1983 World Cup: ಭಾರತ ಮೊದಲ ವಿಶ್ವಕಪ್ ಗೆದ್ದು ಇಂದಿಗೆ 38 ವರ್ಷ! ಹೇಗಿತ್ತು ಗೊತ್ತಾ ಕಪಿಲ್ ಹುಡುಗರ ಗೆಲುವಿನ ಮಹಾಯಾನ

|

Updated on: Jun 25, 2021 | 4:01 PM

1983 World Cup: ಆ ಸಮಯದಲ್ಲಿ ಬಿಸಿಸಿಐ ಬಳಿ ಹಣವಿರಲಿಲ್ಲ. ಅಂತಹ ಪರಿಸ್ಥಿತಿಯಲ್ಲಿ ಲತಾ ಮಂಗೇಶ್ಕರ್ ಅವರ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಅದರಿಂದ ಬಂದ ಹಣವನ್ನು ಭಾರತೀಯ ಆಟಗಾರರಿಗೆ ಬಹುಮಾನವಾಗಿ ನೀಡಲಾಯಿತು.

1983 World Cup: ಭಾರತ ಮೊದಲ ವಿಶ್ವಕಪ್ ಗೆದ್ದು ಇಂದಿಗೆ 38 ವರ್ಷ! ಹೇಗಿತ್ತು ಗೊತ್ತಾ ಕಪಿಲ್ ಹುಡುಗರ ಗೆಲುವಿನ ಮಹಾಯಾನ
ಭಾರತ ಮೊದಲ ವಿಶ್ವಕಪ್ ಗೆದ್ದು ಇಂದಿಗೆ 38 ವರ್ಷ
Follow us on

ಭಾರತ ಕ್ರಿಕೆಟ್​ ಟೆಸ್ಟ್​ ಸಿರೀಸ್​ ಸೋಲಿನ ನೆನಪಿಂದ ಹೊರಬರಲಾಗದೇ ಇರುವಾಗ ಅದೇ ಕ್ರಿಕೆಟ್​ನ ಹಳೇ ನೆನಪು ರೋಚಕವಾಗಿದೆ. ಕ್ರಿಕೆಟ್ ದುನಿಯಾದಲ್ಲಿ ಭಾರತವನ್ನು ಲೆಕ್ಕಕ್ಕೆ ಇಟ್ಟುಕೊಳ್ಳದ ದೇಶಗಳೆದುರು ಟೀಂ ಇಂಡಿಯಾದ ಯುವ ಹುಲಿಗಳು ತೊಡೆ ತಟ್ಟಿ ನಿಂತು ಎಲ್ಲರನ್ನೂ ಮಂತ್ರ ಮುಗ್ದರನ್ನಾಗಿಸಿದ ದಿನ ಇಂದು. ಭಾರತೀಯ ಕ್ರಿಕೆಟ್‌ನಲ್ಲಿ ಒಂದು ವಿಶೇಷವಾದ ದಿನವಿದ್ದರೆ, ಅದು ಜೂನ್ 25, 1983 ಆಗಿದೆ. ಭಾರತೀಯ ಕ್ರಿಕೆಟ್ ಪ್ರಿಯರು ಆ ದಿನವನ್ನು ಎಂದಿಗೂ ಮರೆಯುವುದಿಲ್ಲ. 38 ವರ್ಷಗಳ ಹಿಂದೆ ಅದೇ ದಿನ, ಕಪಿಲ್ ನೇತೃತ್ವದ ಟೀಂ ಇಂಡಿಯಾ ಮೊದಲ ಐಸಿಸಿ ಟ್ರೋಫಿಯನ್ನು ಭಾರತೀಯ ಕ್ರಿಕೆಟ್‌ಗೆ ನೀಡಿದರು. ಯಾವುದೇ ನಿರೀಕ್ಷೆಗಳಿಲ್ಲದೆ ಅಖಾಡಕ್ಕೆ ಇಳಿದ ಭಾರತೀಯ ತಂಡ .. ಲಾರ್ಡ್ಸ್‌ನಲ್ಲಿ ವಿಶ್ವ ಚಾಂಪಿಯನ್ ಆಗಿ ನಿಂತು ಕ್ರಿಕೆಟ್ ಅನ್ನು ಭಾರತೀಯರ ಕಣಕಣದಲ್ಲೂ ಸೇರಿಸಿ ಬಿಟ್ಟರು.

