ಜೊಕೊವಿಚ್​ಗೆ ಸೋಲು: ವಿಶ್ವ ದಾಖಲೆಯ ಗ್ರಾಂಡ್ ಸ್ಲಾಮ್ ಕನಸು ಭಗ್ನ!

Novak Djokovic" ಪುರುಷರ ಟೆನಿಸ್ ಇತಿಹಾಸದಲ್ಲಿ ರೋಜರ್ ಫೆಡರರ್ ಮತ್ತು ರಫೆಲ್ ನಡಾಲ್ ಅವರಂತಹ ದಿಗ್ಗಜರನ್ನೇ ಹಿಂದಿಕ್ಕಿ 24 ಗ್ರಾಂಡ್ ಸ್ಲಾಮ್‌ ಪ್ರಶಸ್ತಿ ಗೆದ್ದಿರುವ ನೊವಾಕ್ ಜೊಕೊವಿಚ್ ಅವರ 25ನೇ ಕಿರೀಟದ ಕನಸು ಮುಂದುವರೆದಿದೆ. ಅಷ್ಟಕ್ಕೂ ಜೊಕೊವಿಚ್ ಅವರಿಗೆ ಈ ಒಂದು ಪ್ರಶಸ್ತಿ ಏಕೆ ಅಷ್ಟೊಂದು ಮುಖ್ಯ? ಟೆನಿಸ್ ಇತಿಹಾಸದ ಸಾರ್ವಕಾಲಿಕ ದಾಖಲೆಗಳನ್ನು ಈ ಪ್ರಶಸ್ತಿ ಹೇಗೆ ಬದಲಾಯಿಸಲಿದೆ ಎಂಬುದರ ಸಂಪೂರ್ಣ ವಿಶ್ಲೇಷಣೆ ಇಲ್ಲಿದೆ.

ಜೊಕೊವಿಚ್​ಗೆ ಸೋಲು: ವಿಶ್ವ ದಾಖಲೆಯ ಗ್ರಾಂಡ್ ಸ್ಲಾಮ್ ಕನಸು ಭಗ್ನ!
Novak Djokovic
Image Credit source: x.com

Updated on: Jul 11, 2026 | 9:00 AM

ಟೆನಿಸ್ ಇತಿಹಾಸದ ಸರ್ವಶ್ರೇಷ್ಠ ಆಟಗಾರ ನೊವಾಕ್ ಜೊಕೊವಿಚ್ ಅವರ ಐತಿಹಾಸಿಕ 25ನೇ ಗ್ರಾಂಡ್ ಸ್ಲಾಮ್ ಪ್ರಶಸ್ತಿಯ ಕನಸು ಮುಂದುವರೆದಿದೆ. ಅದು ಸಹ ವಿಂಬಲ್ಡನ್​ ಟೂರ್ನಿಯಲ್ಲಿ ಸೆಮಿಫೈನಲ್​ನಲ್ಲಿ ಸೋಲುವ ಮೂಲಕ. ಅಂದರೆ ಈ ಬಾರಿ ಸೆಮಿಫೈನಲ್​ಗೇರಿದ್ದ ಜೊಕೊವಿಚ್ 25ನೇ ಗ್ರಾಂಡ್ ಸ್ಲಾಮ್ ಗೆದ್ದು ಹೊಸ ಇತಿಹಾಸ ನಿರ್ಮಿಸಲಿದ್ದಾರೆ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ ನಿರ್ಣಾಯಕ ಪಂದ್ಯದಲ್ಲಿ ಇಟಲಿಯ ಯಾನಿಕ್ ಸಿನ್ನರ್, ಜೊಕೊವಿಚ್​ಗೆ ಸೋಲುಣಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಲಂಡನ್​ನ ಸೆಂಟ್ರಲ್ ಕೋರ್ಟ್​ನಲ್ಲಿ ನಡೆದ ಈ ಪಂದ್ಯದಲ್ಲಿ ನೊವಾಕ್ ಜೊಕೊವಿಚ್ ಕಡೆಯಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿರಲಿಲ್ಲ ಎಂಬುದೇ ಸತ್ಯ. ಕ್ವಾರ್ಟರ್‌ಫೈನಲ್‌ನಲ್ಲಿ ಫೆಲಿಕ್ಸ್ ಔಗರ್-ಅಲಿಯಾಸಿಮೆ ವಿರುದ್ಧ ಬರೋಬ್ಬರಿ 5 ಗಂಟೆಗಳ ಕಾಲ ಸುದೀರ್ಘ ಹೋರಾಟ ನಡೆಸಿದ್ದ 39 ವರ್ಷದ ಜೊಕೊವಿಚ್ ದಣಿದಂತೆ ಕಂಡು ಬಂದಿದ್ದರು.

