National Sports Day 2023: ಕುಹಕವಾಡಿದವರ ಮುಂದೆಯೇ ಕ್ರೀಡೆಯಲ್ಲಿ ಸಾಧಿಸಿ ತೋರಿಸಿದ ಕೊಡಗಿನ ಕುವರಿಯ ಯಶೋಗಾಥೆ

ನಿನ್ನ ಕೈಯಲ್ಲಿ ಇದೆಲ್ಲಾ ಸಾಧ್ಯವಿಲ್ಲ ಎಂದು ಕಹಕವಾಡಿದವರ ಮುಂದೆ ಕೊಡಗಿನ ಕುವರಿ ಕ್ರೀಡಾ ಕ್ಷೇತ್ರದಲ್ಲಿ ಅದ್ಭುತ ಸಾಧನೆ ಮಾಡಿ ತೋರಿಸಿದ್ದಾರೆ. ಶಾಲಾ ಮಟ್ಟದಿಂದ ಅಂತಾರಾಷ್ಟ್ರೀಯ ಮಟ್ಟದವರೆಗಿನ ಕೊಡಗಿನ ಈ ಕುವರಿ ನಂದಿನಿಯ ಯಶೋಗಾಥೆಯನ್ನೊಮ್ಮೆ ಓದಿ.

National Sports Day 2023: ಕುಹಕವಾಡಿದವರ ಮುಂದೆಯೇ ಕ್ರೀಡೆಯಲ್ಲಿ ಸಾಧಿಸಿ ತೋರಿಸಿದ ಕೊಡಗಿನ ಕುವರಿಯ ಯಶೋಗಾಥೆ
ನಂದಿನಿ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on:Aug 31, 2023 | 10:47 AM

ಕ್ರೀಡೆ, ಮನೋರಂಜನೆ ಹೀಗೆ ಯಾವುದೇ ಕ್ಷೇತ್ರವಾಗಿರಲಿ ಹೆಣ್ಣು ಮಗಳೊಬ್ಬಳು (Woman) ತಾನು ಈ ಕ್ಷೇತ್ರದಲ್ಲಿ ಏನಾದರೂ ಸಾಧಿಸಿ ತೋರಿಸುತ್ತೇನೆ ಎಂದರೆ, ಆಕೆಗೆ ಪ್ರೋತ್ಸಾಹ ನೀಡುವವರಿಗಿಂತ ನಿನ್ನ ಕೈಯಲ್ಲಿ ಇದೆಲ್ಲಾ ಸಾಧ್ಯವಿಲ್ಲ ಎಂದು ಆಕೆಯನ್ನು ಕುಗ್ಗಿಸಿ, ಆಕೆಯನ್ನು ಹೀಯಾಳಿಸುವವರೆ ಹೆಚ್ಚು. ಆದರೆ ಇಲ್ಲೊಬ್ಬ ದಿಟ್ಟ ಹೆಣ್ಣು ಮಗಳು ಸಮಾಜದ ಕೂಹಕದ ಮಾತಿಗೆ ಕಿವಿಗೊಡದೆ, ತನ್ನ ಛಲದಿಂದ ಕ್ರೀಡಾ ಕ್ಷೇತ್ರದಲ್ಲಿ ಅದ್ಭುತ ಸಾಧನೆ ಮಾಡಿ, ಅದೇ ಸಮಾಜದ ಮುಂದೆ ಒಬ್ಬ ಮಾದರಿ ಹೆಣ್ಣು ಮಗಳಾಗಿ ಬೆಳೆದು ನಿಂತಿದ್ದಾರೆ. ಅವರೇ ಅಂತಾರಾಷ್ಟ್ರೀಯ ಮಟ್ಟದ ಸಿಸ್ಟೋಬಾಲ್(Cestoball) ಸ್ಪರ್ಧೆಯಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿರುವ ನಂದಿನಿ ಸಿ.ವಿ. ಕೊಡಗಿನ(Kodagu) ಈ ಕುವರಿಯ ಶಾಲಾ ಮಟ್ಟದಿಂದ ಅಂತಾರಾಷ್ಟ್ರೀಯ ಮಟ್ಟದವರೆಗಿನ ಯಶೋಗಾಥೆ ನೀವೂ ಒಮ್ಮೆ ಓದಿ.