ಭಾರತದ ಬಗ್ಗೆ ಯಾವುದೇ ನಿರೀಕ್ಷೆಗಳಿರಲಿಲ್ಲ
ವಿಶ್ವಕಪ್ ಅನ್ನು ಮೊದಲ ಬಾರಿಗೆ ಚುಂಬಿಸುತ್ತಾ, ಭಾರತೀಯ ಭಾವನೆಯ ಕಟ್ಟೆ ಹೊಡೆಯುವಂತೆ ಮಾಡಿದ ದಿನವಿದು. ಈ ದಿನವನ್ನು ಭಾರತೀಯ ಕ್ರಿಕೆಟ್‌ನಲ್ಲಿ ಐತಿಹಾಸಿಕ ದಿನವೆಂದೆ ಕರೆಯಲಾಗುತ್ತದೆ. ಆದರೆ, ಈ ಪಂದ್ಯದಲ್ಲಿ ಕ್ರಿಕೆಟ್ ದಂತಕಥೆ ಕಪಿಲ್ ದೇವ್ ಬಗ್ಗೆ ಸ್ವಲ್ಪವೇ ಹೇಳಲಾಗಿದೆ. ಕಪಿಲ್ ಕೇವಲ ತಂಡದ ನಾಯಕನಾಗಿ ಮಾತ್ರವಲ್ಲ, ಬೌಲರ್ ಮತ್ತು ಫೀಲ್ಡರ್ ಆಗಿ ಭಾರತದ ಗೆಲುವಿಗೆ ಕಂಕಣ ತೊಟ್ಟು ನಿಂತು ತಂಡವನ್ನು ವಿಜಯಶಾಲಿಯನ್ನಾಗಿಸಿದ್ದರು. ಅದಕ್ಕಾಗಿಯೇ ಅಭಿಮಾನಿಗಳು ಕಪಿಲ್ ಪ್ರಸ್ತುತಪಡಿಸಿದ ವಿಶ್ವಕಪ್ ಎಂದು ಪ್ರೀತಿಯಿಂದ ಹೇಳುತ್ತಿರುತ್ತಾರೆ. ಜೊತೆಗೆ ಅವರನ್ನು ಕಪಿಲ್ ಡೆವಿಲ್ಸ್ ಎಂದೂ ಕರೆಯುತ್ತಾರೆ.

ಕಪಿಲ್ ದೇವ್ ನೇತೃತ್ವದ ಭಾರತೀಯ ತಂಡ 1983 ರ ವಿಶ್ವಕಪ್‌ಗೆ ತೆರಳಿತ್ತು. ಆದಾಗ್ಯೂ, ಭಾರತದ ಬಗ್ಗೆ ಯಾವುದೇ ನಿರೀಕ್ಷೆಗಳಿರಲಿಲ್ಲ. ಲೀಗ್ ಹಂತದಲ್ಲಿಯೇ ತಂಡ ಹೊರಬಿಳುತ್ತದೆ ಎಂದು ಗೇಲಿ ಮಾಡಲಾಗಿತ್ತು. ಅಂದಿನ ತಂಡದಲ್ಲಿ ಸುನಿಲ್ ಗವಾಸ್ಕರ್, ದಿಲೀಪ್ ವೆಂಗ್ಸರ್ಕರ್, ಕೃಷ್ಣಮಾಚಾರಿ ಶ್ರೀಕಾಂತ್, ಮದನ್ ಲಾಲ್, ರವಿಶಾಸ್ತ್ರಿ, ಸಂದೀಪ್ ಪಾಟೀಲ್ ಮತ್ತು ರೋಜರ್ ಬಿನ್ನಿ ಇದ್ದರು. ವಿಶ್ವಕಪ್ ಪಂದ್ಯಾವಳಿಯಲ್ಲಿ ಒಟ್ಟು 8 ತಂಡಗಳು ಭಾಗವಹಿಸಿದ್ದವು. ಇವುಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿತ್ತು. ಭಾರತದ ಗುಂಪಿನಲ್ಲಿ ಹಾಲಿ ಚಾಂಪಿಯನ್ ವೆಸ್ಟ್ ಇಂಡೀಸ್, ಜಿಂಬಾಬ್ವೆ ಮತ್ತು ಆಸ್ಟ್ರೇಲಿಯಾ ಸೇರಿದ್ದವು.

