ACT 2024: ಮೊದಲ ಪಂದ್ಯದಲ್ಲೇ ಚೀನಾವನ್ನು ಮಣಿಸಿದ ಭಾರತ ಹಾಕಿ ತಂಡ

Asian Champions Trophy 2024: ಹರ್ಮನ್‌ಪ್ರೀತ್ ಸಿಂಗ್ ನಾಯಕತ್ವದ ಭಾರತ ತಂಡವು ತನ್ನ ಮೊದಲ ಪಂದ್ಯದಲ್ಲಿ ಆತಿಥೇಯ ಚೀನಾವನ್ನು 3-0 ಗೋಲುಗಳಿಂದ ಸೋಲಿಸಿ ಐದನೇ ಬಾರಿಗೆ ಈ ಟೂರ್ನಿಯ ಪ್ರಶಸ್ತಿಯನ್ನು ಗೆಲ್ಲುವ ಅಭಿಯಾನವನ್ನು ಯಶಸ್ವಿಯಾಗಿ ಪ್ರಾರಂಭಿಸಿದೆ.

ACT 2024: ಮೊದಲ ಪಂದ್ಯದಲ್ಲೇ ಚೀನಾವನ್ನು ಮಣಿಸಿದ ಭಾರತ ಹಾಕಿ ತಂಡ
ಭಾರತ ಹಾಕಿ ತಂಡ
Follow us
|

Updated on:Sep 08, 2024 | 6:30 PM

ಕಳೆದ ಜುಲೈ ತಿಂಗಳಲ್ಲಿ ಪ್ಯಾರಿಸ್​ನಲ್ಲಿ ನಡೆದಿದ್ದ ಒಲಿಂಪಿಕ್ಸ್​ನಲ್ಲಿ ಐತಿಹಾಸಿಕ ಕಂಚಿನ ಪದಕ ಗೆದ್ದಿದ್ದ ಭಾರತ ಹಾಕಿ ತಂಡ, ಆ ಬಳಿಕ ಇದೇ ಮೊದಲ ಬಾರಿಗೆ ಅಖಾಡಕ್ಕಿಳಿದಿದ್ದು, ಏಷ್ಯನ್ ಚಾಂಪಿಯನ್ಸ್ ಟ್ರೋಫಿಯಲ್ಲಿ ಆಡುತ್ತಿದೆ. ಸರಿಯಾಗಿ ತಿಂಗಳ ಹಿಂದೆ ಪ್ಯಾರಿಸ್​ನಲ್ಲಿ ನಡೆದಿದ್ದ ಪಂದ್ಯದಲ್ಲಿ ಸ್ಪೇನ್ ತಂಡವನ್ನು ಮಣಿಸಿ ಕಂಚಿನ ಪದಕ ಗೆದ್ದಿದ್ದ ಟೀಂ ಇಂಡಿಯಾ ಏಷ್ಯನ್ ಚಾಂಪಿಯನ್ಸ್ ಟ್ರೋಫಿಯಲ್ಲಿ ಗೆಲುವಿನ ಆರಂಭ ಪಡೆದುಕೊಂಡಿದೆ. ಹರ್ಮನ್‌ಪ್ರೀತ್ ಸಿಂಗ್ ನಾಯಕತ್ವದ ಭಾರತ ತಂಡವು ತನ್ನ ಮೊದಲ ಪಂದ್ಯದಲ್ಲಿ ಆತಿಥೇಯ ಚೀನಾವನ್ನು 3-0 ಗೋಲುಗಳಿಂದ ಸೋಲಿಸಿ ಐದನೇ ಬಾರಿಗೆ ಈ ಟೂರ್ನಿಯ ಪ್ರಶಸ್ತಿಯನ್ನು ಗೆಲ್ಲುವ ಅಭಿಯಾನವನ್ನು ಯಶಸ್ವಿಯಾಗಿ ಪ್ರಾರಂಭಿಸಿದೆ.

ಮೂರು ಕ್ವಾರ್ಟರ್‌ಗಳಲ್ಲಿ ಮೂರು ಗೋಲು

ಆರಂಭದಿಂದಲೂ ಆಕ್ರಮಣಕಾರಿ ಆಟ ಪ್ರದರ್ಶಿಸಿದ ಭಾರತ ತಂಡ ಮೊದಲ ಕ್ವಾರ್ಟರ್‌ನಲ್ಲಿಯೇ ಗೋಲು ಗಳಿಸಿ ಮುನ್ನಡೆ ಸಾಧಿಸಿತು. 14ನೇ ನಿಮಿಷದಲ್ಲಿ ಸುಖ್‌ಜೀತ್‌ ಮೊದಲ ಗೋಲು ದಾಖಲಿಸಿದರು. ಅದೇ ರೀತಿ ಎರಡನೇ ಕ್ವಾರ್ಟರ್‌ನಲ್ಲಿಯೂ ಭಾರತ ತನ್ನ ಮುನ್ನಡೆಯನ್ನು ದ್ವಿಗುಣಗೊಳಿಸಿದ್ದು, ಉತ್ತಮ್ ಸಿಂಗ್ ಟೀಂ ಇಂಡಿಯಾ ಪರ ಎರಡನೇ ಗೋಲು ಬಾರಿಸಿದರು. ಮೂರನೇ ಕ್ವಾರ್ಟರ್‌ನಲ್ಲಿ ಅಭಿಷೇಕ್ ಮೂರನೇ ಗೋಲು ಹೊಡೆದರು. ನಾಲ್ಕನೇ ಕ್ವಾರ್ಟರ್‌ನಲ್ಲಿ ಭಾರತ ಯಾವುದೇ ಗೋಲು ಗಳಿಸಲಿಲ್ಲ ಆದರೆ ಚೀನಾದ ಕೆಲವು ಪ್ರಯತ್ನಗಳನ್ನು ವಿಫಲಗೊಳಿಸಿ ಪಂದ್ಯವನ್ನು 3-0 ರಿಂದ ಗೆದ್ದುಕೊಂಡಿತು.