ಕರ್ನಾಟಕದ ಕೊಡಗಿನ ಹುಡುಗಿಯಾಗಿರುವ ನಂದಿಯವರು ಶಾಲೆಗೆ ಹೋಗುತ್ತಿರುವ ಸಂದರ್ಭದಲ್ಲಿ ಅಂದರೆ 5ನೇ ತರಗತಿಯಲ್ಲಿರುವಾಗ ದೈಹಿಕ ಶಿಕ್ಷಕಿ ಪಾರ್ವತಿಯವರು, ನಂದಿನಿಯವರನ್ನು ತ್ರೋಬಾಲ್ ಆಡಲು ಆಯ್ಕೆ ಮಾಡುತ್ತಾರೆ. ಹೀಗೆ ತ್ರೋಬಾಲ್ ಮತ್ತು ಕಬ್ಬಡಿ ಆಟವನ್ನು ಆಡಲು ಶುರು ಮಾಡುತ್ತಾರೆ ನಂದಿನಿ. ಆದರೆ 7ನೇ ತರಗತಿಯವರೆಗೆ ಅಷ್ಟಾಗಿ ಕ್ರೀಡೆಗಳಲ್ಲಿ ಭಾಗವಹಿಸದ ನಂದಿನಿಯವರಿಗೆ 8 ತರಗತಿಯಲ್ಲಿರುವಾಗ ದೈಹಿಕ ಶಿಕ್ಷಕ ಪ್ರಸಾದ್ ಅವರು ಸೂಕ್ತ ತರಬೇತಿಯನ್ನು ನೀಡಿ ತ್ರೋಬಾಲ್ ಆಟದಲ್ಲಿ ಮುಂದುವರೆಯಲು ಪ್ರೋತ್ಸಾಹವನ್ನು ನೀಡುತ್ತಾರೆ. ಇಲ್ಲಿಂದ ಅವರಿಗೆ ಕ್ರೀಡೆಯಲ್ಲಿ ಹೆಚ್ಚಿನ ಆಸಕ್ತಿ ಬೆಳೆಯುತ್ತಾ ಹೋಯಿತು. ಶಾಲೆಯಲ್ಲಿ ಮಾತ್ರವಲ್ಲದೆ, ಪಿಯುಸಿ, ಪದವಿ ಓದುತ್ತಿರುವಾಗಲೂ ಅಥ್ಲೆಟಿಕ್, ತ್ರೋಬಾಲ್, ಕಬ್ಬಡಿ ಆಟಗಳನ್ನು ಆಡುತ್ತಿದ್ದರು. ಅಲ್ಲದೆ 2016 ರಿಂದ 2021 ರವರೆಗೆ ರಾಷ್ಟ್ರಮಟ್ಟದಲ್ಲಿ ತ್ರೋಬಾಲ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