ಇದರ ಪೂರ್ಣ ಲಾಭ ಪಡೆದ ಯುವ ತಾರೆ ಯಾನಿಕ್ ಸಿನ್ನರ್, ಪಂದ್ಯದ ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಒತ್ತು ನೀಡಿದರು. ಸಿನ್ನರ್ ಅವರ ಅದ್ಭುತ ಸರ್ವ್ ಹಾಗೂ ಮಿಂಚಿನ ವೇಗದ ಬೇಸ್‌ಲೈನ್ ಶಾಟ್‌ಗಳಿಗೆ ಉತ್ತರ ನೀಡಲು ಜೊಕೊವಿಚ್ ವಿಫಲರಾದರು. ಅಂತಿಮವಾಗಿ ಸಿನ್ನರ್ 6-4, 6-4, 6-4 ರ ನೇರ ಸೆಟ್‌ಗಳಿಂದ ಜೊಕೊವಿಚ್‌ ಅವರನ್ನು ಮಣಿಸಿ ಫೈನಲ್‌ಗೆ ಲಗ್ಗೆ ಇಟ್ಟರು.

ಕಾಯುವಿಕೆ ಮುಂದುವರಿಕೆ:

2023ರ ಯುಎಸ್ ಓಪನ್ ಗೆದ್ದು 24 ಗ್ರಾಂಡ್ ಸ್ಲಾಮ್‌ಗಳೊಂದಿಗೆ ಮಾರ್ಗರೆಟ್ ಕೋರ್ಟ್ ಅವರ ಸಾರ್ವಕಾಲಿಕ ದಾಖಲೆಯನ್ನು ಸರಿಗಟ್ಟಿದ್ದ ಜೊಕೊವಿಚ್, ಕಳೆದ ಮೂರು ವರ್ಷಗಳಿಂದ 25ನೇ ಪ್ರಶಸ್ತಿಗಾಗಿ ಹೋರಾಡುತ್ತಲೇ ಇದ್ದಾರೆ.

2026ರ ಸಾಲಿನಲ್ಲಿ ಇದು ಅವರ ಎರಡನೇ ಪ್ರಮುಖ ಪ್ರಯತ್ನವಾಗಿತ್ತು. ಇದಕ್ಕೂ ಮುನ್ನ ನಡೆದ ಆಸ್ಟ್ರೇಲಿಯನ್ ಓಪನ್ 2026 ರಲ್ಲಿ ಟೆನಿಸ್ ಇತಿಹಾಸದಲ್ಲೇ ತಮ್ಮ 400ನೇ ಗ್ರಾಂಡ್ ಸ್ಲಾಮ್ ಪಂದ್ಯದ ಗೆಲುವಿನ ಐತಿಹಾಸಿಕ ಮೈಲಿಗಲ್ಲು ತಲುಪಿದ್ದ ಜೊಕೊವಿಚ್, ಫೈನಲ್‌ನಲ್ಲಿ ಕಾರ್ಲೋಸ್ ಅಲ್ಕರಾಝ್ ವಿರುದ್ಧ ಸೋತು ರನ್ನರ್-ಅಪ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿದ್ದರು. ಈಗ ವಿಂಬಲ್ಡನ್‌ನಲ್ಲೂ ನಿರಾಸೆ ಅನುಭವಿಸಿದ್ದಾರೆ.