ಪಾಠಕ್ ಉತ್ತಮ ಪ್ರದರ್ಶನ

ವಾಸ್ತವವಾಗಿ ಪ್ಯಾರಿಸ್‌ನಲ್ಲಿ ಕಂಚಿನ ಪದಕ ಗೆದ್ದಿದ್ದ ಅದೇ ಆಟಗಾರರು ಈ ಪಂದ್ಯಾವಳಿಯಲ್ಲಿ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಆದ್ದರಿಂದ ಇಲ್ಲಿಯೂ ಸಹ ಅವರಿಂದ ಬಲವಾದ ಪ್ರದರ್ಶನವನ್ನು ಈಗಾಗಲೇ ನಿರೀಕ್ಷಿಸಲಾಗಿತ್ತು. ಆದರೆ, ಅನುಭವಿ ಗೋಲ್‌ಕೀಪರ್ ಪಿಆರ್ ಶ್ರೀಜೇಶ್ ನಿವೃತ್ತಿಯ ನಂತರ ತಂಡ ಮೊದಲ ಬಾರಿಗೆ ಮೈದಾನಕ್ಕಿಳಿದಿದೆ. ಆದ್ದರಿಂದ ಅವರ ಸ್ಥಾನಕ್ಕೆ ಬಂದಿರುವ ಕೃಷ್ಣ ಬಹದ್ದೂರ್ ಪಾಠಕ್, ಶ್ರೀಜೇಶ್ ಸ್ಥಾನವನ್ನು ಹೇಗೆ ತುಂಬಲಿದ್ದಾರೆ ಎಂಬುದನ್ನು ಕಣ್ತುಂಬಿಕೊಳ್ಳಲು ಎಲ್ಲರೂ ಕಾಯುತ್ತಿದ್ದರು. ಎಲ್ಲರ ನಿರೀಕ್ಷೆಯಂತೆ ಪಾಠಕ್ ಚೀನಾ ಆಟಗಾರರ ಗೋಲು ಪ್ರಯತ್ನಗಳನ್ನು ವಿಫಲಗೊಳಿಸುವಲ್ಲಿ ಯಶಸ್ವಿಯಾದರು.

ಪಂದ್ಯಾವಳಿ ವಿವರ ಹೀಗಿದೆ

ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಸೆಪ್ಟೆಂಬರ್ 8 ರಿಂಧ ಚೀನಾದ ಹುಲುನ್‌ಬೀರ್‌ನಲ್ಲಿ ಪ್ರಾರಂಭವಾಗಿದ್ದು, ಈ ಟೂರ್ನಿಯಲ್ಲಿ ಭಾರತ ಸೇರಿದಂತೆ 6 ತಂಡಗಳು ಭಾಗವಹಿಸುತ್ತಿವೆ. ಇದರಲ್ಲಿ ಪಾಕಿಸ್ತಾನವೂ ಸೇರಿದೆ. ಈ ಪಂದ್ಯಾವಳಿಯನ್ನು ರೌಂಡ್ ರಾಬಿನ್ ಮಾದರಿಯಲ್ಲಿ ಆಡಲಾಗುತ್ತಿದೆ. ಅಂದರೆ ಪ್ರತಿ ತಂಡವು ಇತರ ತಂಡಗಳ ವಿರುದ್ಧ ತಲಾ ಒಂದು ಪಂದ್ಯವನ್ನು ಆಡುತ್ತದೆ. ಕಳೆದ ವರ್ಷ ಈ ಟೂರ್ನಿಯ ಪ್ರಶಸ್ತಿಯನ್ನು ಗೆದ್ದಿದ್ದ ಟೀಮ್ ಇಂಡಿಯಾ ಇದೀಗ ತನ್ನ ಪ್ರಶಸ್ತಿಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಉತ್ತಮ ಆರಂಭವನ್ನು ಮಾಡಿದೆ. ಉಳಿದಂತೆ ಇದುವೆಗೆ ನಡೆದಿರುವ ಪಂದ್ಯಗಳಲ್ಲಿ ಜಪಾನ್-ದಕ್ಷಿಣ ಕೊರಿಯಾ ಪಂದ್ಯ 5-5 ರಿಂದ ಡ್ರಾದಲ್ಲಿ ಅಂತ್ಯಗೊಂಡರೆ, ಮಲೇಷ್ಯಾ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ಕೂಡ 2-2 ರಿಂದ ಡ್ರಾದಲ್ಲಿ ಕೊನೆಗೊಂಡಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:20 pm, Sun, 8 September 24