ಜಿಂಬಾಬ್ವೆ ವಿರುದ್ಧದ ಗೆಲುವು ಭರವಸೆ ನೀಡಿತು
ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ವೆಸ್ಟ್ ಇಂಡೀಸ್ ವಿರುದ್ಧ ಸೆಣಸಲಾಯಿತು. ವಿಂಡೀಸ್ ಪಂದ್ಯವನ್ನು 34 ರನ್‌ಗಳಿಂದ ಗೆದ್ದು ಟ್ರೋಫಿಗೆ ಮುನ್ನಡೆ ಹಾಕಿತು. ಎರಡನೇ ಪಂದ್ಯದಲ್ಲಿ ಜಿಂಬಾಬ್ವೆ ವಿರುದ್ಧದ ಗೆಲುವು ಭರವಸೆ ನೀಡಿತು. ಆದರೆ, ಆಸೀಸ್ ಕ್ರಮವಾಗಿ ವೆಸ್ಟ್ ಇಂಡೀಸ್ ವಿರುದ್ಧ ಸೋತಿತ್ತು. ಹೀಗಾಗಿ ಭಾರತ ಇತರ ಎರಡು ಪಂದ್ಯಗಳಲ್ಲಿ ಬೃಹತ್ ಗೆಲುವನ್ನು ಸಾಧಿಸಿದರೆ ಪಂದ್ಯಾವಳಿಯಲ್ಲಿ ಮುಂದುವರೆಯುವ ಅವಕಾಶವಿತ್ತು. ಇಲ್ಲದಿದ್ದರೆ ಮನೆಗೆ ನಡೆಯಬೇಕಿತ್ತು. ಕಪಿಲ್ ದೇವ್ (ಔಟಾಗದೆ 175) ಘನ ಇನ್ನಿಂಗ್ಸ್ ಗಳಿಸಿ ಜಿಂಬಾಬ್ವೆ ವಿರುದ್ಧ ಜಯ ತಂದುಕೊಟ್ಟರು. ಆದರೆ, ಪಂದ್ಯವನ್ನು ದೂರದರ್ಶನದಲ್ಲಿ ಪ್ರಸಾರ ಮಾಡದ ಕಾರಣ ಕಪಿಲ್ ದೇವ್ ಅವರ ಈ ಐತಿಹಾಸಿಕ ಇನ್ನಿಂಗ್ಸ್ ವೀಕ್ಷಿಸಲಾಗಲಿಲ್ಲ. ನಂತರ ಅವರು ಆಸೀಸ್ ತಂಡವನ್ನು ಸೋಲಿಸಿ ವಿಶ್ವಕಪ್ ಸೆಮಿಸ್ ತಲುಪಿದರು. ಸೆಮಿಸ್‌ನಲ್ಲಿ ಕ್ರಿಕೆಟ್‌ನ ಜನ್ಮ ಸ್ಥಳವಾದ ಇಂಗ್ಲೆಂಡ್‌ ವಿರುದ್ಧ ಸೆಣಸಾಡಬೇಕಾಯಿತು. ಈ ಪಂದ್ಯದಲ್ಲೂ ಅದ್ಭುತ ಆಟವಾಡಿ ಭಾರತ ಫೈನಲ್‌ಗೆ ಲಗ್ಗೆಯಿಟ್ಟಿತ್ತು.

