್ 226 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿ ಉಳಿದಿದ್ದಾರೆ.

ಹ್ಯಾಮಿಲ್ಟನ್ ದಾಖಲೆಯ ಅವಕಾಶ ಕೈ ತಪ್ಪಿತು
ಅದೇ ಸಮಯದಲ್ಲಿ, ಫಾರ್ಮುಲಾ 1 ನಲ್ಲಿ ಹತ್ತಾರು ದಾಖಲೆಗಳನ್ನು ಮಾಡಿದ ಬ್ರಿಟಿಷ್ ದಂತಕಥೆ ಲೂಯಿಸ್ ಹ್ಯಾಮಿಲ್ಟನ್ ಅವರು ವಿಶ್ವದಾಖಲೆ ಮಾಡುವ ಅವಕಾಶವನ್ನು ಕಳೆದುಕೊಂಡರು. ಹ್ಯಾಮಿಲ್ಟನ್ ಗೆದ್ದಿದ್ದರೆ, ಅವರು ವಿಶ್ವ ಚಾಂಪಿಯನ್‌ಶಿಪ್ ಅನ್ನು ಅತಿ ಹೆಚ್ಚು ಬಾರಿ ಗೆದ್ದ ದಾಖಲೆಯನ್ನು ತಮ್ಮದಾಗಿಸಿಕೊಳ್ಳುತ್ತಿದ್ದರು. ಪ್ರಸ್ತುತ, ಹ್ಯಾಮಿಲ್ಟನ್ ಅವರು ಫೆರಾರಿಯ ಶ್ರೇಷ್ಠ ಜರ್ಮನ್ ರೇಸರ್ ಮೈಕೆಲ್ ಶುಮಾಕರ್ ಅವರೊಂದಿಗೆ 7 ಪ್ರಶಸ್ತಿಗಳನ್ನು ಹಂಚಿಕೊಂಡಿದ್ದಾರೆ.