25ನೇ ಗ್ರಾಂಡ್ ಸ್ಲಾಮ್ ಪ್ರಶಸ್ತಿ ಯಾಕೆ?

ನೊವಾಕ್ ಜೊಕೊವಿಚ್ ಅವರು 25ನೇ ಗ್ರಾಂಡ್ ಸ್ಲಾಮ್ ಪ್ರಶಸ್ತಿ ಗೆಲ್ಲಲು ಹೋರಾಡುತ್ತಿರುವುದಕ್ಕೆ ಮುಖ್ಯ ಕಾರಣ, ಟೆನಿಸ್ ಇತಿಹಾಸದಲ್ಲೇ ಸಾರ್ವಕಾಲಿಕ ಅತಿ ಹೆಚ್ಚು ಗ್ರಾಂಡ್ ಸ್ಲಾಮ್ ಗೆದ್ದ ಏಕೈಕ ಆಟಗಾರ ಎಂಬ ಐತಿಹಾಸಿಕ ದಾಖಲೆಯನ್ನು ಬರೆಯಲು.

  • ಮಾರ್ಗರೆಟ್ ಕೋರ್ಟ್ ದಾಖಲೆ:  ಟೆನಿಸ್ ಇತಿಹಾಸದಲ್ಲೇ ಅತಿ ಹೆಚ್ಚು ಗ್ರಾಂಡ್ ಸ್ಲಾಮ್ ಗೆದ್ದ ದಾಖಲೆ ಆಸ್ಟ್ರೇಲಿಯಾದ ಮಾಜಿ ಮಹಿಳಾ ಆಟಗಾರ್ತಿ ಮಾರ್ಗರೆಟ್ ಕೋರ್ಟ್ (24 ಪ್ರಶಸ್ತಿ) ಹೆಸರಿನಲ್ಲಿದೆ.
  •  ನೊವಾಕ್ ಜೊಕೊವಿಚ್ ದಾಖಲೆ: 2023 ರಲ್ಲಿ 24ನೇ ಗ್ರಾಂಡ್ ಸ್ಲಾಮ್ ಪ್ರಶಸ್ತಿ ಗೆದ್ದು ಜೊಕೊವಿಚ್, ಮಾರ್ಗರೆಟ್ ಕೋರ್ಟ್ ಹೆಸರಿನಲ್ಲಿರುವ ವಿಶ್ವ ದಾಖಲೆಯನ್ನು ಸರಿಗಟ್ಟಿದ್ದರು.

ಒಂದು ವೇಳೆ ನೊವಾಕ್ ಜೊಕೊವಿಚ್ ಇನ್ನೊಂದು ಗ್ರಾಂಡ್ ಸ್ಲಾಮ್ ಪ್ರಶಸ್ತಿ ಗೆದ್ದರೆ ಟೆನಿಸ್ ಇತಿಹಾಸದಲ್ಲೇ 25 ಗ್ರಾಂಡ್ ಸ್ಲಾಮ್ ಪ್ರಶಸ್ತಿ ಪಡೆದ ವಿಶ್ವದ ಏಕೈಕ ಟೆನಿಸ್ ಪ್ಲೇಯರ್ ಎನಿಸಿಕೊಳ್ಳಲಿದ್ದಾರೆ.

“25ನೇ ಗ್ರಾಂಡ್ ಸ್ಲಾಮ್ ಚರ್ಚೆಯಿಂದ ಸಾಕಾಗಿದೆ”

ವಿಂಬಲ್ಡನ್ ಸೆಮಿಫೈನಲ್ ಸೋಲಿನ ಬಳಿಕ ಮಾತನಾಡಿದ ಜೊಕೊವಿಚ್, ಮಾಧ್ಯಮಗಳು ಮತ್ತು ಅಭಿಮಾನಿಗಳಲ್ಲಿ ನಿರಂತರವಾಗಿ ನಡೆಯುತ್ತಿರುವ 25ನೇ ಗ್ರಾಂಡ್ ಸ್ಲಾಮ್ ದಾಖಲೆಯ ಚರ್ಚೆಗಳ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