ಫೈನಲ್ ಸಮರ ಹೇಗಿತ್ತು ಗೊತ್ತಾ?
ಫೈನಲ್‌ನಲ್ಲಿ ವೆಸ್ಟ್ ಇಂಡೀಸ್ ತಂಡದ ನಾಯಕ ಕ್ಲೈವ್ ಲಾಯ್ಡ್ ಟಾಸ್ ಗೆದ್ದು ಬೌಲಿಂಗ್ ಮಾಡಲು ನಿರ್ಧರಿಸಿದರು. ಆಂಡಿ ರಾಬರ್ಟ್ಸ್, ಜೋಯಲ್ ಗಾರ್ನರ್, ಮಾಲ್ಕಮ್ ಮಾರ್ಷಲ್ ಮತ್ತು ಮೈಕೆಲ್ ಹೋಲ್ಡಿಂಗ್ ಅವರಂತಹ ಮಾರಕ ಬೌಲಿಂಗ್ ಕ್ವಾರ್ಟೆಟ್ ಎದುರು, ಟೀಮ್ ಇಂಡಿಯಾದ ಬ್ಯಾಟ್ಸ್‌ಮನ್‌ಗಳಿಗೆ ಅಬ್ಬರಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ಕೇವಲ 183 ರನ್ ಗಳಿಸಲಷ್ಟೇ ಶಕ್ತರಾದರು. ಓಪನರ್ ಕ್ರಿಸ್ ಶ್ರೀಕಾಂತ್ 38 ರನ್ ಗಳಿಸಿದರು. ಸಂದೀಪ್ ಪಾಟೀಲ್ 27 ರನ್ ಗಳಿಸಿದರೆ, ಮೊಹಿಂದರ್ ಅಮರನಾಥ್ 26 ರನ್ ಗಳಿಸಿದರು. ವೆಸ್ಟ್ ಇಂಡೀಸ್‌ನಿಂದ ವಿವಿಯನ್ ರಿಚರ್ಡ್ಸ್ ಹೊರತುಪಡಿಸಿ ಎಲ್ಲರಿಗೂ ವಿಕೆಟ್ ಸಿಕ್ಕಿತು. 183 ರನ್‌ಗಳ ಗುರಿಯ ಮುಂದೆ, ವಿಂಡೀಸ್ ಗೆಲುವಿನ ಪ್ರಬಲ ಸ್ಪರ್ಧಿಯಾಗಿತ್ತು. ಅವರು ಅದ್ಭುತ ಬ್ಯಾಟ್ಸ್‌ಮನ್‌ಗಳನ್ನು ಹೊಂದಿದ್ದರು ಮತ್ತು ಭಾರತವು ವಿಂಡೀಸ್ ತಂಡದಂತಹ ಬಿರುಗಾಳಿಯ ಬೌಲರ್‌ಗಳನ್ನು ಹೊಂದಿರಲಿಲ್ಲ. ಕೇವಲ ಮಧ್ಯಮ ವೇಗಿಗಳನ್ನು ಮಾತ್ರ ಹೊಂದಿದ್ದರು.

76 ರನ್​ಗಳೊಳಗೆ 6 ವಿಕೆಟ್ ಪತನ
ವಿಂಡೀಸ್ ಗುರಿಯನ್ನು ಚೆನ್ನಾಗಿ ಬೆನ್ನಟ್ಟಿದರು ಒಂದು ವಿಕೆಟ್‌ಗೆ 50 ರನ್ ಬಾರಿಸಿದರು. ರಿಚರ್ಡ್ಸ್ ಉತ್ತಮ ಬ್ಯಾಟಿಂಗ್ ಮಾಡುತ್ತಿದ್ದರು. 28 ಎಸೆತಗಳಲ್ಲಿ ಏಳು ಬೌಂಡರಿಗಳೊಂದಿಗೆ 33 ರನ್ ಗಳಿಸಿದ್ದರು. ಮದನ್ ಲಾಲ್ ಬೌಲಿಂಗ್‌ಗೆ ಬರುವುದು ಇಲ್ಲಿಯೇ. ಅಮರ್ ಬೌಲಿಂಗ್​ನಲ್ಲಿ ಅದ್ಭುತ ಕ್ಯಾಚ್ ತೆಗೆದುಕೊಳ್ಳುವ ಮೂಲಕ ಕಪಿಲ್ ದೇವ್ ರಿಚರ್ಡ್ಸ್ ಅವರ ಇನ್ನಿಂಗ್ಸ್ ಅನ್ನು ಕೊನೆಗೊಳಿಸಿದರು. ಕಪಿಲ್ ಅವರ ಈ ಕ್ಯಾಚ್ ಇಡೀ ಪಂದ್ಯವನ್ನು ಬದಲಾಯಿಸಿತು. ನಂತರ ಭಾರತೀಯ ಬೌಲರ್‌ಗಳು ವಿಂಡೀಸ್ ತಂಡದ ಮೇಲೆ ಸಂಪೂರ್ಣವಾಗಿ ಒತ್ತಡ ಹೆರಿದರು. ಒಂದು ವಿಕೆಟ್‌ಗೆ 50 ರನ್​ ಇದ್ದ ತಂಡದ ಸ್ಕೋರ್ ಭಾರದ ಬೌಲಿಂಗ್ ದಾಳಿಯ ಎದುರು ಆರು ವಿಕೆಟ್‌ಗೆ 76 ರನ್ ಗಳಿಸಿತು. ಮದನ್ ಲಾಲ್, ಬಲ್ವಿಂದರ್ ಸಂಧು ಮತ್ತು ರೋಜರ್ ಬಿನ್ನಿ ಅವರ ಮಿಲಿಟರಿ ಮಧ್ಯಮ ವೇಗವು ವೆಸ್ಟ್ ಇಂಡೀಸ್‌ನ ಅಗ್ರಸ್ಥಾನದಲ್ಲಿರುವ ಬ್ಯಾಟ್ಸ್‌ಮನ್‌ಗಳನ್ನು ಪೆವಿಲಿಯನ್​ಗೆ ಅಟ್ಟಿತ್ತು.