ಮೊದಲಿನಿಂದಲೂ ಕ್ರೀಡೆಯಲ್ಲಿ ಆಸಕ್ತಿಯನ್ನು ಹೊಂದಿದ್ದ ನಂದಿಯವರು ಕ್ರೀಡಾ ಕ್ಷೇತ್ರದಲ್ಲಿಯೇ ಏನನ್ನಾದರು ಸಾಧಿಸಬೇಕೆಂಬ ಛಲದಿಂದ ತಮ್ಮ ಪದವಿ ಶಿಕ್ಷಣ ಮುಗಿಸಿ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಬಿ.ಪಿ.ಎಡ್ ಶಿಕ್ಷಣವನ್ನು ಪಡೆಯುತ್ತಾರೆ. ಆದರೆ ಇಲ್ಲಿ ಶಿಕ್ಷಣ ಪಡೆಯುತ್ತಿರುವ ವೇಳೆಯಲ್ಲಿ, ಒಂದು ಹಂತದಲ್ಲಿ ಯಾವುದೋ ಒಂದು ವೈಯಕ್ತಿಕ ಕಾರಣದಿಂದ ಖಿನ್ನತೆಗೆ ಜಾರುತ್ತಾರೆ. ಖಿನ್ನತೆಗೊಳಗಾದ ನಂದಿನಿ ಅಷ್ಟಾಗಿ ವಿದ್ಯೆ ಮತ್ತು ಕ್ರೀಡೆಯತ್ತ ಗಮನ ನೀಡುತ್ತಿರಲಿಲ್ಲ. ಆ ಸಂದರ್ಭದಲ್ಲಿ ನಂದಿನಿಯವರ ಸಹಪಾಟಿಯಾದ ರಮ್ಯ, ತಾಯಿ ಪುಷ್ಪಾವತಿ ಮತ್ತು ಸಹೋದರ ಯಶವಂತ್ ಹಾಗೂ ನೆರೆಮನೆಯವರಾದ ದೀಪಿಕಾ ಇವರಿಗೆ ಬೆಂಬಲವಾಗಿ ನಿಲ್ಲುತ್ತಾರೆ. ಅವರ ಬೆಂಬಲದಿಂದ ಖಿನ್ನತೆಯಿಂದ ಹೊರಬಂದ ನಂದಿನಿ, ತಾನು ಏನಾದರೂ ಸಾಧಿಸಬೇಕೆಂದು ದೃಢ ನಿರ್ಧಾರ ಮಾಡುತ್ತಾರೆ. ನಂತರ ಇವರು ಸಿಸ್ಟೋಬಾಲ್ ಕ್ರೀಡೆಯನ್ನು ಆಡಲು ಶುರು ಮಾಡುತ್ತಾರೆ. ಈ ಕ್ರೀಡೆಯತ್ತ ಹೆಚ್ಚು ಒಲವನ್ನು ತೋರಿದ ನಂದಿನಿ ಇದರಲ್ಲಿ ಹೆಚ್ಚಿನ ತರಬೇತಿಯನ್ನು ಪಡೆದು, ಒಬ್ಬ ಉತ್ತಮ ಸಿಸ್ಟೋಬಾಲ್ ಕ್ರೀಡಾಪಟುವಾಗಿ ಹೊರಹೊಮ್ಮುತ್ತಾರೆ. ಬಿ.ಪಿಎಡ್ ಶಿಕ್ಷಣವನ್ನು ಮುಗಿಸಿದ ಬಳಿಕ ಅಂದರೆ 2022 ರಲ್ಲಿ ಚಿಕ್ಕಬಳ್ಳಾಪುರದಲ್ಲಿ ನಡೆದ ಸ್ಪೋರ್ಟ್ಸ್ ಕ್ಯಾಂಪ್ ನಲ್ಲಿ ಭಾರತದ ಪರವಾಗಿ ಸಿಸ್ಟೋ ಬಾಲ್ ಕ್ರೀಡೆಯನ್ನು ಆಡುವ ಅವಕಾಶ ಇವರಿಗೆ ಒದಗಿ ಬರುತ್ತದೆ. ಈ ಕ್ರೀಡೆ ನಂದಿನಿಯವರ ಜೀವನೆವನ್ನೇ ಬದಲಿಸುತ್ತದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಆಡುವ ಅವಕಾಶವನ್ನು ಪಡೆದುಕೊಳ್ಳುತ್ತಾರೆ. ಹೆಣ್ಣೊಬ್ಬಳು ಏನು ಸಾಧನೆ ಮಾಡಲು ಸಾಧ್ಯ ಎಂದು ಹೇಳಿದವರಿಗೆ ನಂದಿನಿ ತನ್ನ ಸಾಧನೆಯಿಂದಲೇ ಉತ್ತರ ನೀಡಿದ್ದಾರೆ.

