Neeraj Chopra: ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಹೊಸ ಇತಿಹಾಸ ಬರೆಯುವ ನಿರೀಕ್ಷೆಯಲ್ಲಿ ನೀರಜ್ ಚೋಪ್ರಾ
World Athletics Championships 2022: 39 ವರ್ಷಗಳ ಇತಿಹಾಸ ಹೊಂದಿರುವ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಸ್ಪರ್ಧಿ ಪದಕ ಗೆದ್ದಿದ್ದು ಕೇವಲ ಒಂದು ಬಾರಿ ಮಾತ್ರ.
ಯುಎಸ್ಎನ ಒರೆಗಾನ್ನಲ್ಲಿ ನಡೆಯುತ್ತಿರುವ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ 2022 ರ (World Athletics Championships 2022) ಜಾವೆಲಿನ್ ಥ್ರೋನಲ್ಲಿ ಭಾರತದ ಚಿನ್ನದ ಹುಡುಗ ನೀರಜ್ ಚೋಪ್ರಾ (Neeraj Chopra) ಹೊಸ ಇತಿಹಾಸ ಬರೆಯುವ ಇರಾದೆಯಲ್ಲಿದ್ದಾರೆ. ಏಕೆಂದರೆ ವಿಶ್ವ ಅಥ್ಲೆಟಿಕ್ಸ್ ಕೂಟದಲ್ಲಿ ಇದುವರೆಗೆ ಭಾರತದ ಯಾವುದೇ ಕ್ರೀಡಾಪಟು ಚಿನ್ನ ಗೆದ್ದಿಲ್ಲ. ಸದ್ಯ ಅರ್ಹತಾ ಸುತ್ತಿನಲ್ಲಿರುವ ನೀರಜ್ ಚೋಪ್ರಾ ಈ ಬಾರಿ ಫೈನಲ್ಗೇರುವ ಸ್ಪರ್ಧಾಳುಗಳಲ್ಲಿ ಗುರುತಿಸಿಕೊಂಡಿದ್ದಾರೆ. ಅರ್ಹತಾ ಸುತ್ತಿನ ಸ್ಪರ್ಧೆಯಲ್ಲಿ ಒಟ್ಟು 32 ಈಟಿ ಎಸೆತಗಾರರಿದ್ದು, ಇವರಲ್ಲಿ 12 ಮಂದಿ ಫೈನಲ್ಗೆ ಅರ್ಹತೆ ಪಡೆಯಲಿದ್ದಾರೆ.
ಇತ್ತೀಚೆಗಷ್ಟೇ ನೂರ್ಮಿ ಗೇಮ್ಸ್ 2022 ರಲ್ಲಿ 89.03 ಮೀಟರ್ ಜಾವೆಲಿನ್ ಎಸೆದು ಬೆಳ್ಳಿ ಪದಕ ಗೆದ್ದಿದ್ದ ನೀರಜ್ ಚೋಪ್ರಾ ತಮ್ಮದೇ ಹೆಸರಿನಲ್ಲಿದ್ದ ರಾಷ್ಟ್ರೀಯ ದಾಖಲೆಯನ್ನು ಮುರಿದಿದ್ದರು. ಅಂದರೆ ಟೋಕಿಯೊ ಒಲಿಂಪಿಕ್ಸ್‌ನಲ್ಲಿ 88.07 ಮೀಟರ್ ಎಸೆದು ಚಿನ್ನದ ಪದಕ ಗೆದ್ದಿದ್ದ ನೀರಜ್, ಪಾವೊ ನೂರ್ಮಿ ಗೇಮ್ಸ್ನಲ್ಲಿ 89.03 ಮೀಟರ್ ದೂರ ಎಸೆಯುವ ಮೂಲಕ ಹಳೆಯ ದಾಖಲೆಯನ್ನು ಅಳಿಸಿ ಹಾಕಿದ್ದರು. ಹೀಗಾಗಿಯೇ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ನಿರೀಕ್ಷೆಗಳು ಹೆಚ್ಚಾಗಿದೆ.