ಹೋಲ್ಡಿಂಗ್ ರೂಪದಲ್ಲಿ ಕೊನೆಯ ವಿಕೆಟ್
ವಿಕೆಟ್‌ಕೀಪರ್ ಜೆಫ್ ಡುಜಾನ್ (25) ಮತ್ತು ಮಾಲ್ಕಮ್ ಮಾರ್ಷಲ್ (18) ಸೇರಿ ತಂಡದ ಮೊತ್ತವನ್ನು 100ರ ಗಡಿ ದಾಟಿಸುತ್ತಾರೆ. ಆದರೆ ಮೊಹಿಂದರ್ ಅಮರನಾಥ್ ಮ್ಯಾಜಿಕ್ ಅವರಿಬ್ಬರನ್ನು ಬಲಿ ತೆಗೆದುಕೊಳ್ಳುತ್ತದೆ. ನಂತರ ಮೈಕೆಲ್ ಹೋಲ್ಡಿಂಗ್ ರೂಪದಲ್ಲಿ ಕೊನೆಯ ವಿಕೆಟ್ ಬೀಳಿಸುವ ಮೂಲಕ ಭಾರತ ಇತಿಹಾಸ ನಿರ್ಮಿಸಿತು. ವಿಶ್ವಕಪ್ ಗೆಲ್ಲುವ ವೆಸ್ಟ್ ಇಂಡೀಸ್ ಹ್ಯಾಟ್ರಿಕ್ ಕನಸಿಗೆ ಭಾರತ ಕೊಳ್ಳಿ ಇಟ್ಟಿತ್ತು. ವಿಂಡೀಸ್ ನಂತರ ವಿಶ್ವಕಪ್ ಗೆದ್ದ ಮೊದಲ ದೇಶ ಭಾರತ. ಕಪಿಲ್ ದೇವ್ ಮತ್ತು ಅವರ ತಂಡ ಇತಿಹಾಸ ಸೃಷ್ಟಿಸಿತು. ಮೊಹಿಂದರ್ ಅಮರನಾಥ್ 26 ರನ್ ಗಳಿಸುವುದರ ಜೊತೆಗೆ 12 ರನ್ ನೀಡಿ ಮೂರು ವಿಕೆಟ್ ಪಡೆದ ಪಂದ್ಯ ಶ್ರೇಷ್ಠರಾಗಿ ಆಯ್ಕೆಯಾದರು.

ಆ ಸಮಯದಲ್ಲಿ ಬಿಸಿಸಿಐ ಬಳಿ ಹಣವಿರಲಿಲ್ಲ. ಅಂತಹ ಪರಿಸ್ಥಿತಿಯಲ್ಲಿ ಲತಾ ಮಂಗೇಶ್ಕರ್ ಅವರ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಅದರಿಂದ ಬಂದ ಹಣವನ್ನು ಭಾರತೀಯ ಆಟಗಾರರಿಗೆ ಬಹುಮಾನವಾಗಿ ನೀಡಲಾಯಿತು.

ಇದನ್ನೂ ಓದಿ:WTC Final: ಕೈಗೆ ಬಂದ ತುತ್ತು ಬಾಯಿಗೆ ಬರುತ್ತಿಲ್ಲ! ಈ 7 ವರ್ಷಗಳಲ್ಲಿ ಪ್ರಮುಖ 6 ಐಸಿಸಿ ಟ್ರೋಫಿ ಭಾರತದ ಕೈತಪ್ಪಿದೆ