ಮೊದಲನೇ ಬಾರಿಗೆ ಥೈಲ್ಯಾಂಡ್ ನಲ್ಲಿ ಅಂತಾರಾಷ್ಟ್ರೀಯ ಮಟ್ಟದ ಸಿಸ್ಟೋಬಾಲ್ ಕ್ರೀಡೆಯಲ್ಲಿ ಸ್ಪರ್ಧಿಸುತ್ತಾರೆ. ಇದೇ ವರ್ಷ ಮೇ ತಿಂಗಳಲ್ಲಿ ಬೆಂಗಳೂರಿನಲ್ಲಿ ನಡೆದ ಸಿಸ್ಟೋ ಬಾಲ್ ವರ್ಲ್ಡ್ ಕಪ್ ಪಂದ್ಯಾವಳಿಯಲ್ಲಿ ನಂದಿನಿಯವರಿದ್ದ ಭಾರತದ ತಂಡವು ದ್ವಿತಿಯ ಸ್ಥಾನವನ್ನು ಪಡೆದುಕೊಂಡಿದೆ. ಇದೇ ಸಪ್ಟೆಂಬರ್ ಮತ್ತು ಅಕ್ಟೋಬರ್ ನಲ್ಲಿ ಇಂಡೋನೇಷ್ಯಾ ಮತ್ತು ಮಲೇಷ್ಯಾದಲ್ಲಿ ನಡೆಯಲಿರುವ ಸಿಸ್ಟೋಬಾಲ್ ಸ್ಪರ್ಧೆಯಲ್ಲಿ ನಂದಿನಿಯವರು ಭಾಗವಹಿಸಲಿದ್ದಾರೆ.

ನಂದಿನಿಯವರ ತಂದೆ ವಾಸು ಸಿ.ಎಮ್ ಹಾಗೂ ತಾಯಿ ಪುಷ್ಪಾವತಿ ಸಿ.ವಿ ಇವರಿಗೆ ಮೂರು ಸಹೋದರರಿದ್ದಾರೆ. ಇವರ ಎಲ್ಲಾ ಸಾಧನೆಗೆ ಮೊದಲಿನಿಂದಲೂ ಬೆಂಬಲವಾಗಿ ನಿಂತವರು ತಾಯಿ ಪುಷ್ಪಾವತಿ ಮತ್ತು ಸಹೊದರ ಯಶವಂತ್. ಹಾಗೂ ಇವರ ಕ್ರೀಡಾ ಗುರು ಜಾನ್ಸನ್ ಸರ್, ಜತೆಗೆ ಅಣ್ಣಂದಿರಾದ ರಂಜು, ಅಪ್ಪು, ಹಾರಿಸ್, ಕೊಚ್ಚೆ ಇವರೆಲ್ಲರೂ ನಂದಿನಿಯವರ ಸಾಧನೆಗೆ ಬೆಂಬಲವಾಗಿ ನಿಂತಿದ್ದಾರೆ. ಮತ್ತು ಭಾರತೀಯ ಸಿಸ್ಟೋಬಾಲ್ ತಂಡದ ಕಾರ್ಯದರ್ಶಿ ಮೊಹಮ್ಮದ್ ಅಕ್ಯೂಬ್ ಹೆಚ್ಚಿನ ಪ್ರೋತ್ಸಾಹವನ್ನು ನೀಡಿದ್ದಾರೆ. ಇತ್ತೀಚಿಗಷ್ಟೇ ನಂದಿನಿಯವರಿಗೆ ವಿವಾಹವಾಗಿದ್ದು, ಪತಿ ಮಣಿ ವಿನೀಶ್ ಹಾಗೂ ಪತಿಯ ಮನೆಯವರೂ ಇವರಿಗೆ ಕ್ರೀಡಾ ಕ್ಷೇತ್ರದಲ್ಲಿ ಮುಂದುವರೆಯಲು ಹೆಚ್ಚಿನ ಪ್ರೋತ್ಸಾಹ ನೀಡಿದ್ದಾರೆ. ಪ್ರಸ್ತುತ ಕೊಡಗಿನ ರಂಗಸಮುದ್ರದಲ್ಲಿ ಸರ್ಕಾರಿ ಶಾಲೆಯಲ್ಲಿ ದೈಹಿಕ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿರುವ ನಂದಿನಿಯವರಿಗೆ ಕ್ರೀಡಾ ಕ್ಷೇತ್ರದಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡುವ ಹಂಬಲವಿದೆ.