ಭಾರತಕ್ಕೆ ಕೇವಲ 1 ಪದಕ: 39 ವರ್ಷಗಳ ಇತಿಹಾಸ ಹೊಂದಿರುವ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಭಾರತ ಪದಕ ಗೆದ್ದಿದ್ದು ಕೇವಲ 1 ಬಾರಿ ಮಾತ್ರ. 2003 ರಲ್ಲಿ ಪ್ಯಾರಿಸ್ನಲ್ಲಿ ನಡೆದ ಕೂಟದಲ್ಲಿ ಲೆಜೆಂಡರಿ ಲಾಂಗ್ ಜಂಪರ್ ಅಂಜು ಬಾಬಿ ಜಾರ್ಜ್ ಅವರು 6.70 ಮೀ ಜಿಗಿತದೊಂದಿಗೆ ಕಂಚಿನ ಪದಕ ಗೆದ್ದುಕೊಂಡಿದ್ದರು. ಇದಾದ ಬಳಿಕ ಯಾವುದೇ ಕ್ರೀಡಾಪಟುವು ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ತಮ್ಮ ಸಾಮರ್ಥ್ಯವನ್ನು ತೆರೆದಿಡಲು ಸಾಧ್ಯವಾಗಿಲ್ಲ. ಇದೀಗ ಸುದೀರ್ಘ ಇತಿಹಾಸದಲ್ಲಿ ದೇಶದ ಮೊಟ್ಟಮೊದಲ ಟ್ರ್ಯಾಕ್ ಮತ್ತು ಫೀಲ್ಡ್ ವಿಶ್ವ ಚಾಂಪಿಯನ್ ಆಗುವ ಗುರಿಯನ್ನು ಹೊಂದಿರುವ ನೀರಜ್ ಚೋಪ್ರಾ ಫೈನಲ್ಗೆ ತಲುಪುವ ಗುರಿಯಿಟ್ಟಿಕೊಂಡಿದ್ದಾರೆ.
ಜಾವೆಲಿನ್ ಸ್ಪರ್ಧೆ ಯಾವಾಗ? ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ 2022 ರಲ್ಲಿ ನೀರಜ್ ಚೋಪ್ರಾ ಅವರ ಈವೆಂಟ್ ಗುರುವಾರ ಪ್ರಾರಂಭವಾಗಲಿದೆ. ಆದಾಗ್ಯೂ, ಈ ಸ್ಪರ್ಧೆಯ ಪ್ರಸಾರ ಭಾರತದಲ್ಲಿ ಶುಕ್ರವಾರ ಬೆಳಗ್ಗೆ 5:35 AM ಕ್ಕೆ ವೀಕ್ಷಿಸಬಹುದು.
ಯಾವ ಚಾನೆಲ್ನಲ್ಲಿ ನೇರ ಪ್ರಸಾರ? ನೀರಜ್ ಚೋಪ್ರಾ ಅವರ ಜಾವೆಲಿನ್ ಥ್ರೋ ಸ್ಪರ್ಧೆಯನ್ನು ಭಾರತದಲ್ಲಿ ಸೋನಿ TEN 2 ಮತ್ತು Sony TEN 2 HD TV ಚಾನೆಲ್‌ಗಳಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ .
ಲೈವ್ ಸ್ಟ್ರೀಮಿಂಗ್ ಅನ್ನು ಎಲ್ಲಿ ವೀಕ್ಷಿಸಬೇಕು? ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಜಾವೆಲಿನ್ ಎಸೆತದ ಲೈವ್ ಸ್ಟ್ರೀಮಿಂಗ್ ಭಾರತದಲ್ಲಿನ SonyLIV OTT ಪ್ಲಾಟ್‌ಫಾರ್ಮ್‌ನಲ್ಲಿ ಲಭ್ಯವಿರುತ್ತದೆ.
ನೀರಜ್ ಚೋಪ್ರಾ ಅವರ ವೇಳಾಪಟ್ಟಿ? ಜುಲೈ 22, ಶುಕ್ರವಾರ- ಪುರುಷರ ಜಾವೆಲಿನ್ ಥ್ರೋ ಅರ್ಹತಾ ಸುತ್ತು (ಗುಂಪು A) – 5:35 AM IST ಜುಲೈ 24, ಭಾನುವಾರ- ಪುರುಷರ ಜಾವೆಲಿನ್ ಥ್ರೋ ಫೈನಲ್ – 7:05 AM IST
ಕಣದಲ್ಲಿರುವ ಕಠಿಣ ಸ್ಪರ್ಧಾಳುಗಳು ಯಾರೆಲ್ಲಾ? ಪ್ರಸ್ತುತ 89.03 ಮೀಟರ್ ದೂರ ಎಸೆದು ರಾಷ್ಟ್ರೀಯ ದಾಖಲೆ ಬರೆದಿರುವ ನೀರಜ್ ಚೋಪ್ರಾಗೆ ಈ ಬಾರಿ ಹಾಲಿ ವಿಶ್ವ ಚಾಂಪಿಯನ್ ಗ್ರೆನೇಡಿಯನ್ ಆಂಡರ್ಸನ್ ಪೀಟರ್ಸ್ (ಪಿಬಿ 93.07 ಮೀ), ಒಲಿಂಪಿಕ್ ಬೆಳ್ಳಿ ಪದಕ ವಿಜೇತ ಜೆಕ್ ಜಾಕುಬ್ ವಾಡ್ಲೆಜ್ (90.88 ಮೀ), ಜಾಕುಬ್ ವಾಡ್ಲೆಜ್ (90.88 ಮೀ), ಫಿನ್‌ಲ್ಯಾಂಡ್‌ನ ಆಲಿವರ್ ಹೆಲಾಂಡರ್ (89.83 ಮೀ) ನೇರ ಸ್ಪರ್ಧಿಗಳು ಎಂದೇ ಹೇಳಬಹುದು.
ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ ಮುಗಿಯೋದು ಯಾವಾಗ? ಜುಲೈ 15 ರಿಂದ ಶುರುವಾಗಿರುವ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ಗೆ ಜುಲೈ 24 ರಂದು ತೆರೆಬೀಳಲಿದೆ. ಇಲ್ಲಿ ಕೊನೆಯ ದಿನದಾಟಕ್ಕೆ ನೀರಜ್ ಚೋಪ್ರಾ ಅರ್ಹತೆ ಪಡೆಯುವ ವಿಶ್ವಾಸದಲ್ಲಿದ್ದು, ಹೀಗಾಗಿ ಚಿನ್ನದ ಪದಕದೊಂದಿಗೆ ಅವರು ಭಾರತಕ್ಕೆ ಮರಳುವ ನಿರೀಕ್ಷೆಯಿದೆ.
ಈ ಬಾರಿ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಕಾಣಿಸಿಕೊಂಡ ಸ್ಪರ್ಧಿಗಳು ಯಾರೆಲ್ಲಾ?
- ಪುರುಷರ ಜಾವೆಲಿನ್ ಥ್ರೋ – ನೀರಜ್ ಚೋಪ್ರಾ, ರೋಹಿತ್ ಯಾದವ್
- ಮಹಿಳೆಯರ ಜಾವೆಲಿನ್ ಥ್ರೋ – ಅಣ್ಣು ರಾಣಿ
- ಪುರುಷರ 20 ಕಿ.ಮೀ ಓಟದ ನಡಿಗೆ – ಸಂದೀಪ್ ಕುಮಾರ್
- ಮಹಿಳೆಯರ 20 ಕಿ.ಮೀ ಓಟದ ನಡಿಗೆ – ಪ್ರಿಯಾಂಕಾ ಗೋಸ್ವಾಮಿ
- ಪುರುಷರ ಶಾಟ್‌ಪುಟ್ – ತೆಜಿಂದರ್‌ಪಾಲ್ ಸಿಂಗ್ ತೂರ್
- ಪುರುಷರ ಲಾಂಗ್ ಜಂಪ್ – ಮುರಳಿ ಶ್ರೀಶಂಕರ್, ಮುಹಮ್ಮದ್ ಅನೀಸ್ ಯಾಹಿಯಾ, ಜೆಸ್ವಿನ್ ಆಲ್ಡ್ರಿನ್
- ಪುರುಷರ ಟ್ರಿಪಲ್ ಜಂಪ್ – ಅಬ್ದುಲ್ಲಾ ಅಬೂಬಕರ್, ಪ್ರವೀಣ್ ಚಿತ್ರವೇಲ್, ಎಲ್ದೋಸ್ ಪಾಲ್
- ಪುರುಷರ 3000ಮೀ ಸ್ಟೀಪಲ್‌ಚೇಸ್ – ಅವಿನಾಶ್ ಸೇಬಲ್
- ಮಹಿಳೆಯರ 3000ಮೀ ಸ್ಟೀಪಲ್‌ಚೇಸ್ – ಪಾರುಲ್ ಚೌಧರಿ
- ಪುರುಷರ 400 ಮೀ ಹರ್ಡಲ್ಸ್ – ಎಂಪಿ ಜಬೀರ್
- ಪುರುಷರ 4×400 ಮೀ ರಿಲೇ – ನೋಹ್ ನಿರ್ಮಲ್ ಟಾಮ್, ಅಮೋಜ್ ಜಾಕೋಬ್, ಮುಹಮ್ಮದ್ ಅಜ್ಮಲ್, ನಾಗನಾಥನ್ ಪಾಂಡಿ, ರಾಜೇಶ್ ರಮೇಶ್, ಮುಹಮ್ಮದ್ ಅನಸ್ ಯಾಹಿಯಾ
- ಮಹಿಳೆಯರ 200 ಮೀ ಓಟ- ಎಸ್ ಧನಲಕ್ಷ್ಮಿ
Published On - 3:56 pm, Thu, 21 July 22