“ಪ್ರಾಮಾಣಿಕವಾಗಿ ಹೇಳಬೇಕೆಂದರೆ, ನನಗೆ ಈ 25ನೇ ಗ್ರಾಂಡ್ ಸ್ಲಾಮ್ ಮಾತಿನಿಂದ ಸಾಕಾಗಿದೆ. ಇದು ನನ್ನ ವೃತ್ತಿಜೀವನದ ಅಂತಿಮ ಗುರಿಯಲ್ಲ. ಒಂದು ವೇಳೆ ನಾನು ಈ ಪ್ರಶಸ್ತಿಯನ್ನು ಎಂದಿಗೂ ಗೆಲ್ಲದಿದ್ದರೆ ಏನಂತೆ? ನಾನು ಈಗಾಗಲೇ ಸಾಧಿಸಿರುವ ದಾಖಲೆಗಳ ಬಗ್ಗೆ ನನಗೆ ಹೆಮ್ಮೆಯಿದೆ. ನಾನೀಗ ಯಾವುದೇ ಒತ್ತಡದಿಂದ ಟೆನಿಸ್ ಆಡುತ್ತಿಲ್ಲ. ನನ್ನಲ್ಲಿ ಇನ್ನೂ ಆಡುವ ಸಾಮರ್ಥ್ಯವಿದೆ ಮತ್ತು ನಾನು ಈ ಆಟವನ್ನು ಪ್ರೀತಿಸುತ್ತೇನೆ, ಅದಕ್ಕಾಗಿಯೇ ಅಂಗಳಕ್ಕೆ ಇಳಿಯುತ್ತಿದ್ದೇನೆ” ಎಂದು ಜೊಕೊವಿಚ್ ಹೇಳಿದ್ದಾರೆ

ಹೋರಾಟ ಮುಗಿದಿಲ್ಲ!

ವಿಂಬಲ್ಡನ್‌ನಿಂದ ಹೊರಬಿದ್ದರೂ ನೊವಾಕ್ ಜೊಕೊವಿಚ್ ಟೆನಿಸ್‌ಗೆ ವಿದಾಯ ಹೇಳುವ ಯಾವುದೇ ಮುನ್ಸೂಚನೆ ನೀಡಿಲ್ಲ. ಕನಿಷ್ಠ ಇನ್ನೊಂದು ಬಾರಿಯಾದರೂ ವಿಂಬಲ್ಡನ್ ಅಂಗಳಕ್ಕೆ ಮರಳುವ ಇಚ್ಛೆಯನ್ನು ಅವರು ವ್ಯಕ್ತಪಡಿಸಿದ್ದಾರೆ. ಟೆನಿಸ್ ಲೋಕದ ಈ ದೈತ್ಯನ ಮುಂದಿನ ಗುರಿ ಈಗ ವರ್ಷದ ಕೊನೆಯ ಗ್ರಾಂಡ್ ಸ್ಲಾಮ್ ಟೂರ್ನಿಯಾದ ಯುಎಸ್ ಓಪನ್ ಆಗಿದೆ.

ಇದನ್ನೂ ಓದಿ: ಆಸ್ಟ್ರೇಲಿಯಾದಲ್ಲಿ IPL ಪಂದ್ಯ!

ನ್ಯೂಯಾರ್ಕ್‌ನ ಹಾರ್ಡ್ ಕೋರ್ಟ್ ಅಂಗಳದಲ್ಲಿ ನೊವಾಕ್ ಜೊಕೊವಿಚ್ ಮತ್ತೊಮ್ಮೆ ತನ್ನ 25ನೇ ಗ್ರಾಂಡ್ ಸ್ಲಾಮ್ ಇತಿಹಾಸ ನಿರ್ಮಿಸಲು ಸಂಪೂರ್ಣ ಸಜ್ಜಾಗಲಿದ್ದಾರೆ.

 

Follow Us