“ಕ್ರೀಡೆ ಅಥವಾ ಇನ್ನಾವುದೇ ಕ್ಷೇತ್ರವಾಗಿರಲಿ ನಿಮಗೆ ಯಾವುದರಲ್ಲಿ ಆಸಕ್ತಿ ಇದೆಯೋ ನೀವು ಆ ಕ್ಷೇತ್ರದಲ್ಲಿಯೇ ಸಾಧನೆ ಮಾಡುವ ಗುರಿಯನ್ನು ಹೊಂದಿರಬೇಕು. ಎಷ್ಟೇ ಕಷ್ಟವಾದರೂ ಸರಿ ನಿಮ್ಮ ಗುರಿಯನ್ನು ಬಿಡಬಾರದು, ನೀವು ಛಲದಿಂದ ಆ ಗುರಿಯನ್ನು ಸಾಧಿಸಬೇಕು. ಇದು ನಿಮಗೆ ಖಂಡಿತವಾಗಿಯೂ ಗೆಲುವು ತಂದು ಕೊಡುತ್ತದೆ” ಎನ್ನುತ್ತಾರೆ ನಂದಿನಿ.

ನಂದಿನಿ ಭಾಗವಹಿಸಿರುವ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸ್ಪರ್ಧೆಗಳ ಪಟ್ಟಿ

  • 2016 ರಿಂದ 2021 ರ ವರೆಗೆ ರಾಷ್ಟ್ರೀಯ ಮಟ್ಟದ ತ್ರೋಬಾಲ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದರೆ.
  •  2021 ರಲ್ಲಿ ರಾಷ್ಟ್ರ ಮಟ್ಟದ ತ್ರೋಬಾಲ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕವನ್ನು ಪಡೆದುಕೊಂಡಿರುತ್ತಾರೆ.
  •  2021 ರಲ್ಲಿ ರಾಷ್ಟ್ರ ಮಟ್ಟದ ಸಿಸ್ಟೋಬಾಲ್ ಸ್ಪರ್ಧೆಯಲ್ಲಿ ತೃತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ.
  •  2022 ರಲ್ಲಿ ಸೌತ್ ಝೋನ್ ನ್ಯಾಷನಲ್ ಸಿಸ್ಟೋಬಾಲ್ ಸ್ಪಧೆಯಲ್ಲಿ ವಿಜೇತರಾಗಿ ಬೆಳ್ಳಿ ಪದಕವನ್ನು ಪಡೆದುಕೊಂಡಿದ್ದಾರೆ.
  •  2022 ರಲ್ಲಿ ರಾಷ್ಟ್ರ ಮಟ್ಟದ ಸಿಸ್ಟೋಬಾಲ್ ಸ್ಪರ್ಧೆಯಲ್ಲಿ ಭಾಗವಹಿಸಿ ಚಿನ್ನದ ಪದಕವನ್ನು ಪಡೆದುಕೊಂಡಿದ್ದಾರೆ.
  •  ಥೈಲ್ಯಾಂಡ್ ನಲ್ಲಿ ನಡೆದ ಇಂಟರ್ ನ್ಯಾಷನಲ್ ಸಿಸ್ಟೋಬಾಲ್ ಏಶ್ಯನ್ ಚಾಂಪಿಯನ್ ಶಿಪ್ ಭಾರತೀಯ ತಂಡವನ್ನು ಪ್ರತಿನಿಧಿಸಿ ಚಿನ್ನದ ಪದಕವನ್ನು ಪಡೆದುಕೊಂಡಿದ್ದಾರೆ.
  •  ಮಹರಾಷ್ಟ್ರದಲ್ಲಿ ನಡೆದ ಅಂತರಾಷ್ಟ್ರೀಯ ಸಿಸ್ಟೋಬಾಲ್ ಸ್ಪರ್ಧೆಯಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿ ಬೆಳ್ಳಿ ಪದಕ ಪಡೆದುಕೊಂಡಿದ್ದಾರೆ.
  •  2023 ರಲ್ಲಿ ನಡೆದ ಸಿಸ್ಟೋ ಬಾಲ್ ವರ್ಲ್ಡ್ ಕಪ್ ಪಂದ್ಯಾವಳಿಯಲ್ಲಿ ಭಾಗವಹಿಸಿ ದ್ವಿತೀಯ ಸ್ಥಾನ ಪಡೆದು ಬೆಳ್ಳಿ ಪದಕವನ್ನು ಪಡೆದುಕೊಂಡಿದ್ದಾರೆ.

Published On - 9:45 pm, Mon, 28 August 23